ರಾಜಕೀಯ ನಿವೃತ್ತಿ ಪಡೆಯಲು ಸಿದ್ಧ ಬಿ.ಎಸ್.ಯಡಿಯೂರಪ್ಪ

 B.S Yeddyurappa Ready For Political Retirement

08-02-2019

ನನ್ನ ವಿರುದ್ಧ ಮುಖ್ಯಮಂತ್ರಿ ಕುಮಾರಸ್ವಾಮಿ ಮಾಡಿರುವ ಆರೋಪ ಸತ್ಯವಾಗಿದ್ದರೆ ರಾಜಕೀಯ ನಿವೃತ್ತಿ ಪಡೆಯಲು ನಾನು ಸಿದ್ಧ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದಾರೆ.

ಆಪರೇಷನ್ ಕಮಲ ಕುರಿತಂತೆ ಗುರುಮಟ್ಕಲ್ ಜೆಡಿಎಸ್ ಶಾಸಕ ನಾಡಗೌಡ ಅವರ ಪುತ್ರರೊಂದಿಗೆ ಬಿಎಸ್‍ವೈ ಮಾತುಕತೆ ನಡೆಸಿದ್ದಾರೆ ಎನ್ನಲಾದ ಆಡಿಯೋ ಟೇಪ್‍ನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಬಿಡುಗಡೆ ಮಾಡಿರುವುದಕ್ಕೆ ಯಡಿಯೂರಪ್ಪ ನೀಡಿರುವ ಪ್ರತಿಕ್ರಿಯೆ ಇದು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿಡುಗಡೆ ಮಾಡಿರುವ ಆಡಿಯೋ ಫೇಕ್. ನನ್ನ ವಿರುದ್ಧ ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು. ಕುರ್ಚಿ ಉಳಿಸಿಕೊಳ್ಳಲು ಕಥೆ ಕಟ್ಟುತ್ತಿದ್ದಾರೆ. ಅವರಿಗೆ ಸಿಎಂ ಆಗಿ ಮುಂದುವರೆಯುವ ಯಾವುದೇ ನೈತಿಕತೆ ಇಲ್ಲ ಎಂದು ಬಿಎಸ್‍ವೈ ಗುಡುಗಿದ್ದಾರೆ.

ಜೆಡಿಎಸ್‍ನ 20ಕ್ಕೂ ಹೆಚ್ಚು ಶಾಸಕರು ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಎಂದು ಒಪ್ಪಿಕೊಳ್ಳುತ್ತಿಲ್ಲ. ಇಂತಹ ಸಂದರ್ಭದಲ್ಲಿ ಅವರು ರಾಜೀನಾಮೆ ನೀಡಿ ಮನೆಗೆ ಹೋಗುವುದು ಸೂಕ್ತ ಎಂದರು.

ನಾನು ತುರ್ತು ಕಾರ್ಯ ನಿಮಿತ್ತ ದೇವದುರ್ಗಕ್ಕೆ ತೆರಳಿದ್ದು ಸತ್ಯ. ಆದರೆ ಈ ಸಂದರ್ಭದಲ್ಲಿ ಯಾವ ಶಾಸಕರೊಂದಿಗೂ ಮಾತನಾಡಿಲ್ಲ. ಯಾರನ್ನೂ ಭೇಟಿಯಾಗಿಲ್ಲ ಎಂದು ಬಿಎಸ್‍ವೈ ಸ್ಪಷ್ಟಪಡಿಸಿದರು.

ನಮ್ಮ ಆಪರೇಷನ್ ಕಮಲದ ಬಗ್ಗೆ ಮಾತನಾಡುವ ಮುಖ್ಯಮಂತ್ರಿಗಳು ಸರ್ಕಾರ ರಕ್ಷಿಸಲು ಬಿಜೆಪಿಯಲ್ಲೇ ನಮ್ಮ ಕಡೆಯವರು ಇದ್ದಾರೆ ಎನ್ನುತ್ತಾರೆ. ಇದರ ಜೊತೆಗೆ ಬಿಜೆಪಿ ಶಾಸಕ ಸುಭಾಷ್ ಗುತ್ತೇದಾರ್ ಅವರೊಂದಿಗೆ ನೀವು ಮಾತನಾಡಿರುವುದು ಸುಳ್ಳೇ ಎಂದು ಎಚ್‍ಡಿಕೆ ಅವರನ್ನು ಬಿಎಸ್‍ವೈ ಪ್ರಶ್ನಿಸಿದ್ದಾರೆ.

ಸರ್ಕಾರ ರಚನೆಯಾಗಿ ಎಂಟು ತಿಂಗಳಾದರೂ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ. ರೈತರ ಸಾಲಮನ್ನಾ ಮಾಡುತ್ತೇವೆ ಎಂದು ರೈತರ ಕಣ್ಣಿಗೆ ಮಣ್ಣೆರಚುತ್ತಾ ಕಾಲ ಕಳೆಯುತ್ತಿದ್ದೀರಾ.. ನಿಮಗೆ ನೈತಿಕತೆ ಇದೆಯೇ ಎಂದು ಯಡಿಯೂರಪ್ಪ ಕಿಡಿಕಾರಿದರು.

ಬಜೆಟ್ ಮಂಡನೆಯಲ್ಲಿ ನಾವು ಪಾಲ್ಗೊಳ್ಳುತ್ತೇವೆ. ಬಜೆಟ್ ಮೇಲಿನ ಚರ್ಚೆಯಲ್ಲೂ ಪಾಲ್ಗೊಂಡು ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಬಂಡವಾಳವನ್ನು ಜನರ ಮುಂದಿಡುತ್ತೇವೆ ಎಂದು ಹೇಳಿದರು.

ಇಂದಿನ ಬಜೆಟ್ ಅಧಿವೇಶನದಲ್ಲಿ ಜೆಡಿಎಸ್-ಕಾಂಗ್ರೆಸ್‍ನ 10ಕ್ಕೂ ಹೆಚ್ಚು ಶಾಸಕರು ಪಾಲ್ಗೊಳ್ಳುವುದಿಲ್ಲ. ಮುಂದೇನಾಗುವುದು ಎಂದು ಕಾದು ನೋಡಿ ಎಂದು ಬಿಎಸ್‍ವೈ ಮತ್ತೊಂದು ಬಾಂಬ್ ಸಿಡಿಸಿದರು.


ಸಂಬಂಧಿತ ಟ್ಯಾಗ್ಗಳು

#B.S Y #Political #Retirement #Karnataka


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ