ಕಾಂಗ್ರೆಸ್ ಹಾಗೂ ಜೆಡಿಎಸ್ ಮಧ್ಯೆ ಹೊಸ ಬಿಕ್ಕಟ್ಟು

 New crisis between Congress and JDS

19-02-2019

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಸ್ಪರ್ಧಿಸಲು ತೀರ್ಮಾನಿಸಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಮಧ್ಯೆ ಹೊಸ ಬಿಕ್ಕಟ್ಟು ಕಾಣಿಸಿಕೊಂಡಿದೆ.

ಸೀಟು ಹಂಚಿಕೆಯ ವಿಷಯದಲ್ಲಿ ಜೆಡಿಎಸ್ ವರಿಷ್ಟ ದೇವೇಗೌಡರ ಜತೆ ನಾನು ಚರ್ಚಿಸುವುದಿಲ್ಲ.ಬದಲಿಗೆ ನೀವೇ ಚರ್ಚೆ ನಡಿಸಿ.ನೀವು ನಡೆಸುವ ಚರ್ಚೆ ವಿಫಲವಾದರೆ ನಾನು ಮಧ್ಯೆ ಪ್ರವೇಶಿಸುತ್ತೇನೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ಹೇಳಿರುವುದು ಈ ಬಿಕ್ಕಟ್ಟಿನ ಮೂಲ ಕಾರಣ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದವರು ಮೈತ್ರಿ ಕೂಟದ ಅಂಗಪಕ್ಷದ ಜತೆ ತಾವೇ ಖುದ್ದಾಗಿ ಮಾತನಾಡಬೇಕೇ ಹೊರತು ರಾಜ್ಯ ನಾಯಕರಿಗೆ ಹೇಳುವುದಲ್ಲ ಎಂಬುದು ಮಾಜಿ ಪ್ರಧಾನಿ ದೇವೇಗೌಡರ ಸಧ್ಯದ ಅಸಮಾಧಾನ.

ಲೋಕಸಭಾ ಕ್ಷೇತ್ರದ ಸೀಟು ಹಂಚಿಕೆ ವಿಷಯವನ್ನು ಕೆಪಿಸಿಸಿ ಅಧ್ಯಕ್ಷರು ಮಾತುಕತೆ ನಡೆಸಿ ಬಗೆಹರಿಸಬೇಕು ಎಂಬುದು ರಾಹುಲ್ ಗಾಂಧಿ ಅವರ ಉದ್ದೇಶವಾದರೆ,ನಾವು ಕೂಡಾ ರಾಜ್ಯ ಜೆಡಿಎಸ್ ಅಧ್ಯಕ್ಷ ಹೆಚ್.ವಿಶ್ವನಾಥ್ ಅವರನ್ನು ಮಾತುಕತೆಗೆ ಕಳಿಸುತ್ತೇವೆ.

ಹೀಗೆ ಕೆಪಿಸಿಸಿ ಅಧ್ಯಕ್ಷರು ಹಾಗೂ ಜೆಡಿಎಸ್ ಅಧ್ಯಕ್ಷರು ಮಾತುಕತೆ ನಡೆಸಲಿ.ಅವರ ಹಂತದಲ್ಲಿ ಮಾತುಕತೆ ಯಶಸ್ವಿಯಾದರೆ ಸಂತೋಷ.ಇಲ್ಲದೆ ಹೋದರೆ ಎಐಸಿಸಿ ಅಧ್ಯಕ್ಷರು ಹಾಗೂ ಜೆಡಿಎಸ್‍ನ ಪಕ್ಷದ ರಾಷ್ಟ್ರೀಯ ವರಿಷ್ಟರ ಜತೆ ಮಾತುಕತೆ ನಡೆಸುವುದು ಸೂಕ್ತ ಎಂಬುದು ದೇವೇಗೌಡರ ವರಸೆ.

ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ನಮ್ಮ ಶಕ್ತಿ ಹೆಚ್ಚಿದ್ದರೂ ಅದನ್ನು ಕಾಂಗ್ರೆಸ್‍ಗೆ ಬಿಟ್ಟುಕೊಡುವ ವಿಷಯದಲ್ಲಿ ನಾವು ಮುಕ್ತ ಮನಸ್ಸಿನಿಂದಿದ್ದೇವೆ.ಬೇಕಿದ್ದರೆ ಕಾಂಗ್ರೆಸ್ ಪಕ್ಷ ತಮಗೆ ಅನುಕೂಲವೆಂದು ವಿಜಯಾಶಂಕರ್ ಅವರನ್ನು ಕಣಕ್ಕಿಳಿಸಿದರೂ ನಾವು ಬೆಂಬಲ ನೀಡುತ್ತೇವೆ.

ಸಧ್ಯದ ಸ್ಥಿತಿಯಲ್ಲಿ ತಮ್ಮ ಪಕ್ಷ ಹನ್ನೆರಡು ಲೋಕಸಭಾ ಕ್ಷೇತ್ರಗಳಲ್ಲಿ ಬಲಿಷ್ಟವಾಗಿದೆಯಾದರೂ ಮಾತುಕತೆಯ ಸಂದರ್ಭದಲ್ಲಿ ಎಂಟು ಸೀಟುಗಳನ್ನು ಬಿಟ್ಟು ಕೊಟ್ಟರೂ ಓಕೆ.ಆದರೆ ಈ ಎಂಟು ಕ್ಷೇತ್ರಗಳಲ್ಲಿ ಒಂದೆರಡು ಕ್ಷೇತ್ರಗಳನ್ನು ಹೊರತುಪಡಿಸಿದರೆ ಬೇರೆಲ್ಲೂ ಸಮಸ್ಯೆ ಇಲ್ಲ.

ಆದರೆ ಇವೆಲ್ಲವೂ ನಿರ್ಧಾರವಾಗಿರಬೇಕಿರುವುದು ಅಂತಿಮವಾಗಿ ಉಭಯ ಪಕ್ಷಗಳ ರಾಷ್ಟ್ರೀಯ ನಾಯಕರ ನಡುವಣ ಚರ್ಚೆಯಿಂದಲೇ ಹೊರತು ಬೇರೆ ಯಾರಿಂದಲೂ ಅಲ್ಲ.ಹೀಗಾಗಿ ಪ್ರಾಥಮಿಕ ಸುತ್ತಿನ ಚರ್ಚೆ ಅನಿವಾರ್ಯವಾದರೆ ಉಭಯ ಪಕ್ಷಗಳ ರಾಜ್ಯಾಧ್ಯಕ್ಷರು ಮಾತುಕತೆ ನಡೆಸಲಿ ಎಂದು ದೇವೇಗೌಡರು ಹೇಳಿದ್ದು,ಈ ಈ ಅಂಶ ರಾಜಕೀಯ ವಲಯಗಳಲ್ಲಿ ತೀವ್ರ ಕುತೂಹಲ ಕೆರಳಿಸಿದೆ.


ಸಂಬಂಧಿತ ಟ್ಯಾಗ್ಗಳು

#Karnataka #Jds #Congress #Crisis


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ