ಶಾಸಕರ ಬಿಡುಗಡೆಗೆ ಒತ್ತಾಯಿಸಿ ಧರಣಿಗೆ ಜೆಡಿಎಸ್ ನಿರ್ಧಾರ

 The JDS Secision to Demand the Release of MLAs

12-02-2019

ಬಿಜೆಪಿಯ ಆಪರೇಷನ್ ಕಮಲ ಕಾರ್ಯಾಚರಣೆ ಇದೀಗ ನಾಟಕೀಯ ತಿರುವು ಪಡೆಯುತ್ತಿದ್ದು ಮುಂಬೈಯಲ್ಲಿ ಕೂಡಿ ಹಾಕಿರುವ ತಮ್ಮ ಶಾಸಕರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಕಛೇರಿಯ ಮುಂದೆ ಧರಣಿ ನಡೆಸಲು ಜೆಡಿಎಸ್ ನಿರ್ಧರಿಸಿದೆ.

ಬಜೆಟ್ ಅಧಿವೇಶನ ಮುಗಿದ ನಂತರ ಜೆಡಿಎಸ್‍ನ ಇಪ್ಪತ್ತಕ್ಕೂ ಹೆಚ್ಚು ಶಾಸಕರು ಮುಂಬೈಗೆ ತೆರಳಲಿದ್ದು, ಅಲ್ಲಿನ ಸರ್ಕಾರದ ಕಣ್ಗಾವಲಿನಲ್ಲಿ ಬಂಧಿಯಾಗಿರುವ ಕೆ.ಆರ್.ಪೇಟೆ ಶಾಸಕ ನಾರಾಯಣಗೌಡ ಸೇರಿದಂತೆ ಕೆಲವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಮಹಾರಾಷ್ಟ್ರ ಮುಖ್ಯಮಂತ್ರಿ ಕಛೇರಿಯ ಮುಂದೆ ಧರಣಿ ನಡೆಸಲು ಜೆಡಿಎಸ್ ತೀರ್ಮಾನಿಸಿದೆ.

ಕೆ.ಆರ್.ಪೇಟೆ ಶಾಸಕ ನಾರಾಯಣಗೌಡ ಅವರು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ದೂರವಾಣಿ ಕರೆ ಮಾಡಿ, ತಮ್ಮನ್ನು ಬಂಧಿಸಿಡಲಾಗಿದೆ. ನಾನು ಬಿಜೆಪಿಗೆ ಬರುವುದಿಲ್ಲ. ನನ್ನನ್ನು ಬಿಡುಗಡೆ ಮಾಡಿ ಎಂದರೆ ಆ ರಾಜ್ಯದಲ್ಲಿರುವ ನನ್ನ ಹೋಟೆಲ್ ಮತ್ತಿತರ ಉದ್ಯಮಗಳನ್ನು ಮುಚ್ಚಿಸುವುದಾಗಿ ಬೆದರಿಕೆ ಒಡ್ಡಲಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ನಾನಿರುವ ಜಾಗದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದಂತೆ ಐವತ್ತು ಪೋಲೀಸರು ಸರ್ಪಗಾವಲಿದ್ದಾರೆ. ಜತೆಗೆ ನನ್ನನ್ನು ಯಾರಾದರೂ ಭೇಟಿ ಮಾಡಲು ಬಂದರೆ ಹೆದರಿಸಲು ರೌಡಿಗಳನ್ನೂ ಇಡಲಾಗಿದೆ. ಹೀಗಾಗಿ ನನ್ನನ್ನು ಹೇಗಾದರೂ ಮಾಡಿ ಬಿಡಿಸಿ ಎಂದು ನಾರಾಯಣಗೌಡ ಮುಖ್ಯಮಂತ್ರಿಗಳ ಬಳಿ ಅಳಲು ತೋಡಿಕೊಂಡಿದ್ದಾರೆ.

ಈ ಮಧ್ಯೆ ಮಾಜಿ ಶಾಸಕರೊಬ್ಬರು ಮುಂಬಯಿಗೆ ಹೋಗಿ ನಾರಾಯಣಗೌಡರನ್ನು ಭೇಟಿ ಮಾಡಲು ಯತ್ನಿಸಿ ವಿಫಲರಾಗಿದ್ದಲ್ಲದೆ ವಾಪಸ್ ಬಂದು ಕುಮಾರಸ್ವಾಮಿ ಅವರಿಗೆ ವಿವರ ನೀಡಿದ್ದು, ನನ್ನಂತವನೇ ನಾರಾಯಣಗೌಡರನ್ನು ಭೇಟಿ ಮಾಡಲು ಸಾಧ್ಯವಾಗದಂತೆ ನೋಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ನಾನು ಸ್ಥಳಕ್ಕೆ ಹೋಗಿ ನಾರಾಯಣಗೌಡರನ್ನು ಭೇಟಿ ಮಾಡಲು ಹೋದರೆ ಅಲ್ಲಿದ್ದ ಪೋಲೀಸರು ಏಯ್ ಹಠ್ ಜಾವ್ ಎಂದು ನೇರವಾಗಿ ಹೇಳಿದ್ದಾರೆ. ಅದೇ ಜಾಗದಲ್ಲಿ ಶಂಕಾಸ್ಪದ ವ್ಯಕ್ತಿಗಳೂ ಇದ್ದು ಅವರೆಲ್ಲ ರೌಡಿಗಳು ಎಂಬುದು ತಮಗಿರುವ ಮೂಲಗಳಿಂದ ತಿಳಿದುಬಂದಿದೆ ಎಂದು ಈ ಮಾಜಿ ಶಾಸಕರು ವಿವರಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಇಂದೇ ಪಕ್ಷದ ಶಾಸಕರನ್ನು ಮುಂಬೈಗೆ ಕಳಿಸಿ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಕಛೇರಿಯ ಮುಂದೆ ಧರಣಿ ನಡೆಸಲು ಯೋಚಿಸಲಾಯಿತಾದರೂ ಹಲವಾರು ಪ್ರಮುಖ ಮಸೂದೆಗಳು ಹಾಗೂ ಬಜೆಟ್ ಅನ್ನು ವಿಧಾನಮಂಡಲದಲ್ಲಿ ಅಂಗೀಕರಿಸಬೇಕಿರುವುದರಿಂದ ಈ ನಿರ್ಧಾರವನ್ನು ಒಂದೆರಡು ದಿನಗಳ ಕಾಲ ಮುಂದೂಡಲು ತೀರ್ಮಾನ ಮಾಡಲಾಯಿತು.

ಯಾಕೆಂದರೆ ಮಂಗಳವಾರದಂದೇ ಶಾಸಕರು ಮುಂಬಯಿಗೆ ಹೋಗಿ ಪ್ರತಿಭಟನೆ ನಡೆಸಿದರೆ ಮಹಾರಾಷ್ಟ್ರ ಸರ್ಕಾರ ಅವರನ್ನು ಬಂಧಿಸಿದರೆ ಮತ್ತು ಕೆಲ ಕಾಲದ ಮಟ್ಟಿಗೆ ಅವರು ರಾಜ್ಯಕ್ಕೆ ವಾಪಸ್ಸಾಗದಂತೆ ನ್ಯಾಯಾಂಗ ಸಂಬಂಧಿ ಕ್ರಮಗಳನ್ನು ಕೈಗೊಂಡರೆ ಇಲ್ಲಿ ಸರ್ಕಾರ ಬಿಕ್ಕಟ್ಟಿಗೆ ಸಿಲುಕುತ್ತದೆ.

ಬಜೆಟ್ ಅನ್ನು ಅಂಗೀಕರಿಸುವ ಸಂದರ್ಭದಲ್ಲಿ ಹಣಕಾಸು ಬಿಲ್ ಅನ್ನು ಮತಕ್ಕೆ ಹಾಕುವಂತೆ ಪ್ರತಿಪಕ್ಷ ಬಿಜೆಪಿ ಒತ್ತಾಯಿಸಿದರೆ ವಿಧಾನಸಭಾಧ್ಯಕ್ಷರು ಅದನ್ನು ನಿರಾಕರಿಸುವಂತಿಲ್ಲ.ಹೀಗಾಗಿ ಹಣಕಾಸು ಬಿಲ್‍ನ್ನು ಮತಕ್ಕೆ ಹಾಕಿದರೆ, ಮತ್ತು ಅದೇ ಸಂದರ್ಭದಲ್ಲಿ ಜೆಡಿಎಸ್ ಶಾಸಕರ ತಂಡ ವಿಧಾನಸಭೆಯಲ್ಲಿಲ್ಲದೆ ಹೋದರೆ ಬಿಲ್ ಬಿದ್ದು ಹೋಗುತ್ತದೆ.

ಹಾಗೇನಾದರೂ ಹಣಕಾಸು ಬಿಲ್ ಬಿದ್ದು ಹೋದರೆ ಏಪ್ರಿಲ್‍ನಿಂದ ಯಾವ ಹಣವನ್ನೂ ಸರ್ಕಾರ ಬಿಡುಗಡೆ ಮಾಡಲು ಸಾಧ್ಯವಿಲ್ಲ. ಅಷ್ಟೇ ಮುಖ್ಯವಾಗಿ ಮುಖ್ಯಮಂತ್ರಿಗಳು ಕೂಡಾ ಇದರ ಹೊಣೆಗಾರಿಕೆ ಹೊತ್ತು ತಕ್ಷಣವೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕಾಗುತ್ತದೆ.

ಇವತ್ತು ರಾಜ್ಯ ಬಿಜೆಪಿ ನಾಯಕರು ಇದನ್ನೇ ಬಯಸುತ್ತಿರುವಾಗ ನಾವಾಗಿಯೇ ಅದಕ್ಕೆ ಅವಕಾಶ ಮಾಡಿಕೊಡುವುದು ಬೇಡ. ಅದರ ಬದಲು ಬಾಕಿ ಇರುವ ಮಸೂದೆಗಳು ಅಂಗೀಕಾರವಾಗುವಂತೆ ನೋಡಿಕೊಂಡು, ಬಜೆಟ್‍ಗೆ ಜುಲೈ ಮೂವತ್ತೊಂದರವರೆಗೆ ಲೇಖಾನುದಾನ ಪಡೆಯುವುದು ಒಳ್ಳೆಯದು.

ಒಂದೆರಡು ದಿನಗಳಲ್ಲಿ ಈ ಕಾರ್ಯ ಪೂರ್ಣಗೊಂಡರೆ ಜೆಡಿಎಸ್ ಶಾಸಕರು ಮುಂಬೈಗೆ ಹೋಗುವುದು, ತಮ್ಮ ಶಾಸಕರನ್ನು ಬಿಡುಗಡೆ ಮಾಡುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಒತ್ತಾಯ ಮಾಡುವುದು ಎಂದು ತೀರ್ಮಾನಿಸಲಾಗಿದೆ.

ಈ ರೀತಿ ಮುಂದುವರಿದರೆ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಇಡೀ ದೇಶದ ಗಮನ ಕರ್ನಾಟಕದ ರಾಜಕೀಯದ ಮೇಲೆ ಹರಿಯುತ್ತದಲ್ಲದೇ ಕೇಂದ್ರದ ಆಡಳಿತಾರೂಢ ಬಿಜೆಪಿ ಮತ್ತು ಬಿಜೆಪಿ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಮುಜುಗರಕ್ಕೆ ಸಿಲುಕುವಂತಾಗುತ್ತದೆ ಎಂಬುದು ಸಧ್ಯದ ಲೆಕ್ಕಾಚಾರ.

ಈ ಮಧ್ಯೆ ನಾರಾಯಣಗೌಡರು ನೇರಬಂಧನದಲ್ಲಿದ್ದರೂ ಇನ್ನೂ ಹಲ ಶಾಸಕರು ಪರೋಕ್ಷವಾಗಿ ಬಿಜೆಪಿ ನಾಯಕರ ನಿಯಂತ್ರಣದಲ್ಲಿದ್ದು, ಅವರ ನಿಗಾದಲ್ಲೇ ಪ್ರತಿದಿನ ಬೆಳಿಗ್ಗೆ ಮುಂಬಯಿಯಿಂದ ಬೆಂಗಳೂರಿಗೆ ಬಂದು ವಿಧಾನಸಭೆಗೆ ಹಾಜರಾಗುತ್ತಿದ್ದಾರೆ. ಸಂಜೆಯಾದೊಡನೆ ಮುಂಬೈಗೆ ತೆರಳುತ್ತಿದ್ದಾರೆ ಎಂಬ ಮಾಹಿತಿ ಸಿಎಂ ಕುಮಾರಸ್ವಾಮಿ ಅವರಿಗೆ ಸಿಕ್ಕಿದೆ.

ಹೀಗಾಗಿ ವಿಮಾನ ನಿಲ್ದಾಣದ ಬಳಿ ಇಂದು ಬೆಳಿಗ್ಗೆಯಿಂದಲೇ ಜೆಡಿಎಸ್ ಕಾರ್ಯಕರ್ತರನ್ನು ನಿಯೋಜಿಸಲಾಗಿದ್ದು ಮುಂಬಯಿ ಮತ್ತು ಬೆಂಗಳೂರು ನಡುವೆ ಸಂಚರಿಸುತ್ತಿರುವ ಶಾಸಕರು ಯಾರು? ಅನ್ನುವುದನ್ನು ಪತ್ತೆ ಮಾಡಲು ತೀರ್ಮಾನಿಸಲಾಗಿದೆ.

ಹಾಗೊಂದು ವೇಳೆ ಇದು ಗೊತ್ತಾದರೆ ಶಾಸಕರನ್ನು ಕೆಲ ಶಾಸಕರನ್ನು ಬೆಂಗಳೂರಿನಲ್ಲೇ ವಾಸ್ತವ್ಯ ಹೂಡುವಂತೆ ಮತ್ತು ತಮ್ಮ ನಿಗಾದಲ್ಲೇ ಇರುವಂತೆ ಬಿಜೆಪಿ ಸೂಚಿಸಬಹುದು.ಹೀಗಾಗಿ ಇನ್ನೂ ಬೇರೆ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮೂಲಗಳು ವಿವರ ನೀಡಿವೆ.

                       ಸಿಎಂ ಆರೋಪ

ಈ ಮಧ್ಯೆ ಇಂದು ವಿಧಾನಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ,ತಮ್ಮ ಪಕ್ಷದ ಶಾಸಕ ನಾರಾಯಣಗೌಡರನ್ನು ಮುಂಬಯಿಯಲ್ಲಿ ಬಿಜೆಪಿ ನಾಯಕರು ಬಂಧನದಲ್ಲಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

ಈಗಾಗಲೇ ಬಿಡುಗಡೆಯಾಗಿರುವ ಸಿಡಿಯ ಬಗ್ಗೆ ಎಲ್ಲ ಮರೆತು ಬಿಡುವಂತೆ ಮಾತನಾಡುತ್ತಿರುವ ವಿರೋಧಪಕ್ಷದ ಪ್ರಮುಖರು, ಇಲ್ಲಿ ಆ ಪ್ರಶ್ನೆಯಷ್ಟೇ ಅಲ್ಲ,ಜೆಡಿಎಸ್ ಶಾಸಕರನ್ನು ಮುಂಬಯಿಯಲ್ಲಿ ಕೂಡಿ ಹಾಕಿರುವುದು ಕೂಡಾ ಮುಖ್ಯ ಎಂಬುದನ್ನು ಗಮನಿಸಬೇಕು ಎಂದು ಹೇಳಿದರು.

ಯಾವಾಗ ಮುಖ್ಯಮಂತ್ರಿಗಳು ಈ ವಿಷಯವನ್ನು ಪ್ರಸ್ತಾಪಿಸಿದರೋ?ಆಗ ಸದನದಲ್ಲಿ ಭಾರೀ ಕೋಲಾಹಲವೆದ್ದಿದ್ದಲ್ಲದೆ, ಮುಖ್ಯಮಂತ್ರಿಗಳು ಈ ವಿಷಯ ಮಾತನಾಡುವುದಾದರೆ ಹಿಂದೆ ಯಡಿಯೂರಪ್ಪ ಅವರ ಸರ್ಕಾರವನ್ನು ಬೀಳಿಸಲು ನೀವು ಯಾರ್ಯಾರನ್ನು ಗೋವಾಕ್ಕೆ ಕರೆದುಕೊಂಡು ಹೋಗಿದ್ದಿರಿ ಎಂದು ಹೇಳಬೇಕಾಗುತ್ತದೆ ಎಂದು ಅಬ್ಬರಿಸತೊಡಗಿದರು.

ಈ ಹಂತದಲ್ಲಿ ಸದನವನ್ನು ಮುಂದೂಡಲಾಯಿತಾದರೂ ಆಪರೇಷನ್ ಕಮಲ ಕಾರ್ಯಾಚರಣೆ ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಿದ್ದು ಕರ್ನಾಟಕ ಮತ್ತೊಮ್ಮೆ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗುವ ಲಕ್ಷಣಗಳಿವೆ.


ಸಂಬಂಧಿತ ಟ್ಯಾಗ್ಗಳು

#Karnataka #Bjp #Jds #Fight


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ