ವೈಮಾನಿಕ ಪ್ರದರ್ಶನದಲ್ಲಿ ಡ್ರೋನ್‍ ಅಬ್ಬರ

Drone at Aero india 2019

21-02-2019

ಇಂದು ಯಲಹಂಕದ ವಾಯುನೆಲೆಯ ವೈಮಾನಿಕ ಪ್ರದರ್ಶನದಲ್ಲಿ ಉಕ್ಕಿನ ಹಕ್ಕಿಗಳ ಬದಲಿಗೆ, ಇಂದು ಡ್ರೋನ್‍ಗಳು ಅಬ್ಬರಿಸಿದವು. ಕಣ್ಗಾವಲು ಹಾಗೂ ಅಪಾಯಗಳ ಮುನ್ಸೂಚನೆ ನೀಡುವಂತಹ ಡ್ರೋನ್ ಗಳು ಇಂದು ನೆಲದಿಂದ ಕುಪ್ಪಳಿಸಿ , ಮೇಲಕ್ಕೆ ಹಾರಿ ಅಲ್ಲಿ ಸುತ್ತುವರೆದು ನಂತರ ಪಕ್ಕನೆ ನೆಲಕ್ಕಿಳಿದವು. ಸಣ್ಣದಾಗಿ ಮುದ್ದಾಗಿ ಕಾಣುತ್ತಿದ್ದ ಈ  ಡ್ರೋನ್ ಗಳ ಸಾಮರ್ಥ್ಯ  ಮಾತ್ರ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತಿತ್ತು. 

 

ಫೆ.18ರಂದು ಜಕ್ಕೂರಿನ ವಾಯುನೆಲೆಯಲ್ಲಿ ಕಣ್ಗಾವಲು,  ಮಾನವೀಯ ನೆರವು ಮತ್ತು ವಿಪತ್ತು ನಿರ್ವಹಣೆಗೆ ಅಗತು ವಸ್ತುಗಳ ಪೂರೈಕೆ ಹಾಗೂ ಫಾರ್ಮೇಷನ್ ವಿಭಾಗದಲ್ಲಿ ಸ್ಪರ್ಧೆಗಳನ್ನು  ಆಯೋಜಿಸಲಾಗಿತ್ತು. ದೇಶದಲ್ಲೇ ಮೊದಲ ಬಾರಿಗೆ ಆಯೋಜಿಸಿದ ಡ್ರೋನ್ ಒಲಿಂಪಿಕ್ ನಲ್ಲಿ 138 ಡ್ರೋನ್ ಗಳು ಸ್ಪರ್ಧಿಸಿದ್ದು, ಅದರಲ್ಲಿ 27 ಅಂತಿಮ ಸ್ಪರ್ಧೆಗೆ ಆಯ್ಕೆಯಾಗಿದ್ದವು. ಕೆಲ ಡ್ರೋನ್‍ಗಳು ಪ್ರಾಥಮಿಕ ಚಿಕಿತ್ಸಾ ಪೆಟ್ಟಿಗೆಯನ್ನು ಹೊತ್ತು ಅದನ್ನು ಅಪಾಯದ ಸ್ಥಳದಲ್ಲಿ ಕೆಳ ಹಾಕುವ ವಿಧಾನವನ್ನು ಪ್ರದರ್ಶಿಸಿದವು. 

 

 ಹೆಚ್ಚಿನ ಡ್ರೋನ್‍ಗಳನ್ನು ವಿದ್ಯಾರ್ಥಿಗಳು ಹಾಗೂ ಸ್ಟಾರ್ಟ್ ಅಪ್ ಕಂಪನಿಗಳು ನಿರ್ಮಿಸಿದ್ದು, ತಮ್ಮ ಉತ್ಪನ್ನ ಪ್ರದರ್ಶಿಸಲು ಇದೊಂದು ಉತ್ತಮ ವೇದಿಕೆಯಾಗಿತ್ತು. ಸ್ಪರ್ಧೆಯಲ್ಲಿ ಪಾಲ್ಗೊಂಡವರು ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಿದ್ದ ದೃಶ್ಯಗಳು ಕುಡ ಕಂಡುಬಂತು. 

ಡ್ರೋನ್ ಹಾರಾಟದ ವೇಳೆ ಸುಮಾರು 20ಕ್ಕೂ ಅಧಿಕ ಹದ್ದುಗಳು ಹಾರಾಟ ನಡೆಸಿದ್ದು, ಡ್ರೋನ್ ಒಲಂಪಿಕ್‍ಗೆ ತೊಂದರೆ ಉಂಟಾಯಿತು. ಈ ವೇಳೆ ಭದ್ರತಾ ಸಿಬ್ಬಂದಿ ಸಿಡಿಮದ್ದು ಸಿಡಿಸಿದರೂ, ಕೆಲ ಸಮಯ ಹದ್ದುಗಳ ಹಾರಾಟ ಮುಂದುವರೆಯಿತು. ಕೆಲ ಡ್ರೋನ್‍ಗಳು ಹದ್ದುಗಳಿರುವ ಸ್ಥಳದಿಂದ ಬೇರೆ ದಿಕ್ಕಿನಲ್ಲಿ ಹಾರಾಟ ನಡೆಸಲಾಯಿತು. 

 

ಈ ಸ್ಪರ್ಧೆಯ ನಡುವೆ  ಕೆಲ ಡ್ರೋನ್‍ಗಳು ಮನರಂಜನಾ ಹಾರಾಟ ಕೂಡ ನಡೆಸಿದವು. ನವದೆಹಲಿ ಪಬ್ಲಿಕ್ ಶಾಲೆಯ 10ನೇ ತರಗತಿಯ ವಿದ್ಯಾರ್ಥಿ ಆರಾಧ್ಯ ಎಂಬಾತ ಡ್ರೋನನ್ನು ಅಭಿವೃದ್ಧಿ ಪಡಿಸಿ ಹಾರಾಟ ನಡೆಸಿದ್ದು ವಿಶೇಷವಾಗಿತ್ತು. 15 ವರ್ಷದ ಈ ವಿದ್ಯಾರ್ಥಿ ಕಳೆದ 2 ವರ್ಷದಿಂದ ಡ್ರೋನ್ ತರಬೇತಿ ಪಡೆಯುತ್ತಿದ್ದು, 50 ಸಾವಿರ ರೂ. ವೆಚ್ಚದಲ್ಲಿ ಡ್ರೋನ್ ಅಭಿವೃದ್ಧಿ ಪಡೆಸಿದ್ದಾನೆ. ಇದಕ್ಕೆ ಶೆಲ್‍ಗಳನ್ನು ಅಳವಡಿಸಲಾಗಿದೆ. ದೇಶದ ವಿವಿಧ ರಾಜ್ಯಗಳು ನಡೆಸುವ ಡ್ರೋನ್ ಸ್ಪರ್ಧೆಯಲ್ಲಿ ಭಾಗವಹಿದ್ದಾನೆ. ಇತ್ತೀಚಿಗೆ ನಡೆದ ಬೆಂಗಳೂರು ಟೆಕ್ ಸಮ್ಮಿಟ್‍ನಲ್ಲಿ ಭಾಗವಹಿಸಿ ಬಹುಮಾನವನ್ನು  ಕೂಡ ಗೆದ್ದಿದ್ದಾನೆ. 

 

ಚೆನ್ನೈನ ಅಣ್ಣ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಅಭಿವೃದ್ಧಿ ಪಡಿಸಿದ ದಕ್ಷ ಡಿಎಚ್- ವಿಟಿಎಚ್‍ಟಿ ಕೂಡ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿತ್ತು. 18 ಕೆಜಿಯ ಈ ಡ್ರೋನ್, 100 ಕಿಮಿ ಹಾರಾಟ ನಡೆಸಲಿದೆ. ಇದನ್ನು ಲಘು ವಿಮಾನದ ಮಾದರಿಯಲ್ಲೇ ವಿನ್ಯಾಸ ಮಾಡಲಾಗಿದ್ದು, 1 ಸಾವಿರ ಅಡಿಗೂ ಹೆಚ್ಚು ಹಾರಾಟ ಮಾಡಬಲ್ಲದು. 

ಬೆಂಗಳೂರಿನ ಮಾಡಲ್ ಆವೀಯೇಷನ್ ಕಂಪನಿಯ ಆದರ್ಶ ಎಂಬುವವರು 20 ಕೆ.ಜಿ ತೂಕದ ಟಬೈನ್ ಜೆಟ್‍ನ್ನು ಅಭಿವೃದ್ಧಿ ಪಡಿಸಿದ್ದು, ಅಂತಿಮ ಸ್ಪರ್ಧೆಯ  ವೇಳೆ ಪ್ರದರ್ಶಿಸಿದರು. ಇದು ತೇಜಸ್ ವಿಮಾನಗಳಂತೆಯೇ ಹಾರಾಟ ನಡೆಸುತ್ತದೆ. ಇದು ಗಂಟೆಗೆ 350 ಕಿ.ಮಿ. ಸಂಚರಿಸುವ ಸಾಮಥ್ರ್ಯ ಹೊಂದಿದ್ದು, 10 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದೆ.


ಸಂಬಂಧಿತ ಟ್ಯಾಗ್ಗಳು

#2019 #Yelhanka #Aero Show #Drone


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ