ಆಡಿಯೋ ವಿವಾದ ಎಸ್‍ಐಟಿ ಮೂಲಕ ತನಿಖೆ

Audio Controversy Is Investigated by SIT

11-02-2019

ಸರ್ಕಾರ ಉರುಳಿಸಲು ಬೆಂಬಲವಾಗಿ ರಾಜೀನಾಮೆ ನೀಡಿದರೆ ಶಾಸಕ ಸ್ಥಾನಕ್ಕೆ ಯಾವ ಸಮಸ್ಯೆಯೂ ಆಗದಂತೆ ನೋಡಿಕೊಳ್ಳಲು ಐವತ್ತು ಕೋಟಿ ರೂ ನೀಡಿ ಸಭಾಧ್ಯಕ್ಷ ರಮೇಶ್ ಕುಮಾರ್ ಅವರನ್ನು ಬುಕ್ ಮಾಡಲಾಗಿದೆ ಎಂಬ ಮಾತುಕತೆಯ ವಿವರವುಳ್ಳ ಆಡಿಯೋ ವಿವಾದದ ಬಗ್ಗೆ ಎಸ್‍ಐಟಿ ಮೂಲಕ ಸಮಗ್ರ ತನಿಖೆ ನಡೆಸಲು ಸರ್ಕಾರ ನಿರ್ಧರಿಸಿದೆ.

ವಿಧಾನಸಭೆಯಲ್ಲಿಂದು ನಡೆದ ಸುಧೀರ್ಘ ಚರ್ಚೆಯ ನಂತರ ಮಾತನಾಡಿದ ಸಿಎಂ ಕುಮಾರಸ್ವಾಮಿ ಈ ವಿಷಯ ತಿಳಿಸಿದರಲ್ಲದೇ,ಇತ್ತೀಚಿನ ದಿನಗಳಲ್ಲಿ ನಡೆದ ರಾಜಕೀಯ ಬೆಳವಣಿಗೆಗಳು ಜನಪ್ರತಿನಿಧಿಗಳ ಬಗ್ಗೆ ಜನ ಅನುಮಾನಪಡುವಂತೆ ಮಾಡಿದೆ.ಇದಕ್ಕೆ ಇತಿಶ್ರೀ ಹಾಡಲೇಬೇಕಾದ ಅಗತ್ಯವಿದೆ.ಹೀಗಾಗಿ ತನಿಖೆಗೆ ಎಸ್.ಐ.ಟಿ ರಚನೆ ಮಾಡಲಾಗುವುದು ಎಂದು ಪ್ರಕಟಿಸಿದರು.

ಸರ್ಕಾರ ರಚನೆಯಾದಂದಿನಿಂದ ಇಲ್ಲಿಯವರೆಗೆ ಈ ಸರ್ಕಾರ ಅಭದ್ರವಾಗಿದೆ ಎಂಬ ಬಾವನೆಯನ್ನು ಮೂಡಿಸುವ ಪ್ರಯತ್ನಗಳಾಗುತ್ತಿವೆ.ಇದು ಸರಿಯಲ್ಲ.ನಾಡಿನ ಜನರ ಹಿತ ಕಾಪಾಡುವ ಕೆಲಸಕ್ಕಿಂತ ಸರ್ಕಾರ ಅಭದ್ರವಾಗಿದೆ ಎಂಬ ಬಾವನೆ ಬೆಳೆಯುವಂತೆ ಮಾಡಿದರೆ ಪರಿಸ್ಥಿತಿ ಏನಾಗುತ್ತದೆ?ಎಂದು ಅವರು ವಿಷಾದಿಸಿದರು.

ಇಂತಹ ಬೆಳವಣಿಗೆಗಳನ್ನು ಈಗ ತಡೆಯದಿದ್ದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಕಷ್ಟಕರವಾಗಲಿದೆ.ಹೀಗಾಗಿ ಎಸ್.ಐ.ಟಿ ರಚಿಸಿ ಸಮಗ್ರ ತನಿಖೆ ನಡೆಸುತ್ತೇವೆ.ಹದಿನೈದು ದಿನಗಳಲ್ಲಿ ವರದಿ ತರಿಸುತ್ತೇವೆ ಎಂದರು.

ಇದಕ್ಕೂ ಮುನ್ನ ಸದನ ಆರಂಭವಾಗುತ್ತಿದ್ದಂತೆಯೇ ವಿಷಯ ಪ್ರಸ್ತಾಪಿಸಿದ ಸಭಾಧ್ಯಕ್ಷ ರಮೇಶ್ ಕುಮಾರ್ ಅವರು,ನನಗೆ ಶುಕ್ರವಾರ ಮುಖ್ಯಮಂತ್ರಿಗಳು ಒಂದು ಪತ್ರ ಹಾಗೂ ಧ್ವನಿಸುರುಳಿಯೊಂದನ್ನು ನೀಡಿದರು.ದುರಾದೃಷ್ಟವೆಂದರೆ ಅದರಲ್ಲಿ ನಡೆದ ಚರ್ಚೆಯ ವಿವರಗಳು ನನ್ನನ್ನು ನಾಡಿನ ಜನ ಸಂಶಯದಿಂದ ನೋಡುವಂತಿದ್ದವು ಎಂದರು.

ಚರ್ಚೆ ನಡೆಸುವವರ ಪೈಕಿ ಒಬ್ಬರು ಒಂದು ಹಂತದಲ್ಲಿ,ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಶಾಸಕತ್ವ ಅನರ್ಹಗೊಳ್ಳುವುದಿಲ್ಲವೇ?ಎಂದು ಕೇಳುತ್ತಾರೆ.ಆಗ ಮತ್ತೊಬ್ಬರು,ಅದನ್ನೆಲ್ಲ ನಾವು ಮ್ಯಾನೇಜ್ ಮಾಡಿದ್ದೇವೆ.ಹಾಗಾಗದಂತೆ ನೋಡಿಕೊಳ್ಳಲು ಸಭಾಧ್ಯಕ್ಷ ರಮೇಶ್ ಕುಮಾರ್ ಅವರಿಗೆ ಐವತ್ತು ಕೋಟಿ ರೂ ನೀಡಿ ಬುಕ್ ಮಾಡಿದ್ದೇವೆ ಎನ್ನುತ್ತಾರೆ.

ಇದನ್ನು ಕೇಳಿದ ಮೇಲೆ ನಾನು ಬಾವನಾತ್ಮಕವಾಗಿ ಕುಸಿದು ಹೋಗಿದ್ದೇನೆ.ಆದರೂ ಸಂವಿಧಾನಾತ್ಮಕವಾಗಿ ಬಜೆಟ್ ಮುಖ್ಯವಾದುದರಿಂದ ಶುಕ್ರವಾರ ಅದನ್ನು ಮಂಡಿಸಲು ನಾನು ಅವಕಾಶ ನೀಡಿದೆ.ಆದರೆ ನಂತರ ಶನಿವಾರ,ಭಾನುವಾರ ರಜೆಯಾದ್ದರಿಂದ ಮನೆಯವರಿಗೆ ಮುಖ ತೋರಿಸಲಾಗದೆ ರೈಲು ಹತ್ತಿ ರಾಯಚೂರಿಗೆ ಹೋದೆ.ಆನಂತರ ರಸ್ತೆ ಮುಖಾಂತರವಾಗಿ ವಾಪಸ್ಸಾಗಿದ್ದೇನೆ.

ಅಂದ ಹಾಗೆ ಈ ಆಡಿಯೋದಲ್ಲಿ ನನ್ನ ಬಗ್ಗೆ ಆಡಿದ ಮಾತು,ಅದೇ ರೀತಿ ಈ ದೇಶದ ಪ್ರಧಾನಿಯನ್ನು ಸೇರಿಸಿರುವ ರೀತಿ,ಸಂವಿಧಾನಾತ್ಮಕ ಸಂಸ್ಥೆಗಳ ಮುಖ್ಯಸ್ಥರ ಬಗ್ಗೆ ಆಡಿರುವ ಮಾತು ನನಗೆ ಆತಂಕ ಮೂಡಿಸಿದೆ.

ಇವತ್ತು ನಾನು ವಾಸವಾಗಿರುವ ಬಾಡಿಗೆ ಮನೆಯನ್ನು ಒಮ್ಮೆ ಬಂದು ನೋಡಿ.ನಾನು ಐವತ್ತು ಕೋಟಿ ರೂಪಾಯಿ ಪಡೆದಿದ್ದರೆ ಒಂದೋ ಅದನ್ನು ಅಲ್ಲಿ ಮುಚ್ಚಿಡಬೇಕು.ಯಾವುದೇ ಕಾರಣಕ್ಕೂ ಎಸೆಯಲಾಗುವುದಿಲ್ಲವಲ್ಲ?ಆದರೂ ನನಗೆ ಈ ಬೆಳವಣಿಗೆಯ ನಂತರ ಮನಸ್ಸು ನೋವಿಗೀಡಾಗಿದೆ.

ಒಮ್ಮೆ ಕಮ್ಯೂನಿಸ್ಟರು ತಮ್ಮನ್ನು ಅವಕಾಶವಾದಿ ಎಂದು ಕರೆದಾಗ ಬಿಜೆಪಿಯ ಹಿರಿಯ ನಾಯಕ ವಾಜಪೇಯಿ ಅವರು,ನನ್ನನ್ನು ಕಳೆದ ನಲವತ್ತು ವರ್ಷಗಳಿಂದ ಇಲ್ಲಿ ನೋಡುತ್ತಿದ್ದೀರಿ.ಎರಡೇ ಸದಸ್ಯರ ಜತೆ ಕುಳಿತು ಕೆಲಸ ಮಾಡಿದ್ದನ್ನು ನೋಡಿದ್ದೀರಿ.ಆದರೂ ಈ ಮಾತು ಹೇಳುತ್ತಿದ್ದೀರಿ.ನಾನು ಈ ಕ್ಷಣವೇ ಸಾವು ಬಂದರೂ ಸ್ವೀಕರಿಸುತ್ತೇನೆ.ಆದರೆ ಅವಕಾಶವಾದಿ ಎಂದು ತೇಜೋವಧೆ ಮಾಡುವುದು ಸಾವಿಗಿಂತ ಹೆಚ್ಚಿನ ಕ್ರೌರ್ಯವಿದ್ದಂತೆ ಎನ್ನುತ್ತಾರೆ.

ನಾನು ನನ್ನ ತಂದೆ,ತಾಯಿಗೆ ಎಂಟನೆ ಮಗ.ಬಡತನದಲ್ಲಿದ್ದ ನಮ್ಮ ಕುಟುಂಬದ ಸದಸ್ಯರಿಗೆ ನಮ್ಮ ತಾಯಿ ಒಂದು ಮಾತು ಹೇಳುತ್ತಿದ್ದರು.ಉಳ್ಳವರ ಮನೆಗೆ ಹೋಗಿ ವಾಪಸ್ಸು ಬರುವಾಗ ಕಾಲನ್ನು ನೆಲಕ್ಕೆ ಹಾಕಿ ಉಜ್ಜಿ ಬಿಡಿ.ಯಾಕೆಂದರೆ ಅವರ ಮನೆಯ ಧೂಳೂ ನಮ್ಮ ಕಾಲಲ್ಲಿರಬಾರದು ಅಂತ.

ಅಂತಹ ತಾಯಿಯ ಮಗ ನಾನು.ಆಕೆಯೇ ನನ್ನ ಟೀಚರ್,ಫಿಲಾಸಫರ್,ಗೈಡ್,ಹೀಗಿರುವಾಗ ಐವತ್ತು ಕೋಟಿ ರೂಪಾಯಿಗಳ ಲಂಚವನ್ನು ಪಡೆದಿದ್ದೇನೆ ಎಂಬ ಮಾತು ಬಂದಿದೆ.ಮತ್ತದು ನಾಡಿನಾದ್ಯಂತ ಪಸರಿಕೊಂಡಿದೆ.ಹೀಗಿರುವಾಗ ನಾನು ನನ್ನ ಹೆಂಡತಿ,ಮಕ್ಕಳು,ಇರುವ ಅಣ್ಣನನ್ನು ಯಾವ ಮುಖ ಎತ್ತಿಕೊಂಡು ನೋಡಲಿ?ಎಂದು ಪ್ರಶ್ನಿಸಿದರು.

ಈ ಹಂತದಲ್ಲಿ ಮಧ್ಯೆ ಪ್ರವೇಶಿಸಿದ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ,ಆಡಿಯೋ ಕ್ಯಾಸೆಟ್‍ನಲ್ಲಿ ನಿಮಗೆ ಐವತ್ತು ಕೋಟಿ ರೂ ನೀಡಿ ಬುಕ್ ಮಾಡಲಾಗಿದೆ ಎಂಬ ಮಾತನ್ನು ಬಳಸಿರುವುದು ದುರದೃಷ್ಟಕರ.ಈ ಹಂತದಲ್ಲಿ ನಾವು ಸಭಾಧ್ಯಕ್ಷರ ಗೌರವವನ್ನು ಎತ್ತಿ ಹಿಡಿಯುವ ಅನಿವಾರ್ಯತೆಯಿದೆ ಎಂದು ಹೇಳಿದರು.

ತಮ್ಮ ಮಾತಿಗೆ ಪೂರಕವಾಗಿ ಸಂವಿಧಾನ ತಜ್ಞರಾದ ಕೌಲ್ ಅಂಡ್ ಶಕ್ದರ್ ಅವರ ಪುಸಕ್ತದಲ್ಲಿ ಪ್ರಸ್ತಾಪವಾಗಿರುವ ಸಭಾಧ್ಯಕ್ಷರ ವಿವೇಚನೆ ಎಂಬ ಅಧ್ಯಾಯದ ಬಗ್ಗೆ ವಿವರಿಸಿ,ಇಂತಹ ಸನ್ನಿವೇಶಗಳು ಬಂದಾಗ ಸಮಗ್ರ ತನಿಖೆ ನಡೆಸಬೇಕಾಗುತ್ತದೆ ಎಂದರು.

ಇದನ್ನು ಪುರಸ್ಕರಿಸಿ ಮಾತನಾಡಿದ ಸಭಾಧ್ಯಕ್ಷರು,ಸಂಸತ್ತಿನಲ್ಲಿ ಒಮ್ಮೆ ಕಾಂಗ್ರೆಸ್ ಸದಸ್ಯರಾದ ಮುದ್ಗಲ್ ಅವರ ವಿರುದ್ಧ ಆರೋಪ ಕೇಳಿ ಬಂದಾಗ ಆ ಕುರಿತು ತನಿಖೆ ನಡೆಯುತ್ತದೆ.ಅವರು ತಪ್ಪಿತಸ್ಥರು ಎಂಬುದು ಸಾಬೀತಾಗುತ್ತದೆ.ಹೀಗಾಗಿ ಅವರನ್ನು ಸಂಸದನ ಸ್ಥಾನದಿಂದ ಕಿತ್ತು ಹಾಕಲು ನೆಹರೂ ನಿರ್ಧರಿಸುತ್ತಾರೆ ಎಂದು ವಿವರಿಸಿದರು.

ಆದರೆ ಈ ವಿಷಯ ತಿಳಿಯುತ್ತಿದ್ದಂತೆಯೇ ಮುದ್ಗಲ್ ಅವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ.ಹೀಗೆ ರಾಜೀನಾಮೆ ನೀಡಿದ ಸದಸ್ಯರನ್ನು ಸದನದಿಂದ ಉಚ್ಚಾಟನೆ ಮಾಡುವುದು ಹೇಗೆ?ಎಂಬ ಮಾತು ಬಂದಾಗ ನೆಹರೂ ಅದನ್ನು ಒಪ್ಪುವುದಿಲ್ಲ.ಬದಲಿಗೆ,ಮುದ್ಗಲ್ ಅವರು ಬಹುಕಾಲದಿಂದ ಈ ಸದನದ ಸದಸ್ಯರಾಗಿರದೇ ಹೋಗಿದ್ದರೆ ಬೇರೆ ಮಾತು.ಆದರೆ ಅವರು ಈಗ ರಾಜೀನಾಮೆ ನೀಡಿದರು ಎಂದು ಕೈಗೊಳ್ಳಲುದ್ದೇಶಿಸಿರುವ ಕ್ರಮದಿಂದ ಹಿಂದೆ ಸರಿಯಲು ಸಾಧ್ಯವಿಲ್ಲ ಎನ್ನುತ್ತಾರೆ.

ಹೀಗಾಗಿ ಈ ಆಡಿಯೋ ಕ್ಯಾಸೆಟ್ ಆಲಿಸಿದ ನಂತರ ನಾನು ಅಲ್ಲಿದ್ದ ಎಲ್ಲ ವಿಷಯಗಳ ಬಗ್ಗೆ ಒಂದು ನಿರ್ಧಾರಕ್ಕೆ ಬರದಿದ್ದರೂ ನಿರ್ದಿಷ್ಟ ವ್ಯಕ್ತಿಯೊಬ್ಬರ ಮಾತಿನ ಬಗ್ಗೆ ಒಂದು ತೀರ್ಮಾನಕ್ಕೆ ಬಂದಿದ್ದೇನೆ.ಅವರು ಮಾತಿನ ನಡುವೆ ಈ ಹಿಂದೆಯೂ ನಾವು ಹನ್ನೆರಡು ಜನ ಸದಸ್ಯರ ಬಗ್ಗೆ ಅಂದಿನ ಸ್ಪೀಕರ್ ಒಂದು ತೀರ್ಮಾನ ತೆಗೆದುಕೊಂಡಿದ್ದರು.ಆದರೂ ನಾವು ಬಚಾವಾಗಲಿಲ್ಲವೇ ಎಂದು ಹೇಳುತ್ತಾರೆ.

ಇದನ್ನು ಕೇಳಿದರೆ ಅವರು ಈಗಲೂ ಈ ಸದನದಲ್ಲಿದ್ದಾರೆ.ಮತ್ತು ಇಂತಹ ವಿಷಯದಲ್ಲಿ ಭರವಸೆ ತುಂಬುವ ಮಾತನಾಡಿದ್ದಾರೆ ಎಂದಾಗ ಮರಳಿ ಕೃಷ್ಣಭೈರೇಗೌಡ ಅವರು,ವಿಷಯ ಸ್ಪಷ್ಟವಾಗಿರುವುದರಿಂದ ಒಂದು ವಿಷಯ ಸ್ಪಷ್ಟವಾಗಿದೆ.ಈಗ ಆಗಿರುವುದು ಕೇವಲ ಸಭಾಧ್ಯಕ್ಷರ ಹಕ್ಕುಚ್ಯುತಿಯಲ್ಲ.ಈ ಸದನದ ಹಕ್ಕುಚ್ಯುತಿ.ಹೀಗಾಗಿ ನೀವು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಲೇಬೇಕು ಎಂದರು.

ಆದರೆ ಮಧ್ಯೆ ಪ್ರವೇಶಿಸಿದ ಬಿಜೆಪಿಯ ಮಾಧುಸ್ವಾಮಿ,ಇದು ಸದನದಲ್ಲಿ ನಡೆದ ಘಟನೆಯಲ್ಲ.ಎಲ್ಲೋ,ಯಾರೋ ಮಾತನಾಡಿದ ಘಟನೆ.ಈ ಸದನದಲ್ಲಿ ಇಂತಹ ಘಟನೆ ನಡೆದಿದ್ದರೆ ಯಾವುದೇ ಹಿಂಜರಿಕೆಯಿಲ್ಲದೆ ಕ್ರಮ ಕೈಗೊಳ್ಳಲು ನಾವು ಬೆಂಬಲ ನೀಡುತ್ತಿದ್ದೆವು ಎಂದರು.

ಯಾಕೆಂದರೆ ಸಭಾಧ್ಯಕ್ಷರ ಗೌರವ ಎಂದರೆ ನಮ್ಮೆಲ್ಲರ ಗೌರವ.ಅವರ ಗೌರವಕ್ಕೆ ಚ್ಯುತಿಯಾದರೆ ಈ ಸದನದ ಗೌರವ ಚ್ಯುತಿಯಾದಂತೆ.ಆದರೆ ಆಡಿಯೋ ಕ್ಯಾಸೆಟ್‍ನಲ್ಲಿ ಮಾತನಾಡಿರುವವರು ಯಾರು?ಎಂಬುದು ಸ್ಪಷ್ಟವಾಗಿಲ್ಲ.ಹೀಗಾಗಿ ಇದರ ಕುರಿತು ಒಂದು ಸಮಗ್ರ ತನಿಖೆ ನಡೆಸಿ.ವರದಿ ತರಿಸಿ ಎಂದು ಹೇಳಿದರು.

ಯಾವುದೋ ಆವೇಶದಲ್ಲಿ,ಯಾವುದೋ ಸನ್ನಿವೇಶದಲ್ಲಿ ಯಾರೋ ಏನೋ ಮಾತನಾಡಿದ್ದಾರೆ ಎಂಬುದನ್ನು ಅಷ್ಟು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ.ಸಭಾಧ್ಯಕ್ಷರ ಬಗ್ಗೆ ಈ ಸದನದಲ್ಲಿ ಯಾರ್ಯಾರು ಏನೇನು ಮಾತನಾಡಿದ್ದಾರೆ ಎಂಬ ಕ್ಯಾಸೆಟ್ಟುಗಳನ್ನು ನಾನೂ ಬಹಿರಂಗಪಡಿಸಬಲ್ಲೆ ಎಂದರು.

ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕೃಷ್ಣ ಭೈರೇಗೌಡ,ಈ ವಿಷಯ ಎಲ್ಲೇ ನಡೆದಿರಲಿ,ಸದನದಲ್ಲಿ ನಡೆದರೆ ಮಾತ್ರ ಸಭಾಧಕ್ಷರ ಹಕ್ಕಿಗೆ ಚ್ಯುತಿಯಾಗಿದೆ ಎಂದಲ್ಲ.ಹಾಗಂತ ಸಂವಿಧಾನದಲ್ಲಿ ಹೇಳಿಲ್ಲ.ಎಲ್ಲಕ್ಕಿಂತ ಈ ವಿಷಯದ ಬಗ್ಗೆ ಜನ ಮಾತನಾಡುತ್ತಿದ್ದಾರೆ.ಹೀಗಾಗಿ ಇದನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದರು.

ಬಿಜೆಪಿಯ ಕೆ.ಎಸ್.ಈಶ್ವರಪ್ಪ ಅವರು ಮಾತನಾಡಿ,ಸಭಾಧ್ಯಕ್ಷರು ಈ ವಿಷಯದಲ್ಲಿ ಅವಸರದ ತೀರ್ಮಾನ ತೆಗೆದುಕೊಳ್ಳುವುದು ಬೇಡ.ಮೊದಲು ಒಂದು ತನಿಖೆ ನಡೆಯಲಿ.ಇದನ್ನು ಯಾರು ಮಾಡಿದ್ದಾರೆ ಎಂಬುದು ನನಗೆ ಗೊತ್ತಿದೆ ಎಂಬರ್ಥದಲ್ಲಿ ನೀವು ಮಾತನಾಡಿದರೆ ನಮಗೆ ಹೆದರಿಕೆಯಾಗುತ್ತದೆ.ಹಾಗಾಗದಿರಲಿ.ಕ್ರಮದ ಬದಲು ಮೊದಲು ತನಿಖೆ ನಡೆಯಲಿ ಎಂದರು.

ಈ ಹಂತದಲ್ಲಿ ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಅವರು ಮಾಜಿ ಸಿಎಂ ಸಿದ್ಧರಾಮಯ್ಯ ಅವರ ಕಡೆ ತಿರುಗಿ,ನಾನು ಈ ಜಾಗದಲ್ಲಿ ಕೂರುವಂತೆ ನೀವು ಸೂಚಿಸಿದವರು.ಇವತ್ತು ಈ ಜಾಗಕ್ಕೂ,ನನಗೂ ಯಾವ ಸಂಬಂಧವೂ ಇಲ್ಲದಂತೆ ಕೂತಿದ್ದೀರಿ.ಆ ಮೂಲಕ ನಡು ನೀರಿನಲ್ಲಿ ನನ್ನ ಕೈ ಬಿಟ್ಟಿದ್ದೀರಿ.ಒಂದು ಚಕಾರ ಎತ್ತುತ್ತಿಲ್ಲ ಎಂದು ವಿಷಾದಭರಿತವಾಗಿ ಹಾಸ್ಯ ಮಾಡಿದರು.

ತಕ್ಷಣ ಮಾತನಾಡಿದ ಸಿದ್ಧರಾಮಯ್ಯ ಅವರು,ನಿಮ್ಮ ಮೇಲೆ ಬಂದಿರುವ ಆರೋಪವನ್ನು ಈ ಸದನವೇ ನಂಬುವುದಿಲ್ಲ.ಯಾವತ್ತೂ ನೀವು ಆ ಜಾಗದಲ್ಲಿ ಕುಳಿತು ಸದನದ ಗೌರವ ಕಾಪಾಡಿದ್ದೀರಿ.ಹೀಗಾಗಿ ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಲು ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಿ ಎಂದರು.

ಇಂತಹ ಗುರುತರವಾದ ವಿಷಯವನ್ನು ಇಷ್ಟಕ್ಕೇ ಬಿಡಲಾಗುವುದಿಲ್ಲ.ಯಾಕೆಂದರೆ ಈ ವಿಷಯದ ಬಗ್ಗೆ ಈಗಾಗಲೇ ನಾಡಿನ ಜನ ಮಾತನಾಡುತ್ತಿದ್ದಾರೆ.ಅವರಿಗೆ ಸತ್ಯ ತಿಳಿಯಬೇಕಲ್ಲ?ಹಾಗಾಗದಿದ್ದರೆ ಹೇಗೆ?ಎಂದು ಪ್ರಶ್ನಿಸಿದರು.

ಸಧ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಜನ ಏನು ಮಾತನಾಡುತ್ತಿದ್ದಾರೆ?ಅನ್ನುವುದು ಎಲ್ಲರಿಗೂ ಗೊತ್ತಿದೆ.ಹೀಗಿರುವಾಗ ನಾವು ಸುಮ್ಮನಿದ್ದರೆ ಮತ್ತೆ ತಪ್ಪು ಸಂದೇಶ ರವಾನಿಸಿದಂತೆ ಆಗುವುದಿಲ್ಲವೇ?ಎಂದು ಪ್ರಶ್ನಿಸಿದರು.

ಕೃಷ್ಣ ಭೈರೇಗೌಡ ಪುನ: ಮಾತನಾಡಿ,ಸೀಸರನ ಪತ್ನಿ ಸಂಶಯಾತೀತಳಾಗಿರಬೇಕು.ಆಕೆ ತಪ್ಪು ಮಾಡದಿದ್ದರೂ ಇದು ಅನಿವಾರ್ಯ.ಹಾಗೆಯೇ ನಿಮ್ಮ ಮೇಲಿನ ಆರೋಪ ಸುಳ್ಳಾದರೂ ಅದರ ಬಗ್ಗೆ ಸಂಶಯ ಉಳಿಯಲು ಬಿಡಬಾರದು ಎಂದು ಮನವಿ ಮಾಡಿಕೊಂಡರು.

ಈ ಹಂತದಲ್ಲಿ ಮಾತನಾಡಿದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್,ಹಿಂದೆ ಜನಪ್ರತಿನಿಧಿಗಳನ್ನು ಜನರು ದೇವರು ಎಂದು ಕಾಣುವ ಕಾಲವಿತ್ತು.ಆದರೆ ಈಗ ಕಳ್ಳ,ಕಳ್ಳ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.ಹೀಗಾಗಿ ನಿಮ್ಮ ಮೇಲೆ ಕೇಳಿ ಬಂದ ಆರೋಪದಂತಹ ಘಟನೆಗಳು ಮರುಕಳಿಸದಂತೆ ನೀವು ಕ್ರಮ ಕೈಗೊಳ್ಳಬೇಕು.ಆದರೆ ನೀವು ಬಾವನಾತ್ಮಕ ಸ್ವಭಾವದವರು.ಹೀಗಾಗಿ ಅದನ್ನು ನಿಯಂತ್ರಣದಲ್ಲಿಟ್ಟುಕೊಂಡು ಒಂದು ನಿರ್ಧಾರಕ್ಕೆ ಬನ್ನಿ ಎಂದು ಮನವಿ ಮಾಡಿಕೊಂಡರು.

ತದ ನಂತರ ಚಿ.ಜ.ರಾಜೀವ್,ಹೆಚ್.ಕೆ.ಪಾಟೀಲ್,ಆರ್.ವಿ.ದೇಶಪಾಂಡೆ ಸೇರಿದಂತೆ ಹಲವು ಸದಸ್ಯರು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಮೇಲೆ ಮಾತನಾಡಿದ ಸಭಾಧ್ಯಕ್ಷ ರಮೇಶ್  ಕುಮಾರ್,ಸದನದ ಸದಸ್ಯರ ಅಭಿಪ್ರಾಯಗಳನ್ನು ಕೇಳಿದ್ದೇನೆ.ಹೀಗಾಗಿ ನಾನು ಯಾವುದೇ ತರಾತುರಿಯ ನಿರ್ಧಾರಕ್ಕೆ ಬರುವುದಿಲ್ಲ.ಆದರೆ ಮುಖ್ಯಮಂತ್ರಿಗಳಿಗೆ ಒಂದು ಸೂಚನೆ ಕೊಡಲು ಬಯಸುತ್ತೇನೆ.ಈ ಪ್ರಕರಣದ ಬಗ್ಗೆ ತನಿಖೆ ನಡೆಸಿ ಹದಿನೈದು ದಿನಗಳಲ್ಲಿ ವರದಿ ತರಿಸಿ ಎಂದರು.

ಸಭಾಧ್ಯಕ್ಷರ ಮಾತಿಗೆ ಸ್ಪಂದಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ,ಈ ವಿಷಯದಲ್ಲಿ ನಾವು ಸ್ಪಷ್ಟವಾದ ನಿರ್ಧಾರ ಕೈಗೊಳ್ಳಬೇಕಿದೆ.ಕೈಗೊಳ್ಳುತ್ತೇವೆ.ನೀವು ನೀಡಿದ ಸೂಚನೆಯಂತೆ ವಿಶೇಷ ತನಿಖಾ ದಳವನ್ನು ರಚನೆ ಮಾಡಿ ಹದಿನೈದು ದಿನಗಳಲ್ಲಿ ವರದಿ ತರಿಸುತ್ತೇವೆ ಎಂದರು.

ಈ ಹಂತದಲ್ಲಿ ಮಾಧುಸ್ವಾಮಿ,ಗೋವಿಂದ ಕಾರಜೋಳ್ ಸೇರಿದಂತೆ ಹಲವು ಸದಸ್ಯರು ಎಸ್.ಐ.ಟಿ ಬದಲು ಸದನ ಸಮಿತಿ ರಚಿಸಿ ಎಂದು ಸಲಹೆ ನೀಡಿದರಾದರೂ ಸಭಾಧ್ಯಕ್ಷರು ಅದನ್ನೊಪ್ಪಲಿಲ್ಲ.

ಇದರಿಂದ ಕ್ರೋಧಗೊಂಡ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು,ನಮಗೆ ಈ ಸರ್ಕಾರದ ಬಗ್ಗೆ ನಂಬಿಕೆಯಿಲ್ಲ.ತನಿಖೆ ಏಕಮುಖವಾಗಬಾರದು ಎಂದು ಆಕ್ಷೇಪ ವ್ಯಕ್ತಪಡಿಸಿದರಾದರೂ ಅದನ್ನೊಪ್ಪದ ಸ್ಪೀಕರ್ ರಮೇಶ್ ಕುಮಾರ್ ಅವರು ಸದನವನ್ನು ಮಧ್ಯಾಹ್ನದವರೆಗೆ ಮುಂದೂಡಿದರು.


ಸಂಬಂಧಿತ ಟ್ಯಾಗ್ಗಳು

#B.S Y #Audio #Kumarswamy #Sit


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ