ಅಧಿವೇಶನದಲ್ಲಿ ಹಾಸ್ಯದ ವಸ್ತುವಾಯ್ತಾ ಅತ್ಯಾಚಾರ?

 Woman

13-02-2019

ಅತ್ಯಾಚಾರ ಅಥವಾ ರೇಪ್ ಈ ಶಬ್ದ ಕೇಳಿದ್ರೆನೇ ಅದೇಷ್ಟೋ ಹೆಣ್ಣುಮಕ್ಕಳು ನಿದ್ದೆಯಲ್ಲೂ ಬೆಚ್ಚಿ ಬೀಳ್ತಾರೆ. ಇನ್ನೇಷ್ಟೋ ಹೆಣ್ಣುಮಕ್ಕಳಿಗೆ ಈ ಶಬ್ದ ನೆನಪಿಸಿಕೊಂಡ್ರೆ ನಿದ್ದೆ ಬರೋದಿಲ್ಲ. ಹೀಗೆ ವಿಶ್ವದ ಅದೇಷ್ಟೋ ಹೆಣ್ಣುಮಕ್ಕಳ ಪಾಲಿಗೆ ಯಮಯಾತನೆ ನೀಡುವ ಈ ಶಬ್ದವೇ ಇಷ್ಟು ಕ್ರೂರವಾಗಿದ್ದರೆ ಅಂತ ವಿಕೃತಿಯನ್ನು ಅನುಭವಿಸಿದವರ ಸ್ಥಿತಿ ಹೇಗಾಗಿರಬೇಡ. ಆದರೆ ಇಂಥ ಶಬ್ದವೊಂದು ನಿನ್ನೆ ಕರ್ನಾಟಕದ ವಿಧಾನಸಭೆಯಲ್ಲಿ ಹಾಸ್ಯದ ಸನ್ನಿವೇಶಕ್ಕೆ ಬಳಕೆಯಾಗಿದ್ದು, ಮತ್ತು ಅದನ್ನು ಖಂಡಿಸ ಬೇಕಾದ ಮಹಿಳಾ ಶಾಸಕಿಯರೂ ಬಾಯಿಮುಚ್ಚಿ ಕುಳಿತಿದ್ದು ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ಸುಸ್ಕøಂತರ ನಾಡಿನಲ್ಲಿ ಇದೆಂಥ ವಿಕೃತಿ ಎಂಬ ಪ್ರಶ್ನೆ ಮೂಡಿದೆ.  

ನಿನ್ನೆ ತಮ್ಮ ವಿರುದ್ಧದ ಆರೋಪದ ಬಗ್ಗೆ ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್, ನನ್ನ ಪರಿಸ್ಥಿತಿ ಅತ್ಯಾಚಾರ ಸಂತ್ರಸ್ಥೆಯಂತಾಗಿದೆ. ಅತ್ಯಾಚಾರವೇನೂ ಒಂದು ಸಲ ನಡೆದು ಹೋಗುತ್ತದೆ. ಆದರೆ ಈ ಬಗ್ಗೆ ಅತ್ಯಾಚಾರ ಸಂತ್ರಸ್ಥೆ ದೂರು ನೀಡಿದ್ರೆ  ಪೊಲೀಸರು, ವಕೀಲರು ನ್ಯಾಯಾಲಯ ಈ ಬಗ್ಗೆ ಪ್ರಶ್ನೆಗಳನ್ನು ಕೇಳಿ ಕೇಳಿ ಹತ್ತಾರು ಬಾರಿ ಅತ್ಯಾಚಾರದ ಅನುಭವವಾಗುವಂತೆ ಮಾಡುತ್ತದೆ. ಹಾಗೆಯೇ ನನ್ನ ಪರಿಸ್ಥಿತಿ ಆರೋಪದ ಬಗ್ಗೆ ಚರ್ಚೆ ಮಾಡಿ ಮಾಡಿ ನನ್ನ ಸ್ಥಿತಿ ರೇಪ್ ಸಂತ್ರಸ್ಥೆಯಂತಾಗಿದೆ ಎಂದು ನಗು ಬೀರಿದ್ದರು. 
ಇಂಥ ಅಸಹ್ಯ ಹಾಗೂ ಅಸಂವಿಧಾನಿಕ ಹೇಳಿಕೆ ನೀಡಿದ ರಮೇಶ್ ಕುಮಾರ್ ಅವರ ಮಾತು ಇದೀಗ ವಿವಾದಕ್ಕೆ ಕಾರಣವಾಗಿದೆ. ಹೆಣ್ಣೊಬ್ಬಳಿಗೆ ಮಾನಸಿಕವಾಗಿ , ದೈಹಿಕವಾಗಿ ಯಮಯಾತನೆ ನೀಡುವ ಅತ್ಯಾಚಾರದಂತಹ ವಿಚಾರವನ್ನು ವಿಧಾನಸಭೆಯಂತಹ ಜಾಗದಲ್ಲಿ ಇಷ್ಟು ಕೀಳಾಗಿ ಮತ್ತು ಹಾಸ್ಯದ ವಸ್ತುವಾಗಿ ಬಿಂಬಿಸಿದ ನಾಯಕರಿಂದ ಈ ಸಮಾಜ ಇನ್ನೇನನ್ನೂ ನೀರಿಕ್ಷಿಸಲು ಸಾಧ್ಯ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ. 

ಇನ್ನು ವಿಧಾಸಭೆಯಲ್ಲಿ ರಮೇಶ್ ಕುಮಾರ್ ಇಂಥ ಲಘುವಾದ ಕಾಮೆಂಟ್ ಪಾಸ್ ಮಾಡುವ ವೇಳೆಯಲ್ಲಿ ಸಾಕಷ್ಟು ಮಹಿಳಾ ಶಾಸಕಿಯರೂ ಹಾಜರಿದ್ದರು. ಆದರೆ ಅವರ್ಯಾರಿಗೂ ಇದು  ಖಂಡಿಸಬೇಕಾದ ವಿಚಾರ ಎಂಬುದು ಅರಿವಿಗೆ ಬಾರದೇ ಹೋಗಿದ್ದು ಮಾತ್ರ ದುರಂತವೇ ಸರಿ. ಮಹಿಳೆಯರ ಹಕ್ಕುಬಾಧ್ಯತೆಗೆ ಹೋರಾಡ ಬೇಕಿದ್ದ ಶಾಸಕಿಯರು ಕೂಡ ಏನು ಅರ್ಥವಾಗದಂತೆ ರಮೇಶ್ ಕುಮಾರ್ ಮಾತಿಗೆ ನಕ್ಕು ಸುಮ್ಮನಾಗಿದ್ದು, ಅವರ ಬುದ್ಧಿಮಟ್ಟವನ್ನು ಎಲ್ಲರೆದುರು ಬಿಚ್ಚಿಟ್ಟಿದೆ. 

ಕೇವಲ ಮೀಸಲಾತಿ ಪಡೆದು ಶಾಸಕಿಯಾದರೇ ಸಾಲದು ತಮ್ಮ ಹಕ್ಕು ಬಾಧ್ಯತೆ ಹಾಗೂ ಜವಾಬ್ದಾರಿಗಳ ಅರಿವಿರಬೇಕು ಎಂಬ ಟೀಕೆಗೂ ಶಾಸಕಿಯರು ಗುರಿಯಾಗಿದ್ದಾರೆ. ಇನ್ನೊಂದೆಡೆ ರಮೇಶ್ ಕುಮಾರ್ ರಂತಹ ಹಿರಿಯ ಹಾಗೂ ಪ್ರಜ್ಞಾವಂತ ರಾಜಕಾರಣಿ ಸ್ಪೀಕರ್ ಹುದ್ದೆಯಲ್ಲಿದ್ದು ಮಹಿಳೆಯರ ಭಾವನೆಗೆ ಧಕ್ಕೆ ತರುವಂತೆ ವರ್ತಿಸಿದ್ದು, ಈ ಸಮಾಜ ಹೆಣ್ಣುಮಕ್ಕಳನ್ನು ಎಷ್ಟು ಲಘುವಾಗಿ ಕಾಣುತ್ತದೆ ಎಂಬುದಕ್ಕೆ ಸಾಕ್ಷಿ ಒದಗಿಸುತ್ತಿದೆ ಎಂಬ ಮಾತು ಕೇಳಿಬಂದಿದೆ. 

ಸಾಮಾಜಿಕ ಜಾಲತಾಣದಲ್ಲಿ ರಮೇಶ್ ಕುಮಾರ್ ಹೇಳಿಕೆಗೆ ತೀವ್ರ ಖಂಡನೆ ವ್ಯಕ್ತವಾಗಿದೆ. ಹಲವಾರು ಲೇಖಕ-ಲೇಖಕಿಯರು, ಚಿಂತಕರು, ಮಹಿಳಾವಾದಿಗಳು ರಮೇಶ್ ಕುಮಾರ್ ಹೇಳಿಕೆಯನ್ನು ಖಂಡಿಸಿದ್ದರೇ, ಇನ್ನೊಂದೆಡೆ ಸಂವೇದನಾ ಶೀಲತೆಯಿಲ್ಲದೇ ಹೇಳಿಕೆಗೆ ನಕ್ಕು ಧ್ವನಿಗೂಡಿಸಿದ ಶಾಸಕಿಯರ ಬಗ್ಗೆಯೂ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೆ ರಮೇಶ್ ಕುಮಾರ್ ತಮ್ಮ ಈ ಲಘು ಹೇಳಿಕೆಗೆ ಕ್ಷಮೆಯಾಚಿಸಬೇಕೆಂಬ ಆಗ್ರಹವೂ ವ್ಯಕ್ತವಾಗಿದೆ. ಖಂಡಿತಾ ಇದು ರಮೇಶ್ ಕುಮಾರ್ ಅವರ ವ್ಯಕ್ತಿತ್ವಕ್ಕೆ ಶೋಭೆ ತರುವ ಸಂಗತಿಯಲ್ಲ ಹೀಗಾಗಿ ರಮೇಶ ಕುಮಾರ್ ತಮ್ಮ ತಪ್ಪನ್ನು ಅರಿತು ಕ್ಷಮೆಕೋರಬೇಕಿದೆ ಹಾಗೂ ಇನ್ಮುಂದೆಯಾದರೂ ಮಹಿಳೆಯರಿಗೆ ಗೌರವ ಸೂಚಕವಾಗಿ ಕಲಾಪ ನಡೆಯುವಂತೆ ನೋಡಿಕೊಳ್ಳಬೇಕೆಂಬ ಆಗ್ರಹ ಎಲ್ಲೆಡೆಯಿಂದ ವ್ಯಕ್ತವಾಗಿದೆ. 


ಸಂಬಂಧಿತ ಟ್ಯಾಗ್ಗಳು

#Karnataka #Ramesh kumar #Session #Rape


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ