ಆಡಿಯೋ ವಿಚಾರ ಸದನದಲ್ಲಿ ಕಣ್ಣೀರಿಟ್ಟ ಸ್ಪೀಕರ್

11-02-2019
ಆಫರೇಶನ್ ಕಮಲ ವಿಚಾರವಾಗಿ ಚರ್ಚೆಗೀಡಾಗಿರುವ ಆಡಿಯೋದಲ್ಲಿ ತಮ್ಮ ಹೆಸರು ಉಲ್ಲೇಖವಾಗಿರೋದಿಕ್ಕೆ ಕೆಂಡಾಮಂಡಲರಾಗಿರುವ ಸಭಾಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ವಿಧಾನಸಭಾ ಕಲಾಪದಲ್ಲಿ ಈ ವಿಚಾರ ಪ್ರಸ್ತಾಪಿಸಿದ್ದಾರೆ. ಈ ಬಗ್ಗೆ ಸುದೀರ್ಘವಾಗಿ ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್, ಕೊನೆಯಲ್ಲಿ ಹಣಕಾಸಿನ ಆರೋಪ ಮಾಡಿರುವುದಕ್ಕೆ ನೊಂದು ಕಣ್ಣೀರಿಟ್ಟ ಘಟನೆಗೂ ಸದನ ಸಾಕ್ಷಿಯಾಯಿತು.
ಸೋಮವಾರ ಸದನ ಆರಂಭವಾಗುತ್ತಿದ್ದಂತೆ ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್, ಸದನಕ್ಕೆ ಬರುವ ಮುನ್ನ ಮತ್ತೊಮ್ಮೆ ಆಡಿಯೋ ಕೇಳಿಸಿಕೊಂಡು ಬಂದಿದ್ದೇನೆ. ನನ್ನ ಬಗ್ಗೆಯೇ ಮಾತುಗಳು ಕೇಳಿಬಂದಿವೆ. ನಾನು ಇನ್ನು ಬಾಡಿಗೆ ಮನೆಯಲ್ಲಿ ಇದ್ದೇನೆ. ಅಂತಹದರಲ್ಲಿ ಅಷ್ಟೊಂದು ದುಡ್ಡಿನ ಆರೋಪ ಮಾಡಲಾಗಿದೆ. ಅಷ್ಟೊಂದು ಹಣ ಇದ್ದಿದ್ದರೇ ನಾನ್ಯಾಕೆ ಬಾಡಿಗೆ ಮನೆಯಲ್ಲಿ ಇರುತ್ತಿದ್ದೆಎಂದು ಭಾವುಕರಾಗಿ ನುಡಿದಿದ್ದಾರೆ.
ಅಷ್ಟೇ ಅಲ್ಲ ನೊಂದು ಮಾತನಾಡಿರುವ ಸ್ಪೀಕರ್ ರಮೇಶ್ ಕುಮಾರ್, ಈ ಮಾತನ್ನು ಹೇಳಿದ ಶಾಸಕ ಇರಬೇಕು. ಇಲ್ಲ ನಾನು ಇರಬೇಕು. ಇಲ್ಲದಿದ್ದರೇ ಈ ಅವಿರೋಧ ಸ್ಪೀಕರ್ ಹುದ್ದೆ ನಿಭಾಯಿಸಲು ನನ್ನಿಂದ ಸಾಧ್ಯವಿಲ್ಲ ಎಂದು ರಮೇಶ್ ಕುಮಾರ್ ಸದನದಲ್ಲೇ ಕಣ್ಣೀರಿಟ್ಟಿದ್ದಾರೆ.
ಈ ವೇಳೆ ರಮೇಶ್ ಕುಮಾರ್ ಬೆಂಬಲಕ್ಕೆ ಧಾವಿಸಿದ ಸಚಿವ ಕೃಷ್ಣಭೈರಿ ಗೌಡ್,ಇದು ಹಕ್ಕುಚ್ಯುತಿಯಾಗುತ್ತದೆ. ಸದನದ ಹೊರಗೆ ಮಾತನಾಡಿದ್ದು, ಕೂಡ ಹಕ್ಕುಚ್ಯುತಿಯಾಗುತ್ತದೆ. ಉನ್ನತ ಸ್ಥಾನದಲ್ಲಿರುವವರು ಹಾಗೇ ನಡೆದುಕೊಂಡಿದ್ದು ಸರಿಯಲ್ಲ ಎಂದರು. ಅಧಿವೇಶನದ ತುಂಬೆಲ್ಲ ಇದೇ ವಿಚಾರ ಚರ್ಚೆಗೆ ಗ್ರಾಸವಾಗಿದ್ದು, ಮಾಜಿ ಸಿಎಂ ಸಿದ್ಧರಾಮಯ್ಯ, ಶಾಸಕ ಮಾಧುಸ್ವಾಮಿ ಸೇರಿದಂತೆ ಹಲವರು ಸ್ಪೀಕರ್ ರಮೇಶ್ ಕುಮಾರ್ ಬೆಂಬಲಕ್ಕೆ ನಿಂತಿದ್ದಾರೆ.
ಒಂದು ಕಮೆಂಟನ್ನು ಹಾಕಿ