ಫೇಸ್‍ಬುಕ್,ಸಾಮಾಜಿಕ ಜಾಲತಾಣಗಳಲ್ಲಿರುವವರು ನಿಜವಾದ ಮತದಾರರಲ್ಲ- ಎಚ್‍ಡಿಕೆ

 Facebook, social networking sites are not actual voters-HDK

12-03-2019

ತಮ್ಮ ಪುತ್ರ ನಿಖಿಲ್ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ಕುರಿತು ಸಮರ್ಥನೆ ಮಾಡಿಕೊಂಡಿರುವ ಸಿಎಂ ಕುಮಾರಸ್ವಾಮಿ,ಯಾರ್ಯಾರೋ ಎಲ್ಲೆಲ್ಲೋ ಹುಟ್ಟಿ ಇನ್ನೆಲ್ಲೋ ಸ್ಪರ್ಧಿಸುತ್ತಾರೆ.ಅಂತದ್ದರಲ್ಲಿ ನಿಖಿಲ್ ಸ್ಪರ್ಧೆಯಲ್ಲಿ ತಪ್ಪೇನಿಲ್ಲ.ಅದೇ ರೀತಿ ಆತನನ್ನು ಗೆಲ್ಲಿಸುವವರು ಸಾಮಾಜಿಕ ಜಾಲತಾಣಗಳಲ್ಲಿಲ್ಲ.ಹಳ್ಳಿಗಳಲ್ಲಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನಿಖಿಲ್ ಸ್ಪರ್ಧೆಗೆ ಫೇಸ್‍ಬುಕ್,ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಗುತ್ತಿರುವ ಬಗ್ಗೆ ಯಾರ್ಯಾರ ಕೊಡುಗೆ ಏನೇನು?ಅಂತ ಜನರಿಗೆ ಗೊತ್ತಿದೆ.ಅದಕ್ಕವರು ಉತ್ತರ ಕೊಡುತ್ತಾರೆ?ನಾನೇಕೆ ಉತ್ತರ ಕೊಡಲಿ ಎಂದರು.

ಫೇಸ್ ಬುಕ್,ಸಾಮಾಜಿಕ ಜಾಲತಾಣಗಳಲ್ಲಿರುವವರು ನಿಜವಾದ ಮತದಾರರಲ್ಲ.ನಿಜವಾದ ಮತದಾರರು ಹಳ್ಳಿಗಳಲ್ಲಿದ್ದಾರೆ.ಆದರೆ ಇಂತಹ ವಿರೋಧಗಳು ಯಾಕೆ ಹುಟ್ಟುತ್ತವೆ ಎಂಬುದು ನನಗೆ ಅರ್ಥವಾಗುತ್ತದೆ.ಆದರೆ ನನಗಿಂತ ಮುಖ್ಯವಾಗಿ ಅರ್ಥ ಮಾಡಿಕೊಂಡವರು ಅದಕ್ಕೆ ಉತ್ತರ ನೀಡುತ್ತಾರೆ ಎಂದು ವ್ಯಂಗ್ಯವಾಡಿದರು.

ಕೇಂದ್ರ ಸಚಿವ ಸದಾನಂದಗೌಡ,ಸಂಸದೆ ಶೋಭಾ ಕರಂದ್ಲಾಜೆ ಬೇರೆ ಕಡೆಯಿಂದ ಬಂದು ಸ್ಪರ್ಧಿಸಿ ಗೆದ್ದವರು.ಆ ಬಗ್ಗೆ ಯಾರೂ ಏಕೆ ಚರ್ಚೆ ಮಾಡುತ್ತಿಲ್ಲ?ಎಂದು ಅವರು ಪ್ರಶ್ನಿಸಿದರು.

ಸದಾನಂದಗೌಡರಾಗಲೀ,ಶೋಭಾ ಕರಂದ್ಲಾಜೆಯಾಗಲಿ ಮಾತ್ರವಲ್ಲ,ಇನ್ನೂ ಬೇಕಾದಷ್ಟು ಜನ ಹುಟ್ಟಿದ್ದೆಲ್ಲೋ?ರಾಜಕೀಯ ಮಾಡುತ್ತಿರುವುದೆಲ್ಲೋ?ನಾನು ಕೂಡಾ ಹಾಸನದಲ್ಲಿ ಹುಟ್ಟಿ ರಾಮನಗರದಲ್ಲಿ ಸ್ಪರ್ಧೆ ಮಾಡುತ್ತಿಲ್ಲವೇ?

ಹೀಗಿರುವಾಗ ನಿಖಿಲ್ ಸ್ಪರ್ಧೆಯ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿರುವವರ ಬಗ್ಗೆ ನಾನು ಯೋಚಿಸುವುದೂ ಇಲ್ಲ.ತಲೆ ಕೆಡಿಸಿಕೊಳ್ಳುವುದೂ ಇಲ್ಲ ಎಂದು ಕುಮಾರಸ್ವಾಮಿ ಇದೇ ಸಂದರ್ಭದಲ್ಲಿ ವಿವರ ನೀಡಿದರು.

ಮಂಡ್ಯದ ಜನ ನಮ್ಮ ಮೇಲಿಟ್ಟಿರುವ ಪ್ರೀತಿಯನ್ನು ದುರುಪಯೋಗ ಮಾಡಿಕೊಳ್ಳುವವರು ನಾವಲ್ಲ.ಹಲವಾರು ವರ್ಷಗಳಿಂದ ಮಂಡ್ಯ ಜಿಲ್ಲೆಗೂ,ನಮ್ಮ ಕುಟುಂಬಕ್ಕೂ ವಿಶ್ವಾಸವಿದೆ.ಹಾಗಂತ ನಿಖಿಲ್ ಸ್ಪರ್ಧೆಯನ್ನು ನಾವ್ಯಾರೋ ಕುಳಿತು ತೀರ್ಮಾನಿಸಿಲ್ಲ.ಪಕ್ಷ ಅದನ್ನು ತೀರ್ಮಾನಿಸಿದೆ ಎಂದರು.

ಹೀಗಾಗಿ ನಾವು ಜನರ ಮುಂದೆ ಬರುತ್ತೇವೆ.ಜನ ತೀರ್ಮಾನಿಸುತ್ತಾರೆ.ಅವರೇನು ತೀರ್ಪು ಕೊಡುತ್ತಾರೋ?ಅವರ ಆದೇಶಕ್ಕೆ ತಲೆ ಬಾಗುತ್ತೇವೆ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರು ಎಲ್ಲಿಂದ ಸ್ಪರ್ಧಿಸುತ್ತಾರೆ?ಅನ್ನುವುದು ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಸ್ಪಷ್ಟವಾಗುತ್ತದೆ.ಅವರು ಮೈಸೂರಿನಿಂದ ಸ್ಪರ್ಧಿಸುತ್ತಾರೋ?ಎಲ್ಲಿಂದ ಸ್ಪರ್ಧಿಸುತ್ತಾರೋ?ಗೊತ್ತಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯ ವಿಷಯದಲ್ಲಿ ಮಾತುಕತೆ ಪ್ರಗತಿಯಲ್ಲಿದ್ದು ಮುಂದಿನ ಕೆಲ ದಿನಗಳಲ್ಲಿ ಎಲ್ಲವೂ ಇತ್ಯರ್ಥವಾಗಲಿದೆ.ಎಲ್ಲ ಗೊಂದಲಗಳಿಗೂ ತೆರೆ ಬೀಳುತ್ತದೆ ಎಂದರು.


ಸಂಬಂಧಿತ ಟ್ಯಾಗ್ಗಳು

#Karnataka # social networking #Kumarswamy #Not Actual Voters


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ