ಭಾರತಕ್ಕೆ ಅಭಿನಂದನ್ ಹಸ್ತಾಂತರಿಸಿದ ಪಾಕ್

Pakistan Handed Over Abinandhan  to India

01-03-2019

ರಾಷ್ಟ್ರದ ಎಲ್ಲರ ಹಾರೈಕೆ , ಪೂಜೆಗಳ ಫಲವಾಗಿ ಪಾಕ್ ವಶದಲ್ಲಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಶುಕ್ರವಾರ ಸಂಜೆ 4.30 ರ ವೇಳೆಗೆ ವಾಘಾ ಗಡಿ ಪ್ರದೇಶದ ಮೂಲಕ ಭಾರತಕ್ಕೆ ಹಿಂತಿರುಗಿದ್ದಾರೆ. ಲಾಹೋರ್‍ನಿಂದ 22 ಕಿಲೋಮೀಟರ್ ದೂರದಲ್ಲಿರುವ  ಅಟಾರಿ ವಾಘಾ ಗಡಿಯ ಮೂಲಕ ಭಾರತಕ್ಕೆ ಅಭಿನಂದನ್‍ರನ್ನು ಹಸ್ತಾಂತರಿಸಲಾಗಿದೆ. 

ಮೊದಲು ಅಭಿನಂದನ್ ರನ್ನು ವಾಯು ಮಾರ್ಗದ ಮೂಲಕ ಹಸ್ತಾಂತರಿಸಲು ತೀರ್ಮಾನಿಸಲಾಗಿತ್ತಾದರೂ ಪಾಕ್ ಒಪ್ಪಿಗೆ ನೀಡದ ಹಿನ್ನೆಲೆಯಲ್ಲಿ ಭೂಮಾರ್ಗದ ಮೂಲಕ  ಭಾರತ ಗಡಿಗೆ ಕರೆತರಲಾಗಿದೆ.  ವಾಘಾ ಗಡಿಯಲ್ಲಿದ್ದ ಐಎಎಫ್ ಅಧಿಕಾರಿಗಳು ಅಭಿನಂದನ್ ಅವರನ್ನು ಹಸ್ತಾಂತರಿಸಿಕೊಂಡಿದ್ದು, ಪಾಕ್ ಅಧಿಕಾರಿಗಳು ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಿ ವಾಪಸ್ಸಾಗಿದ್ದಾರೆ. 
ಪಾಕ್ ಅಧಿಕಾರಿಗಳು ಅಭಿನಂದನ್ ಹಸ್ತಾಂತರಿಸಿದ ಬಳಿಕ ಅವರನ್ನು ಆರೋಗ್ಯ ಪರೀಕ್ಷೆಗೆ ಕರೆದೊಯ್ಯಲಾಗಿದೆ. 
ಆರೋಗ್ಯ ಪರೀಕ್ಷೆಯ ಬಳಿಕ ಅಭಿನಂದನ್ ಅವರನ್ನು ಐಎಎಫ್ ಅಧಿಕಾರಿಗಳು ಒಂದಿಷ್ಟು ವಿಚಾರಣೆಗೊಳಪಡಿಸಲಿದ್ದಾರೆ. ಬಳಿಕ ಅಭಿನಂದನ್ ಅವರನ್ನು ವಿಮಾನದ ಮೂಲಕ ದೆಹಲಿಗೆ ಕರೆದೊಯ್ಯಲಾಗುತ್ತದೆ. ಈಗಾಗಲೇ ಅಭಿನಂದನ್ ಪೋಷಕರು ಚೈನೈನಿಂದ ದೆಹಲಿ ತಲುಪಿದ್ದು, ಅಭಿನಂದನ್ ಭೇಟಿಗಾಗಿ ಕಾತುರರಾಗಿದ್ದಾರೆ. 

ಅಭಿನಂದನ್ ಆಗಮನಕ್ಕಾಗಿ ಬೆಳ್ಳಿಗೆಯಿಂದಲೂ ವಾಘಾ ಗಡಿಯಲ್ಲಿ ಸಾವಿರಾರು ಅಭಿಮಾನಿಗಳು, ಅಧಿಕಾರಿಗಳು ಕಾದಿದ್ದು, ದೇಶದೆಲ್ಲೆಡೆ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಕರ್ನಾಟಕ ಸೇರಿದಂತೆ ದೇಶದ ಎಲ್ಲೆಡೆ ಜನರು ಸಿಹಿ ಹಂಚಿ ಅಭಿನಂದನ್ ಆಗಮನದ ಸಂಭ್ರಮ ಹಂಚಿಕೊಳ್ಳುತ್ತಿದ್ದಾರೆ.
 


ಸಂಬಂಧಿತ ಟ್ಯಾಗ್ಗಳು

#India #Return #Abinandhan #Pakistan


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ