ಡಾ. ಪರಮೇಶ್ವರ್ ಅವರು ರಾಜ್ಯದ ಮುಖ್ಯಮಂತ್ರಿಯಾಗಬೇಕು ವಿ.ಸೋಮಣ್ಣ

11-02-2019
ಇಂದಲ್ಲ ನಾಳೆ ಉಪಮುಖ್ಯಮಂತ್ರಿಯಾಗಿರುವ ಡಾ. ಪರಮೇಶ್ವರ್ ಅವರು ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂದು ಬಿಜೆಪಿ ಶಾಸಕ ವಿ.ಸೋಮಣ್ಣ ಹೇಳಿರುವುದು ರಾಜಕೀಯ ವಲಯದಲ್ಲಿ ಅಚ್ಚರಿಗೆ ಕಾರಣವಾಗಿದೆ.
ಬಳ್ಳಾರಿ ಲೋಕಸಭಾ ಉಪಚುನಾವಣೆ ಸಂದರ್ಭದಲ್ಲಿ ಶಾಸಕ ಬಿ.ರಾಮುಲು ಪರ ಒಲವು ವ್ಯಕ್ತಪಡಿಸಿ ರಾಮುಲು ಮುಖ್ಯಮಂತ್ರಿ ಯಾಗಬೇಕು ಎನ್ನುವ ಮೂಲಕ ಸೋಮಣ್ಣ ಯಡಿಯೂರಪ್ಪ ಹಾಗೂ ತಮ್ಮ ನಡುವಿನ ಸಂಘರ್ಷ ಹಾಗೆಯೇ ಇದೆ ಎನ್ನುವುದನ್ನು ಎತ್ತಿ ತೋರಿಸಿದ್ದರು. ಇದೀಗ ಕಾಂಗ್ರೆಸ್ ನಾಯಕ ಪರಮೇಶ್ವರ್ ಪರ ಒಲವು ತೋರಿದ್ದಾರೆ.
ನಗರದ ವಿಜಯನಗರ ಮಾರುತಿ ಮಂದಿರ ಬಳಿ ಮಾತನಾಡಿದ ಅವರು, ಪರಮೇಶ್ವರ್ ಅವರು ಮೈತ್ರಿ ಸರ್ಕಾರದಲ್ಲಿ ಬೇರೆಲ್ಲ ಸಚಿವರಿಗಿಂತಲೂ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ.ಹೀಗಾಗಿ ಮುಖ್ಯಮಂತ್ರಿಯಾಗುವ ಅರ್ಹತೆ ಇದೆ.2004 ರಲ್ಲಿಯೇ ಅವರು ಮುಖ್ಯಮಂತ್ರಿಯಾಗಬೇಕಿತ್ತು ಎಂದರು.
ತಾವು ಈ ಹಿಂದೆ ರಾಮುಲು ಪರ ಮಾತನಾಡಿದ್ದನ್ನು ಮಾಧ್ಯಮದವರು ದೊಡ್ಡ ಸುದ್ದಿಮಾಡಿ ಯಡಿಯೂರಪ್ಪ ಹಾಗೂ ತಮ್ಮ ಮಧ್ಯೆ ಭಿನ್ನಾಭಿಪ್ರಾಯಕ್ಕೆ ಎಡೆಮಾಡಿಕೊಟ್ಟಿದ್ದರು. ಈಗ ಪರಮೇಶ್ವರ್ ಬಗ್ಗೆ ಮಾತನಾಡಿದ್ದನ್ನು ದೊಡ್ಡ ಸುದ್ದಿ ಮಾಡುವುದು ಬೇಡ ಎನ್ನುವ ಮೂಲಕ ಮತ್ತೆ ಯಡಿಯೂರಪ್ಪ ಅವರ ಕಾಲೆಳೆಯುವ ಪ್ರಯತ್ನವನ್ನು ಸೋಮಣ್ಣ ಮಾಡಿದರು.
ಕೆಲವು ದಿನಗಳ ಹಿಂದೆ ಆಪರೇಷನ್ ಕಮಲಕ್ಕೆ ಪ್ರತಿಯಾಗಿ ಕುಮಾರಸ್ವಾಮಿ ನಡೆಸುತ್ತಿರುವ ಕೌಂಟರ್ ಆಪರೇಷನ್ ನಲ್ಲಿ ವಿ.ಸೋಮಣ್ಣ ಹೆಸರು ಸಹ ಕೇಳಿಬಂದಿತ್ತು.ಅಲ್ಲದೇ ಈ ಹಿಂದಿನಿಂದಲೂ ಕೂಡ ಸೋಮಣ್ಣ ಹಾಗೂ ಯಡಿಯೂರಪ್ಪ ಸಂಬಂಧ ಅಷ್ಟಕಷ್ಟೆ. ಇದೀಗ ಪರಮೇಶ್ವರ್ ಹೆಸರನ್ನು ಮುಖ್ಯಮಂತ್ರಿ ಹುದ್ದೆಗೆ ಪ್ರಸ್ತಾಪಿಸುವ ಮೂಲಕ ಬಿಎಸ್ವೈಗೆ ಪರೋಕ್ಷ ಸಂದೇಶ ರವಾನಿಸಿದ್ದಾರೆ. ಸೋಮಣ್ಣ ಹೇಳಿಕೆ ಬಿಜೆಪಿ ಸೇರಿದಂತೆ ಕಾಂಗ್ರೆಸ್ ವಲಯದಲ್ಲಿಯೂ ರಾಜಕೀಯ ಚರ್ಚೆಗೆ ಕಾರಣವಾಗಿದೆ.
ಒಂದು ಕಮೆಂಟನ್ನು ಹಾಕಿ