ಸ್ವತಂತ್ರವಾಗಿ ಸ್ಪರ್ಧಿಸಿ ಮೈತ್ರಿ ರಾಜಕಾರಣಕ್ಕೆ ಸುಮಲತಾ ಸೆಡ್ಡು?

Sumalatha is an independent contender ?

25-02-2019

ಒಂದೆಡೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಲೋಕಸಭೆ ಚುನಾವಣೆಗೆ ಸೀಟು ಹಂಚಿಕೊಳ್ಳಲು ಕಸರತ್ತು ನಡೆಸುತ್ತಿರುವ ಬೆನ್ನಲ್ಲೇ, ಮಂಡ್ಯದಲ್ಲಿ ಸ್ವತಂತ್ರ ಅಭ್ಯರ್ಥಿಯೊಬ್ಬರು ಮೈತ್ರಿ ಸರ್ಕಾರದ ಪಾಲಿಗೆ ತಲೆನೋವಾಗಿ ಪರಿಣಮಿಸುವ ಮುನ್ಸೂಚನೆ ಸಿಕ್ಕಿದೆ. ಇತ್ತೀಚಿಗೆ ನಿಧನರಾದ ನಟ ಹಾಗೂ ಶಾಸಕ ಅಂಬರೀಶ್ ಪತ್ನಿ ಸುಮಲತಾ ಅಂಬರೀಶ್  ಕೊನೆಗೂ ಮಂಡ್ಯದಿಂದ ಲೋಕಸಭೆ ಚುನಾವಣಾ ಕಣಕ್ಕಿಳಿಯುವುದು ಬಹುತೇಕ ಖಚಿತ. ಒಂದೊಮ್ಮೆ ಕಾಂಗ್ರೆಸ್ ಮತ್ತು ಜೆಡಿಎಸ್ ಅವಕಾಶ ಕಲ್ಪಿಸದೇ ಇದ್ದಲ್ಲಿ ಅವರು ಸ್ವತಂತ್ರವಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಸುಮಲತಾ ಸ್ವತಂತ್ರವಾಗಿ ಕಣಕ್ಕಿಳಿದರೇ ಮೈತ್ರಿ ಸರ್ಕಾರದ ಪಾಲಿಗೆ ಮಂಡ್ಯ ಕಬ್ಬಿಣದ ಕಡಲೆಯಾಗಲಿದೆ.  

ಅಂಬರೀಶ್ ನಿಧನದ ಬಳಿಕ ಸುಮಲತಾ ಮಂಡ್ಯದಿಂದ ಚುನಾವಣೆಗೆ ಸ್ಪರ್ಧಿಸಿ, ರಾಜಕೀಯದಲ್ಲಿ ಅಂಬರೀಶ್ ಉತ್ತರಾಧಿಕಾರಿಯಾಗಬೇಕೆಂಬ ಒತ್ತಡ ಅಂಬಿ ಅಭಿಮಾನಿಗಳಿಂದ ವ್ಯಕ್ತವಾಗಿತ್ತು. ಇದಕ್ಕಾಗಿ  ಸಕಾರಾತ್ಮಕವಾಗಿ ಸ್ಪಂದಿಸಿದ್ದ ಸುಮಲತಾ ಅಭಿಮಾನಿಗಳ ಹಾಗೂ ಮಂಡ್ಯದ ಋಣ ತೀರಿಸಲು ನಾನು ರಾಜಕೀಯಕ್ಕೆ ಬರೋದಾಗಿ ಪ್ರಕಟಿಸಿದ್ದರು. ಆದರೆ ಅಂಬರೀಶ್ ನಿಧನದ ಸಂಪೂರ್ಣ ರಾಜಕೀಯ ಲಾಭವನ್ನು ಪಡೆಯಲು ಮುಂದಾಗಿದ್ದ  ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಯಾವಾಗ ಸುಮಲತಾ ರಾಜಕೀಯ ಸೇರಲು ಇಚ್ಛಿಸಿದರೋ ಆಗ ಬದಲಾಗಿ ಬಿಟ್ಟರು. 

ಜೆಡಿಎಸ್ ಅದಾಗಲೇ ಮಂಡ್ಯ ಲೋಕಸಭಾ ಕ್ಷೇತ್ರದಿಂದ ತಮ್ಮ ಗೌಡರ ಕುಟುಂಬದ ಮೂರನೇ ತಲೆಮಾರನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸಿದ್ದರೇ, ಇತ್ತ ಕಾಂಗ್ರೆಸ್ ಕೂಡ ತಮ್ಮ ಪಕ್ಕಾ ನೆಲೆಯಾಗಿರುವ ಮಂಡ್ಯವನ್ನು ಕಾಂಗ್ರೆಸ್‍ಗೆ ಉಳಿಸಿಕೊಳ್ಳಲು ಸರ್ಕಸ್ ನಡೆಸಿತ್ತು. ಈ ಮಧ್ಯೆ ಸುಮಲತಾ ರಾಜಕೀಯ ಪ್ರವೇಶದ ಸಂಗತಿ ಎರಡು ಪಕ್ಷಗಳ ಪಾಲಿಗೆ ನುಂಗಲಾರದ ತುತ್ತಾಗಿದ್ದು, ಕಾಂಗ್ರೆಸ್-ಜೆಡಿಎಸ್ ಇಬ್ಬರೂ ಸುಮಲತಾರನ್ನು ಲೋಕಸಭಾ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಸಿದ್ಧವಾಗಿಲ್ಲ. ಇದರಿಂದ ಸಹಜವಾಗಿಯೇ ಸುಮಲತಾರಿಗೆ ಬೇಸರವಾಗಿದೆ. 

ತಮ್ಮ ನಿಲುವು ಪ್ರಕಟಿಸುವುದಕ್ಕೆ ಮುನ್ನವೇ ಸುಮಲತಾ ಮಾಜಿ ಸಿಎಂ ಸಿದ್ಧರಾಮಯ್ಯನವರನ್ನು ಭೇಟಿ ಮಾಡಿದ್ದರು. ಆದರೂ ಸಿದ್ಧರಾಮಯ್ಯನವರಾಗಲಿ, ಅಥವಾ ಕಾಂಗ್ರೆಸ್ ಸುಮಲತಾಗೆ ಟಿಕೇಟ್ ನೀಡುವ ವಿಚಾರದ ಬಗ್ಗೆ ಮಾತನಾಡಿಲ್ಲ. ಹೀಗಾಗಿ ಸುಮಲತಾ ಸ್ವತಂತ್ರ ಸ್ಪರ್ಧೆಗೆ ಮುಂದಾಗುವ ಸಾಧ್ಯತೆ ಇದೆ. ಒಂದೊಮ್ಮೆ ಸುಮಲತಾ ಸ್ವತಂತ್ರವಾಗಿ ಸ್ಪರ್ಧಿಸಿದರೇ, ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಮತದಾರರಲ್ಲಿಯೇ ಓಡಕು ಮೂಡಲಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್‍ನಲ್ಲಿರುವ ಅಂಬರೀಶ್ ಅಭಿಮಾನಿಗಳು ಸುಮಲತಾರತ್ತ ಒಲವು ತೋರಲಿದ್ದಾರೆ. ಇದು ಈ ಎರಡು ಪಕ್ಷಗಳ ಪಾಲಿಗೆ ಬಿಸಿತುಪ್ಪವಾಗಲಿದೆ. 

ಈಗಾಗಲೇ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಸುಮಲತಾ, ಮಂಡ್ಯದಲ್ಲೇ ಮನೆ ಮಾಡಲು ನಿರ್ಧರಿಸಿದ್ದು, ಮನೆಗಾಗಿ ಹುಡುಕಾಟ ಕೂಡ ಆರಂಭಿಸಿದ್ದಾರಂತೆ. ಹೀಗಾಗಿ ಅಂಬಿ ಅನುಕಂಪದ ಅಲೆ ಸುಮಲತಾ ಪಾಲಿಗೆ ವರವಾಗುವ ಲಕ್ಷಣ ದಟ್ಟವಾಗಿದ್ರೆ, ಕಾಂಗ್ರೆಸ್-ಜೆಡಿಎಸ್ ನಿದ್ದೆಗೆಡುವಂತಾಗಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ ಎರಡೂ ಪಕ್ಷದಲ್ಲೂ ಸುಮಲತಾರನ್ನು ಅಭ್ಯರ್ಥಿಯಾಗಿಸುವುದಕ್ಕೆ ಆಂತರಿಕವಾಗಿ ವಿರೋಧವಿದೆ. ಹಾಗಂತ ಪಕ್ಷಗಳು ಕೈಬಿಟ್ಟರೂ ಅಂಬಿ ಅಭಿಮಾನಿಗಳು ಸುಮಲತಾ ಬೆನ್ನಿಗೆ ನಿಂತಿರೋದರಿಂದ ಸುಮಲತಾರನ್ನು ಕಳೆದುಕೊಳ್ಳುವಂತೆಯೂ ಇಲ್ಲ ಉಳಿಸಿಕೊಳ್ಳುವಂತೆಯೂ ಇಲ್ಲ ಅನ್ನೋ ಸ್ಥಿತಿಯಲ್ಲಿದೆ ಕಾಂಗ್ರೆಸ್-ಜೆಡಿಎಸ್ ಸ್ಥಿತಿ. 


ಸಂಬಂಧಿತ ಟ್ಯಾಗ್ಗಳು

#Karnataka #Sumalatha #Mandya #Alliance Politics


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ