ಬಿಜೆಪಿಗೆ ವಿಲನ್ ಆದ್ರಾ ಸಿದ್ಧರಾಮಯ್ಯ?

Siddaramayya Villain To Bjp

13-02-2019

ಆಪರೇಷನ್ ಕಮಲ ಕಾರ್ಯಾಚರಣೆಯ ವಿಡಿಯೋ ಭಾರೀ ಕೋಲಾಹಲ ಸೃಷ್ಟಿಸುತ್ತಿದ್ದಂತೆಯೇ ಆ ಕುರಿತು ಎಸ್.ಐ.ಟಿ ತನಿಖೆ ನಡೆಸಲು ವಿರೋಧ ವ್ಯಕ್ತಪಡಿಸಿದ ಬಿಜೆಪಿಯ ಹಲವು ನಾಯಕರಿಗೆ ಮಾಜಿ ಸಿಎಂ ಸಿದ್ಧರಾಮಯ್ಯ ತಮ್ಮನ್ನು ಹಣಿಯಲು ಹೊರಟಿದ್ದಾರೆ ಎಂಬ ಶಂಕೆ ಕಾಡತೊಡಗಿದೆ.


ಇದಕ್ಕೆ ಮುಖ್ಯ ಕಾರಣವಾಗಿದ್ದು ಬುಧವಾರ ಬೆಳಿಗ್ಗೆ ಸರ್ಕಾರ ಹಾಗೂ ಪ್ರತಿಪಕ್ಷಗಳ ನಡುವೆ ಸಾಮರಸ್ಯ ಏರ್ಪಡಿಸಲು,ಆ ಮೂಲಕ ಸದನದ ಕಲಾಪ ಸಾಂಗೋಪಾಂಗವಾಗಿ ನಡೆಯಲು ಸಭಾಧ್ಯಕ್ಷ ರಮೇಶ್ ಕುಮಾರ್ ಅವರು ಕರೆದದ್ದ ಸಭೆ.
ರಾಜ್ಯ ವಿಧಾನಸಭೆಯ ಹಿಂಬಾಗದಲ್ಲಿರುವ ತಮ್ಮ ಕೊಠಡಿಯಲ್ಲಿ ಕಾಂಗ್ರೆಸ್,ಜೆಡಿಎಸ್ ಹಾಗೂ ಬಿಜೆಪಿ ನಾಯಕರ ಸಭೆ ಕರೆದ ಅವರು,ಸದನ ಕಲಾಪ ಸಾಂಗೋಪಾಂಗವಾಗಿ ನಡೆಯಲು ಸರ್ಕಾರ ಹಾಗೂ ಪ್ರತಿಪಕ್ಷಗಳು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಈ ಹಂತದಲ್ಲಿ ಬಿಜೆಪಿ ನಾಯಕರು,ಆಡಿಯೋ ಪ್ರಕರಣದ ಬಗ್ಗೆ ಯಾವ ಕಾರಣಕ್ಕೂ ಎಸ್.ಐ.ಟಿ ತನಿಖೆ ಬೇಡ.ಅದರ ಬದಲು ಹಕ್ಕುಚ್ಯುತಿ ಸಮಿತಿ ಮೂಲಕ.ಸದನ ಸಮಿತಿಯ ಮೂಲಕ,ನ್ಯಾಯಾಂಗ ತನಿಖೆಯ ಪೈಕಿ ಯಾವುದಾದರೂ ತನಿಖೆ ನಡೆಸಲಿ ಎಂದು ಆಗ್ರಹಿಸಿದರು.


ಈ ಹಂತದಲ್ಲಿ ಮಾತನಾಡಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ,ನನ್ನದೇನೂ ಅಭ್ಯಂತರವಿಲ್ಲ.ಸ್ಪೀಕರ್ ಯಾವ ಬಗೆಯ ತನಿಖೆ ಮಾಡಿಸಬೇಕು ಎನ್ನುತ್ತಾರೋ?ಅದೇ ತನಿಖೆ ನಡೆಸಲು ಸರ್ಕಾರ ಸಿದ್ಧವಿದೆ ಎಂದರು.
ಅಲ್ಲಿಗೆ ಸರ್ಕಾರ ಹಾಗೂ ಪ್ರತಿಪಕ್ಷಗಳ ನಡುವಣ ಸಂಘರ್ಷ ನಿಂತು ವಿಧಾನಸಭೆಯ ಕಲಾಪ ನಿರಾತಂಕವಾಗಿ ನಡೆಯುತ್ತದೆ ಎಂಬ ಆಶಾಬಾವನೆ ಕಾಣಿಸಿತು.ಆದರೆ ಈ ಆಶಾಬಾವನೆಗೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ತಣ್ಣೀರೆರಚಿದರು.


ಆಡಿಯೋ ಪ್ರಕರಣವನ್ನು ಎಸ್.ಐ.ಟಿ ಹೊರತು ಪಡಿಸಿ ಯಾವ ತನಿಖೆಗೆ ಒಳಪಡಿಸಿದರೂ ಅದರಿಂದ ಗುರಿ ಸಾಧನೆಯಾಗುವುದಿಲ್ಲ.ಅದನ್ನು ಮುಚ್ಚಿ ಹಾಕುವುದು ನಮ್ಮ ಗುರಿಯೋ?ಅಥವಾ ಸತ್ಯ ತಿಳಿಯಬೇಕು ಎಂಬುದೋ?ಎಂದು ಪ್ರಶ್ನಿಸಿದರು.ಪ್ರಕರಣವನ್ನು ಹಕ್ಕುಚ್ಯುತಿ ಸಮಿತಿಗೆ,ನ್ಯಾಯಾಂಗ ತನಿಖೆಗೆ,ಸದನ ಸಮಿತಿಗೆ ಒಪ್ಪಿಸಿದರೆ ಏನೂ ಪ್ರಯೋಜನವಿಲ್ಲ.ಆದರೆ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಕೆಲಸ ಮಾಡಲು ಎಸ್.ಐ.ಟಿ.ಗೆ ಸಾಧ್ಯವಿರುವುದರಿಂದ ಆ ಸಂಸ್ಥೆಯ ಮೂಲಕವೇ ತನಿಖೆ ನಡೆಸಬೇಕು ಎಂದು ಪಟ್ಟು ಹಿಡಿದರು.


ಸಿದ್ಧರಾಮಯ್ಯ ಅವರು ಪಟ್ಟು ಹಿಡಿದ ಮೇಲೆ ಮುಖ್ಯಮಂತ್ರಿ ಕುಮಾರಸ್ವಾಮಿ ಸುಮ್ಮನಾದರೂ ಅಂತಿಮವಾಗಿ ಈ ಪ್ರಕರಣವನ್ನು ಸುಖಾಂತ್ಯಗೊಳಿಸಲು ಅವರೂ ಉತ್ಸುಕರಾಗಿದ್ದರು.ಹೀಗಾಗಿ ಬಿಜೆಪಿ ಬೇಡಿಕೆಯನ್ನು ಪೂರೈಸಲು ಅವರು ಸಿದ್ದರಾಗಿದ್ದರು.ಆದರೆ ಅಂಗಪಕ್ಷ ಕಾಂಗ್ರೆಸ್ ನಾಯಕ ಸಿದ್ಧರಾಮಯ್ಯ ಅವರು ಅಷ್ಟು ಖಡಾಖಂಡಿತವಾದ ಧ್ವನಿಯಲ್ಲಿ ಮಾತನಾಡಿದ ಮೇಲೆ ಅವರು ಮೌನಕ್ಕೆ ಶರಣಾದರು.
ಆಲ್ಲಿಗೆ ಕಲಾಪವನ್ನು ನಿರಾತಂಕವಾಗಿ ನಡೆಸಬೇಕು ಎಂಬ ಸ್ಪೀಕರ್ ಉದ್ದೇಶ ಈಡೇರಲಿಲ್ಲ.ಬಿಜೆಪಿ ಕೂಡಾ ಎಸ್.ಐ.ಟಿ ಹೊರತುಪಡಿಸಿ ಬೇರೆ ತನಿಖೆ ಮಾಡಿಸಬೇಕು ಎಂಬ ತನ್ನ ನಿರ್ಧಾರದಿಂದ ಹೊರಬರಲಿಲ್ಲ.ಸರ್ಕಾರವೂ ತನ್ನ ನಿರ್ಧಾರದಿಂದ ಹೊರಬರಲಿಲ್ಲ.
ಪರಿಣಾಮವಾಗಿ ಈಗ ಬಿಜೆಪಿಯ ಹಲವು ನಾಯಕರಿಗೆ,ಈ ಪ್ರಕರಣವನ್ನು ಎಸ್.ಐ.ಟಿ ಗೇ ಕೊಡಬೇಕು ಎಂಬ ಸಿದ್ಧರಾಮಯ್ಯ ಅವರು ವಿಲನ್ ಆಗಿ ಕಾಣತೊಡಗಿದ್ದಾರೆ.ಮುಖ್ಯಮಂತ್ರಿಗಳು ತಮ್ಮ ನಿಲುವು ಸಡಿಲಿಸಲು ತಯಾರಿದ್ದರೂ ಸಿದ್ಧರಾಮಯ್ಯ ತಯಾರಿಲ್ಲದೇ ಇದ್ದುದನ್ನು ನೋಡಿದರೆ ವಿವಿಧ ರೀತಿಯ ಅನುಮಾನಗಳು ಕಾಡುತ್ತವೆ ಎಂದು ಈ ನಾಯಕರು ವಿಧಾನಸಭೆಯ ಮೊಗಸಾಲೆಯಲ್ಲಿ ಖಾಸಗಿ ಸಂಭಾಷಣೆಯ ವೇಳೆ ಹೇಳುತ್ತಿದ್ದರು.


ಸಂಬಂಧಿತ ಟ್ಯಾಗ್ಗಳು

#Karnataka #Siddaramayya #Bjp #Villain


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ