ಕರ್ನಾಟಕದ ಜಿಲ್ಲೆಗಳಲ್ಲಿ ಬರಗಾಲ

Drought in the Districts of Karnataka

01-03-2019

ಬರಗಾಲದಿಂದ ಕಡುಕಷ್ಟ ಅನುಭವಿಸುತ್ತಿರುವ ದೇಶದ ಇಪ್ಪತ್ನಾಲ್ಕು ಜಿಲ್ಲೆಗಳ ಪೈಕಿ ಹದಿನಾರು ಜಿಲ್ಲೆಗಳು ಕರ್ನಾಟಕದವು ಎಂಬ ಆಘಾತಕಾರಿ ಮಾಹಿತಿಯನ್ನು ದಾಖಲೆ ಸಮೇತವಾಗಿ ಕೇಂದ್ರ ಸರ್ಕಾರಕ್ಕೆ ಒದಗಿಸಿರುವ ರಾಜ್ಯ ಸರ್ಕಾರ ಇದೀಗ ಹಿಂಗಾರು ಹಂಗಾಮಿನ ಬಾಬ್ತಿನಲ್ಲಿ 2064 ಕೋಟಿ ರೂ ಪರಿಹಾರ ನೀಡುವಂತೆ ಮನವಿ ಮಾಡಿಕೊಂಡಿದೆ.

ವಿಧಾನಸೌಧದ ಸಮಿತಿ ಕೊಠಡಿಯಲ್ಲಿಂದು ಡಾ.ಅಭಿಲಾಶ್ ಲಿಖಿ ನೇತೃತ್ವದ ಕೇಂದ್ರ ಅಧ್ಯಯನ ತಂಡದೊಂದಿಗೆ ಮಾತುಕತೆ ನಡೆಸಿದ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಮತ್ತಿತರ ಸಚಿವರು, ಅಧಿಕಾರಿಗಳ ತಂಡ ಈ ಮಾಹಿತಿ ನೀಡಿದೆ.

ಕೃಷಿ ಮತ್ತು ತೋಟಗಾರಿಕೆ ಬೆಳೆಯ ಬಾಬ್ತಿನಲ್ಲೇ ಹನ್ನೊಂದು ಸಾವಿರ ಕೋಟಿ ರೂಗಳಿಗೂ ಅಧಿಕ ನಷ್ಟವಾಗಿದ್ದು ಕೇಂದ್ರದ ಮಾರ್ಗದರ್ಶಿ ನಿಯಮಾವಳಿಯ ಪ್ರಕಾರವೇ ನಮಗೆ 2064 ಕೋಟಿ ರೂ ನೀಡಬೇಕು ಎಂದು ಅದು ಕೇಳಿದೆ.

ಮುಂಗಾರು ಹಂಗಾಮಿನಲ್ಲಿ ಆದ ನಷ್ಟದ ಹಿನ್ನೆಲೆಯಲ್ಲಿ 2400 ಕೋಟಿ ರೂಗಳಿಗೂ ಅಧೀಕ ಪರಿಹಾರದ ಹಣವನ್ನು ಕೋರಲಾಗಿತ್ತು. ಆದರೆ ಕೇಂದ್ರ ಸರ್ಕಾರ ಇವತ್ತು 949.49 ಕೋಟಿ ರೂ ಮಂಜೂರಾತಿಯ ಪತ್ರ ರವಾನಿಸಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ತದ ನಂತರ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

ರಾಜ್ಯದಲ್ಲಿನ ಬರಪರಿಸ್ಥಿತಿಯ ಅಧ್ಯಯನಕ್ಕೆ ಒಂಭತ್ತು ಅಧಿಕಾರಿಗಳ ತಂಡ ಬಂದಿತ್ತು ಮೂರು ತಂಡಗಳಲ್ಲಿ ಈ ಅಧಿಕಾರಿಗಳು ಹದಿನಾಲ್ಕು ಜಿಲ್ಲೆಗಳಿಗೆ ಭೇಟಿ ನೀಡಿದ್ದಾರೆ.ಮೂರು ಸಾವಿರ ಕಿಲೋಮೀಟರುಗಳಷ್ಟು ಪ್ರದೇಶದುದ್ದ ಪ್ರವಾಸ ಮಾಡಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಅವರು ವಿವರಿಸಿದರು.

ಹೀಗೆ ಅಧ್ಯಯನ ಮಾಡಿ ಬಂದ ಅಭಿಲಾಶ್ ಲಿಖಿ ನೇತೃತ್ವದ ತಂಡದೊಂದಿಗೆ ಮಾತುಕತೆ ನಡೆಸಲಾಗಿದ್ದು ಹಿಂಗಾರು ಹಂಗಾಮಿನಲ್ಲಿ ಬರದಿಂದಾದ ನಷ್ಟಕ್ಕೆ ಪ್ರತಿಯಾಗಿ ಕೇಂದ್ರದ ಮಾರ್ಗಸೂಚಿಯನುಸಾರವೇ 2064 ಕೋಟಿ ರೂ ಪರಿಹಾರ ಕೋರಲಾಗಿದೆ ಎಂದರು.

ಬರ,ಅತಿವೃಷ್ಟಿ ಸೇರಿದಂತೆ ವಿವಿಧ ಬಾಬ್ತುಗಳಲ್ಲಿ ರಾಜ್ಯ ಕಳೆದೊಂದು ವರ್ಷದಲ್ಲಿ ಮೂವತ್ತೊಂದು ಸಾವಿರ ಕೋಟಿ ರೂಗಳಿಗೂ ಅಧಿಕ ನಷ್ಟ ಕಂಡಿದೆ.ಆದರೆ ಕೇಂದ್ರ ಸರ್ಕಾರದಿಂದ ನಮಗೆ ಇದುವರೆಗೆ ಕುಡಿಯುವ ನೀರಿನ ಬಾಬ್ತಿನಲ್ಲಿ ಐನೂರಾ ಎಪ್ಪತ್ತೈದು ಕೋಟಿ ರೂ ಬಂದಿದೆ.

ಅದೇ ರೀತಿ ಮುಂಗಾರು ಹಿಂಗಾಮಿನ ಬಾಬ್ತಿನಲ್ಲಿ 949.49 ಕೋಟಿ ರೂಪಾಯಿಗಳ ಮಂಜೂರಾತಿ ಪತ್ರ ಬಂದಿದೆ ಎಂದು ಹೇಳಿದರು.

ನರೇಗಾ ಯೋಜನೆಯಡಿ ಕೇಂದ್ರ ಸರ್ಕಾರ ನೀಡುವ ಕೂಲಿ ಹಣ,ಸಾಮಾಗ್ರಿಗಳ ಹಣ ಬಂದಿಲ್ಲ.ಈ ಹಿನ್ನೆಲೆಯಲ್ಲಿ ಕೂಲಿ ಬಾಬ್ತಿನಲ್ಲಿ ನಾವೇ ಕೇಂದ್ರ ಸರ್ಕಾರಕ್ಕೆ ಐನೂರು ಕೋಟಿ ರೂ ಸಾಲ ನೀಡಿದ್ದೇವೆ ಎಂದು ವಿಷಾದಿಸಿದರು.

ಬರಗಾಲದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮೂವತ್ತು ಲಕ್ಷ ಟನ್ ಮೇವು ಬೆಳೆಯಲಾಗುತ್ತಿದೆ.ಮಳೆಗಾಲಕ್ಕೂ ಮೂರು ತಿಂಗಳ ಮುನ್ನ ಟ್ಯಾಂಕರ್‍ಗಳಲ್ಲಿ ಕುಡಿಯುವ ನೀರು ಸರಬರಾಜು ಮಾಡಬಹುದು ಎಂಬ ನಿಯಮವನ್ನು ಸಡಿಲಪಡಿಸಿ ತಕ್ಷಣದಿಂದಲೇ ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಿ ಎಂದು ಆದೇಶ ನೀಡಲಾಗಿದೆ.

ಬೋರ್‍ವೆಲ್‍ಗಳನ್ನು ಅಗತ್ಯವಿದ್ದಲ್ಲಿ ಕೊರೆಯಿರಿ,ಟ್ಯಾಂಕರುಗಳ ಮೂಲಕ ಸರಬರಾಜು ಮಾಡಿ ಎಂಬುದೂ ಸೇರಿದಂತೆ ಹಲ ಅವಕಾಶಗಳನ್ನು ಮುಕ್ತವಾಗಿ ನೀಡಲಾಗಿದೆ ಎಂದು ಇದೇ ಸಂದರ್ಭದಲ್ಲಿ ಅವರು ವಿವರಿಸಿದರು.

ರಾಜ್ಯದ ಜಿಲ್ಲಾಧಿಕಾರಿಗಳಿಗೆ ಬರಪರಿಸ್ಥಿತಿಯನ್ನು ಎದುರಿಸಲು ಅನುಕೂಲವಾಗುವಂತೆ ಕನಿಷ್ಟ ಆರು ಕೋಟಿ ರೂ ನೀಡಲಾಗಿದ್ದು ಒಟ್ಟಾರೆಯಾಗಿ ಜಿಲ್ಲಾಧಿಕಾರಿಗಳ ಬಳಿ ಆರು ನೂರು ಕೋಟಿ ರೂಗಳಿಗೂ ಹೆಚ್ಚು ಹಣವಿದೆ ಎಂದು ಅವರು ನುಡಿದರು.

ಬರಗಾಲ ಎಷ್ಟು ವ್ಯಾಪಕವಾಗಿದೆ ಎಂಬುದನ್ನು ಕೇಂದ್ರದ ಅಧ್ಯಯನ ತಂಡಕ್ಕೆ ವಿವರಿಸಿದ್ದೇವೆ.ಕಳೆದ ಹದಿನೆಂಟು ವರ್ಷಗಳಲ್ಲಿ ಹದಿನಾಲ್ಕು ವರ್ಷ ಬರಗಾಲವನ್ನು ಕಂಡ ರಾಜ್ಯ ಕರ್ನಾಟಕ ಎಂದು ಸ್ಪಷ್ಟವಾಗಿ ಹೇಳಿದ್ದೇವೆ.

ದೇಶದ ಅತ್ಯಂತ ಭೀಕರ ಬರಪೀಡಿತ 24 ಜಿಲ್ಲೆಗಳ ಪೈಕಿ 16 ಜಿಲ್ಲೆಗಳು ಕರ್ನಾಟಕದಲ್ಲಿವೆ ಎಂದು ಹೇಳಿದ್ದೇವೆ.ಅವರು ವಸ್ತುಸ್ಥಿತಿಯನ್ನು ಗಮನಿಸಿದ್ದಾರೆ.ಹಾಗೆಯೇ ಈ ಕುರಿತು ಆದಷ್ಟು ಬೇಗ ಕೇಂದ್ರ ಸರ್ಕಾರಕ್ಕೆ ವರದಿ ನೀಡುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಹಾಗೆಯೇ ಕೇಂದ್ರ ಸರ್ಕಾರ ಕೂಡಾ ರಾಜ್ಯದ ಬರಪರಿಸ್ಥಿತಿಯ ಬಗ್ಗೆ ಹೆಚ್ಚು ಕಾಳಜಿಯಿಂದ ನಡೆದುಕೊಳ್ಳಬೇಕು.ಅವರು ಬೇರೆ ರಾಜ್ಯಗಳ ವಿಷಯದಲ್ಲಿ ಹೇಗೆ ನಡೆದುಕೊಳ್ಳುತ್ತಿದ್ದಾರೆ?ಎಂದು ನಾನು ಹೇಳುವುದಿಲ್ಲ.ಆದರೆ ಕರ್ನಾಟಕದ ವಿಷಯದಲ್ಲಿ ಅವರು ಕಡಿಮೆ ಕಾಳಜಿ ತೋರುತ್ತಿರುವುದು ಮಾತ್ರ ನಿಜ ಎಂದು ವಿಷಾದ ವ್ಯಕ್ತ ಪಡಿಸಿದರು.

ವಿಕಾಸಸೌಧದ ಸಮಿತಿ ಕೊಠಡಿಯಲ್ಲಿಂದು ನಡೆದ ಸುದ್ದಿಗೋಷ್ಟಿಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ,ಪಶುಸಂಗೋಪನಾ ಸಚಿವ ನಾಡಗೌಡ ಹಾಗೂ ವಿವಿಧ ಇಲಾಖೆಯ ಉನ್ನತಾಧಿಕಾರಿಗಳು ಉಪಸ್ಥಿತರಿದ್ದರು.


ಸಂಬಂಧಿತ ಟ್ಯಾಗ್ಗಳು

#Karnataka #District #Drought #Govrnment


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ