ಕರ್ನಾಟಕಕ್ಕೆ ಮತ್ತೊಂದು ಹೊಸ ರಾಜಕೀಯ ಪಕ್ಷ

12-02-2019
ಲೋಕಸಭೆ ಚುನಾವಣೆ ಘೋಷಣೆಗೆ ದಿನಗಣನೆ ನಡೆದಿರುವ ಬೆನ್ನಲ್ಲೇ ರಾಜ್ಯದಲ್ಲಿ ಹೊಸತೊಂದು ರಾಜಕೀಯ ಪಕ್ಷ ಉದಯಿಸಿದೆ. ಲಂಚಮುಕ್ತ ಕರ್ನಾಟಕ ವೇದಿಕೆ ಅಧ್ಯಕ್ಷ ರವಿ ಕೃಷ್ಣಾ ರೆಡ್ಡಿ ನೇತ್ರತ್ವದಲ್ಲಿ ಕರ್ನಾಟಕ ಜನತಾ ರಂಗ ಎಂಬ ಪಕ್ಷ ಸ್ಥಾಪನೆಯಾಗಿದ್ದು, ಲೋಕಸಭಾ ಚುನಾವಣೆಯಲ್ಲಿ ಈ ಪಕ್ಷ 28 ಕ್ಷೇತ್ರಗಳಲ್ಲೂ ಸ್ಪರ್ಧಿಸಲಿದೆ.
ಲಂಚಮುಕ್ತ ಕರ್ನಾಟಕ ವೇದಿಕೆ ಅಧ್ಯಕ್ಷ ರವಿ ಕೃಷ್ಣಾ ರೆಡ್ಡಿ ಸುದ್ದಿಗೋಷ್ಠಿ ನಡೆಸಿ ಹೊಸ ಪಕ್ಷ ಸ್ಥಾಪನೆ ಕುರಿತು ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಹೆದಗೆಡುತ್ತಿರುವ ರಾಜಕೀಯ ಕ್ಷೇತ್ರವನ್ನು ಸ್ವಚ್ಛಗೊಳಿಸುವುದರ ಜೊತೆಗೆ ಆಡಳಿತದಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆ ತಂದು ಸಮಸ್ಯೆಗಳಿಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಈ ಪಕ್ಷ ಸ್ಥಾಪಿಸಲಾಗಿದೆ ಎಂದಿದ್ದಾರೆ.
ಪಕ್ಷದ ಧ್ಯೇಯ ಮತ್ತು ಸಿದ್ಧಾಂತ ಒಪ್ಪಿ ಸ್ವಚ್ಛ ಪ್ರಾಮಾಣಿಕ ಜನಪರ ರಾಜಕಾರಣದಲ್ಲಿ ವಿಶ್ವಾಸ ಇರುವವರು ಪಕ್ಷದ ಜೊತೆ ಕೈಜೋಡಿಸಬಹುದು ಎಂದು ರವಿ ಕೃಷ್ಣ ರೆಡ್ಡಿ ಬಹಿರಂಗ ಆಹ್ವಾನ ನೀಡಿದ್ದಾರೆ. ಈಗಾಗಲೆ ಪಕ್ಷದ ಹೆಸರು ನೋಂದಣಿ ಪ್ರಕ್ರಿಯೆ ಜಾರಿಯಲ್ಲಿದೆ ಎಂದರು. ಇನ್ನು ಮೊದಲ ಸುದ್ದಿಗೋಷ್ಠಿಯಲ್ಲಿಯೇ, ಸಂಭವನಿಯ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.
ಲಿಸ್ಟ್ ಪ್ರಕಾರ, ಮಂಡ್ಯದಲ್ಲಿ ಎಸ್.ಎಚ್.ಲಿಂಗೇಗೌಡ, ಧಾರವಾಡ ಅಥವಾ ಬಾಗಲಕೋಟಕ್ಕೆ ವಿಕಾಸ್ ಸೊಪ್ಪಿನ್, ತುಮಕೂರು ಮಲ್ಲಿಕಾರ್ಜುನ್ ಭಟ್ಟರಹಳ್ಳಿ,ಬೆಂಗಳೂರು ಗ್ರಾಮಾಂತರ ರಘು ಜಾಣಗೆರೆ ಅಭ್ಯರ್ಥಿಗಳಾಗಲಿದ್ದಾರೆ ಎಂದು ರವಿಕೃಷ್ಣಾ ರೆಡ್ಡಿ ಮಾಹಿತಿ ನೀಡಿದ್ದಾರೆ.
ಒಟ್ಟಿನಲ್ಲಿ ರಾಜ್ಯದಲ್ಲಿ ರಾಜಕೀಯ ಪಕ್ಷಗಳ ಸಂಖ್ಯೆ ಹೆಚ್ಚುತ್ತಲೆ ಇದೆ. ಇತ್ತೀಚಿಗಷ್ಟೇ ನಟ ಉಪೇಂದ್ರ ಹೊಸ ಪಕ್ಷವೊಂದನ್ನು ಸ್ಥಾಪಿಸಿದ್ದು, ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಾಗಿ ಪ್ರಕಟಿಸಿದ್ದರು. ಇದೀಗ ಈ ಸಾಲಿಗೆ ಕರ್ನಾಟಕ ಜನತಾರಂಗ ಸಹ ಸೇರ್ಪಡೆಯಾಗಿದೆ. ಚುನಾವಣೆ ಮುಗಿಯುವ ವೇಳೆ ಇನ್ನೆಷ್ಟು ಪಕ್ಷಗಳು ಹುಟ್ಟಿಕೊಳ್ಳಲಿದೆಯೋ ಕಾದು ನೋಡಬೇಕಿದೆ.
ಒಂದು ಕಮೆಂಟನ್ನು ಹಾಕಿ