ನಾಳೆಯಿಂದ ಫೆ. 24ರವರೆಗೆ ಲೋಹದ ಹಕ್ಕಿಗಳ ಸದ್ದು

 From tomorrow to Feb 24. The sound of metal birds

19-02-2019

ನಭೋ ಮಂಡಲದಲ್ಲಿ ಲೋಹದ ಹಕ್ಕಿಗಳ ಚಿತ್ತಾಕರ್ಷಕ ಪ್ರದರ್ಶನ ಏರೋ ಇಂಡಿಯಾ -2019 ವೈಮಾನಿಕ ಪ್ರದರ್ಶನಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು, ನಾಳೆಯಿಂದ ಫೆ. 24ರವರೆಗೆ ಲೋಹದ ಹಕ್ಕಿಗಳು ಬಾನಂಗಳದಲ್ಲಿ ಸದ್ದು ಮಾಡಲಿವೆ.
ದೇಶದ ರಕ್ಷಣಾ ಇಲಾಖೆಯ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ 12ನೇ ಆವೃತ್ತಿ ನಾಳೆ ಯಲಹಂಕದ ವಾಯು ನೆಲೆಯಲ್ಲಿ ಆರಂಭವಾಗಲಿದ್ದು, ಈ ಕಾರ್ಯಕ್ರಮದ ಸಂಪೂರ್ಣ ನಿರ್ವಹಣಾ ಹೊಣೆಗಾರಿಕೆಯನ್ನು ಹಿಂದೂಸ್ತಾನ್ ಏರೋ ನಾಟಿಕ್ಸ್ ಲಿಮಿಟೆಡ್ (ಹೆಚ್‌ಎಎಲ್) ಹೊತ್ತು ಕೊಂಡಿವೆ.
ನಾಳೆ ಫೆ. 20 ರಿಂದ 24ರವರೆಗೆ ನಡೆಯಲಿರುವ ಈ ವೈಮಾನಿಕ ಪ್ರದರ್ಶನಕ್ಕೆ ದೇಶದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಚಾಲನೆ ನೀಡುವರು.
ವಸ್ತುಪ್ರದರ್ಶನಕ್ಕೆ ಅವಶ್ಯವಿರುವ ಮಳಿಗೆಗಳು, ವೈಮಾನಿಕ ಪ್ರದರ್ಶನವನ್ನು ಕುಳಿತು ವೀಕ್ಷಿಸಲು ಅನುಕೂಲವಾಗುವಂತೆ ಆಸನಗಳ ವ್ಯವಸ್ಥೆ, ರನ್‌ ವೇಗಳ ಸಿದ್ಧತೆ, ವಿಚಾರ ಸಂಕಿರಣಕ್ಕೆ ವ್ಯವಸ್ಥೆ ಹೀಗೆ ವೈಮಾನಿಕ ಪ್ರದರ್ಶನಕ್ಕೆ ಅಗತ್ಯವಾದ ಎಲ್ಲ ತಯಾರಿಗಳು ಪೂರ್ಣಗೊಂಡಿವೆ.
ನಾಳೆ ಬೆಳಿಗ್ಗೆ 8.45ಕ್ಕೆ ವೈಮಾನಿಕ ಪ್ರದರ್ಶನವನ್ನು ರಕ್ಷಣಾ ಸಚಿವರು ಉದ್ಘಾಟಿಸಿದ ಬಳಿಕ ಲೋಹದ ಹಕ್ಕಿಗಳ ಚಿತ್ತಾಕರ್ಷಕ ಪ್ರದರ್ಶನ ನಡೆಯಲಿದೆ. ಇದರ ಜತೆಗೆ ಫೆ. 24ರವರೆಗೂ ನಿರಂತರವಾಗಿ ವಿಚಾರ ಸಂಕಿರಣ, ವಿಮಾನ ಖರೀದಿ, ಮಾರಾಟ, ಒಪ್ಪಂದಗಳ ಸಭೆ-ಸಮಾಲೋಚನೆಗಳು ನಡೆಯಲಿವೆ.
ಈ ವೈಮಾನಿಕ ಪ್ರದರ್ಶನದ ಸಂದರ್ಭದಲ್ಲಿ ರಕ್ಷಣಾ ಕ್ಷೇತ್ರದ ವಸ್ತು ಪ್ರದರ್ಶನ ಸಹ ಆಯೋಜಿಸಲಾಗಿದ್ದು, ವಸ್ತು ಪ್ರದರ್ಶನ ಮತ್ತು ಮಾರಾಟ. ದೇಶ-ವಿದೇಶಗಳ ಹಲವು ಕಂಪನಿಗಳು ಈ ವಸ್ತುಪ್ರದರ್ಶನದಲ್ಲಿ ಪಾಲ್ಗೊಳ್ಳಲಿವೆ.
ಆನ್‌ಲೈನ್‌ನಲ್ಲಿ ಟಿಕೆಟ್
ಈ ವೈಮಾನಿಕ ಪ್ರದರ್ಶನಕ್ಕೆ ಆನ್ ಲೈನ್‌ನಲ್ಲಿ ಟಿಕೆಟ್ ಖರೀದಿಸಬಹುದಾಗಿದ್ದು, ವೈಮಾನಿಕ ಪ್ರದರ್ಶನ ನಡೆದಿರುವ ಯಲಹಂಕ ವಾಯು ನೆಲೆಯ ಸ್ಥಳದಲ್ಲೂ ಟಿಕೆಟ್ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ.
ಈ ವೈಮಾನಿಕ ಪ್ರದರ್ಶನದಲ್ಲಿ ಪಾಲ್ಗೊಳ್ಳುವವರಿಗೆ ಅಗತ್ಯವಿರುವ ಫುಡ್‌ಕೋರ್ಟ್, ಕುಡಿಯುವ ನೀರು, ಶೌಚಾಲಯ ಮತ್ತು ಪಾರ್ಕಿಂಗ್ ವ್ಯವಸ್ಥೆಯನ್ನೂ ಮಾಡಲಾಗಿದೆ.
ಈ ವೈಮಾನಿಕ ಪ್ರದರ್ಶನಕ್ಕೆ ಕ್ಷಣಗಣನೆ ನಡೆದಿರುವಾಗಲೇ ಕಳೆದ 2 ದಿನಗಳಿಂದ ಲೋಹದ ಹಕ್ಕಿಗಳ ತಾಲೀಮು ಮುಂದುವರೆದಿದೆ.
ಬಿಗಿ ಭದ್ರತೆ
ವೈಮಾನಿಕ ಪ್ರದರ್ಶನಕ್ಕೆ ಬಿಗಿ ಭದ್ರತೆ ಕಲ್ಪಿಸಲಾಗಿದ್ದು, ಸುಮಾರು 3,700ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಇದರ ಜತೆಗೆ ವಾಯು ನೆಲೆಯ ಒಳಗೆ ಕೈಗಾರಿಕಾ ಭದ್ರತಾ ಪಡೆ ಹಾಗೂ ವಾಯು ಸೇನೆಯ ರಕ್ಷಣಾ ಸಿಬ್ಬಂದಿಯೂ ಭದ್ರತಾ ಕಾರ್ಯಗಳನ್ನು ನೋಡಿಕೊಳ್ಳುವರು.


ಸಂಬಂಧಿತ ಟ್ಯಾಗ್ಗಳು

#Air Show 2019 # Metal birds #Bangalore #Sound


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ