ಗೃಹ ಖಾತೆ ಮುಖ್ಯಮಂತ್ರಿಗಳಿಗೆ ತಲೆನೋವಾಗಿ ಪರಿಣಮಿಸಿದೆ !

Kannada News

06-06-2017

ಬೆಂಗಳೂರು:- ಕೆಪಿಸಿಸಿ ಅಧ್ಯಕ್ಷರಾಗಿ ಮತ್ತೊಂದು ಅವಧಿಗೆ ನೇಮಕಗೊಂಡಿರುವ ಡಾ. ಜಿ. ಪರಮೇಶ್ವರ್ ಅವರ ರಾಜೀನಾಮೆಯಿಂದ ತೆರವುಗೊಂಡಿರುವ  ಗೃಹ ಖಾತೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಕೆಲ ಹಿರಿಯ ಸಚಿವರು ಹಿಂದೇಟು ಹಾಕಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿ ಮರು ನೇಮಕಗೊಂಡ ಮರು ದಿನವೇ ಡಾ. ಜಿ. ಪರಮೇಶ್ವರ್ ಗೃಹ ಖಾತೆಗೆ ರಾಜೀನಾಮೆ ಸಲ್ಲಿಸಿದ್ದರು. ವಿಧಾನಮಂಡಲ ಅಧಿವೇಶನದ ಹಿನ್ನೆಲೆಯಲ್ಲಿ ಗೃಹ ಖಾತೆಯ ಜವಾಬ್ದಾರಿಯನ್ನು ನಿಭಾಯಿಸುವಂತೆ ಡಾ. ಜಿ. ಪರಮೇಶ್ವರ್‌ ರವರಿಗೆ ಸೂಚಿಸಿದ ಮುಖ್ಯಮಂತ್ರಿಗಳು ಗೃಹ ಖಾತೆಯನ್ನು ಕೆಲ ಹಿರಿಯ ಸಚಿವರಿಗೆ ಹಂಚಿಕೆ ಮಾಡಲು ಮುಂದಾಗಿದ್ದಾರೆ. ಈ ಹಿಂದೆ ಗೃಹ ಖಾತೆಯನ್ನು ನಿಭಾಯಿಸಿದ್ದ ಕೆ.ಜೆ. ಜಾರ್ಜ್ ಅವರಿಗೆ ಗೃಹ ಖಾತೆಯನ್ನು ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಯೋಚಿಸಿದ್ದಾರೆ. ಬೆಂಗಳೂರು ಅಭಿವೃದ್ಧಿ ಸಚಿವರಾಗಿ ಸಾಕಷ್ಟು ಕೆಲಸ ಮಾಡುತ್ತಿರುವ ಕೆ.ಜೆ. ಜಾರ್ಜ್ ಅವರು ಗೃಹ ಖಾತೆಯನ್ನು ವಹಿಸಿಕೊಂಡರೆ ಬೆಂಗಳೂರು ಅಭಿವೃದ್ಧಿಗೆ ಈಗ ಹಾಕಿಕೊಂಡಿರುವ ಕೆಲಸಗಳಿಗೆ ತೊಡಕಾಗುತ್ತದೆ. ಹಾಗಾಗಿ ನನಗೆ ಆ ಜವಾಬ್ದಾರಿ ಬೇಡ, ಬೆಂಗಳೂರು ಅಭಿವೃದ್ಧಿಯೇ ಸಾಕು ಎಂದು ತೃಪ್ತಿಪಟ್ಟಿದ್ದಾರೆ. ಈ ಹಿಂದೆ ಗೃಹ ಸಚಿವರಾಗಿದ್ದಾಗ ಬಿಜೆಪಿ ಪಕ್ಷದವರು ತಮ್ಮನ್ನು ಗುರಿಯಾಗಿಸಿ ಮಾ‌ಡುತ್ತಿದ್ದ ಆರೋಪಗಳಿಂದ ಸಾಕಷ್ಟು ನೋವು ಅನುಭವಿಸಿದ್ದ ಜಾರ್ಜ್‌ರವರಿಗೆ ಈಗ ಗೃಹ ಖಾತೆ ವಹಿಸಿಕೊಳ್ಳುವ ಮನಸ್ಸಿಲ್ಲ. ಹಾಗಾಗಿಯೇ ಅವರು ಈಗಿರುವ ಖಾತೆಯೇ ಸಾಕು ಎಂದು ಮುಖ್ಯಮಂತ್ರಿಗಳಿಗೆ ಸೂಚ್ಯವಾಗಿ ಹೇಳಿದ್ದಾರೆ. ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರು ಗೃಹ ಖಾತೆಯ ಮೇಲೆ ಕಣ್ಣಿಟ್ಟಿದ್ದರಾದರೂ ಅವರಿಗೆ ಆ ಖಾತೆಯನ್ನು ವಹಿಸಲು ಮುಖ್ಯಮಂತ್ರಿಗೆ ಇಷ್ಟವಿಲ್ಲ. ಚುನಾವಣಾ ಸಂದರ್ಭದಲ್ಲಿ ಮಹತ್ವವಾಗಿರುವ ಗೃಹ ಇಲಾಖೆಯ ಜವಾಬ್ದಾರಿಯನ್ನು ಡಿ.ಕೆ.ಶಿವಕುಮಾರ್‌ ರವರಿಗೆ ವಹಿಸುವುದು ಬೇಡ ಎಂಬುದು ಪಕ್ಷದ ಕೆಲ ಹಿರಿಯ ಮುಖಂಡರುಗಳ ಒತ್ತಾಯವೂ ಆಗಿದೆ. ಡಿ.ಕೆ. ಶಿವಕುಮಾರ್‌ರವರನ್ನು ಬಿಟ್ಟು ಬೇರೆಯವರಿಗೆ ಗೃಹ ಖಾತೆ ನೀಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಚಿಂತಕರ ಚಾವಡಿ ಸಲಹೆ ಮಾಡಿದೆ. ಗೃಹ ಇಲಾಖೆಯ ಮಹತ್ವದ ಖಾತೆಯನ್ನು ತಮ್ಮ ಆಪ್ತರಿಗೆ ವಹಿಸಲು ತೀರ್ಮಾನಿಸಿರುವ ಸಿದ್ದರಾಮಯ್ಯನವರು ಲೋಕೋಪಯೋಗಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪನವರಿಗೆ ಗೃಹ ಇಲಾಖೆಯ ಜವಾಬ್ದಾರಿ ನೀಡಲು ಮುಂದಾಗಿದ್ದರಾದರೂ ಮಹದೇವಪ್ಪನವರು ಗೃಹ ಖಾತೆ ಜವಾಬ್ದಾರಿಯನ್ನು ವಹಿಸಲು ಅಷ್ಟೇನು ಆಸಕ್ತಿ ಹೊಂದಿಲ್ಲ. ಹಾಗಾಗಿ ಗೃಹ ಖಾತೆಯನ್ನು ಯಾರಿಗೆ ನೀಡಬೇಕು ಎಂಬುದು ಮುಖ್ಯಮಂತ್ರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ