ಎಲ್ಲರ ಚಿತ್ತ ಮಂಡ್ಯ ರಾಜಕೀಯದತ್ತ ಇದು ಸಿನಿ ವರ್ಸಸ್ ಪೊಲಿಟಿಕಲ್ ಫೈಟ್

Mandya Politics This is Cinema vs. Political Fight

09-03-2019

ಲೋಕಸಭಾ ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ದೇಶದೆಲ್ಲೆಡೆ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಆಯ್ಕೆ, ಸೇರಿದಂತೆ ಪ್ರಚಾರದ ಭರಾಟೆಯಲ್ಲಿ ತೊಡಗಿಕೊಂಡಿವೆ.   ಅದರಲ್ಲೂ ರಾಜ್ಯದ ಮಂಡ್ಯ ಚುನಾವಣಾ ಕಣ ರಂಗೇರಿದ್ದು, ಮಾಜಿ ಸಂಸದ, ದಿವಂಗತ ರೆಬೆಲ್‍ಸ್ಟಾರ್ ಅಂಬರೀಶ್ ಪತ್ನಿ ಸುಮಲತಾ ಅಂಬರೀಷ್ ಹಾಗೂ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿಯ ನಡುವೆ ಜಟಾಪಟಿ ನಡೆಯುವ ಲಕ್ಷಣಗಳು ದಟ್ಟವಾಗಿ ಗೋಚರಿಸಿವೆ.

ಮಂಡ್ಯ ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಟ್ಟಿರುವ ಕಾಂಗ್ರೆಸ್, ಸುಮಲತಾರಿಗೆ ಟಿಕೆಟ್ ನೀಡಲು ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ, ಟಿಕೆಟ್ ಸಿಗದಿದ್ದರೆ ಸ್ವತಂತ್ರವಾಗಿ ಸ್ಪರ್ಧಿಸಲು ಆಕೆ ನಿಶ್ಚಯಿಸಿದ್ದಾರೆ ಎನ್ನಲಾಗಿದೆ.  ಕನ್ನಡ ಚಿತ್ರರಂಗ ಹಾಗೂ ಕಲಾವಿದರ ಕಷ್ಟ, ಸುಖಗಳಿಗೆ ಸ್ಪಂದಿಸುತ್ತಿದ್ದ ಅಂಬರೀಶ್ ಗಾಗಿ ಮಿಡಿಯುತ್ತಿರುವ ಚಂದನವನ ಸುಮಲತಾ ಬೆನ್ನಿಗೆ ನಿಲ್ಲುವ ನಿರ್ಣಯವನ್ನು ಈಗಾಗಲೇ ಕೈಗೊಂಡಿದೆ.

 

ಆದರೆ ಮಂಡ್ಯದಲ್ಲಿ ಆಕೆಯ ಪರ ಪ್ರಚಾರ ಪ್ರಚಾರಕ್ಕೆ ನಿಲ್ಲುವ ಸ್ಟಾರ್ಗಳು ಯಾರ್ಯಾರು ಅನ್ನೋದು ಪ್ರಶ್ನೆ.  "ದರ್ಶನ್ ಹಾಗೂ ಯಶ್ ನನ್ನ ಮಕ್ಕಳಿದ್ದ ಹಾಗೆ,  ನನ್ನ ಸ್ವಂತ ಮಗ ಅಭಿಷೇಕ್‍ಗಿಂತಲೂ ಹೆಚ್ಚು. ಯಾವುದೇ ಪಕ್ಷದ ಟಿಕೆಟ್‍ಗೆ ಕೈ ಚಾಚದೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ನನಗೆ ಬೆಂಬಲ ನೀಡುವುದಾಗಿ ದರ್ಶನ್ ಈಗಾಗಲೇ ಹೇಳಿದ್ದಾರೆ.  ಯಶ್ ಕೂಡ ನನ್ನ ಪರ ಪ್ರಚಾರ ಮಾಡುತ್ತಾರೆ" ಎಂದು ಸುಮಲತಾ ಹೇಳಿಕೊಂಡಿದ್ದಾರೆ.

"ಅಂಬರೀಶ್ ಋಣ ತೀರಿಸುವ ಸಲುವಾಗಿ ಸುಮಲತಾ ಪರ ಪ್ರಚಾರ ಮಾಡುತ್ತೇನೆ" ಎಂದು 'ಯಜಮಾನ'  ದರ್ಶನ್ ಕೂಡ ತಿಳಿಸಿದ್ದಾರೆ. ಇನ್ನು ಅಂಬರೀಶ್‍ಗೆ ಆಪ್ತರಾಗಿದ್ದ ನಟ ಸುದೀಪ್ ಕೂಡ ಸುಮಲತಾ ಪರ ಪ್ರಚಾರ ಮಾಡ್ತಾರಾ ಅನ್ನೋ ಕುತೂಹಲ ಎಲ್ಲರಲ್ಲೂ ಇದೆ.  ಆದರೆ "ದರ್ಶನ್ ಇರುವಾಗ ನಾನ್ಯಾಕೆ" ಎಂದಿದ್ದಾರೆ ಸುದೀಪ್.  ಈ ಹೇಳಿಕೆಯ ಭಾವಾರ್ಥ, ಒಳಾರ್ಥಗಳೇನು?  ದರ್ಶನ್ ಸಾಕು, ನಾನ್ಯಾಕೆ ಅಂತಾನೋ. . .  ದರ್ಶನ್ ಇರುವಾಗ ನಾನ್ಯಾಕೆ ಬರ್ಲಿ ಅಂತಾನೋ. .. . ಎಂಬುದನ್ನು ಅವರವರ ಭಾವಕ್ಕೆ ಬಿಟ್ಟಿದ್ದಾರೆ ಸುದೀಪ್.

ಇನ್ನು ಮಗನನ್ನು ಮಂಡ್ಯದಿಂದಲೇ ಕಣಕ್ಕಿಳಿಸಬೇಕೆಂದು ಬಯಸಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಮ್ಮ ನಿಲುವಿಗೆ ಅಂಟಿಕೊಂಡಿದ್ದಾರೆ. ನಿಖಿಲ್ ಸ್ಪರ್ಧೆಗೆ ಸ್ವಪಕ್ಷ ಜೆಡಿಎಸ್‍ನಲ್ಲೇ ಅಪಸ್ವರ ಕೇಳಿಬರುತ್ತಿದ್ದರೂ, "ಒಂದು ಕ್ಷೇತ್ರಕ್ಕೆ ಅಭ್ಯರ್ಥಿಯ ಆಯ್ಕೆಯಾದರೆ ಪರ,ವಿರೋಧ ಸಹಜ.  ಮಂಡ್ಯದಿಂದ ನಿಖಿಲ್ ಸ್ಪರ್ಧೆ ಖಚಿತ" ಎಂದುಬಿಟ್ಟಿದ್ದಾರೆ. 

ಹೀಗಾಗಿ ಈ ಬಾರಿ ಸುಮಲತಾ ಅಂಬರೀಶ್ ಮತ್ತು ನಿಖಿಲ್ ಕುಮಾರಸ್ವಾಮಿ ನಡುವೆ ಜಟಾಪಟಿ ಖಚಿತ ಎಂಬಂತಾಗಿದೆ.  ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಸುಮಲತಾ ಬೆನ್ನಿಗೆ ನಿಲ್ಲುವ ಮಾತುಗಳನ್ನಾಡಿರುವುದರಿಂದ ಗೆಲುವಿನ ಮಾಲೆ ಯಾರ ಕೊರಳಿಗೆ, ಸುಮಲತಾ ಬೆನ್ನಿಗೆ ಇಡೀ ಸ್ಯಾಂಡಲ್‍ವುಡ್ ನಿಲ್ಲುತ್ತಾ?  ಯಾರ ಪರವೂ ನಿಲ್ಲುವುದು ಬೇಡ ಎಂದು ಸುಮ್ಮನಾಗುತ್ತಾ?  ಸುಮಲತಾ ಕಾಂಗ್ರೆಸ್ ಟಿಕೆಟ್‍ಗೆ ಕಾಯ್ತಾರಾ, ಪಕ್ಷೇತರರಾಗಿ ಸ್ಪರ್ಧಿಸ್ತಾರಾ ಎಂಬ ಕುತೂಹಲ  ಮನೆ ಮಾಡಿದೆ.


ಸಂಬಂಧಿತ ಟ್ಯಾಗ್ಗಳು

#Mandya #Nikil Kumarswamy #Sumalatha #Politics


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ