ಸಮ್ಮಿಶ್ರ ಸರ್ಕಾರ ಸಂಕಷ್ಟಕ್ಕೆ ?

 Coalition Government Hardship?

07-02-2019

ಆಡಳಿತಾರೂಢ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಅತೃಪ್ತರ ಸಂಖ್ಯೆ ಕ್ಷಣ ಕ್ಷಣಕ್ಕೂ ಏರಿಕೆಯಾಗುತ್ತಿರುವುದರಿಂದ ಯಾವುದೇ ಸಂದರ್ಭದಲ್ಲೂ ಸರ್ಕಾರ ಅಸ್ಥಿರಗೊಳ್ಳುವ ಭೀತಿಯನ್ನು ಎದುರಿಸುತ್ತಿದೆ.

ಈಗಾಗಲೇ ಕಾಂಗ್ರೆಸ್‍ನಿಂದ ದೂರ ಸರಿದಿರುವ ಏಳು ಮಂದಿ ಶಾಸಕರ ಜತೆ ಜೆಡಿಎಸ್‍ನ ಕೆಲ ಶಾಸಕರೂ ಕೂಡ ಸರ್ಕಾರಕ್ಕೆ ಕೈ ಕೊಡಲು ಸಿದ್ಧರಾಗಿರುವುದರಿಂದ ಸರ್ಕಾರ ಉಳಿಯಲಿದೆಯೇ, ಇಲ್ಲವೇ ಪತನಗೊಳ್ಳಲಿದೆಯೇ ಎಂಬ ಆತಂಕ ಶುರುವಾಗಿದೆ.

ಶತಾಯ-ಗತಾಯ ಅತೃಪ್ತ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರ ಉಳಿಸಿಕೊಳ್ಳಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸೇರಿದಂತೆ ಅನೇಕರು ನಡೆಸುತ್ತಿರುವ ಪ್ರಯತ್ನಗಳು ಫಲ ಕೊಟ್ಟಿಲ್ಲ.

ಶಾಸಕರನ್ನು ಸತತವಾಗಿ ಸಂಪರ್ಕಿಸಲು ಯತ್ನಿಸುತ್ತಿದ್ದರಾದರೂ ಕಾಂಗ್ರೆಸ್ ಮತ್ತು ಜೆಡಿಎಸ್‍ನ ಯಾವುದೇ ಮುಖಂಡರ ದೂರವಾಣಿ ಕರೆಗಳನ್ನು ಭಿನ್ನಮತೀಯರು ಸ್ವೀಕರಿಸದೇ ಇರುವುದು ಸರ್ಕಾರದಲ್ಲಿ ಆತಂಕ ಸೃಷ್ಟಿಸಿದೆ.ಇದರಿಂದ ಆತಂಕಗೊಂಡಿರುವ ಉಭಯ ಪಕ್ಷಗಳ ಮುಖಂಡರು, ಇಂದು ವಿಧಾನಸಭೆಯಲ್ಲಿ ರಹಸ್ಯವಾಗಿ ಮಾತುಕತೆ ನಡೆಸಿದ್ದಾರೆ. ಹೇಗಾದರೂ ಮಾಡಿ ಅತೃಪ್ತ ಶಾಸಕರನ್ನು ಕರೆತಂತು ಉಂಟಾಗಿರುವ ಬಿಕ್ಕಟ್ಟನ್ನು ಶಮನಗೊಳಿಸಲು ನಿರಂತರವಾಗಿ ಪ್ರಯತ್ನ ನಡೆಸುತ್ತಿದ್ದಾರೆ.

ಈ ಬೆಳವಣಿಗೆಗಳ ನಡುವೆ ಜೆಡಿಎಸ್‍ನಲ್ಲೂ ಕೆಲವು ಅತೃಪ್ತ ಶಾಸಕರು ಕೈ ಕೊಡಬಹುದು ಎಂಬ ಭೀತಿ ಎದುರಾಗಿದೆ. ಈವರೆಗೂ ಕೆ.ಆರ್.ಪೇಟೆ ಶಾಸಕ ನಾರಾಯಣಗೌಡ ಮಾತ್ರ ಜೆಡಿಎಸ್‍ನಿಂದ ದೂರ ಸರಿದು ಅತೃಪ್ತರ ಬಣ ಸೇರಿಕೊಂಡಿದ್ದರು. ಇಂದು ಇನ್ನೂ ಎರಡರಿಂದ ಮೂರು ಮಂದಿ ಶಾಸಕರು ಜೆಡಿಎಸ್‍ನಿಂದ ದೂರ ಸರಿದು ಬಿಜೆಪಿ ಕಡೆ ಮುಖ ಮಾಡಿರುವುದು ದಳಪತಿಗಳಲ್ಲಿ ತಲ್ಲಣ ಉಂಟು ಮಾಡಿದೆ.

ಮೂಲಗಳ ಪ್ರಕಾರ ಜೆಡಿಎಸ್‍ನಿಂದ ಮೂರರಿಂದ ನಾಲ್ಕು ಮಂದಿ ಶಾಸಕರು ಯಾವುದೇ ಕ್ಷಣದಲ್ಲಾದರೂ ಪಕ್ಷಕ್ಕೆ ಕೈ ಕೊಟ್ಟು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ವದಂತಿ ವಿಧಾನಸೌದದಲ್ಲಿ ಕೇಳಿ ಬರುತ್ತಿದೆ.ತುಮಕೂರು ಹಾಗೂ ಉತ್ತರ ಕರ್ನಾಟಕ ಭಾಗದ ಇಬ್ಬರು ಶಾಸಕರು ಬಿಜೆಪಿ ನಾಯಕರ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ. ಜೆಡಿಎಸ್‍ನಿಂದ ಅಸಮಾಧಾನಗೊಂಡಿರುವ ಶಾಸಕರ ಮನವೊಲಿಸುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಚಿವರಾದ ಎಚ್.ಡಿ.ರೇವಣ್ಣ, ಸಿ.ಎಸ್.ಪುಟ್ಟರಾಜು, ಬಂಡಪ್ಪ ಕಾಶಂಪುರ್ ಹೆಗಲಿಗೆ ಜವಾಬ್ದಾರಿ ಹೊರಿಸಿದ್ದಾರೆ.

ಆದರೆ, ನಾರಾಯಣಗೌಡ ಮತ್ತಿತರ ಶಾಸಕರು ಇದುವರೆಗೂ ಎಲ್ಲಿದ್ದಾರೆ, ಯಾರ ಜತೆ ಇದ್ದಾರೆ, ಅವರ ಮುಂದಿನ ನಡವಳಿಕೆಗಳ ಬಗ್ಗೆ ಗುಟ್ಟು ಬಿಟ್ಟುಕೊಡದೇ ಇರುವುದು ಜೆಡಿಎಸ್‍ನಲ್ಲೂ ಆತಂಕ ತಂದಿದೆ.

ಶತಾಯಗತಾಯ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲೇಬೇಕೆಂದು ಹಠಕ್ಕೆ ಬಿದ್ದಿರುವ ಪ್ರತಿಪಕ್ಷ ಬಿಜೆಪಿ ನಾಳೆ ಅತೃಪ್ತ ಶಾಸಕರ ರಾಜೀನಾಮೆ ಕೊಡಿಸುವ ಮೂಲಕ ಸರ್ಕಾರಕ್ಕೆ ಖೆಡ್ಡ ತೋಡಲು ಸಜ್ಜಾಗಿದೆ.ಹಣಕಾಸು ಖಾತೆಯನ್ನುಹೊಂದಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನಾಳೆ ಬಜೆಟ್ ಮಂಡನೆ ಮಾಡಲಿದ್ದಾರೆ. ಇದಕ್ಕೂ ಮುನ್ನವೇ ಭಿನ್ನಮತೀಯ ಶಾಸಕರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ.

ಬಜೆಟ್ ಮಂಡನೆಯಾದರೆ ಸರ್ಕಾರಕ್ಕೆ ಕೀರ್ತಿ ಸಿಗುತ್ತದೆ ಎಂಬ ಹಿನ್ನೆಲೆಯಲ್ಲಿ 7-10 ಶಾಸಕರಿಂದ ರಾಜೀನಾಮೆ ಕೊಡಿಸಲು ಬಿಜೆಪಿ ಮುಂದಾಗಿದೆ. ನಾಳೆ ಈ ಸುದ್ದಿಯೇ ಪ್ರಧಾನವಾಗಿ ಬಜೆಟ್ ಸುದ್ದಿ ಹಳ್ಳ ಹಿಡಿಸುವ ಕಾರಣಕ್ಕಾಗಿ ಬಿಜೆಪಿ ಈ ತಂತ್ರ ರೂಪಿಸಿದೆ.

ಕಾಂಗ್ರೆಸ್‍ನ ಭಿನ್ನಮತೀಯ ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಬಿ.ನಾಗೇಂದ್ರ, ಉಮೇಶ್ ಜಾಧವ್, ಬಿ.ಸಿ.ಪಾಟೀಲ್, ಪ್ರತಾಪ್‍ಗೌಡ ಪಾಟೀಲ್, ಬಸವರಾಜ್ ದದ್ದಲ್ ಸೇರಿದಂತೆ ಮತ್ತತರರು ರಾಜೀನಾಮೆ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಸದ್ಯಕ್ಕೆ ಈ ಎಲ್ಲರೂ ಮುಂಬೈನಲ್ಲಿ ವಾಸ್ತವ್ಯ ಹೂಡಿದ್ದು, ಇಂದು ಸಂಜೆ ಅಥವಾ ನಾಳೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ನಂತರ ವಿಧಾನಸಭೆಯ ಸ್ಪೀಕರ್ ರಮೇಶ್‍ಕುಮಾರ್ ಅವರನ್ನು ಭೇಟಿ ಮಾಡಿ ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ಅಧಿಕೃತವಾಗಿ ಸಲ್ಲಿಸಲಿದ್ದಾರೆ.

ಬಂಡೆದ್ದಿರುವ ಭಿನ್ನಮತೀಯರನ್ನು ಹತ್ತಿಕ್ಕಲು ಕಾಂಗ್ರೆಸ್ ಅನರ್ಹತೆಯ ಬ್ರಹ್ಮಾಸ್ತ್ರವನ್ನು ಬಳಸಲು ಮುಂದಾಗಿರುವುದರಿಂದ ಅದಕ್ಕೂ ಮುನ್ನವೇ ಈ ಎಲ್ಲಾ ಶಾಸಕರು ರಾಜೀನಾಮೆ ಕೊಡಲಿದ್ದಾರೆ.ಭಿನ್ನಮತೀಯ ಶಾಸಕರ ಜೊತೆ ಬಿಜೆಪಿಯ ಡಾ. ಅಶ್ವಥ್ ನಾರಾಯಣ, ಬಾಲಚಂದ್ರ ಜಾರಕಿಹೊಳಿ ಮತ್ತಿತರರು ಕೈ ಜೋಡಿಸಿದ್ದು, ಅವರನ್ನು ಬೆಂಗಳೂರಿಗೆ ಕರೆತರುವ ಹೊಣೆಗಾರಿಕೆಯನ್ನು ಹೊತ್ತುಕೊಂಡಿದ್ದಾರೆ.

ಜೆಡಿಎಸ್‍ನ ಕೆಆರ್‍ಪೇಟೆ ಶಾಸಕ ನಾರಾಯಣಗೌಡ ಅವರ ಮುಂದಿನ ನಡೆ ಏನೆಂಬುದು ಇದುವರೆಗೂ ದೃಢಪಟ್ಟಿಲ್ಲ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವರೋ ಇಲ್ಲವೇ ಪಕ್ಷದ ವರಿಷ್ಠರ ಮಾತಿಗೆ ಕಟ್ಟುಬಿದ್ದು ಹಿಂತಿರುಗುವರೋ ಎಂಬುದು ಗೊತ್ತಾಗುತ್ತಿಲ್ಲ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಒಂದು ವೇಳೆ ಎಲ್ಲವೂ ನಿರೀಕ್ಷೆಯಂತೆ ನಡೆದು ನಾಳೆ ಭಿನ್ನಮತೀಯರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಸಮ್ಮಿಶ್ರ ಸರ್ಕಾರ ಸಂಕಷ್ಟಕ್ಕೆ ಸಿಲುಕುತ್ತದೆ. ಅಲ್ಲದೆ ಬಜೆಟ್‍ಗೂ ಯಾವುದೇ ಮಾನ್ಯತೆ ಸಿಗುವುದಿಲ್ಲ. ಸರ್ಕಾರ ಅಲ್ಪ ಮತಕ್ಕೆ ಕುಸಿದಿದೆ ಎಂದು ಪ್ರತಿಪಕ್ಷ ಬಿಜೆಪಿ ಕುಮಾರಸ್ವಾಮಿಯವರ ರಾಜೀನಾಮೆಗೆ ವಿಧಾನಮಂಡಲದ ಉಭಯ ಸದನಗಳಲ್ಲಿ ಹೋರಾಟ ನಡೆಸಲು ಸಜ್ಜಾಗಿದೆ.


ಸಂಬಂಧಿತ ಟ್ಯಾಗ್ಗಳು

#Karnataka # Coalition #Government #Hardship


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ