ಅತೃಪ್ತರು ಕಾಂಗ್ರೆಸ್ ಉಸ್ತುವಾರಿಗೆ ಶರಣಾಗಿದ್ದ್ಯಾಕೆ ಗೊತ್ತಾ?

 Do you know how dissatisfied Congress has surrendered?

12-02-2019

ಪಕ್ಷಾಂತರ ನಿಷೇಧ ಕಾಯ್ದೆಯಡಿ ಶಾಸಕ ಸ್ಥಾನದಿಂದ ಅನರ್ಹಗೊಳ್ಳುವ ಭೀತಿಯನ್ನೆದುರಿಸುತ್ತಿರುವ ಕಾಂಗ್ರೆಸ್‍ನ ನಾಲ್ಕು ಮಂದಿ ಶಾಸಕರು ಇದೀಗ ರಾಜ್ಯದಲ್ಲಿ ಪಕ್ಷದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಕೆ.ಸಿ.ವೇಣುಗೋಪಾಲ್ ಅವರ ಮೊರೆ ಹೋಗಿದ್ದು, ಈ ಅಪಾಯದಿಂದ ಪಾರಾಗಲು ವಿಧಾನಸಭೆ ಕಲಾಪಕ್ಕೆ ಹಾಜರಾಗಿ ಎಂದು ವೇಣುಗೋಪಾಲ್ ಈ ಶಾಸಕರಿಗೆ ಎಚ್ಚರಿಕೆ ನೀಡಿದ್ದಾರೆ.

ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಹೂಡಿರುವ ತಂತ್ರಗಾರಿಕೆಯ ಫಲವಾಗಿ, ಈಗಾಗಲೇ ನಾಲ್ಕು ಮಂದಿ ಭಿನ್ನಮತೀಯ ಶಾಸಕರನ್ನು ಸದಸ್ಯತ್ವದಿಂದ ಅನರ್ಹಗೊಳಿಸುವಂತೆ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಕೈ ಪಾಳೆಯ ದೂರು ನೀಡಿದೆ.

ಹೀಗಾಗಿ ಈ ಶಾಸಕರು ರಾಜೀನಾಮೆ ನೀಡಲು ಬಂದರೂ ಅದಕ್ಕೂ ಮುನ್ನು ಅವರನ್ನು ಸದಸ್ಯತ್ವದಿಂದ ಅನರ್ಹಗೊಳಿಸಲು ಸ್ಪೀಕರ್ ರಮೇಶ್ ಕುಮಾರ್ ಕ್ರಮ ಕೈಗೊಳ್ಳಬಹುದು.ಹೀಗಾಗಿ ಆ ಶಾಸಕರು ಬಿಜೆಪಿಗೆ ಹೋದರೂ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹರಾಗುತ್ತಾರೆ.

ಒಮ್ಮೆ ಶಾಸಕ ಸ್ಥಾನದಿಂದ ಅನರ್ಹಗೊಂಡರೆ ಆರು ವರ್ಷಗಳ ಕಾಲ ಅವರು ಮತ್ತೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಇಲ್ಲದೇ ಇರುವುದರಿಂದ ಮಧ್ಯಂತರ ಚುನಾವಣೆ ಮಾತ್ರವಲ್ಲ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಅರ್ಹತೆಯನ್ನು ಕಳೆದುಕೊಳ್ಳುತ್ತಾರೆ.

ಅಲ್ಲಿಗೆ ಏನಿಲ್ಲವೆಂದರೂ ಮುಂದಿನ ಹತ್ತು ವರ್ಷಗಳ ಕಾಲ ಅವರು ಚುನಾವಣಾ ರಾಜಕೀಯದಿಂದ ದೂರವಿರಬೇಕಾಗುತ್ತದೆ. ಹಾಗೊಂದು ವೇಳೆ ಈ ಶಾಸಕರು ಅನರ್ಹಗೊಂಡರೆ ತಮ್ಮ ಜಾಗಕ್ಕೆ ಮತ್ತೊಬ್ಬರನ್ನು ತಂದು ನಿಲ್ಲಿಸಿ ಗೆಲ್ಲಿಸುವುದು ಕಷ್ಟಕರ ಹಾಗೂ ತಾವಾಗಿಯೇ ತಮ್ಮ ಭವಿಷ್ಯಕ್ಕೆ ಕಲ್ಲು ಹಾಕಿಕೊಂಡಂತೆ.

ಹೀಗಾಗಿಯೇ ಮುನ್ನೆಚ್ಚರಿಕೆಯ ಕ್ರಮವಾಗಿ ಕಾಂಗ್ರೆಸ್ ನಾಯಕರು ಸ್ಪೀಕರ್ ಅವರಿಗೆ ಸಲ್ಲಿಸಿದ ದೂರಿನ ಜತೆ, ಮತ್ತೊಂದು ಕಡೆ ಆಡಿಯೋ ವಿವಾದದಲ್ಲಿ ಸಿಲುಕಿರುವ ಬಿಜೆಪಿಯ ಒಬ್ಬ ಶಾಸಕರನ್ನು ವಜಾ ಮಾಡಲು ಸಿದ್ಧತೆ ನಡೆಸಲಾಗಿದ್ದು ಅಲ್ಲಿಗೆ ಆಪರೇಷನ್ ಕಮಲ ಕಾರ್ಯಾಚರಣೆಗೆ ತಿರುಗೇಟು ನೀಡಲು ಸಮ್ಮಿಶ್ರ ಸರ್ಕಾರವೂ ಸಜ್ಜಾಗಿದೆ.

ಇದನ್ನು ಅರಿತ ಕಾಂಗ್ರೆಸ್‍ನ ನಾಲ್ಕು ಮಂದಿ ಅತೃಪ್ತ ಶಾಸಕರು ರಾಜ್ಯದಲ್ಲಿ ಪಕ್ಷದ ಉಸ್ತುವಾರಿ ಹೊಣೆ ವಹಿಸಿಕೊಂಡಿರುವ ಕೆ.ಸಿ.ವೇಣುಗೋಪಾಲ್ ಅವರನ್ನು ಸಂಪರ್ಕಿಸಿದ್ದು, ಯಾವ ಕಾರಣಕ್ಕೂ ತಮ್ಮನ್ನು ಸದಸ್ಯತ್ವದಿಂದ ಅನರ್ಹಗೊಳಿಸದಂತೆ ನೋಡಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.

ಈ ನಾಲ್ಕು ಶಾಸಕರು ತಮ್ಮ ದುಂಬಾಲು ಬಿದ್ದಿರುವ ಹಿನ್ನೆಲೆಯಲ್ಲಿ ಕೆ.ಸಿ.ವೇಣುಗೋಪಾಲ್ ಅವರು, ಸಧ್ಯದ ಗಂಡಾಂತರದಿಂದ ಪಾರಾಗಲು ತಕ್ಷಣವೇ ವಿಧಾನಸಭೆಯ ಕಲಾಪಕ್ಕೆ ಹಾಜರಾಗಿ ಎಂದು ಸೂಚಿಸಿದ್ದಾರೆ.

ಈ ಮಧ್ಯೆ ತಮ್ಮ ಶಾಸಕರು ನಾಪತ್ತೆಯಾಗಿದ್ದು ಅವರನ್ನು ಹುಡುಕಿಕೊಡುವಂತೆ ಕೆಲವರು ಹೈಕೋರ್ಟ್‍ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದು, ಅದೇ ರೀತಿ ಹಲವರು ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಅವರಿಗೂ ದೂರು ಸಲ್ಲಿಸಿದ್ದಾರೆ.

ಹೀಗಾಗಿ ಆಪರೇಷನ್ ಕಮಲ ಕಾರ್ಯಾಚರಣೆಗೆ ಸಿಲುಕಿರುವ ಶಾಸಕರ ಮೇಲೆ ಆತಂಕದ ಕರಿಮೋಡ ದಟ್ಟೈಸಿದ್ದು ಈ ಬೆಳವಣಿಗೆ ರಾಜಕೀಯ ವಲಯಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.


ಸಂಬಂಧಿತ ಟ್ಯಾಗ್ಗಳು

#Congress #Dissatisfied #K.C.Venugopal #Mla


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ