ಹಣ ಪಡೆದು ಪ್ರಚಾರಕ್ಕೆ ಬರ್ತಿದ್ದಾರೆ ಬಾಲಿವುಡ್ ಸ್ಟಾರ್ಸ್ 

Bollywood Stars  Demands  Money for Promotion

20-02-2019

ಬಾಲಿವುಡ್, ಕಾಲಿವುಡ್, ಸ್ಯಾಂಡಲವುಡ್ ಹೀಗೆ ಯಾವ ಚಿತ್ರರಂಗದ ನಟ-ನಟಿಯರಾದ್ರೂ ರಾಜಕೀಯವಾಗಿ ಒಂದಲ್ಲ ಒಂದು ಪಕ್ಷವನ್ನು ಬೆಂಬಲಿಸೋದು ಸಾಮಾನ್ಯವಾದ ಸಂಗತಿ. ಸಾಮಾಜಿಕ ಜಾಲತಾಣದಿಂದ ಆರಂಭಿಸಿ ಚುನಾವಣಾ ಪ್ರಚಾರದವರೆಗೆ ಎಲ್ಲ ಕಡೆಯಲ್ಲೂ ರಾಜಕೀಯ ನಾಯಕರ ಬಗ್ಗೆ ಪ್ರಚಾರ ಮಾಡ್ತಾರೆ. ಆದರೆ ಇದೀಗ ಈ ಪ್ರಚಾರದ ಹಿಂದೆ ಕಾಂಚಾಣದ ಸದ್ದು ಕೇಳಿಬಂದಿದೆ. 

ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಬಾಲಿವುಡ್ ನ ಅನೇಕ  ತಾರೆಯರು  ಕುಟುಕು ಕಾರ್ಯಾಚರಣೆಯಲ್ಲಿ ಬೆತ್ತಲಾಗಿದ್ದು,  ರಾಜಕೀಯ ಪಕ್ಷಗಳ ಪರ ಪ್ರಚಾರ ಮಾಡಲು  ಸಂಭಾವನೆ ಪಡೆಯುತ್ತಿರುವ ವಿಚಾರ ಈ ಕಾರ್ಯಾಚರಣೆಯಲ್ಲಿ ಬಯಲಾಗಿದೆ. 

ಕೋಬ್ರಾ ಪೋಸ್ಟ್ ನಡೆಸಿದ ಕಾರ್ಯಾಚರಣೆ ವೇಳೆ,  ಸನ್ನಿ ಲಿಯೋನ್, ಜಾಕಿ ಶ್ರಾಫ್,  ಸೋನು ಸೂದ್, ಅಮಿಶಾ ಪಟೇಲ್, ರಾಖಿ ಸಾವಂತ್,  ಮಹಿಮಾ ಔಧರಿ,  ಶ್ರೇಯಸ್ ತಲ್ಪಡೆ, ವಿವೇಕ ಓಬೆರಾಯ್, ಮಿಖಾ ಸಿಂಗ್ ಹಾಸ್ಯನಟರಾದ ರಾಜು ಶ್ರೀವಾಸ್ತವ್  ಸೇರಿದಂತೆ ಹಲವು ನಟ-ನಟಿಯರು ಹಣ ಪಡೆದು ಪ್ರಚಾರಕ್ಕೆ ಮುಂದಾಗಿರುವ ಸಂಗತಿ ಬೆಳಕಿಗೆ ಬಂದಿದೆ. 

ರಾಜಕೀಯ ಪಕ್ಷಗಳ ಪರ ಸಾಮಾಜಿಕ ಜಾಲತಾಣದಲ್ಲಿ, ಸಾರ್ವಜನಿಕವಾಗಿ ಹಾಗೂ ರ್ಯಾಲಿಗಳಲ್ಲಿ ಪ್ರಚಾರ ಮಾಡಲು  2 ಲಕ್ಷದಿಂದ 50 ಲಕ್ಷ ರೂಪಾಯಿವರೆಗೆ  ಬೇಡಿಕೆ ಇಟ್ಟಿರುವ ಸಂಗತಿ ಬಯಲಾಗಿದೆ. ಇನ್ನು ಕೆಲವರು ಪ್ರಚಾರದ ಅವಧಿಯನ್ನು ತಿಂಗಳುಗಳವರೆಗೂ ವಿಸ್ತರಿಸಿ 20 ಕೋಟಿರೂಪಾಯಿ ವರೆಗೆ ಹಣ ಕೇಳಿದ್ದಾರೆ.

ಇದು ಬಾಲಿವುಡ್ ನಟ-ನಟಿಯರ ಅಸಲಿಯತ್ತನ್ನು ಬಿಚ್ಚಿಟ್ಟಿದ್ದು, ಸಾಮಾಜಿಕ ಜವಾಬ್ದಾರಿ ಮರೆತು, ಹಣಕ್ಕಾಗಿ ಯಾರ ಪರ-ವಿರುದ್ಧ ಪ್ರಚಾರಕ್ಕೂ ಸಿದ್ಧವಾಗಿರುವ ಹೀರೋ-ಹೀರೋಯಿನ್ಸ್‍ಗಳ ವರ್ತನೆ ಟೀಕೆಗೆ ಗುರಿಯಾಗಿದೆ. ಅಲ್ಲದೆ ಚುನಾವಣೆಯಲ್ಲಿ ಹಣ ಪಡೆದು ಪ್ರಚಾರಕ್ಕೆ ಬರುವ ಯಾವುದೇ ಸಿನಿಮಾ ತಾರೆಯರ ಮಾತಿಗೆ ಮರುಳಾಗಬೇಡಿ ಎಂಬ ಆಗ್ರಹವೂ ವ್ಯಕ್ತವಾಗಿದೆ. 


ಸಂಬಂಧಿತ ಟ್ಯಾಗ್ಗಳು

#2019 Election #Stars #Bollywood #Promotion


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ