ಮೂರು ಪಕ್ಷಗಳಲ್ಲಿ ಚುರುಕುಗೊಂಡ ರಾಜಕೀಯ ಲೆಕ್ಕಾಚಾರ

Accelerated political calculation in three parties

12-03-2019

ಲೋಕಸಭಾ ಚುನಾವಣೆಗೆ ವೇಳಾಪಟ್ಟಿ ಪ್ರಕಟವಾಗುತ್ತಿದ್ದಂತೆ  ಮೂರೂ ರಾಜಕೀಯ ಪಕ್ಷಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಬಿರುಸು ಪಡೆದಿದೆ.
ಕಾಂಗ್ರೆಸ್ ನಾಯಕರು ಹೈಕಮಾಂಡ್ ಮೊರೆ ಹೋಗಿದ್ದರೆ, ಜೆಡಿಎಸ್ ನಾಯಕರು ಗೆಲ್ಲುವ ಅಭ್ಯರ್ಥಿಗಳಿಗಾಗಿ ನಗರದ ಜೆಪಿ ಭವನದಲ್ಲಿ ಚರ್ಚೆ ನಡೆಸಿದರು. ಬಿಜೆಪಿ ನಾಯಕರು ನಗರದ ಖಾಸಗಿ ಹೊಟೇಲ್‍ಗಳಲ್ಲಿ ಅನ್ಯ ಪಕ್ಷಗಳ ಮುಖಂಡರನ್ನು ಭೇಟಿಯಾಗಿ ತನ್ನತ್ತ ಸೆಳೆಯುವ ಪ್ರಯತ್ನ ನಡೆಸಿದರು.

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಮಂಡ್ಯ, ಹಾಸನ ಲೋಕಸಭಾ ಕ್ಷೇತ್ರಗಳನ್ನು ತಮ್ಮಲ್ಲೇ ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ಹಾಸನದಲ್ಲಿ ರೇವಣ್ಣ ಪುತ್ರ ಪ್ರಜ್ವಲ್, ಮಂಡ್ಯದಲ್ಲಿ ಕುಮಾರ ಸ್ವಾಮಿ ಪುತ್ರ ನಿಖಿಲ್ ಅವರನ್ನು ಕಣಕ್ಕಿಳಿಸಲು ತೀರ್ಮಾನಿಸಿದ್ದಾರೆ. ಈ ಮೂಲಕ ರಾಜಕಾರಣದಲ್ಲಿ ತಮ್ಮ ಕುಟುಂಬವನ್ನು ವಿಸ್ತರಿಸಲು ನಡೆಸುತ್ತಿರುವ ಪ್ರಯತ್ನ ಯಶಸ್ಸಿನತ್ತ ಸಾಗಿದೆ. ದೇವೇಗೌಡರು ಬಹುತೇಕ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಜೆಡಿಎಸ್‍ನ ಕಾರ್ಯತಂತ್ರ ಯಶಸ್ವಿಯಾದರೆ ತಾತ ಮತ್ತು ಇಬ್ಬರು ಮೊಮ್ಮಕ್ಕಳು 17 ನೇ ಲೋಕಸಭೆ ಪ್ರವೇಶಿಸಿ, ದಾಖಲೆ ಬರೆಯಲು ಸಜ್ಜಾಗಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು ಕ್ಷೇತ್ರವನ್ನು ಕಾಂಗ್ರೆಸ್‍ನಲ್ಲೇ ಉಳಿಸಿಕೊಂಡಿದ್ದಾರೆ. ದೇವೇಗೌಡರಿಗೆ ಬೆಂಗಳೂರು ಉತ್ತರ ಕ್ಷೇತ್ರ ನೀಡಲು ಕಾಂಗ್ರೆಸ್‍ನ ಶೋಧನಾ ಸಮಿತಿಯಲ್ಲಿ ತೀರ್ಮಾನಿಸಲಾಗಿದೆ. ಆದರೆ ತುಮಕೂರು ಲೋಕಸಭಾ ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಡಲು ತೀರ್ಮಾನಿಸಿರುವುದು ಕಾಂಗ್ರೆಸ್ ಪಾಳಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಅಭ್ಯರ್ಥಿಗಳ ಆಯ್ಕೆಯಲ್ಲಿ ಸಿದ್ದರಾಮಯ್ಯ ಬಹುತೇಕ ಮೇಲುಗೈ ಸಾಧಿಸಿದ್ದು, ಒಂದೆರಡು ದಿನಗಳಲ್ಲಿ ಕಾಂಗ್ರೆಸ್ – ಜೆಡಿಎಸ್ ನಡುವೆ ಸ್ಥಾನ ಹೊಂದಾಣಿಕೆಯಾಗುವ ನಿರೀಕ್ಷೆಯಿದೆ.

ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕು ಎಂಬ ಏಕೈಕ ಉದ್ದೇಶದಿಂದ ಜೆಡಿಎಸ್ ಜತೆಗೂಡಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿರುವ ಕಾಂಗ್ರೆಸ್ 28 ಲೋಕಸಭಾ ಕ್ಷೇತ್ರಗಳ ಪೈಕಿ ಮಿತ್ರಪಕ್ಷಕ್ಕೆ ಆರು ಕ್ಷೇತ್ರಗಳನ್ನು ಬಿಟ್ಟುಕೊಡಲು ತೀರ್ಮಾನಿಸಲಾಗಿದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ದೆಹಲಿಯಲ್ಲಿಂದು ಪಕ್ಷದ ಸ್ಕ್ರೀನಿಂಗ್ ಕಮಿಟಿ (ಶೋಧನಾ ಸಮಿತಿ) ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಆರಂಭಿಕ ಹಂತದಲ್ಲಿ 12 ಕ್ಷೇತ್ರಗಳಿಗೆ ಪಟ್ಟುಹಿಡಿದಿದ್ದ ಜೆಡಿಎಸ್ ನಾಯಕರು ಇದೀಗ ತಮ್ಮ ಪಟ್ಟು ಸಡಿಲಿಸಿದ್ದಾರೆ. ಇಂತಿಷ್ಟೇ ಸ್ಥಾನಗಳು ಬೇಕು ಎಂಬ ಹಟಕ್ಕೆ ಬೀಳುವುದಿಲ್ಲ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ಹೇಳಿದ ನಂತರ ಮೈತ್ರಿ ಮಾತುಕತೆ ಹಾದಿ ಸುಗಮಗೊಂಡಿದೆ.

ಮೈಸೂರು, ತುಮಕೂರು ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರಗಳ ಮೇಲೆ ಕಣ್ಣಿಟ್ಟಿರುವ ಜೆಡಿಎಸ್ ಇದೇ ವಿಚಾರದಲ್ಲಿ ಮಿತ್ರ ಪಕ್ಷದೊಂದಿಗೆ ಚೌಕಾಸಿಗೆ ಮುಂದಾಗಿದೆ. ಕಾಂಗ್ರೆಸ್‍ನ ಹಾಲಿ ಸಂಸದರಿರುವ ಯಾವುದೇ ಕ್ಷೇತ್ರಗಳನ್ನು ಬಿಟ್ಟುಕೊಡಲು ಕಾಂಗ್ರೆಸ್ ನಾಯಕರು ಒಪ್ಪಿರಲಿಲ್ಲ. ಆದರೆ ಅಂತಿಮವಾಗಿ ತುಮಕೂರು ಕ್ಷೇತ್ರವನ್ನು ಬಿಟ್ಟುಕೊಡಲು ಮನಸ್ಸು ಮಾಡಿದ್ದಾರೆ.

ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ರಾಯಚೂರು, ಚಿಕ್ಕೋಡಿ - ಸದಲಗ, ಗುಲ್ಬರ್ಗ, ಚಾಮರಾಜನಗರ, ಚಿತ್ರದುರ್ಗ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸಂಸದರಿದ್ದಾರೆ. ತುಮಕೂರಿನಲ್ಲಿ ಜೆಡಿಎಸ್ ಶಕ್ತಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪ್ರತಿಯೊಂದು ಕ್ಷೇತ್ರವೂ ಮುಖ್ಯ ಎಂಬ ರಾಹುಲ್ ಗಾಂಧಿ ಅವರ ರಾಜ್ಯ ಕಾಂಗ್ರೆಸ್ ಮುಖಂಡರು ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ.

ಜೆಡಿಎಸ್ ಸಂಸದರು, ಹಾಸನ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರಗಳನ್ನು ಪ್ರತಿನಿಧಿಸುತ್ತಿದ್ದು, ಇವೆರಡರ ಜೊತೆಗೆ, ಶಿವಮೊಗ್ಗ, ವಿಜಯಪುರ ಮತ್ತು ಬೆಂಗಳೂರು ಉತ್ತರ ಕ್ಷೇತ್ರಗಳನ್ನು ಜೆಡಿಎಸ್‍ಗೆ ಬಿಟ್ಟುಕೊಡಲು ಕಾಂಗ್ರೆಸ್ ಸಮ್ಮತಿಸಿದೆ. ಉಳಿದ ಕ್ಷೇತ್ರಗಳಲ್ಲಿ ತನ್ನ ಹುರಿಯಾಳುಗಳನ್ನು ಕಣಕ್ಕಿಳಿಸಲು ಕಾಂಗ್ರೆಸ್ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಈ ನಡುವೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ಕಾಂಗ್ರೆಸ್ ಟಿಕೆಟ್ ಬಯಸಿರುವ ಸುಮಲತ ಅವರಿಗೆ ಟಿಕೆಟ್ ನಿರಾಕರಿಸಿದ್ದರೂ, ಅಂತಿಮ ಪ್ರಯತ್ನಗಳನ್ನು ಅವರು ಮುಂದುವರೆಸಿದ್ದಾರೆ. ಈ ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಡಲಾಗಿದೆ ಎಂದು ಕಾಂಗ್ರೆಸ್ ನಾಯಕರು ಸ್ಪಷ್ಟಪಡಿಸಿದ್ದಾರೆ. ಪಟ್ಟುಬಿಡದ ಸುಮಲತ ಕೊನೆಗಳಿಗೆವರೆಗೂ ನಾಯಕರು ಕೈಗೊಳ್ಳುವ ತೀರ್ಮಾನಕ್ಕೆ ಎದುರುನೋಡುವುದಾಗಿ ಹೇಳುತ್ತಲೇ ಬಂದಿದ್ದಾರೆ. ಸುಮಲತ ವಿರುದ್ಧ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗೆ ಇಳಿಯುವುದು ಖಚಿತವಾಗಿದೆ. ಇಂತಹ ಸಂದರ್ಭದಲ್ಲಿ ಸುಮಲತ ಅವರಿಗೆ ಬಿಜೆಪಿ ಪರೋಕ್ಷ ಬೆಂಬಲ ನೀಡುವುದು ಸ್ಪಷ್ಟವಾಗಿದೆ. ಜೆಡಿಎಸ್ ವಿರೋಧಿ ಗುಂಪಿನಲ್ಲಿರುವ ಕಾಂಗ್ರೆಸ್ ನಾಯಕರು ಸಹ ಸುಮಲತಾ ಅವರನ್ನು ಬೆಂಬಲಿಸಲು ಮುಂದಾಗಿದ್ದಾರೆ.

ರಾಜ್ಯದ ಎಲ್ಲಾ 28 ಕ್ಷೇತ್ರಗಳಲ್ಲೂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತೀರ್ಮಾನಿಸಿರುವ ಬಿಜೆಪಿ ನಾಯಕರು, ಹಾಲಿ ಸಂಸದರೂ ಸೇರಿದಂತೆ, ಗೆಲ್ಲುವ ಮಾನದಂಡವನ್ನೇ ಮುಂದಿಟ್ಟುಕೊಂಡು ಅಭ್ಯರ್ಥಿಗಳ ಹುಡುಕಾಟದಲ್ಲಿ ತೊಡಗಿದ್ದಾರೆ. ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಈಗಾಗಲೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ತಲುಪಿಸಿದ್ದಾರೆ.

ಪ್ರಸ್ತುತ ಬಿಜೆಪಿ ಸದಸ್ಯರು 16 ಲೋಕಸಭಾ ಕ್ಷೇತ್ರಗಳನ್ನು ಪ್ರತಿನಿಧಿಸುತ್ತಿದ್ದು, ಅವರಲ್ಲಿ ಕೆಲವರಿಗೆ ಟಿಕೆಟ್ ನಿರಾಕರಿಸಬಹುದು ಎನ್ನುವ ಸುದ್ದಿ ಹೊರ ಬಿದ್ದಿದೆ. ಸಂಸದರಾದ ಪ್ರತಾಪ್ ಸಿಂಹ (ಮೈಸೂರು), ಸುರೇಶ್ ಅಂಗಡಿ (ಬೆಳಗಾವಿ), ಕರಡಿ ಸಂಗಣ್ಣ (ಕೊಪ್ಪಳ), ಮಲ್ಲಿಕಾರ್ಜುನ ಖೂಬ (ಬೀದರ್), ರಮೇಶ್ ಜಿಗಜಿಣಗಿ (ವಿಜಯಪುರ) ಅವರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆಗಳು ಹೆಚ್ಚಿವೆ. ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಒಂದೆರಡು ದಿನಗಳಲ್ಲಿ ಪ್ರಕಟವಾಗುವ ನಿರೀಕ್ಷೆಯಿದೆ.

ಇನ್ನು ಹಾಸನದಲ್ಲಿ ಕಾಂಗ್ರೆಸ್ ಮುಖಂಡ ಎ. ಮಂಜು ಅವರನ್ನು ಕರೆ ತಂದು ಚುನಾವಣೆಗೆ ನಿಲ್ಲಿಸಲು ಬಿಜೆಪಿ ನಾಯಕರು ಪ್ರಯತ್ನಶೀಲರಾಗಿದ್ದಾರೆ. ಮಂಡ್ಯದಲ್ಲಿ ಜೆಡಿಎಸ್‍ನ ಮಾಜಿ ಮುಖಂಡರಾದ, ಹಾಲಿ ಕಾಂಗ್ರೆಸ್ಸಿಗರಾದ ಚೆಲುವರಾಮಯ ಸ್ವಾಮಿ, ಎ. ಬಾಲಕೃಷ್ಣ ಮತ್ತಿತರರಿಗೆ ಗಾಳ ಹಾಕಿದ್ದಾರೆ. 


ಸಂಬಂಧಿತ ಟ್ಯಾಗ್ಗಳು

#Loksabha 2019 #JDS #BJP #Congress


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ