ಲೋಕಸಭೆ ಚುನಾವಣೆ ಅಂಗಳದ ತುಂಬ ದೊಡ್ಡಗೌಡ್ರ ಕುಟುಂಬದ್ದೇ ಸುದ್ದಿ

The news of the Devegwoda family in the Lok Sabha election hall

14-03-2019

ಪ್ರಸಕ್ತ ಲೋಕಸಭಾ ಚುನಾವಣೆಯ ಕಾವು ದಿನೇ ದಿನೇ ತೀವ್ರಗೊಳ್ಳುತ್ತಿದೆ. ಈ ಬಾರಿ ಜೆಡಿಎಸ್ – ಕಾಂಗ್ರೆಸ್ ಮೈತ್ರಿಕೂಟದ ಜಂಜಾಟಗಳಿಗಿಂತ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಇಬ್ಬರು ಮೊಮ್ಮಕ್ಕಳು ಚುನಾವಣೆಗೆ ಸ್ಪರ್ಧಿಸುತ್ತಿರುವ ವಿಚಾರ ಇದೀಗ ದೇಶದ ಗಮನ ಸೆಳೆದಿದೆ.

ಗೌಡರ ಮೊಮ್ಮಕ್ಕಳ ಸ್ಪರ್ಧೆಗೆ ಎಲ್ಲೆಡೆ ವಿರೋಧ ವ್ಯಕ್ತವಾಗುತ್ತಿರುವ ಜತೆಗೆ, ದಶ ದಿಕ್ಕುಗಳಿಂದಲೂ ವ್ಯಾಪಕ ಟೀಕೆಗಳು ಕೇಳಿ ಬರುತ್ತಿವೆ. ಕ್ಷಣ ಕ್ಷಣಕ್ಕೂ ಟೀಕಾ ಪ್ರಹಾರಗಳು ಪ್ರತಿಧ್ವನಿಸುತ್ತಲೇ ಇವೆ. ಸಾಮಾಜಿಕ ಜಾಲ ತಾಣಗಳಲ್ಲಿ ಟೀಕೆಗಳ ಅಬ್ಬರ ಹೆಚ್ಚಾಗುತ್ತಿವೆ. ಜತೆಗೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ, ಸಚಿವ ಎಚ್.ಡಿ. ರೇವಣ್ಣ ಮತ್ತು ಹಾಸನ ಕ್ಷೇತ್ರದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ, ಮಂಡ್ಯದ ಅಭ್ಯರ್ಥಿ ನಿಖಿಲ್ ಕುಮಾರ ಸ್ವಾಮಿ, ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅವರನ್ನು ಅಣಕಿಸುವ ಧಾಟಿಯಲ್ಲಿ ಎಡಿಟ್ ಮಾಡಿದ ದೃಷ್ಯಗಳು, ವ್ಯಂಗ್ಯ ಮಾಡುವ ಸಾಹಿತ್ಯ ಎಲ್ಲೆಡೆ ವಿನಿಮಯವಾಗುತ್ತಿವೆ.

ಜೆಡಿಎಸ್ ನಾಯಕರಿಗೆ ಇದೀಗ ಮುಂದೇನು ಮಾಡಬೇಕು ಎನ್ನುವುದು ತೋಚದಂತಾಗಿದೆ.  ಕಾಂಗ್ರೆಸ್ ಜತೆ ಸೀಟಿಗಾಗಿ ಚೌಕಾಸಿ ಮಾಡುತ್ತಿರುವ ಬೆನ್ನಲ್ಲೇ ಟೀಕೆಗಳ ಪ್ರವಾಹ ಜೆಡಿಎಸ್‍ನ ಅಪ್ಪ ಮಕ್ಕಳಷ್ಟೇ ಅಲ್ಲದೇ ಮೊಮ್ಮಕ್ಕಳನ್ನೂ ಸಹ ಆತಂಕಕ್ಕೀಡು ಮಾಡಿದೆ.

ಇತ್ತೀಚೆಗೆ ಕುಮಾರ ಸ್ವಾಮಿ ಅವರು ದೆಹಲಿಯಲ್ಲಿ ರಾಜ್ಯದ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿ ಮಾಡಿದ್ದ ಸಂದರ್ಭದಲ್ಲಿ ಮಂಡ್ಯ ಕ್ಷೇತ್ರವನ್ನು ಸುಮಲತಾ ಅಂಬರೀಷ್ ಅವರಿಗೆ ಬಿಟ್ಟುಕೊಡುವುದು ಸೂಕ್ತ. ಜನಾಭಿಪ್ರಾಯ ಅವರ ಪರವಾಗಿದೆ. ಈ ಬಗ್ಗೆ ಏಐಸಿಸಿಗೆ ಖಾಸಗಿ ಸಮೀಕ್ಷಾ ವರದಿಗಳು ಬಂದಿವೆ ಎಂದು ಹೇಳಿದ್ದರಂತೆ. ಆದರೆ ಕುಮಾರ ಸ್ವಾಮಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೇ ವಾಪಸ್ಸಾಗಿದ್ದರು.

ಆದರೆ ನಂತರದ ದಿನಗಳಲ್ಲಿ ಸುಮಲತಾ ಅವರ ಪರ ಬೆಂಬಲ ಹೆಚ್ಚಾಗುತ್ತಿರುವ ಬಗ್ಗೆ ರಾಜ್ಯ ಗುಪ್ತದಳದಿಂದಲೂ ಕುಮಾರ ಸ್ವಾಮಿ ಮಾಹಿತಿ ಪಡೆದಿದ್ದಲ್ಲದೇ ಖಾಸಗಿ ಸಮೀಕ್ಷ ಕೂಡ ನಡೆಸಿ ವರದಿ ಪಡೆದಿದ್ದಾರೆ. ಈ ವರದಿಗಳಲ್ಲಿ ಪ್ರತಿಕೂಲ ಅಂಶಗಳೇ ಹೆಚ್ಚಾಗಿತ್ತು. ಸ್ವಪಕ್ಷೀಯರಿಂದಲೂ ಟೀಕೆ ಟಿಪ್ಪಣಿಗಳು ಹೆಚ್ಚಾಗುತ್ತಿವೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ನೀಡಬೇಕಿತ್ತು ಎನ್ನುವ ಗುಸುಗುಸು ಎಲ್ಲೆಡೆ ಕೇಳಿ ಬರುತ್ತಿದೆ.

ಈ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಕುಮಾರ ಸ್ವಾಮಿ ತಮ್ಮ ಆಪ್ತ ಜ್ಯೋತಿಷಿ ದ್ವಾರಕಾನಾಥ್ ಅವರನ್ನು ಭೇಟಿ ಮಾಡಿ, ತಮ್ಮ ಮಗನ ಗೆಲುವಿನ ಸಾಧ್ಯತೆಗಳ ಬಗ್ಗೆ ಭವಿಷ್ಯ ಕೇಳಿದ್ದಾರೆ. ಅವರಿಂದಲೂ ಸಕಾರಾತ್ಮಕ ಮಾಹಿತಿ ಹೊರ ಬಂದಿಲ್ಲ ಎನ್ನಲಾಗಿದೆ.

ಈ ಎಲ್ಲಾ ಬೆಳವಣಿಗೆಗಳಿಂದ ಕುಮಾರ ಸ್ವಾಮಿ ಮುಂದೇನು ಮಾಡಬೇಕು ಎನ್ನುವ ತೊಳಲಾಟದಲ್ಲಿ ಸಿಲುಕಿದ್ದಾರೆ. ಮಂಡ್ಯ ಕ್ಷೇತ್ರವನ್ನು ಸುಮಲತಾ ಅವರಿಗೆ ಬಿಟ್ಟು, ತಮ್ಮ ಪುತ್ರನನ್ನು ಮೈಸೂರು, ತುಮಕೂರು ಇಲ್ಲವೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕಣಕ್ಕಿಳಿಸುವ ಬಗ್ಗೆಯೂ ಆಲೋಚನೆ ಮಾಡುತ್ತಿದ್ದಾರೆ. ಆದರೆ ಈ ಕ್ಷೇತ್ರಗಳಲ್ಲೂ ತಮ್ಮ ಪುತ್ರ ಪರಾಭವಗೊಂಡರೆ ಎನ್ನುವ ಆತಂಕ ಕುಮಾರಸ್ವಾಮಿ ಅವರನ್ನು ಕಾಡುತ್ತಿದೆ.

ಮತ್ತೊಂದೆಡೆ ಕ್ಷೇತ್ರಗಳ ಹಂಚಿಕೆಯಾದ ನಂತರವೇ ದೇವೇಗೌಡರು ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎನ್ನುವುದನ್ನು ನಿರ್ಧರಿಸಲಿದ್ದಾರೆ. ಹೀಗಾಗಿ ಸಧ್ಯಕ್ಕೆ ಏನು ಮಾಡಬೇಕು ಎನ್ನುವ ಸ್ಪಷ್ಟತೆ ಸ್ವತಃ ಕುಮಾರ ಸ್ವಾಮಿ ಅವರಿಗೂ ಇಲ್ಲವಾಗಿದೆ.

ತಮ್ಮ ಕುಟುಂಬ ರಾಜಕಾರಣದ ಬಗ್ಗೆ ದೇಶಾದ್ಯಂತ ಎದುರಾಗುತ್ತಿರುವ ಟೀಕೆ, ವ್ಯಂಗ್ಯಕ್ಕೆ ಹೆದರಿ ತಮ್ಮ ಇಬ್ಬರು ಮೊಮ್ಮಕ್ಕಳ ಪೈಕಿ ಒಬ್ಬರನ್ನು ಚುನಾವಣಾ ಕಣದಿಂದ ಹಿಂದೆ ಸರಿಸಲು ದೇವೇಗೌಡರ ಕುಟುಂಬ ಗಂಭೀರ ಪರಿಶೀಲನೆ ನಡೆಸುತ್ತಿದೆ ಎನ್ನಲಾಗಿದೆ. ಅಂತಹ ಪರಿಸ್ಥಿತಿ  ಎದುರಾದರೆ ನಿಖಿಲ್ ಕುಮಾರ ಸ್ವಾಮಿ ಅವರನ್ನು ಕಣದಿಂದ ಹಿಂದೆ ಸರಿಸುವ ಸಾಧ್ಯತೆಗಳೇ ಹೆಚ್ಚು ಎನ್ನಲಾಗಿದೆ.

ಯಾವುದೇ ಚುನಾವಣೆ ಎದುರಿಸದ ತಮ್ಮ ಮೊಮ್ಮಕ್ಕಳನ್ನು ಏಕಾಏಕಿ ಲೋಕಸಭಾ ಚುನಾವಣಾ ಕಣಕ್ಕಿಳಿಸಲು ಮುಂದಾಗಿರುವ ಗೌಡರ ಬಗ್ಗೆ ಎಲ್ಲೆಡೆ ವಿರೋಧ ಕಂಡು ಬಂದಿದೆ. ಇದರಿಂದ ಬೇಸತ್ತಿರುವ ಗೌಡರು ಹಾಸನ ಜಿಲ್ಲೆಯ ಹೊಳೆ ನರಸೀಪುರ ತಾಲ್ಲೂಕಿನ ಮೂಡಲಹಿಪ್ಪೆಯಲ್ಲಿ ಗಳಗಳನೆ ಅತ್ತಿದ್ದಾರೆ. ಜತೆಗೆ ಸಚಿವ ರೇವಣ್ಣ, ಶಾಸಕ ಬಾಲಕೃಷ್ಣ, ಹಾಸನ ಕ್ಷೇತ್ರದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ಕಣ್ಣಾಲಿಗಳು ಸಹ ತೇವಗೊಂಡಿವೆ. ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಆಶಯದಂತೆ ಪ್ರಜ್ವಲ್ ರೇವಣ್ಣ ಚುನಾವಣಾ ಕಣಕ್ಕಿಳಿದಿದ್ದಾರೆ. ಕಾರ್ಯಕರ್ತರ ಮಾತಿಗೆ ಬೆಲೆಕೊಟ್ಟಿದ್ದು, ಇದರಲ್ಲಿ ತಮ್ಮ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.

ಈ ಇಳಿ ವಯಸ್ಸಿನಲ್ಲಿ ತಮ್ಮ ಮೇಲೆ ಬರುತ್ತಿರುವ ಟೀಕೆಗಳಿಂದ ಗೌಡರು ನೊಂದಿರುವುದು ಸ್ಪಷ್ಟವಾಗಿದೆ. ಈ ಕಣ್ಣೀರಿಗೆ ಸಹಜವಾಗಿಯೇ ಬಿಜೆಪಿಯ ಅಧಿಕೃತ ಟ್ವಿಟ್ಟರ್ ಮತ್ತು ಜಾಲ ತಾಣಗಳಲ್ಲಿಯೂ ಬಂದಿರುವ ವ್ಯಂಗ್ಯೋಕ್ತಿಗಳು ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ. ದೇಶದ ಸೈನಿಕರು ಮೃತಪಟ್ಟಾಗ ಅಳದ ಗೌಡರು, ಇದೀಗ ಮಕ್ಕಳ ನಂತರ ಮೊಮ್ಮಕ್ಕಳಿಗಾಗಿ ಕಣ್ಣೀರ ಕೋಡಿ ಹರಿಸುತ್ತಿದ್ದಾರೆ ಎಂಬೆಲ್ಲಾ ಟೀಕೆಗಳು ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಆದೇ ರೀತಿ ಗೌಡರ ವಿರೋಧಿ ಗುಂಪುಗಳು ಸಹ ಕುಟುಂಬ ರಾಜಕಾರಣದ ವಿರುದ್ಧ ತಿರುಗಿ ಬಿದ್ದಿವೆ.

ಇಡೀ ದೇಶದಲ್ಲಿ ಇಂತಹ ಪರಿಸ್ಥಿತಿ ಯಾವುದೇ ರಾಜಕೀಯ ಪಕ್ಷಗಳಲ್ಲಿ ಎದುರಾಗಿಲ್ಲ. ಮಾಜಿ ಪ್ರಧಾನಿಯಾಗಿ ತಮ್ಮಿಬ್ಬರು ಪುತ್ರರ ಮಕ್ಕಳನ್ನು ಮೊದಲ ಪ್ರಯತ್ನದಲ್ಲೆ ಸಂಸದರನ್ನಾಗಿ ಮಾಡುವ ಪ್ರಯತ್ನ ಇದೀಗ ಚರ್ಚೆಗೆ ಕಾರಣವಾಗಿದೆ. ಕುಟುಂಬ ರಾಜಕಾರಣಕ್ಕೆ ಹೆಸರಾದ ಈ ದೇಶದಲ್ಲಿ ಕುಟುಂಬ ರಾಜಕಾರಣಕ್ಕೆ ಹೊಸ ಆಯಾಮ ನೀಡುವ ರೀತಿಯಲ್ಲಿ ಗೌಡರ ಕುಟುಂಬ ಟೊಂಕ ಕಟ್ಟಿ ನಿಂತಿರುವುದು ನಾನಾ ರೀತಿಯ ವ್ಯಾಖ್ಯಾನಗಳಿಗೆ ಕಾರಣವಾಗಿದೆ.

ಇದರಿಂದ ಮುಜುಗರ ಎದುರಿಸಬೇಕಾಗುತ್ತದೆ ಎನ್ನುವುದನ್ನು ಮೈತ್ರಿ ಪಕ್ಷ ಕಾಂಗ್ರೆಸ್‍ನ ವರಿಷ್ಠ ನಾಯಕರು ಜೆಡಿಎಸ್ ಮುಖಂಡರಿಗೆ ಈಗಾಗಲೇ ಸಂದೇಶ ರವಾನಿಸಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರ ಈ ನಡೆಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ಮುಖಂಡರು ಇದನ್ನು ಬಹುದೊಡ್ಡ ಚುನಾವಣಾ ಅಸ್ತ್ರ ಮಾಡಿಕೊಳ್ಳುವ ಸಾಧ್ಯತೆಗಳು ದಟ್ಟವಾಗಿವೆ. ಇದೀಗ ಗೌಡರ ಕುಟುಂಬ ಪ್ರವಾಹದ ವಿರುದ್ಧ ಈಜಲಿದೆಯೇ ಇಲ್ಲವೆ, ಬೇರೊಬ್ಬರನ್ನು ದೋಣಿ ಹತ್ತಿಸಿ ರಕ್ಷಣಾತ್ಮಕ ಆಟ ಆಡಲಿದೆಯೇ ಎನ್ನುವುದು ಈಗಿನ ಪರಿಸ್ಥಿತಿಯಲ್ಲಿ ಗೌಡರ ಕುಟುಂಬದ ಮುಂದಿರುವ ಬಹುದೊಡ್ಡ ಪ್ರಶ್ನೆಯಾಗಿದೆ. ಮೈತ್ರಿ ಪಕ್ಷಗಳ ಸೀಟು ಹಂಚಿಕೆ ನಂತರ ಜೆಡಿಎಸ್‍ನ ಮುಂದಿನ ನಡೆ ಸ್ಪಷ್ಟವಾಗಲಿದೆ


ಸಂಬಂಧಿತ ಟ್ಯಾಗ್ಗಳು

#Loksabha 2019 #Nikil Kumarswamy #Deve Gowda #Prajwal Revanna


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ