ಬಿಜೆಪಿ ಹಾಲಿ ಸಂಸದರಿಗೆ ಈ ಬಾರಿಯೂ ಟಿಕೆಟ್- ಬಿ.ಎಸ್.ಯಡಿಯೂರಪ್ಪ

 This time, the BJP

14-03-2019

ರಾಜ್ಯದ ಎಲ್ಲ ಹಾಲಿ ಸಂಸದರಿಗೆ ಈ ಬಾರಿಯೂ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆಗೆ ಟಿಕೆಟ್ ಖಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದು ಉಳಿದ ಕ್ಷೇತ್ರಗಳಲ್ಲಿ ಪ್ರಭಾವಿ ನಾಯಕರಿಗೆ ಅವಕಾಶ ದೊರೆಯಲಿದೆ. ಇದೇ 16ರಂದು ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಲಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಮೈತ್ರಿ ಸರ್ಕಾರದ ವೈಫಲ್ಯಗಳು, ವರ್ಗಾವಣೆ ದಂಧೆ, ಭ್ರಷ್ಟಾಚಾರಗಳೇ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 20-22ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲಲು ಅನುಕೂಲವಾಗಲಿದೆ ಎಂದರು.

ಇದೇ 15ರಂದು ನಡೆಯಲಿರುವ ಕೋರ್ ಕಮಿಟಿ ಸಭೆಯಲ್ಲಿ ಪಕ್ಷದ ಎಲ್ಲ ಪ್ರಮುಖರುಒಗ್ಗೂಡಿ 28ಕ್ಷೇತ್ರಗಳ ಒಮ್ಮತದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದ್ದೇವೆ 16ರಂದು ನಡೆಯಲಿರುವ ವರಿಷ್ಠರ ಸಭೆಯಲ್ಲಿ ಹಾಲಿ ಸಂಸದರು ಸೇರಿದಂತೆ ಇತರೆ ಕ್ಷೇತ್ರಗಳ ಅಭ್ಯರ್ಥಿಗಳನ್ನು ಪ್ರಕಟಿಸಲಾಗುವುದು ಬಹುತೇಕ ಹಾಲಿ ಸಂಸದರಿಗೆ ಟಿಕೆಟ್ ಖಚಿತ ಎಂದು ನುಡಿದರು.

ಸರ್ಕಾರ ಸ್ಥಾಪನೆಯಾಗಿ 9ತಿಂಗಳು ಕಳೆದಿದೆ ಈ ಸರ್ಕಾರ ಅಧಿಕಾರದಲ್ಲಿ ಮುಂದುವರೆಬೇಕೆಂದು ಜನರಿಗೆ ಸುತಾರಂ ಇಷ್ಟವಿಲ್ಲ. ಸಾಲಮನ್ನಾ ಹೆಸರಿನಲ್ಲಿ ರೈತರಿಗೆ ವಂಚನೆ ಮಾಡಿರುವುದು, ವರ್ಗಾವಣೆ ದಂಧೆ, ಭ್ರಷ್ಟಾಚಾರವೇ ಸರ್ಕಾರದ ಮಹಾನ್ ಸಾಧನೆ ಎಂದು ವ್ಯಂಗ್ಯವಾಡಿದರು.

ಅಧಿಕಾರಕ್ಕೆ ಬಂದರೆ 24ಗಂಟೆಗಳಲ್ಲಿ ರೈತರ ಸಾಲಮನ್ನಾ ಮಾಡುವುದಾಗಿ ಸಿಎಂ ಹೇಳಿದ್ದರು. 9ತಿಂಗಳು ಅವಧಿಯಲ್ಲಿ 4.5ಕೋಟಿ ಸಾಲಮನ್ನಾ ಮಾಡಲಾಗಿದೆ. ರಾಜ್ಯದಲ್ಲಿ ಭೀಕರ ಬರಗಾಲದಿಂದ 160ಕ್ಕೂ ಹೆಚ್ಚು ತಾಲೂಕಿನ ಜನ ಸಂಕಷ್ಟದಲ್ಲಿದ್ದಾರೆ.

ಅವರ ಕಣ್ಣೀರಿನ ಕಥೆ ಕೇಳುವವರೇ ಇಲ್ಲ ಎಂದು ವಾಗ್ದಾಳಿ ನಡೆಸಿದರು.ಸರ್ಕಾರಕ್ಕೆ ಜನ ಹಿಡಿ ಶಾಪ ಹಾಕುತ್ತಿದ್ದಾರೆ. ಅನೇಕ ಕಡೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಇಲ್ಲದೆ ಜತೆಗೆ ಜನರಿಗೆ ಕೆಲಸವೂ ಇಲ್ಲದೆ ಗುಳೇ ಹೋಗುತ್ತಿದ್ದಾರೆ. ಸಾವಿರಾರು ಕೋಟಿ ತೆರಿಗೆ ಸಂಗ್ರಹಿಸುವ ಸರ್ಕಾರಕ್ಕೆ ಕುಡಿಯುವ ನೀರಿಗಾಗಿ 1ಸಾವಿರ ಕೋಟಿ ಬಿಡುಗಡೆ ಮಾಡುವ ಯೋಗ್ಯತೆ ಇಲ್ಲವೇ ಎಂದು ಪ್ರಶ್ನಿಸಿದರು.

ಜನರ ಬವಣೆಗಳನ್ನು ಕೇಳುವವರಿಲ್ಲ ವಿಧಾನಸೌಧದಲ್ಲಿ ಕುಳಿತು ಕೆಲಸ ಮಾಡುವಷ್ಟು ವ್ಯವಧಾನ ಸಚಿವರಿಗಿಲ್ಲ, ಇನ್ನು ಅಧಿಕಾರಿಗಳಿಗೆ ಹೇಳುವವರು ಕೇಳುವವರು ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಚುನಾವಣೆಯಲ್ಲಿ ಕುಮಾರಸ್ವಾಮಿ ರಾಜ್ಯದ ಜನತೆಗೆ ಸುಳ್ಳು ಭರವಸೆ ನೀಡಿದ್ದರಿಂದ ಜೆಡಿಎಸ್ 37ಸ್ಥಾನವನ್ನು ಗೆಲ್ಲುವಂತಾಯಿತು. ರೈತರ ಸಾಲಮನ್ನಾ ಯೋಜನೆ ಪ್ರಕಟಿಸದೆ ಹೋಗಿದ್ದರೆ 20 ಸ್ಥಾನಗಳನ್ನೂ ಗೆಲ್ಲಲ್ಲು ಸಾಧ್ಯವಾಗುತ್ತಿರಲಿಲ್ಲ.

ರಾಜ್ಯದ ಇತಿಹಾಸದಲ್ಲಿ 104ಸ್ಥಾನ ಗೆದ್ದವರು ಪ್ರತಿಪಕ್ಷದ ಸ್ಥಾನದಲ್ಲಿ ಕೂತಿದ್ದರೆ, 3ನೇ ಸ್ಥಾನ ಪಡೆದವರು ಮುಖ್ಯಮಂತ್ರಿಯಾಗಿದ್ದಾರೆ ಎಂದು ಟೀಕಿಸಿದರು.
ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಯಾವುದೇ ರೀತಿ ಪರಿಣಾಮ ಬೀರುವುದಿಲ್ಲ ಎರಡು ಪಕ್ಷಗಳ ನಡುವೆ ಹೊಂದಾಣಿಕೆಯಿಲ್ಲ. ಕುಮಾರಸ್ವಾಮಿ, ಸಿದ್ದರಾಮಯ್ಯ ಇಬ್ಬರು ಪರಸ್ಪರ ಕತ್ತಿ ಮಸೆಯುತ್ತಿದ್ದಾರೆ.

ಇವರು ಕಿತ್ತಾಡಿದಷ್ಟು ನಮಗೆ ಅನುಕೂಲವಾಗಲಿದೆ ಎಂದ ಅವರು ಉಮೇಶ್ ಜಾಧವ್ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿರುವುದು ಕಾಂಗ್ರೆಸ್‍ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ತೋರಿಸುತ್ತದೆ ಎಂದು ಹೇಳಿದೆ ಎಂದರು. ಇನ್ನು  4-5ದಿನ ಕಾದು ನೋಡಿ ಇನ್ನೂ ಏನೇನು ಬದಲಾವಣೆಯಾಗುತ್ತದೆ ಎಂದು ಸೂಚ್ಯವಾಗಿ ಹೇಳಿದರು.

ಕುಟುಂಬ ರಾಜಕಾರಣ ಕುರಿತು ಮಾತನಾಡಿದ ಯಡಿಯೂರಪ್ಪ ಇದು ಇತಿಮಿತಿಯಲ್ಲಿ ಇರಬೇಕು. ಅತಿಯಾದರೆ ಜನರು ನಮ್ಮನ್ನು ಟೀಕೆ ಮಾಡುತ್ತಾರೆ. ದೇವೇಗೌಡರ ಕುಟುಂಬದಲ್ಲಿ ಇದು ಅತಿಯಾಗಿದ್ದರಿಂದ ಚರ್ಚೆಗೆ ಬಂದಿದೆ.

ಮಂಡ್ಯದಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಂಬಂಧ ಸುಮಲತಾ ಅಂಬರೀಷ್ ಅವರ ತೀರ್ಮಾನದ ಮೇಲೆ ಎಲ್ಲವೂ ಅವಲಂಬಿತವಾಗಿದೆ. ಅವರು ಕಣಕ್ಕಿಳಿದರೆ ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ತೇಜಸ್ವಿನಿ ಅನಂತಕುಮಾರ್ ಅವರ ಹೆಸರು ಬಹುತೇಕ ಅಂತಿಮವಾಗಿದೆ ಎಂದು ತಿಳಿಸಿದರು.


ಸಂಬಂಧಿತ ಟ್ಯಾಗ್ಗಳು

#Karnataka #Bjp #Bsy Mp


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ