ಕಾವೇರಿ ಗಲಾಟೆ ರೈತರ ಮೇಲಿನ ಕೇಸ್ ವಾಪಸ್

 Case on Cauvery riot farmers withdraws

23-02-2019

ರಾಜ್ಯವೇ ಬೆಚ್ಚಿ ಬೀಳುವಂತೆ ನಡೆದಿದ್ದ ಕಾವೇರಿ ಹೋರಾಟ ರೈತರ ಮೇಲೆ ಹಲವು ಪ್ರಕರಣಗಳು ದಾಖಲಾಗುವಂತೆ ಮಾಡಿತ್ತು. ಆದರೆ ಇದೀಗ ರಾಜ್ಯ ಸರ್ಕಾರ ರೈತರಿಗೆ ಸಿಹಿಸುದ್ದಿಯೊಂದನ್ನು ನೀಡಿದೆ. ಹೌದು ಕಾವೇರಿ ಗಲಾಟೆ ವೇಳೆ ರೈತರ ಮೇಲೆ ಹಾಕಲಾಗಿದ್ದ ಕೇಸ್‍ಗಳನ್ನು ವಾಪಸ್ಸು ಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ. 

ಮದ್ದೂರಿನ ಕೆ.ಎಂ.ದೊಡ್ಡಿಯಲ್ಲಿ ಮಾತನಾಡಿದ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಈ ಬಗ್ಗೆ ಮಾಹಿತಿ ನೀಡಿದ್ದು,  ಕ್ಯಾಬಿನೇಟ್ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ರೈತರ ಮೇಲೆ ದಾಖಲಾಗಿರುವ ಶೇಕಡಾ 95 ರಷ್ಟು ಪ್ರಕರಣವನ್ನು ಕೈಬಿಡಲಾಗುತ್ತದೆ ಎಂದಿದ್ದಾರೆ. 
ಈಗಾಗಲೇ ಸರ್ಕಾರ ಪೊಲೀಸ್ ಇಲಾಖೆಗೆ ತಾಲೂಕಾವಾರು ರೈತರ ಮೇಲೆ ದಾಖಲಾಗಿರುವ ಪ್ರಕರಣಗಳ ಬಗ್ಗೆ ಮಾಹಿತಿ ಪಡೆಯಲು ಸೂಚಿಸಿದೆ. ಇದನ್ನು ಆಧರಿಸಿ ಪ್ರಕರಣಗಳನ್ನು ವಾಪಸ ಪಡೆಯಲು ಸರ್ಕಾರ ನಿರ್ಧರಿಸಿದೆ. ಇದರಲ್ಲಿ ಸಾಮೂಹಿಕ ಪ್ರತಿಭಟನೆ ವೇಳೆ ದಾಖಲಾದ ಪ್ರಕರಣಗಳನ್ನು ಮಾತ್ರ ಹಿಂಪಡೆಯಲಾಗುತ್ತಿದೆ. 

ವೈಯಕ್ತಿಕವಾಗಿ ಸರ್ಕಾರಿ ಆಸ್ತಿಗೆ ಧಕ್ಕೆ, ಮನೆ ಮೇಲೆ ದಾಳಿ, ಕಲ್ಲು ತೂರಾಟ ಗ್ಲಾಸ್ ಒಡೆದಿದ್ದು, ಬೆಂಕಿ ಹಚ್ಚಿದ್ದು ಸೇರಿದಂತೆ ಖಾಸಗಿಯಾಗಿ ದಾಖಲಾದ ಪ್ರಕರಣಗಳನ್ನು ಸರ್ಕಾರ ರದ್ದು  ಮಾಡುತ್ತಿಲ್ಲ. ಈ ರೀತಿಯ ಪ್ರಕರಣಗಳನ್ನು ಸಂಬಂಧಿಸಿದ ಕೋರ್ಟ್‍ನಲ್ಲಿ ಇತ್ಯರ್ಥ ಮಾಡಿಕೊಳ್ಳಬೇಕಿದೆ. ಆದರೆ ಸಾಮೂಹಿಕವಾಗಿ ದಾಖಲಾದ ಕೇಸ್‍ಗಳನ್ನು ಸರ್ಕಾರ ವಜಾಗೊಳಿಸಲಿದೆ. 
ಫೆ. 27 ರಂದು ಸಿಎಂ ಕುಮಾರಸ್ವಾಮಿ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲು ಮಂಡ್ಯಕ್ಕೆ ಆಗಮಿಸಲಿದ್ದಾರೆ. ಈ ವೇಳೆ ಈ ಕೇಸ್‍ರದ್ದು ವಿಚಾರವನ್ನು ಅಧಿಕೃತವಾಗಿ ಪ್ರಕಟಿಸುವ ಸಾಧ್ಯತೆ ಇದೆ. ಲೋಕಸಭಾ ಚುನಾವಣೆ ಘೋಷಣೆ ಹಾಗೂ ಕ್ಷೇತ್ರ ಹಂಚಿಕೆಗೂ ಮುನ್ನವೇ ಸಿಎಂ ಕುಮಾರಸ್ವಾಮಿ ಮಂಡ್ಯಕ್ಕೆ ಅತ್ಯಂತ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ. 

ಅನ್ನದಾತರ ಮೇಲಿನ ಕೇಸ್ ವಾಪಸನಂತಹ ಪ್ರಕ್ರಿಯೆಗಳ ಮೂಲಕ ಸಿಎಂ ಮಂಡ್ಯದ ಜನರ ಒಲವು ಗಳಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ವಾದವೂ ವ್ಯಕ್ತವಾಗಿದೆ. ಮಂಡ್ಯ ಲೋಕಸಭಾ ಕ್ಷೇತ್ರ ತೀವ್ರ ಕುತೂಹಲ ಮೂಡಿಸಿದ್ದು, ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ ಎಂದು ಮಾತು ಕೂಡ ಕೇಳಿಬಂದಿದೆ. ಈ ನಿಟ್ಟಿನಲ್ಲಿ ಸಿಎಂ ಮಂಡ್ಯ ರೈತರ ಮೇಲೆ ತೋರಿಸಿರುವ ಕಾಳಜಿಗೆ ಬೇರೆ ಅರ್ಥ  ಕಲ್ಪಿಸಲಾಗುತ್ತಿದೆ. 


ಸಂಬಂಧಿತ ಟ್ಯಾಗ್ಗಳು

#Karnataka #Farmers #Cauvery #Withdraws


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ