5 ಕೋಟಿ 8 ಲಕ್ಷ ಮೌಲ್ಯದ ಹಳೆಯ ನೋಟುಗಳು ವಶ !

Kannada News

07-06-2017

ಬೆಂಗಳೂರು:- ಅಮಾನ್ಯಗೊಂಡಿರುವ ಹಳೆಯ ನೋಟುಗಳನ್ನು ಹೊಸ ನೋಟುಗಳಿಗೆ ಬದಲಾಯಿಸುತ್ತಿದ್ದ 15 ಮಂದಿಯನ್ನು ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿ 5 ಕೋಟಿ 8 ಲಕ್ಷ ಮೌಲ್ಯದ ಹಳೆಯ ನೋಟುಗಳು, ಕಾರು ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಬಸವನಗುಡಿ ಪೊಲೀಸರು ವಾಣಿ ವಿಲಾಸ ರಸ್ತೆಯ ಬಳಿ ನಿಷೇಧಿತ 1000 ಮತ್ತು 500 ಮುಖಬೆಲೆಯ ಹಳೆಯ ನೋಟುಗಳನ್ನು ಹೊಸ ನೋಟುಗಳಿಗೆ ಬದಲಾಯಿಸಲು ಪ್ರಯತ್ನಿಸುತ್ತಿದ್ದ ಮೊಹ್ಮದ್ ಇಕ್ಬಾಲ್ (40), ರಾಜೇಶ್ (30), ರವೀಂದ್ರನಾಥ್ (44) ಎಂಬುವರನ್ನು ಬಂಧಿಸಿದ್ದಾರೆ. ಬಂಧಿತರಿಂದ 1 ಸಾವಿರ ಮುಖಬೆಲೆಯ 176 ಕಟ್ಟುಗಳ 1 ಕೋಟಿ 76 ಲಕ್ಷ ಹಾಗೂ 500 ಮುಖಬೆಲೆಯ 99 ಲಕ್ಷ ಸೇರಿ 2 ಕೋಟಿ 15 ಲಕ್ಷ ಹಳೆಯ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತೆ ಮಾಲಿನಿ ಕೃಷ್ಣಮೂರ್ತಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಬಂಧಿತರಿಂದ 2 ಮೊಬೈಲ್, 7 ಲಕ್ಷ ಮೌಲ್ಯದ ಕಾರು, ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ. ಇದಲ್ಲದೆ ಪಿಇಎಸ್ ಕಾಲೇಜು ರಸ್ತೆಯಲ್ಲಿರುವ ಜಲಮಂಡಲಿ  ವಾಟರ್ ಟ್ಯಾಂಕ್ ಬಳಿ ಹಳೆಯ ನೋಟುಗಳನ್ನು ಬದಲಾಯಿಸಲು ಯತ್ನಿಸುತ್ತಿದ್ದ ಸದಾಶಿವ (38), ಹರ್ಷ (40) ಎಂಬುವರನ್ನು ಬಂಧಿಸಿ 1 ಕೋಟಿ 12 ಲಕ್ಷ ಹಳೆಯ 500 ಹಾಗೂ 1000 ಮುಖ ಬೆಲೆಯ ನೋಟುಗಳು, 2 ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಗಾಂಧಿ ಬಜಾರ್ ಮುಖ್ಯರಸ್ತೆಯ ಕಾರಂಜಿ ಪಾರ್ಕ್ ನ್ಯಾಷನಲ್ ಕೋಆಪರೇಟಿವ್ ಬ್ಯಾಂಕ್ ಬಳಿ ಹಳೆ ನೋಟು ಬದಲಾಯಿಸುತ್ತಿದ್ದ ಸುರೇಶ್ (32) ಹಾಗೂ ರಘುನಂದನ (34) ಎಂಬುವರನ್ನು ಬಂಧಿಸಿ 50 ಲಕ್ಷ ಮೌಲ್ಯದ ಹಳೆ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪುಟ್ಟೇನಹಳ್ಳಿ ಪೊಲೀಸರು ಬಿಓಬಿ ಕಾಲೋನಿಯ ಮಿಲೇನಿಯಮ್ ಅಪಾರ್ಟ್ ಮೆಂಟ್ ಹಿಂಭಾಗ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಹಳೇ ನೋಟು ಹೊಸ ನೋಟಿಗೆ ಬದಲಾವಣೆ ಮಾಡುತ್ತಿದ್ದ ಚಿಕ್ಕಜಾಲದ ಭರತ್ (21), ಉತ್ತರಹಳ್ಳಿಯ ಶ್ರೀನಿವಾಸ (50), ಶಿಢ್ಲಘಟ್ಟದ ಶ್ರೀನಿವಾಸ ಮೂರ್ತಿ (48), ವೇಲೂರಿನ ಚಂದ್ರೇಗೌಡ (31) ಎಂಬುವರನ್ನು ಬಂಧಿಸಿದ್ದಾರೆ. ಬಂಧಿತರಿಂದ 1 ಕೋಟಿ  ಮೌಲ್ಯದ ಹಳೆಯ ನೋಟುಗಳು, ವೋಕ್ಸ್ ವ್ಯಾಗನ್ ಮಾರುತಿ ವ್ಯಾನ್, ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಇದಲ್ಲದೆ ಸಂಜಯನಗರದ ಮುರುಳಿ(39)ವೈಯಾಲಿಕಾವಲ್‍ನ ಬಾಲಾಜಿ(36)ಬೆನ್ಸನ್‍ಟೌನ್‍ನ ಶಫಿಕ್ ಅಹಮದ್(39)ಚಿಕ್ಕಪೇಟೆಯ ಮಂಜುನಾಥ(25)ನನ್ನು ಬಂಧಿಸಿ 1 ಕೋಟಿ ಮೌಲ್ಯದ ತಲಾ ನೂರು ನೋಟುಗಳಿದ್ದ 1 ಸಾವಿರ ಮುಖಬೆಲೆಯ ನೂರು ಬಂಡಲ್‍ಗಳ ಹಳೆಯ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ, ಪುಟ್ಟೇನಹಳ್ಳಿ ಕೆರೆಯ ರಸ್ತೆಯ ಬಳಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ ಆರೋಪಿಗಳನ್ನು ಬಂಧಿಸಿದ ಬಸವನಗುಡಿ ಹಾಗೂ ಪುಟ್ಟೇನಹಳ್ಳಿ ಪೊಲೀಸರನ್ನು ಅಭಿನಂದಿಸಲಾಯಿತು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ