ರಾಜಧಾನಿಗೆ ಬಂದಿಳಿದ ರಫೇಲ್ ಯುದ್ಧವಿಮಾನಗಳು

 Rafael fighter jets arrived at the capital

14-02-2019

ದೇಶದ ರಾಜಕೀಯ ವಲಯದಲ್ಲಿ ಭಾರೀ ಸದ್ದು ಮಾಡುತ್ತಿರುವ ರಫೇಲ್ ವಿಮಾನಗಳು ರಾಜಧಾನಿಗೆ ಬಂದಿಳಿದಿವೆ.ನಗರದಲ್ಲಿ ಮುಂದಿನ ವಾರ ಏರೋ ಇಂಡಿಯಾ ವೈಮಾನಿಕ ಪ್ರದರ್ಶನಕ್ಕೆ ಫ್ರಾನ್ಸಿನ ಡಸಾಲ್ಟ್ ಕಂಪನಿಯ 3 ರಫೇಲ್ ವಿಮಾನಗಳು ಯಲಹಂಕ ವಾಯುನೆಲೆಗೆ ಆಗಮಿಸಿದ್ದು ನೋಡುಗರ ಗಮನ ಸೆಳೆದಿವೆ.

ಮೂರು ವಿಮಾನಗಳ ಪೈಕಿ 2 ವಿಮಾನಗಳು ವೈಮಾನಿಕ ಪ್ರದರ್ಶನ ನೀಡಿದರೆ ಒಂದು ವೀಕ್ಷಣೆಗೆ ಇರಿಸಲಾಗುತ್ತದೆ. ಹಾರಾಟ ಪ್ರದರ್ಶನ ನೀಡಲಿರುವ ವಿಮಾನಗಳ ಅಧಿಕೃತ ಪೂರ್ವಸಿದ್ಧತೆಯ ಹಾರಾಟ ಗುರುವಾರದಿಂದ ಆರಂಭವಾಗಲಿದೆ. 12ನೇ ಆವೃತ್ತಿಯ ಏರೋ ಇಂಡಿಯಾ ವೈಮಾನ ನಿಕ ಪ್ರದರ್ಶನ ಫೆ.20 ರಿಂದ ಫೆ.24ರವರೆಗೆ ನಡೆಯಲಿದೆ.

ಇದುವರೆಗೆ ದೇಶ- ವಿದೇಶಗಳ 365 ಕಂಪನಿಗಳು ಪ್ರದರ್ಶನದಲ್ಲಿ ಭಾಗವಹಿಸಲು ನೋಂದಣಿ ಮಾಡಿಕೊಂಡಿದ್ದು, ಆಕಾಶದಲ್ಲಿ ಪ್ರದರ್ಶನ ನೀಡಲು 31 ವಿಮಾನಗಳು ಒಪ್ಪಿಗೆ ನೀಡಿವೆ. 22 ವಿಮಾನಗಳನ್ನು ಪ್ರದರ್ಶನಕ್ಕಿಡಲಾಗುತ್ತಿದ್ದು, ದೇಶೀಯ ಸಾರಂಗ್, ಸೂರ್ಯಕಿರಣ್ ವಿಮಾನಗಳು ಭಾಗವಹಿಸಲಿವೆ.

ರಫೇಲ್ ವಿಶೇಷತೆ

ಎರಡು ಎಂಜಿನ್, ಎರಡು ಸೀಟ್ ಗಳನ್ನು ಹೊಂದಿರುವ ವಿಮಾನ ಗಂಟೆಗೆ ಗರಿಷ್ಟ 2 ಸಾವಿರ ಕಿ.ಮೀ ವೇಗದಲ್ಲಿ ಹಾರಾಟ ನಡೆಸಬಲ್ಲದು. 9,500 ಕೆಜಿ ತೂಕದ ಈ ವಿಮಾನ 9,500 ಕೆಜಿ ತೂಕದ ಶಸ್ರ್ತಾಸ್ತ್ರಗಳನ್ನು ಹೊತ್ತುಕೊಂಡು ಹೋಗುವ ಸಾಮಥ್ರ್ಯವನ್ನು ಹೊಂದಿದೆ. ಈ ವಿಮಾನ ಇಳಿಯಲು ಮತ್ತು ಹಾರಾಟಕ್ಕೆ 400 ಮೀಟರ್ ಉದ್ದದ ರನ್‍ವೇ ಅಗತ್ಯವಿಲ್ಲ.

ವೈರಿಗಳನ್ನು ಗುರುತಿಸಲು ರಫೇಲ್ ವಿಮಾನದಲ್ಲಿ ಸ್ಪೆಕ್ಟ್ರಾ ಸಿಸ್ಟಂ ಇದೆ. ಥೇಲ್ಸ್ ಗ್ರೂಪ್ ಈ ಸ್ಪೆಕ್ಟ್ರಾ ಸಿಸ್ಟಂ ಅನ್ನು ಅಭಿವೃದ್ಧಿ ಪಡಿಸಿದೆ. ರೇಡಿಯೋ ಫಿಕ್ವೆನ್ಸಿ, ರೇಡಾರ್ ವಾರ್ನಿಂಗ್ ರಿಸೀವರ್, ಲೇಸರ್ ವಾರ್ನಿಂಗ್, ಮಿಸೈಲ್ ವಾರ್ನಿಂಗ್, ರೇಡಾರ್ ಜಾಮರ್ ಗಳನ್ನು ಸ್ಪೆಕ್ಟ್ರಾ ಸಿಸ್ಟಂ ನಲ್ಲಿರುವ ಸೆನ್ಸರ್ ಗಳು ಗ್ರಹಿಸುತ್ತವೆ. 1800 ಕಿ.ಮಿ ವ್ಯಾಪ್ತಿ ವಿರೋಧಿಗಳ ಕಾರ್ಯ ಚಟುವಟಿಕೆಯನ್ನು ಗ್ರಹಿಸುವ ಸಾಮಥ್ರ್ಯ ಹೊಂದಿದೆ. ಈ ಕಾರಣಕ್ಕಾಗಿಯೇ ರಫೇಲ್ ವಿಮಾನ ಬೇರೆ ಯುದ್ಧ ವಿಮಾನಗಳಿಗಿಂತ ಭಿನ್ನವಾಗಿ ಗುರುತಿಸಿಕೊಂಡಿದೆ.

ಡಸಾಲ್ಟ್ ಕಂಪನಿ 1986ರಲ್ಲಿ ಮೊದಲ ರಫೇಲ್ ವಿಮಾನವನ್ನು ನಿರ್ಮಿಸಿದ್ದು, ಭಾರತ ಅಲ್ಲದೇ ಈಜಿಪ್ಟ್, ಕತಾರ್ ದೇಶಗಳು ರಫೇಲ್ ಖರೀದಿ ಸಂಬಂಧ ಡಸಾಲ್ಟ್ ಕಂಪನಿಯ ಜೊತೆ ಮಾತುಕತೆ ನಡೆಸಿವೆ.

ಯಾವ ದೇಶ ಏನು ಬೇಡಿಕೆ ಇಡುತ್ತದೋ ಆ ಬೇಡಿಕೆಗೆ ಅನುಗುಣವಾಗಿ ಡಸಾಲ್ಟ್ ಕಂಪನಿ ರಫೇಲ್ ವಿಮಾನವನ್ನು ಅಭಿವೃದ್ಧಿ ಪಡಿಸುತ್ತದೆ. ಲೋ ಬ್ಯಾಂಡ್ ಜಾಮರ್, 10 ಗಂಟೆಗಳ ಹಾರಾಟ ಮಾಹಿತಿ ಸಂಗ್ರಹ, ಇಸ್ರೇಲಿ ಹೆಲ್ಮೆಟ್ ಮೌಂಟೆಡ್ ಡಿಸ್ಪ್ಲೇ, ರೆಡಾರ್ ವಾರ್ನಿಂಗ್ ಇನ್ಫ್ರಾರೆಡ್ ಶೋಧ ಮತ್ತು ಟ್ರ್ಯಾಕಿಂಗ್ ಸೇರಿದಂತೆ ಹಲವು ಅತ್ಯಾಧುನಿಕ ಉಪಕರಣಗಳ ಹಾಗೂ ಸೌಲಭ್ಯಗಳನ್ನು  ಅಳವಡಿಸಬೇಕೆಂದು ಭಾರತ ಬೇಡಿಕೆ ಇಟ್ಟಿದ್ದು, ಈ ಬೇಡಿಕೆಗೆ ಅನುಗುಣವಾಗಿ ರಫೇಲ್ ವಿಮಾನ ತಯಾರಾಗುತ್ತಿದೆ.

 


ಸಂಬಂಧಿತ ಟ್ಯಾಗ್ಗಳು

#Bangalore # Rafael #Air Show # Arrived


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ