ಆಫರೇಶನ್ ಕಮಲಕ್ಕೆ ದೋಸ್ತಿ ಸರ್ಕಾರದ ಪ್ರತಿತಂತ್ರ ಏನು ಗೊತ್ತಾ?

07-02-2019
ಬಜೆಟ್ ಅಧಿವೇಶನಕ್ಕೆ ಅಡ್ಡಿಪಡಿಸಿದ ಆರೋಪದಡಿ ಬಿಜೆಪಿಯ ಹತ್ತು ಶಾಸಕರನ್ನು ಅಮಾನತು ಮಾಡಲು ಕಾಂಗ್ರೆಸ್-ಜೆಡಿಎಸ್ ನೇತೃತ್ವದ ದೋಸ್ತಿ ಸರ್ಕಾರ ಯೋಜನೆ ರೂಪಿಸಿದೆ ಎಂದು ಹೇಳಲಾಗಿದೆ.
ಅತೃಪ್ತರನ್ನು ಇಟ್ಟುಕೊಂಡು ಆಟ ಆಡುತ್ತಿರುವ ಬಿಜೆಪಿಗೆ ದೋಸ್ತಿಗಳು ತಿರುಗೇಟು ನೀಡಲು ಸಜ್ಜಾಗಿದ್ದು, ಕಲಾಪಕ್ಕೆ ಅಡ್ಡಿಪಡಿಸಿದ್ದಾರೆ ಎಂಬ ವಿಚಾರವನ್ನು ಸ್ಪೀಕರ್ ರಮೇಶ್ ಕುಮಾರ್ ಅವರೊಂದಿಗೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಅಧಿವೇಶನ ಮುಗಿಯುವವರೆಗೂ ಬಿಜೆಪಿಯ 10 ಸದಸ್ಯರನ್ನು ಅಮಾನತು ಮಾಡುವಂತೆ ಚರ್ಚಿಸಿದ್ದಾರೆ ಎಂದು ಹೇಳಲಾಗಿದೆ.
ಸ್ಪೀಕರ್ ವಿವೇಚನಾಧಿಕಾರ ಬಳಸಿ 10 ಬಿಜೆಪಿ ಶಾಸಕರ ಅಮಾನತ್ತಿಗೆ ಯೋಜನೆ ಹಾಕಿಕೊಂಡಿದ್ದಾರೆ. ದೋಸ್ತಿ ಮುಖಂಡರ ಮಾತಿಗೆ ಸ್ಪೀಕರ್ ಮಣಿದರೆ, ಬಜೆಟ್ಗೆ ಅಡ್ಡಿಪಡಿಸುವ ಬಿಜೆಪಿ ಯೋಜನೆಗೆ ದೋಸ್ತಿ ತಿರುಮಂತ್ರ ನೀಡಿದಂತಾಗುತ್ತದೆ.
ವಿತ್ತ ವಿಧೇಯಕಕ್ಕೆ ಅನುಮೋದನೆ ಪಡೆದು ಮುಂದಿನ ನಿರ್ಧಾರ ಕೈಗೊಳ್ಳಲು ದೋಸ್ತಿಗಳು ತೀರ್ಮಾನಿದ್ದಾರೆ. ಸದನದಲ್ಲಿ ಹಾಜರಿರುವ ಸದಸ್ಯರ ಸಂಖ್ಯೆ ಆಧಾರದ ಮೇಲೆ ವಿತ್ತ ವಿಧೇಯಕಕ್ಕೆ ಅನುಮೋದನೆ ನೀಡಲಾಗುತ್ತದೆ. ಬಿಜೆಪಿಯ 10 ಸದಸ್ಯರು ಸದನದಿಂದ ಅಮಾನತು ಆದರೆ ಯಾವ ಅಡ್ಡಿ ಇಲ್ಲದೆ ವಿತ್ತ ವಿಧೇಯಕ ಅಂಗೀಕಾರವಾಗುತ್ತದೆ. ನಾಳೆ ಸ್ಪೀಕರ್ ಕೈಗೊಳ್ಳುವ ನಿರ್ಧಾರದ ಮೇಲೆ ಬಜೆಟ್ ಭವಿಷ್ಯ ನಿಂತಿದೆ.
ವಿಧಾನಸಭೆ ಕಲಾಪವನ್ನು ಸ್ಪೀಕರ್ ರಮೇಶ್ ಕುಮಾರ್ ಅವರು ನಾಳೆ ಮಧ್ಯಾಹ್ನ12.30ಕ್ಕೆ ಮುಂದೂಡಿದ್ದಾರೆ. ಬಿಜೆಪಿ ಶಾಸಕರ ಗದ್ದಲ ಹಿನ್ನೆಲೆಯಲ್ಲಿ ಕಲಾಪ ಮುಂದೂಡಿಕೆ ಮಾಡಲಾಗಿದೆ.
ಒಂದು ಕಮೆಂಟನ್ನು ಹಾಕಿ