ಕೇಂದ್ರದ ಜಾಹೀರಾತಿನಲ್ಲಿ ಕನ್ನಡದ ಕಗ್ಗೊಲೆ

 Kannada Carnage In Center Advertisement

25-02-2019

ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ಯಾವುದೇ ಸರ್ಕಾರಗಳು ಆಡಳಿತದಲ್ಲಿರಲಿ, ತಾವು ತಂದ ಯೋಜನೆಗಳನ್ನ, ಸಾಧನೆಗಳನ್ನ ಜಾಹೀರಾತು ಮೂಲಕ ಜನರಿಗೆ ಮುಟ್ಟಿಸುವ ಕೆಲಸವನ್ನು ಮಾಡೇ ಮಾಡುತ್ತಾರೆ. ಆದರೆ ಹೀಗೆ ಜಾಹೀರಾತು ಪ್ರಕಟಿಸುವಾಗ ಮಾತ್ರ ಭಾಷೆ, ವ್ಯಾಕರಣಗಳ ಬಗ್ಗೆ ಯಾವುದೇ ಕಾಳಜಿ ವಹಿಸದೇ ಮನಸ್ಸಿಗೆ ಬಂದಂತೆ ಮುದ್ರಿಸಿ ಅವಾಂತರ ಸೃಷ್ಟಿಸುತ್ತಾರೆ. ಇದೀಗ ಬೆಂಗಳೂರಿನ ಬೀದಿ ಬೀದಿಗಳಲ್ಲಿ ರಾರಾಜಿಸುತ್ತಿರುವ ಕೇಂದ್ರ ಸರ್ಕಾರದ ಜಾಹೀರಾತುಗಳಲ್ಲೂ ಇಂಥಹುದೇ ಸ್ಥಿತಿ ಇದ್ದು, ಕನ್ನಡದ ಕಗ್ಗೂಲೆಯಾಗಿದೆ. 

ಹೌದು 2019 ಚುನಾವಣೆಯ ವರ್ಷ. ಹೀಗಾಗಿ ರಾಜಕೀಯ ಪಕ್ಷಗಳು ಎಲ್ಲ ಕೆಲಸವನ್ನು ಪ್ರಚಾರದ ದೃಷ್ಟಿಯಿಂದಲೇ ಮಾಡುತ್ತವೆ. ಇದಕ್ಕೆ ಕೇಂದ್ರದಲ್ಲಿರುವ ಮೋದಿ ನೇತ್ರತ್ವದ ಸರ್ಕಾರವೂ ಹೊರತಲ್ಲ. ಮೋದಿಯವರ ಬಹುನೀರಿಕ್ಷಿತ ಉಜ್ವಲಾ ಯೋಜನೆಯ ಬಗ್ಗೆ ಲಕ್ಷಾಂತರ ರೂಪಾಯಿ ವ್ಯಯಿಸಿ ಜಾಹೀರಾತು ಮುದ್ರಿಸಿ ರಾಜ್ಯಗಳಿಗೆ ಹಂಚುತ್ತಿದೆ. ಆದರೆ ಈ ಜಾಹೀರಾತುಗಳು ಕನ್ನಡದಲ್ಲಿ ಮಾತ್ರ ಬೇಕಾಬಿಟ್ಟಿಯಾಗಿ ಬಳಸಲ್ಪಡುತ್ತಿವೆ. 

ಹೌದು ಲಕ್ಷಾಂತರ ರೂಪಾಯಿ ಕೊಟ್ಟು ಜಾಹೀರಾತಿನ ಕಟೌಟ್ ಖರೀದಿಸಿ ಜಾಹೀರಾತು ಪ್ರಟಿಸುವವರು ಭಾಷೆಯ ಶುದ್ಧತೆಗೆ ಕಿಂಚಿತ್ತು ಗಮನ ನೀಡುತ್ತಿಲ್ಲ. ಹೀಗಾಗಿ ಎಲ್ಲೆಡೆ ತಪ್ಪುತಪ್ಪಾಗಿ ಕನ್ನಡದ ಬರಹಗಳುಳ್ಳ ಜಾಹೀರಾತು ಫಲಕಗಳು  ತಲೆಎತ್ತಿವೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂಪಾಯಿ ನಷ್ಟ ಮಾತ್ರವಲ್ಲ ಜನಸಾಮಾನ್ಯರ ಎದುರು ಸರ್ಕಾರ ಮುಜುಗರ ಎದುರಿಸುವಂತಾಗುತ್ತದೆ. ಆದರೆ ಈ ಫಲಕಗಳನ್ನು ಪ್ರಕಟಿಸುವವರು ಮಾತ್ರ ಇದ್ಯಾವುದನ್ನು ತಲೆಗೆ ಹಾಕಿಕೊಂಡಂತಿಲ್ಲ. ಹೀಗಾಗಿ ತಪ್ಪುಗಳ ಸರಮಾಲೆ ಮುಂದುವರಿದಿದೆ. 

ಜಯನಗರದ ಬಳಿ ಹಾಕಲಾಗಿರುವ ಕೇಂದ್ರ ಸರ್ಕಾರದ ಉಜ್ವಲಾ ಯೋಜನೆಯ ಜಾಹೀರಾತಿನಲ್ಲಿ ಸಾಧ್ಯವಾಗಿದೆ ಎನ್ನವುದನ್ನು ಸಾಧ್ಯವಾಗಿಗೆ ಎಂದು ಪ್ರಕಟಿಸಲಾಗಿದೆ. ಅಲ್ಲದೆ 2014 ರಲ್ಲಿ  ವಿಮಾನ ನಿಲ್ದಾಣಗಳು 75 ಇತ್ತು ಎಂದು ಪ್ರಕಟಿಸುವ ಬದಲು ಅರಿತ್ತು ಎಂದು ಮುದ್ರಿಸಲಾಗಿದೆ. ಕೇವಲ ಜಯನಗರದಲ್ಲಿ ಮಾತ್ರವಲ್ಲ ನಗರದ ನೂರಾರು ಕಡೆಗಳಲ್ಲಿ ಇಂತಹುದೇ ಸ್ಥಿತಿ ಇದೆ.

 ಇನ್ನು ಬಿಬಿಎಂಪಿ ಈ ರೀತಿಯ ಜಾಹೀರಾತು ಪ್ರಕಟಿಸುವುದನ್ನು ಬ್ಯಾನ್ ಮಾಡಿತ್ತಾದರೂ ಬಳಿಕ ಹೈಕೋರ್ಟ್ ಅನುಮತಿ ನೀಡಿತ್ತು. ಬಿಬಿಎಂಪಿ ಅನುಮತಿ ನೀಡಿ ಕೈತೊಳೆದುಕೊಳ್ಳುತ್ತಿದೆಯೇ ವಿನಃ ಜಾಹೀರಾತುಗಳ ಕಂಟೆಂಟ್ ಅಥವಾ ಕ್ವಾಲಿಟಿಯನ್ನಾಗಿ ಪರಿಶೀಲಿಸುವ ಹೊಣೆಗಾರಿಕೆ ತೋರುತ್ತಿಲ್ಲ. ಹೀಗಾಗಿ ಇಂತಹ ಆ್ಯಡ್‍ಗಳ ನಗರದಾದ್ಯಂತ ತಲೆ ಎತ್ತಿ ನಿಂತಿರೋದು ಮಾತ್ರ ದುರಂತವೇ ಸರಿ. ಕರ್ನಾಟಕದಲ್ಲೇ ಕನ್ನಡಕ್ಕೆ ಬೆಲೆ ಇಲ್ಲವೇ ಅನ್ನೋದು ಸಾರ್ವಜನಿಕರ ಪ್ರಶ್ನೆ. 


ಸಂಬಂಧಿತ ಟ್ಯಾಗ್ಗಳು

#Bangalore #Central Govrnment #Advertisement #Bbmp


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ