ಅಪ್ಪು ಕಟೌಟ್‍ಗೆ ಮದ್ಯಾಭಿಷೇಕ

Fans awards beer to Puneet Rajkumar Cutout

07-02-2019

ಇತ್ತೀಚಿಗೆ ಸಿನಿಮಾ ನಟರ ಅಭಿಮಾನಿಗಳು ಅತಿರೇಕದಿಂದ ವರ್ತಿಸುತ್ತಿರುವ ಘಟನೆಗಳು ಮತ್ತೆ ಮತ್ತೆ ವರದಿಯಾಗುತ್ತಲೇ ಇದೆ. ಇದಕ್ಕೆ ಪುನೀತ್ ರಾಜಕುಮಾರ್ ಅಭಿಮಾನಿಗಳು ಕೂಡ ಹೊರತಲ್ಲ. ಇಂದು ಪವರ್ ಸ್ಟಾರ್  ಪುನೀತ್ ರಾಜಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರ ಪ್ರಪಂಚದಾದ್ಯಂತ ಬಿಡುಗಡೆ ಕಂಡಿದೆ. ಬೆಂಗಳೂರಿನಲ್ಲೂ ಮಧ್ಯರಾತ್ರಿಯಿಂದಲೇ ನಟಸಾರ್ವಭೌಮ ಚಿತ್ರ ಪ್ರದರ್ಶನ ಆರಂಭವಾಗಿದ್ದು, ಪುನೀತ್ ಅಭಿಮಾನಿಗಳು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಆದರೆ ಮೆಜೆಸ್ಟಿಕ್‍ನಲ್ಲಿ ಅಭಿಮಾನಿಯೊಬ್ಬ ಪುನೀತ್ ರಾಜಕುಮಾರ್ ಪೋಸ್ಟರ್ ಮೇಲೆ ಬಿಯರ್‍ನಿಂದ ಅಭಿಷೇಕ ಮಾಡಿದ್ದು, ಇದೀಗ ಚರ್ಚೆಗೆ ಗ್ರಾಸವಾಗಿದೆ. 

ಸಹಜವಾಗಿಯೇ ಚಿತ್ರಗಳು ಬಿಡುಗಡೆಯಾದ ವೇಳೆಯಲ್ಲಿ ನಟರ ಆಳೆತ್ತರದ ಕಟೌಟ್‍ಗಳನ್ನು ನಿಲ್ಲಿಸಲಾಗುತ್ತದೆ. ಇದಕ್ಕೆ ಪೂಜೆ ಸಲ್ಲಿಸೋದು, ಸಿಹಿ ಹಂಚೋದು ಹಾಗೂ ಹಾಲು ಅಭಿಷೇಕ ಮಾಡಿ ಅಭಿಮಾನಿಗಳು ಸಂಭ್ರಮಿಸೋದು ಸಾಮಾನ್ಯವಾದ ಸಂಗತಿ. ಆದರೆ ಇವತ್ತು ಅಭಿಮಾನಿಯೊಬ್ಬರು ಒಂದು ಹೆಜ್ಜೆ ಮುಂದೆ ಹೋಗಿ ಅಪ್ಪು ಪೋಸ್ಟರ್‍ಗೆ ಬಿಯರ್ ಅಭಿಷೇಕ ಮಾಡಿದ್ದಾರೆ. 

ಮೆಜೆಸ್ಟಿಕ್ ತ್ರಿವೇಣಿ ಚಿತ್ರಮಂದಿರದಲ್ಲಿ ಪುನೀತ್ ಕಟೌಟ್‍ಗೆ ಮದ್ಯದ ಅಭಿಷೇಕ ನಡೆದಿದ್ದು, ಮಾಧ್ಯಮಗಳು ಇದನ್ನು ವರದಿ ಮಾಡಿವೆ. ಅಭಿಮಾನಿಗಳ ಈ ಅತಿರೇಕದ ವರ್ತನೆ ಸಾರ್ವಜನಿಕರಿಗೆ ಮುಜುಗರ ತಂದಿದ್ದು, ಅಭಿಮಾನ ಅತಿಯಾಗಬಾರದು. ಎಲ್ಲರೂ ತಮ್ಮ ಸಾಮಾಜಿಕ ಜವಾಬ್ದಾರಿ ಅರಿತುಕೊಳ್ಳಬೇಕು. ಹೀಗೆಲ್ಲ ಮದ್ಯದ ಅಭಿಷೇಕ ಮಾಡೋದು ಉತ್ತಮ ಸಂದೇಶವಲ್ಲ ಎಂದು ಸಾರ್ವಜನಿಕರು ಅಸಮಧಾನ ವ್ಯಕ್ತಪಡಿಸಿದ್ದಾರೆ. ಆದರೆ ಅಭಿಮಾನದ ಹುಚ್ಚುಹೊಳೆಯಲ್ಲಿ ಯುವಕರು ಇಂಥ ಎಡವಟ್ಟುಗಳನ್ನು ಮಾಡುತ್ತಲೇ ಇದ್ದು, ಇದಕ್ಕೆ ನಟರು ಹೇಗೆ ಪ್ರತಿಕ್ರಿಯಿಸುತ್ತಾರೆ ಕಾದು ನೋಡಬೇಕಿದೆ. 
 


ಸಂಬಂಧಿತ ಟ್ಯಾಗ್ಗಳು

#Natasarvabhouma #Beer #Puneeth Rajkumar #Abishek


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ