ಬಿಜೆಪಿ ಅಭ್ಯರ್ಥಿಗಳ ಅಂತಿಮ ಪಟ್ಟಿ 21 ರಂದು ಅಂತಿಮ

 The final list of BJP candidates is finalized on 21st

19-02-2019

ಮುಂಬರುವ ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳಿಂದ ಸ್ಪರ್ಧಿಸುವ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಈ ತಿಂಗಳ 21 ರಂದು ಬಿಜೆಪಿ ಸಿದ್ಧ ಮಾಡಲಿದೆ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಭಾಗವಹಿಸಲಿರುವ ರಾಜ್ಯ ಬಿಜೆಪಿಯ ಕೋರ್ ಕಮಿಟಿ ಸಭೆಯಲ್ಲಿ ಇಪ್ಪತ್ತೆಂಟೂ ಲೋಕಸಭಾ ಕ್ಷೇತ್ರಗಳ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಲಾಗುವುದು ಎಂದು ಉನ್ನತ ಮೂಲಗಳು ಹೇಳಿವೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಗೆದ್ದ ಹದಿನೇಳು ಮಂದಿಯ ಪೈಕಿ ಹದಿನಾರು ಮಂದಿಗೆ ಟಿಕೆಟ್ ನೀಡುವುದು ಬಹುತೇಕ ಖಚಿತವಾಗಿದ್ದು ಉಳಿದಂತೆ ಹನ್ನೆರಡು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮಗೊಳಿಸಬೇಕಿದೆ.

ಈ ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದ ಹದಿನೇಳು ಮಂದಿಯ ಪೈಕಿ ಬಳ್ಳಾರಿ ಸಂಸದರಾಗಿದ್ದ ಶ್ರೀರಾಮುಲು ರಾಜೀನಾಮೆ ನೀಡಿ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಬಂದಿದ್ದರು.

ಆದರೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋತು ಕಾಂಗ್ರೆಸ್ ಪಕ್ಷದ ವಿ.ಎಸ್.ಉಗ್ರಪ್ಪ ಗೆದ್ದುದರಿಂದ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಬೇರೆ ಯಾರನ್ನಾದರೂ ಸ್ಪರ್ಧಿಸುವಂತೆ ಮಾಡಬೇಕು ಎಂಬ ಯೋಚನೆ ಪಕ್ಷದ ನಾಯಕರಲ್ಲಿದೆ.

ಹೀಗೆ ಬಳ್ಳಾರಿ ಸೇರಿದಂತೆ ಹನ್ನೆರಡು ಲೋಕಸಭಾ ಕ್ಷೇತ್ರಗಳ ಕ್ಯಾಂಡಿಡೇಟುಗಳ ಹೆಸರುಗಳನ್ನು ಅಂತಿಮಗೊಳಿಸುವ ಪ್ರಕ್ರಿಯೆ ಈಗಾಗಲೇ ನಡೆದಿದ್ದು ಜಿಲ್ಲಾ ಸಮಿತಿಗಳು ಈಗಾಗಲೇ ತಲಾ ಮೂರು ಮಂದಿಯ ಹೆಸರುಗಳನ್ನು ಅಂತಿಮಗೊಳಿಸಿ ರಾಜ್ಯ ಘಟಕಕ್ಕೆ ನೀಡಿದೆ.

ಹೀಗೆ ರಾಜ್ಯ ಘಟಕಕ್ಕೆ ರವಾನೆಯಾಗಿರುವವರ ಪೈಕಿ ಯಾರನ್ನು ಕಣಕ್ಕಿಳಿಸಬೇಕು ಎಂಬ ಸಂಬಂಧ ಫೆಬ್ರವರಿ ಇಪ್ಪತ್ತೊಂದರಂದು ನಡೆಯಲಿರುವ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ನಡೆಯಲಿದೆ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಷಾ ಕೂಡಾ ಕರ್ನಾಟಕದಿಂದ ಸ್ಪರ್ಧಿಸಬೇಕಾದವರು ಯಾರು?ಎಂಬ ಕುರಿತು ತಮ್ಮದೇ ಮೂಲಗಳಿಂದ ಪಟ್ಟಿ ತರಿಸಿದ್ದು ಇಪ್ಪತ್ತೊಂದರಂದು ನಡೆಯಲಿರುವ ಸಭೆಯಲ್ಲಿ ಅದನ್ನು ಸಭೆಯ ಮುಂದಿಡಲಿದ್ದಾರೆ ಎಂಬುದು ಮೂಲಗಳ ಹೇಳಿಕೆ.

ಕೋರ್ ಕಮಿಟಿ ಸಭೆಯಲ್ಲಿ ಅಂತಿಮಗೊಳ್ಳುವ ಪಟ್ಟಿಯನ್ನು ಕೇಂದ್ರ ಚುನಾವಣಾ ಸಮಿತಿಗೆ ಕಳಿಸಲಾಗುವುದು.ಆನಂತರ ಸೂಕ್ತ ಕಾಲದಲ್ಲಿ ಅದನ್ನು ಬಿಡುಗಡೆ ಮಾಡಲಾಗುವುದು ಎಂಬುದು ಮೂಲಗಳ ಹೇಳಿಕೆ.


ಸಂಬಂಧಿತ ಟ್ಯಾಗ್ಗಳು

#Karnataka #Candidate #Bjp #Final


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ