ಅಧಿವೇಶನ ಅನಿರ್ದಿಷ್ಟ ಅವಧಿಗೆ ಮುಂದೂಡಿಕೆ

 Adjournment Of The House for An Indefinite Period

14-02-2019

ಆಡಿಯೋ ಬಾಂಬ್‍ನಿಂದ ಕಂಗಾಲಾದ ಬಿಜೆಪಿ ಬಚಾವಾಗಲು ನಡೆಸಿದ ಹಾಹಾಕಾರದಿಂದ ರಾಜ್ಯ ವಿಧಾನಮಂಡಲ 2.34 ಲಕ್ಷ ಕೋಟಿ ರೂಗಳ ಬಜೆಟ್‍ನ್ನು ಚರ್ಚೆಯೇ ಇಲ್ಲದೆ ಅಂಗೀಕರಿಸಿದ್ದು ಸದನಗಳನ್ನು ಅನಿರ್ದಿಷ್ಟಾವಧಿ ಕಾಲಕ್ಕೆ ಮುಂದೂಡಲಾಗಿದೆ.
ಸಿಎಂ ಕುಮಾರಸ್ವಾಮಿ ಮಂಡಿಸಿದ ಬಜೆಟ್ ಮೇಲೆ ಯಾವುದೇ ಚರ್ಚೆ ಇಲ್ಲದೆ,ಮುಖ್ಯಮಂತ್ರಿಗಳ ಉತ್ತರವೂ ಇಲ್ಲದೆ ವಿಧಾನಮಂಡಲದ ಉಭಯ ಸದನಗಳಲ್ಲಿ ಬಜೆಟ್‍ಗೆ ನಾಲ್ಕು ತಿಂಗಳ ಲೇಖಾನುದಾನ ಸಿಕ್ಕಿತಲ್ಲದೆ ಆ ಮೂಲಕ ಇತಿಹಾಸದಲ್ಲೇ ಅತ್ಯಪರೂಪದ ದಾಖಲೆಯೊಂದು ಸೃಷ್ಟಿಯಾಯಿತು.


ಫೆಬ್ರವರಿ ಎಂಟರಂದು ಮಂಡನೆಯಾದ ಬಜೆಟ್‍ಗೂ ಮುನ್ನವೇ ಸರ್ಕಾರ ಉರುಳಿಸಲು ಬಿಜೆಪಿ ನಡೆಸುತ್ತಿರುವ ಆಪರೇಷನ್ ಕಮಲದ ಭಾಗವಾದ ವಿವರಗಳುಳ್ಳ ಆಡಿಯೋ ಬಾಂಬ್ ಅನ್ನು ಸಿಎಂ ಕುಮಾರಸ್ವಾಮಿ ಸಿಡಿಸಿದ್ದರಾದರೆ,ಅದರಿಂದ ಬಚಾವಾಗಲು ನಿರಂತರ ಕೂಗಾಟಕ್ಕಿಳಿದ ಬಿಜೆಪಿ ಚರ್ಚೆಯೇ ಇಲ್ಲದೆ ಧನವಿನಿಯೋಗ ಮಸೂದೆ ಅಂಗೀಕಾರವಾಗಲು ಕಾರಣವಾಯಿತು.


ಇದುವರೆಗಿನ ಇತಿಹಾಸದಲ್ಲಿ ಬಜೆಟ್ ಮಂಡನೆಯಾದ ನಂತರ ನಡೆಯುತ್ತಿದ್ದ ಚರ್ಚೆಯಲ್ಲಿ ಪ್ರತಿಪಕ್ಷಗಳು ಭಾಗವಹಿಸುತ್ತಿದ್ದುವಲ್ಲದೆ ತದನಂತರ ಮುಖ್ಯಮಂತ್ರಿಗಳು ನೀಡುವ ಉತ್ತರ ಸಮಾಧಾನ ತರದಿದ್ದರೆ ಅದನ್ನು ವಿರೋಧಿಸಿ ಸಭಾತ್ಯಾಗ ಮಾಡುತ್ತಿದ್ದವು.


ಹೀಗೆ ಪ್ರತಿಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿದ ನಂತರ ಬಜೆಟ್‍ನ್ನು ಅಂಗೀಕರಿಸುವ  ಕೆಲಸ ಇತ್ತೀಚಿನ ವರ್ಷಗಳಲ್ಲಿ ಸಂಪ್ರದಾಯವೇ ಆಗಿತ್ತಾದರೂ ಈ ಬಾರಿ ಆ ಸಂಪ್ರದಾಯವನ್ನು ಉಲ್ಲಂಘಿಸಿದ ಬಿಜೆಪಿ ನಿತ್ಯವೂ ತನ್ನ ಹೋರಾಟದ ರೂಪುರೇಷೆಗಳನ್ನು ಬದಲಿಸುತ್ತಾ ಸದನದಲ್ಲಿ ಗದ್ದಲವೆಬ್ಬಿಸುತ್ತಾ ಹೋಯಿತು.
ಫೆಬ್ರವರಿ ಎಂಟರಂದು ಬಜೆಟ್ ಮಂಡನೆಯಾದ ನಂತರ 11 ರ ಸೋಮವಾರದಿಂದ ರಾಜ್ಯಪಾಲರ ಭಾಷಣ ಹಾಗೂ ಬಜೆಟ್ ಮೇಲೆ ಚರ್ಚೆ ನಡೆಯಬೇಕಿತ್ತಾದರೂ ಆಡಿಯೋ ಬಾಂಬ್ ಪ್ರಕರಣವೇ ವಿಧಾನಮಂಡಲದ ಕೇಂದ್ರ ಬಿಂದುವಾಗಿ ಪರಿಣಮಿಸಿತು.


ಆಪರೇಷನ್ ಕಮಲ ಕಾರ್ಯಾಚರಣೆಯ ಭಾಗವಾಗಿ ಬಿಜೆಪಿ ನಾಯಕರು ಜೆಡಿಎಸ್ ಶಾಸಕ ನಾಗನಗೌಡ ಕಂದಕೂರು ಅವರ ಮಗನ ಜತೆ ನಡೆಸಿದ ಸಂಭಾಷಣೆಯಲ್ಲಿ,ಪಕ್ಷಾಂತರ ನಿಷೇಧ ಕಾಯ್ದೆಯನ್ವಯ ನಿಮ್ಮ ತಂದೆ ಶಾಸಕ ಸ್ಥಾನದಿಂದ ಅನರ್ಹಗೊಳ್ಳುವುದಿಲ್ಲ.ಇದಕ್ಕಾಗಿ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಐವತ್ತು ಕೋಟಿ ರೂ ನೀಡಿ ಬುಕ್ ಮಾಡಲಾಗಿದೆ ಎಂಬ ವಿಷಯ ಸೋಮವಾರ ಚರ್ಚೆಗೆ ಬಂತು.
ಸಭಾಧ್ಯಕ್ಷ ರಮೇಶ್ ಕುಮಾರ್ ಅವರೇ ಈ ವಿಷಯವನ್ನು ಪ್ರಸ್ತಾಪಿಸಿದ ನಂತರ ಅಂದಿನ ಚರ್ಚೆ ಆಡಿಯೋ ವಿವಾದದ ತನಿಖೆಗಾಗಿ ಎಸ್.ಐ.ಟಿ ರಚಿಸುವುದಾಗಿ ಸಿಎಂ ಕುಮಾರಸ್ವಾಮಿ ಪ್ರಕಟಿಸುವುದರೊಂದಿಗೆ ಒಂದು ಹಂತಕ್ಕೆ ತಲುಪಿತು.
ಆದರೆ ಅಂದೇ ಎಸ್.ಐ.ಟಿ ತನಿಖೆಗೆ ತಕರಾರು ಎತ್ತಿದ ಬಿಜೆಪಿ ತನಿಖೆಗಾಗಿ ಸದನ ಸಮಿತಿ,ಹಕ್ಕುಚ್ಯುತಿ ಸಮಿತಿ ರಚಿಸಬೇಕು ಎಂದು ಪಟ್ಟು ಹಿಡಿದ ಪರಿಣಾಮವಾಗಿ ಮಂಗಳವಾರದ ಕಲಾಪದಲ್ಲೂ ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ,ಬಜೆಟ್ ಮೇಲೆ ಚರ್ಚೆ ನಡೆಯಲಿಲ್ಲ.


ಈ ಹಿನ್ನೆಲೆಯಲ್ಲಿ ಬುಧವಾರ ಸ್ಪೀಕರ್ ರಮೇಶ್ ಕುಮಾರ್ ವಿಧಾನಸಭೆಯಲ್ಲಿ ಉಭಯ ಸದನಗಳ ಆಡಳಿತ,ಪ್ರತಿಪಕ್ಷ ನಾಯಕರುಗಳ ಜತೆ ಸಂಧಾನಸಭೆ ನಡೆಸಿದರಾದರೂ ಎಸ್.ಐ.ಟಿ ತನಿಖೆಯಿಂದ ಹಿಂದೆ ಸರಿಯಲು ಸರ್ಕಾರ ಒಪ್ಪಲಿಲ್ಲ.ಎಸ್.ಐ.ಟಿ ತನಿಖೆ ನಡೆಸಿದರೆ ಒಪ್ಪುವುದೇ ಇಲ್ಲ ಎಂದು ಬಿಜೆಪಿ ತಿರುಗೇಟು ಹೊಡೆಯಿತು.
ಹೀಗೆ ಸಂಧಾನ ವಿಫಲವಾದ ಹಿನ್ನೆಲೆಯಲ್ಲಿ ಬುಧವಾರವೂ ವಿಧಾನಸಭೆ ಮತ್ತು ವಿಧಾನಪರಿಷತ್ತಿನಲ್ಲಿ ಬಿಜೆಪಿ ಗದ್ದಲ ಮಾಡಿದ್ದಲ್ಲದೆ ಧರಣಿ ನಡೆಸುತ್ತಾ ಚರ್ಚೆಗೆ ಅವಕಾಶವೇ ಇಲ್ಲದಂತೆ ಮಾಡಿತು.ಹೀಗಾಗಿ ಬುಧವಾರ ಎಂಟು ಮಸೂದೆಗಳನ್ನು ಸದನದಲ್ಲಿ ಮಂಡಿಸಿ ಅದಕ್ಕೆ ಅಂಗೀಕಾರ ಪಡೆಯಲಾಯಿತಾದರೂ ಗುರುವಾರದಂದು ರಾಜ್ಯಪಾಲರ ವಂದನಾ ನಿರ್ಣಯವನ್ನು ಅಂಗೀಕರಿಸಲು,ಬಜೆಟ್‍ಗೆ ನಾಲ್ಕು ತಿಂಗಳ ಲೇಖಾನುದಾನ ಪಡೆಯಲು ಚರ್ಚೆ ನಡೆಸಬೇಕು ಎಂಬ ಉದ್ದೇಶದಿಂದ ಸದನ ಕಲಾಪಗಳನ್ನು ಮುಂದೂಡಲಾಗಿತ್ತು.


ಆದರೆ ಬಿಜೆಪಿ ಶಾಸಕ ಪ್ರೀತಂಗೌಡ ಅವರು ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಹಗುರವಾಗಿ ಮಾತನಾಡಿದರು ಎಂಬ ಕಾರಣಕ್ಕಾಗಿ ಹಾಸನ ಜಿಲ್ಲೆಯ ಜೆಡಿಎಸ್ ಕಾರ್ಯಕರ್ತರು ಪ್ರೀತಂಗೌಡ ಮನೆಯ ಮೇಲೆ ಕಲ್ಲೆಸೆದು,ಅವರ ಬೆಂಬಲಿಗನಿಗೆ ಕಲ್ಲು ಹೊಡೆದು ಗಾಯಗೊಳಿಸಿದ ಪ್ರಕರಣ ಇಂದು ಪ್ರಮುಖ ವಿಷಯವಾಯಿತು.ಹಾಗಂತಲೇ ವಿಧಾನಸಭೆಯಲ್ಲಿ ಕಲಾಪ ಆರಂಭವಾಗುತ್ತಲೇ ವಿಷಯ ಪ್ರಸ್ತಾಪಿಸಿದ ಬಿಜೆಪಿ ನಾಯಕರು ಭಾರೀ ಕೋಲಾಹಲ ಎಬ್ಬಿಸಿದರು.ಈ ಹಂತದಲ್ಲಿ ಸಭಾಧ್ಯಕ್ಷರು ಮಧ್ಯೆ ಪ್ರವೇಶಿಸಿ,ಶಾಸಕ ಪ್ರೀತಂಗೌಡರಿಗೆ ಸಕಲ ರಕ್ಷಣೆ ನೀಡುವಂತೆ ಸರ್ಕಾರಕ್ಕೆ ಸೂಚನೆ ನೀಡಿದಾದರೂ ಬಿಜೆಪಿ ಸದಸ್ಯರ ಗದ್ದಲ ಮಾತ್ರ ಮುಂದುವರಿಯಿತು.


ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ಕೈ ಮೀರಿದೆ ಎಂಬುದನ್ನು ಅರಿತ ಸ್ಪೀಕರ್ ರಮೇಶ್ ಕುಮಾರ್ ಅವರು ರಾಜ್ಯಪಾಲರ ವಂದನಾ ನಿರ್ಣಯದ ಮೇಲಿನ ಚರ್ಚೆಯನ್ನು ಧ್ವನಿಮತಕ್ಕೆ ಹಾಕುವ ಮೂಲಕ ಅಂಗೀಕಾರ ಪಡೆದರು.
ಹಾಗೆಯೇ ನಾಲ್ಕು ತಿಂಗಳ ಲೇಖಾನುದಾನ ಕೋರಿದ ಧನವಿನಿಯೋಗ ಮಸೂದೆಯನ್ನೂ ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು.ಆನಂತರ ಸದನ ಕಲಾಪವನ್ನು ಮುಂದೂಡಿ ವಿಧಾನಪರಿಷತ್ತಿನಲ್ಲಿ ವಂದನಾ ನಿರ್ಣಯ,ಬಜೆಟ್‍ಗೆ ಲೇಖಾನುದಾನ ಧ್ವನಿ ಮತದ ಮೂಲಕ ಲೇಖಾನುದಾನ ಪಡೆಯಲಾಯಿತು.
ನಂತರ ಸದನ ಮತ್ತೆ ಸೇರಿದಾಗ ಅದೇ ರೀತಿಯ ಗದ್ದಲ ಆರಂಭವಾಯಿತು.ಈ ಹಂತದಲ್ಲಿ ಸದನ ಕಲಾಪವನ್ನು ಅನಿರ್ದಿಷ್ಟಾವಧಿಯವರೆಗೆ ಮುಂದೂಡಲಾಯಿತು.ವಿಧಾನಪರಿಷತ್ ಕಲಾಪವೂ ಹೀಗೇ ಮುಂದೂಡಲ್ಪಡುವುದರೊಂದಿಗೆ ಹೊಸ ಇತಿಹಾಸ ನಿರ್ಮಾಣವಾಯಿತು.


ಸಂಬಂಧಿತ ಟ್ಯಾಗ್ಗಳು

#Karnataka #Adjournment #Assembly #Govrnment


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ