ನಾಳೆ ದೋಸ್ತಿ ಬಜೆಟ್ ಗೆ ರಾಜಕೀಯ ಗ್ರಹಣ

 Political seizure for the Dosti budget

07-02-2019

ಕಾಂಗ್ರೆಸ್‌ನ ಅತೃಪ್ತ ಶಾಸಕರು ಇಂದೂ ವಿಧಾನಸಭೆಯ ಕಲಾಪಗಳಿಂದ ದೂರ ಉಳಿದಿರುವುದರಿಂದ ದೋಸ್ತಿ ಸರ್ಕಾರದ ಅಭದ್ರತೆ ಮುಂದುವರೆದಿದ್ದು, ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ನಿಗದಿಯಂತೆ ನಾಳೆ 2019 – 20ರ ಸಾಲಿನ ಬಜೆಟ್ ಮಂಡನೆ ಮಾಡುವುದಕ್ಕೆ ರಾಜಕೀಯ ಗ್ರಹಣ ಹಿಡಿದಂತಾಗಿದೆ

ಹೆಜ್ಜೆಹೆಜ್ಜೆಗೂ ದೋಸ್ತಿ ನಾಯಕರ ಎದೆಬಡಿತವನ್ನು ಜೋರು ಮಾಡುವಲ್ಲಿ ಯಶಸ್ವಿಯಾಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ತಂಡ, ಕುಮಾರಸ್ವಾಮಿ ನಾಳೆ ನಿಗದಿಯಂತೆ ಬಜೆಟ್ ಮಂಡನೆ ಮಾಡಲು ಅವಕಾಶ ನೀಡಬಾರದು, ಅಧಿವೇಶನ ಮುಗಿಯುವ ಮುನ್ನವೇ 8 ರಿಂದ 10 ಶಾಸಕರ ರಾಜೀನಾಮೆ ಕೊಡಿಸಬೇಕು ಎಂಬ ಕಸರತ್ತಿನಲ್ಲಿ ತೊಡಗಿದ್ದಾರೆ.

ಅತೃಪ್ತ ಶಾಸಕರ ತಂಡದ ನಾಯಕ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಇತರ ಶಾಸಕರಾದ ಡಾ. ಉಮೇಶ್ ಜಾಧವ್, ಮಹಂತೇಶ್ ಕುಮಟಳ್ಳಿ, ಬಿ. ನಾಗೇಂದ್ರ, ಜೆ.ಎನ್. ಗಣೇಶ್ ಸದನಕ್ಕೆ ಇಂದು ಗೈರು ಹಾಜರಾಗಿರುವುದು ಬಿಜೆಪಿಯ ಆಪರೇಷನ್ ಲೋಟಸ್ ರಾಕೆಟ್‌ಗೆ ಮತ್ತಷ್ಟು ಬಲ ಬಂದಂತಾಗಿದೆ.

ದೋಸ್ತಿ ಸರ್ಕಾರವನ್ನು ಶತಾಯ – ಗತಾಯ ಅಸ್ಥಿರಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮುಂದುವರೆಸಿರುವ ಬಿಜೆಪಿ ನಾಯಕರು ಜೆಡಿಎಸ್, ಕಾಂಗ್ರೆಸ್ ನಾಯಕರನ್ನು ಕಾದಬಾಣಲಿ ಮೇಲೆ ನಿಲ್ಲಿಸಿದ್ದಾರೆ.

ಅತೃಪ್ತ ಶಾಸಕರಿಂದ ರಾಜೀನಾಮೆ ಕೊಡಿಸುವುದರ ಜೊತೆಗೆ ದೋಸ್ತಿ ಸರ್ಕಾರದ ಪಾಲುದಾರ ಪಕ್ಷಗಳಲ್ಲಿ ಬಿಜೆಪಿ ಪರ ಒಲವು ಇರುವ ಶಾಸಕರನ್ನು ತನ್ನ ತೆಕ್ಕೆಗೆ ಎಳೆದುಕೊಂಡು ಸರ್ಕಾರವನ್ನು ಅಲ್ಪಮತಕ್ಕೆ ಇಳಿಸುವ ಕಾರ್ಯತಂತ್ರವನ್ನು ಸದ್ದುಗದ್ದಲವಿಲ್ಲದೆ ಈ ಪಕ್ಷದ ನಾಯಕರು ಹೆಣೆದಿದ್ದಾರೆ. ಮೊದಲಿಗೆ ಸರ್ಕಾರವನ್ನು ಅಲ್ಪಮತಕ್ಕೆ ಇಳಿಸಬೇಕು. ಅನಂತರ ತಮ್ಮ ನೇತೃತ್ವದ ಸರ್ಕಾರವನ್ನು ರಚಿಸಬೇಕು ಎಂಬ ಆಲೋಚನೆಯುಳ್ಳವರಾಗಿದ್ದಾರೆ.

ಇದೇ ಉದ್ದೇಶಕ್ಕಾಗಿ ನಿನ್ನೆಯಿಂದ ಆರಂಭವಾಗಿರುವ ವಿಧಾನ ಮಂಡಲದ ಬಜೆಟ್ ಅಧಿವೇಶನದಲ್ಲಿ ನಿಗದಿತ ಕಲಾಪಗಳು ನಡೆಯದಂತೆ, ಅಡ್ಡಿಪಡಿಸುವಲ್ಲಿ ಬಿಜೆಪಿ ಸದಸ್ಯರು ಯಶಸ್ವಿಯಾಗಿದ್ದಾರೆ. ನಿನ್ನೆಯಿಂದ ಆರಂಭಿಸಲಾಗಿರುವ ಧರಣಿಯನ್ನು ಇಂದೂ ಮುಂದುವರೆಸಿದ್ದು, ದೋಸ್ತಿ ಸರ್ಕಾರದ ನಾಯಕರ ಹೃದಯ ಬಡಿತವನ್ನು ಹೆಚ್ಚು ಮಾಡಿದ್ದಾರೆ.

ಬಿಜೆಪಿ ಪರ ಒಲವು ಹೊಂದಿರುವ ಕೆಲವು ಶಾಸಕರು ಮುಂಬೈನಲ್ಲಿ ಬೀಡುಬಿಟ್ಟಿದ್ದು, ಅಲ್ಲಿಂದ ವಾಪಾಸ್ ಆದ ಕೂಡಲೇ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಲಿದ್ದಾರೆ ಎಂದು ಸ್ವತಃ ಬಿಜೆಪಿ ನಾಯಕರೇ ಹೇಳಿಕೊಂಡಿದ್ದಾರೆ. ಅತೃಪ್ತರ ಸಾಲಿನಲ್ಲಿ ಗುರುತಿಸಿಕೊಂಡಿರುವ ಮತ್ತೊಬ್ಬ ಕಾಂಗ್ರೆಸ್ ಶಾಸಕ ಡಾ. ಕೆ. ಸುಧಾಕರ್, ಮುಂಬೈಗೆ ಇಂದು ತೆರಳಿದ್ದು, ಸಮಾನ ಮನಸ್ಕರ ಗುಂಪಿಗೆ ಸೇರ್ಪಡೆಯಾಗಿದ್ದಾರೆಂದು ಹೇಳಲಾಗಿದೆ.

ಅಧಿವೇಶನ ಮುಗಿಯುವ ಮುನ್ನ ಕನಿಷ್ಟ 8 ರಿಂದ 10 ಶಾಸಕರ ರಾಜೀನಾಮೆ ಪತ್ರಗಳನ್ನು ಸಭಾಧ್ಯಕ್ಷರಿಗೆ ತಲುಪಿಸಬೇಕು ಎಂಬ ಉಮೇದಿನಲ್ಲಿ ಬಿಜೆಪಿ ನಾಯಕರು ರಾಜಕೀಯ ತಂತ್ರಗಾರಿಕೆಯನ್ನು ಅನುಷ್ಠಾನಕ್ಕೆ ತರುವಲ್ಲಿ ಗಂಭೀರ ಪ್ರಯತ್ನ ಮಾಡುತ್ತಿದ್ದಾರೆ.

ವಿಧಾನಸಭೆ ಕಲಾಪ ಆರಂಭಕ್ಕೆ ಮುನ್ನ, ಇಂದು ಬೆಳಿಗ್ಗೆ ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಅಧಿವೇಶನ ಸುಗಮವಾಗಿ ನಡೆಯಲು ಬಿಡಬಾರದು ಎಂಬ ಒಂದಂಶದ ನಿರ್ಣಯವನ್ನು ಕೈಗೊಳ್ಳಲಾಯಿತು. ಅದನ್ನು ಅಕ್ಷರಶಃ ಜಾರಿಗೆ ತರುವಲ್ಲಿ ಯಶಸ್ಸನ್ನೂ ತಮ್ಮದಾಗಿಸಿಕೊಂಡರು.

ನಿಗದಿತ ಅವಧಿಗಿಂತ ತಡವಾಗಿ ಅಧಿವೇಶನ ಆರಂಭವಾದಾಗ ಸಭಾಧ್ಯಕ್ಷ ರಮೇಶ್ ಕುಮಾರ್ ಕಾಗದ ಪತ್ರಗಳನ್ನು ಮಂಡಿಸುವಂತೆ ಸಂಬಂಧಪಟ್ಟ ಸಚಿವರಿಗೆ ಸೂಚಿಸಿದರು.

ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಸಚಿವರ ಪರವಾಗಿ ಕಾಗದ ಪತ್ರಗಳನ್ನು ಸದನದಲ್ಲಿ ಮಂಡಿಸಿದರು. ಬಳಿಕ ಸಭಾಧ್ಯಕ್ಷರು, ಜಂಟಿ ಅಧಿವೇಶನ ಉದ್ದೇಶಿಸಿ ಮಾಡಿದ ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಸಲ್ಲಿಸುವ ಕಲಾಪಕ್ಕೆ ಅನುವು ಮಾಡಿಕೊಟ್ಟರು.

ಕಾಂಗ್ರೆಸ್ ಶಾಸಕ ಎಸ್.ಟಿ. ಸೋಮಶೇಖರ್ ವಂದನಾ ನಿರ್ಣಯದ ಮೇಲಿನ ಚರ್ಚೆಯನ್ನು ಆರಂಭಿಸುತ್ತಿದ್ದಂತೆ, ಬಿಜೆಪಿ ಸದಸ್ಯರು, ಸಭಾಧ್ಯಕ್ಷರ ಪೀಠದ ಮುಂದಿನ ಬಾವಿಗಿಳಿದು ಧರಣಿ ಮುಂದುವರೆಸಿ ಬಹುಮತ ಕಳೆದುಕೊಂಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ನೈತಿಕತೆಯನ್ನು ಕಳೆದುಕೊಂಡಿದ್ದಾರೆ. ಈ ಸರ್ಕಾರಕ್ಕೆ ನಮ್ಮ ಧಿಕ್ಕಾರ ಎಂದು ಘೋಷಣೆ ಕೂಗಿ ಗದ್ದಲ ಎಬ್ಬಿಸಿದರು.

ಕೃಷಿ ಸಚಿವ ಕೃಷ್ಣಬೈರೇಗೌಡ ಮತ್ತಿತರರು ಬಿಜೆಪಿ ಸದಸ್ಯರ ಧೋರಣೆಯನ್ನು ಕಟು ಶಬ್ಧಗಳಲ್ಲಿ ಖಂಡಿಸಿದರು. ಈ ಹಂತದಲ್ಲಿ ಸಭಾಧ್ಯಕ್ಷ ರಮೇಶ್ ಕುಮಾರ್
ಧರಣಿ ಕೈಬಿಟ್ಟು ಸುಗಮ ಕಲಾಪಗಳಿಗೆ ಅವಕಾಶ ಮಾಡಿಕೊಡಬೇಕು ಎಂದು ಸಭಾಧ್ಯಕ್ಷ ರಮೇಶ್ ಕುಮಾರ್ ಮಾಡಿದ ಮನವಿಗೆ ಬಿಜೆಪಿ ಶಾಸಕರು ಸೊಪ್ಪು ಹಾಕಲಿಲ್ಲ.

ಧರಣಿ ಮುಂದುವರೆದು ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸುಳಿವನ್ನು ಮನಗಂಡ ಸಭಾಧ್ಯಕ್ಷರು ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಿ ಹೊರನಡೆದರು. ಮತ್ತೆ ಸದನ ಸಮಾವೇಶಗೊಂಡಾಗ ಪರಿಸ್ಥಿತಿಯಲ್ಲಿ ಬದಲಾವಣೆ ಕಾಣದ ಹಿನ್ನೆಲೆಯಲ್ಲಿ ಕಲಾಪವನ್ನು ನಾಳೆಗೆ ಮುಂದೂಡಲಾಯಿತು


ಸಂಬಂಧಿತ ಟ್ಯಾಗ್ಗಳು

#Political #Dosti #Seizure #Budget


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ