ಕೊನೆಯಾದ ಪೊಲಿಟಿಕಲ್ ಹೈಡ್ರಾಮಾ ಅಧಿವೇಶನಕ್ಕೆ ಅತೃಪ್ತರು 

Political Hydrama Ends, Dissatisfied Came To Session

13-02-2019

ಸರ್ಕಾರ ಬೀಳಿಸುವ ಕನಸಿನೊಂದಿಗೆ ಅತೃಪ್ತರೆಂಬ ಹಣೆಪಟ್ಟಿ ಹೊತ್ತು ಮುಂಬೈ ಸೇರಿದ್ದ ನಾಲ್ವರು ಶಾಸಕರು ಇಂದಿನ ವಿಧಾನಸಭೆ ಕಲಾಪಕ್ಕೆ ಹಾಜರಾಗುವ ಮೂಲಕ ಕರ್ನಾಟಕದ ರಾಜಕೀಯ ಹೈಡ್ರಾಮಾ ಒಂದು ಅಂತ್ಯ ಕಂಡಂತಾಗಿದೆ. ಕಳೆದ 15 ದಿನಗಳಿಂದ ಸರ್ಕಾರ ಬಿದ್ದೇ ಹೋಯ್ತು ಎನ್ನುವಂತ ಬೆಳವಣಿಗೆಗೆ ಕಾರಣವಾಗಿದ್ದ ನಾಲ್ವರು ಶಾಸಕರು ಸಿಎಂ ಕುಮಾರಸ್ವಾಮಿ ಮನವೊಲಿಕೆಗೆ ಮಣಿದು ವಾಪಸ್ಸಾಗಿದ್ದಾರೆ ಎನ್ನಲಾಗಿದ್ದು, ಬಿಜೆಪಿಯ ಸರ್ಕಾರ ರಚನೆಯ ಕನಸು ಕನಸಾಗಿಯೇ ಉಳಿದಂತಾಗಿದೆ. 

ಆಫರೇಷನ್ ಕಮಲಕ್ಕೆ ಒಳಗಾಗಿ ಮುಂಬೈನಲ್ಲಿ ಬಂಧನದಲ್ಲಿದ್ದಾರೆ ಎಂಬೆಲ್ಲ ಊಹಾಪೋಹಗಳನ್ನು ಹುಟ್ಟು ಹಾಕಿದ್ದ ಶಾಸಕರು ತಾವೇ ತಾವಾಗಿ ಬೆಂಗಳೂರಿಗೆ ವಾಪಸ್ಸಾದರು. ಅಷ್ಟೇ ಅಲ್ಲ ಸದನಕ್ಕೂ ಹಾಜರಾಗುವ ಮೂಲಕ ಎಲ್ಲ ಚರ್ಚೆಗಳಿಗೆ ಅಂತ್ಯ ಹಾಡಿದ್ದಾರೆ. ರಮೇಶ್ ಜಾರಕಿಹೊಳಿ, ಕೆ.ಆರ್.ಪೇಟೆ ಶಾಸಕ ನಾರಾಯಣ ಗೌಡ, ಶಾಸಕ ಉಮೇಶ್ ಜಾಧವ್, ಉಮೇಶ್ ಕುಮಟಳ್ಳಿ ಕಲಾಪಕ್ಕೆ ಹಾಜರಾಗಿದ್ದು, ಉಳಿದ ಶಾಸಕರು ಹಾಗೂ ಸದಸ್ಯರ ಜೊತೆ ಎಂದಿನಂತೆ ಮಾತುಕತೆಯಲ್ಲಿ ತೊಡಗಿದ್ದ ದೃಶ್ಯ ವಿಧಾನಸಭೆಯಲ್ಲಿ ಕಂಡು ಬಂತು. 

ಇನ್ನು ಧೀಡಿರ ವಿಧಾನಸಭೆ ಕಲಾಪಗಳಿಗೆ ಹಾಜರಾದ ಶಾಸಕರು, ತಮ್ಮನ್ನು ಪ್ರಶ್ನಿಸಿದ ಮಾಧ್ಯಮದವರಿಗೆ ಜಾಣತನದಿಂದ ಉತ್ತರಿಸಿದ್ದು, ಒಬ್ಬೊಬ್ಬರು ಒಂದೊಂದು ಕಾರಣ ನೀಡಿದ್ದಾರೆ. ಮಗಳ ಮದುವೆ ಇದೆ. ಫೆ 24 ರಂದು ಅದಕ್ಕಾಗಿ ಸಂಬಂಧಿಕರನ್ನು ಆಹ್ವಾನಿಸಲು ಮುಂಬೈಗೆ  ತೆರಳಿದ್ದೆ. ಅಸಮಧಾನ ಇರೋದು ನಿಜ. ಬೇಕಿದ್ದರೇ ಈಗಲೂ ನಾನು ಕಾಂಗ್ರೆಸ್‍ಗೆ ರಾಜೀನಾಮೆ ನೀಡಲು ಸಿದ್ದ ಎಂದು ರಮೇಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ. 

ಇನ್ನು ಅತ್ಯಂತ ನಾಜೂಕಾಗಿ ಉತ್ತರಿಸಿರುವ ಶಾಸಕ ನಾಗೇಂದ್ರ, ನಾನು ಬ್ಯುಸಿನೆಸ್ ಕಾರಣಕ್ಕೆ ಮುಂಬೈಗೆ ಹೋಗಿದ್ದೆ. ಆ ವೇಳೆ ಈ ಆಫರೇಷನ್ ಕಮಲ ಪ್ರಕ್ರಿಯೆ ನಡೆದಿದೆ. ಹೀಗಾಗಿ ನನ್ನ ಹೆಸರು ಸೇರಿಕೊಂಡಿದೆ ಅಷ್ಟೇ ಎಂದರು. ಶಾಸಕ ಕುಮಟಳ್ಳಿ ನನಗೆ ಅಸಮಧಾನ ಇರೋದು ನಿಜ ಆದರೆ ಅಧಿವೇಶನ ಇರೋದರಿಂದ ವಾಪಸ ಬಂದಿದ್ದೇನೆ ಎಂದರು. ನನ್ನ ಕ್ಷೇತ್ರಕ್ಕೆ ಯಾವುದೆ ಅಭಿವೃದ್ಧಿಯಾಗಿಲ್ಲ. ಹೀಗಾಗಿ ನನಗೆ ಅಸಮಧಾನ ಇರೋದು ನಿಜ ಎಂದು ಜಾಧವ್ ಉತ್ತರಿಸಿದ್ದಾರೆ.

 ಒಟ್ಟಿನಲ್ಲಿ 15 ದಿನಗಳಿಂದ ಅಸಮಧಾನಗೊಂಡು ಸಮ್ಮಿಶ್ರ ಸರ್ಕಾರದ ತಲೆನೋವಿಗೆ ಕಾರಣವಾಗಿದ್ದ ಶಾಸಕರುಗಳು ಸಿಎಂ ಕುಮಾರಸ್ವಾಮಿ ಸ್ಥಾನಮಾನ ನೀಡುವ ಭರವಸೆಯೊಂದಿಗೆ ವಾಪಸ್ಸಾಗಿದ್ದು, ಕಾಂಗ್ರೆಸ್-ಜೆಡಿಎಸ್ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರೇ, ಮತ್ತೊಮ್ಮೆ ಸರ್ಕಾರ ರಚಿಸುವ ಅವಕಾಶ ಕಳೆದುಕೊಂಡ  ಬಿಜೆಪಿ ನಿರಾಸೆಯ ಮಡುವಿಗೆ ಜಾರಿದೆ. 


ಸಂಬಂಧಿತ ಟ್ಯಾಗ್ಗಳು

#Karnataka #Dissatisfied #Political Hydrama # Session


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ