ಕಾಂಗ್ರೆಸ್ ನ ಹಾಲಿ ಸಂಸದರ ಕ್ಷೇತ್ರಗಳನ್ನು ಜೆಡಿಎಸ್ ಗೆ ಬಿಟ್ಟುಕೊಡುವುದಿಲ್ಲ- ಸಿದ್ದರಾಮಯ್ಯ

 Will not give up the Congress

11-03-2019

ಕಾಂಗ್ರೆಸ್ ನ ಹಾಲಿ ಸಂಸದರ ಕ್ಷೇತ್ರಗಳನ್ನು ಜೆಡಿಎಸ್ ಗೆ ಬಿಟ್ಟುಕೊಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಹಿರಿಯ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ದೆಹಲಿಯಲ್ಲಿ  ಅಭ್ಯರ್ಥಿಗಳ ಆಯ್ಕೆ ಕುರಿತ ಪರಿಶೀಲನಾ ಸಮಿತಿ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ನಮ್ಮ ಸಂಸದರು ಪ್ರತಿನಿಧಿಸುತ್ತಿರುವ ಯಾವುದೇ ಕ್ಷೇತ್ರಗಳನ್ನು ಜೆಡಿಎಸ್ ಗೆ ಬಿಟ್ಟುಕೊಡದಂತೆ ಹೈಕಮಾಂಡ್ ತಿಳಿಸಲಾಗಿದೆ. ಅಲ್ಲದೆ ಈ ವಿಚಾರವನ್ನು ಜಿಡಿಎಸ್ ಗೂ ತಿಳಿಸಲಾಗಿದೆ ಎಂದರು.

ಇದೇ ವೇಳೆ ಮಂಡ್ಯದಿಂದ ಸುಮಲತಾ ಅವರಿಗೆ ಸಿದ್ದರಾಮಯ್ಯ ಪರೋಕ್ಷ ಬೆಂಬಲ ನೀಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ  ಸಿದ್ದರಾಮಯ್ಯ, ಸುಮಲತಾಗೆ ಕಾಂಗ್ರೆಸ್​ನಿಂದ ಟಿಕೆಟ್​ ನೀಡುವುದಿಲ್ಲ ಎಂದು ಹೇಳಿದ್ದೇ ನಾನು. ಅಲ್ಲಿನ ಸ್ಪರ್ಧೆಯ ಬಗ್ಗೆ ಈ ಮೊದಲೇ ನಿರ್ಧಾರವಾಗಿತ್ತು. ಹಾಗಿದ್ದಮೇಲೆ ನಾನ್ಯಾಕೆ ಸುಮಲತಾಗೆ ಪರೋಕ್ಷ ಬೆಂಬಲ ನೀಡುತ್ತೇನೆ? ಹಾಗೇನಾದರೂ ಇದ್ದಿದ್ದರೆ ನೇರವಾಗೇ ಹೇಳುತ್ತಿದ್ದೆ ಎಂದರು.

ಕುಟುಂಬ ರಾಜಕಾರಣ ಮೈತ್ರಿ ಮೇಲೆ ದುಷ್ಪರಿಣಾಮ ಬೀರುವುದಿಲ್ಲ. ಮಂಡ್ಯದಲ್ಲಿ ನಿಖಿಲ್, ಹಾಸನದಲ್ಲಿ ಪ್ರಜ್ವಲ್ ಕಣಕ್ಕಿಳಿಸುವುದು ಜೆಡಿಎಸ್ ಪಕ್ಷದ ನಿರ್ಧಾರ. ಅವರ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಬಗ್ಗೆ ನಾವು ನಿರ್ದೇಶನ ಅಥವಾ ಸಲಹೆ ಸೂಚನೆ ನೀಡಲಾಗುವುದಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಈ ಮಧ್ಯೆ ಅಭ್ಯರ್ಥಿಗಳ ಆಯ್ಕೆಯನ್ನು ಒಂದೆರಡು ದಿನಗಳಲ್ಲಿ ಅಂತಿಮಗೊಳಿಸುವ ಸಾಧ್ಯತೆ ಇದೆ.

ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ, ಸಚಿವ ಡಿ.ಕೆ. ಶಿವಕುಮಾರ್,  ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಮಾಜಿ ಸಚಿವರಾದ ಕೆ.ಎಚ್. ಮುನಿಯಪ್ಪ, ವೀರಪ್ಪ ಮೊಯಿಲಿ ಮತ್ತಿತರರು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. 

ಕಾಂಗ್ರೆಸ್ ಹಾಲಿ ಸಂಸದರ ಕ್ಷೇತ್ರಗಳನ್ನು ಬಿಟ್ಟುಕೊಡವುದಿಲ್ಲ ಎಂಬ ಸ್ಪಷ್ಟ ಸಂದೇಶದ ನಡುವೆಯೂ ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಮೈಸೂರು ಕ್ಷೇತ್ರಗಳಿಗೆ ಜೆಡಿಎಸ್ ಒತ್ತಡ ಹಾಕುತ್ತಿದ್ದು, ಇದಕ್ಕೆ ಸೊಪ್ಪು ಹಾಕಬಾರದೆಂಬ  ನಿಲುವಿಗೆ ಬರಲಾಗಿದೆ.
 


ಸಂಬಂಧಿತ ಟ್ಯಾಗ್ಗಳು

#Congress #Jds #Constituencies #Congress


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ