ಬಿಜೆಪಿ ನಂಬಿದವರಿಗೆ ಕಾದಿದೆ ಪಶ್ಚಾತ್ತಾಪ ಸಚಿವ ಡಿ.ಕೆ. ಶಿವಕುಮಾರ್

sorry for those who believe Bjp

06-02-2019

ಬಿಜೆಪಿ ನಂಬಿಕೊಂಡು ಕಣ್ಣಾಮುಚ್ಚಾಲೆ ಆಡುತ್ತಿರುವವರು ಮುಂದೆ ಪಶ್ಚಾತ್ತಾಪ ಪಡುತ್ತಾರೆ ಎಂದು ಜಲ ಸಂಪನ್ನೂಲ, ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.ಬಿಜೆಪಿಯವರು ಏನೇ ಆಟ ಆಡಿದರೂ ಸಮ್ಮಿಶ್ರ ಸರಕಾರವನ್ನು ಅಲ್ಲಾಡಿಸಲು ಸಾಧ್ಯವಿಲ್ಲ. ಅವರೂ ಪಶ್ಚಾತ್ತಾಪ ಪಡುತ್ತಾರೆ. ಅವರನ್ನು ನಂಬಿಕೊಂಡಿರುವವರೂ ಪಶ್ಚಾತ್ತಾಪ ಪಡುತ್ತಾರೆ. ಹಾಗೆ ನೋಡುತ್ತಾ ಇರಿ ಎಂದು ರಾಜ್ಯಪಾಲರು ವಿಧಾನ ಮಂಡಲ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ನಂತರ ಆಂಗ್ಲ ರಾಷ್ಟ್ರೀಯ ಚಾನೆಲ್ ಗಳಿಗೆ ಬೆಂಗಳೂರಿನಲ್ಲಿ ಬುಧವಾರ ನೀಡಿದ ಪ್ರತಿಕ್ರಿಯೆಯಲ್ಲಿ ತಿಳಿಸಿದರು.

ಕಾಂಗ್ರೆಸ್ ಹೈಕಮಾಂಡ್ ಇದೆ. ಶಾಸಕಾಂಗ ಪಕ್ಷ ಇದೆ. ಜತೆಗೆ ಪಕ್ಷಾಂತರ ನಿಷೇಧ ಕಾಯಿದೆ ಇದೆ. ಪಕ್ಷಾಂತರಿಗಳಿಗೆ ಚೆನ್ನೈನ ಹೈಕೋರ್ಟ್ ಯಾವ ರೀತಿ ಪಾಠ ಕಲಿಸಿದೆ ಎಂಬುದು ಕಣ್ಣ ಮುಂದೆಯೇ ಇದೆ. ಹೀಗಾಗಿ ಕಾಂಗ್ರೆಸ್ ಶಾಸಕರು ತೊಂದರೆಯನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ ಎಂದು ತಮಗೆ ಅನಿಸುವುದಿಲ್ಲ ಎಂದು ಹೇಳಿದರು.

ಬಿಜೆಪಿಯ ಮೂರ್ನಾಲ್ಕು ಶಾಸಕರು ಮುಂಬಯಿಯಲ್ಲಿ ಕುಳಿತುಕೊಂಡು ಆಪರೇಷನ್ ಕಮಲಕ್ಕೆ ವಿಫಲ ಯತ್ನ ನಡೆಸಿದ್ದಾರೆ. ತರೇಹವಾರಿ ಆಮಿಷಗಳನ್ನು ಒಡ್ಡುತ್ತಿದ್ದಾರೆ. ಅವರು ಒಂದಿಬ್ಬರು ಶಾಸಕರ ಸಂಪರ್ಕ ಸಾಧಿಸಿರುವುದನ್ನು ಬಿಟ್ಟರೆ ಹೇಳಿಕೊಳ್ಳುವಂಥ ಬೆಳವಣಿಗೆಯೇನೂ ನಡೆದಿಲ್ಲ. ಕಾಂಗ್ರೆಸ್ ಶಾಸಕರು ಪಕ್ಷದ ಜತೆ ಗಟ್ಟಿಯಾಗಿ ನಿಂತಿದ್ದಾರೆ. ಅವರು ಎಲ್ಲಿಗೂ ಹೋಗುವುದಿಲ್ಲ ಎಂದು ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

ಇದಕ್ಕೆ ಮೊದಲು ಮಾಧ್ಯಮದವರ ಜತೆ ಮಾತನಾಡಿದ ಸಚಿವರು ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಿದ ಬಿಜೆಪಿಯವರನ್ನು ನೀಚರು ಎಂದು ಜರಿದರು.ವಿಧಾನ ಮಂಡಲದ ಜಂಟಿ ಅಧಿವೇಶನ ಇತಿಹಾಸದಲ್ಲೇ ರಾಜ್ಯಪಾಲರಿಗೆ ಆಗೌರವ ತೋರಿಸಿದ ನಿದರ್ಶನ ಇಲ್ಲವೇ ಇಲ್ಲ. ರಾಜ್ಯಪಾಲರಿಗೆ ಅಗೌರವ ತೋರಿಸಿದ್ದು ಇದೇ ಮೊದಲು. ಬಿಜೆಪಿಯ ರಾಜಕೀಯ ಹತಾಶೆಯ ಪ್ರತೀಕ ಇದು. ಆದರೆ ಬಿಜೆಪಿಯವರು ಇಂಥ ವರ್ತನೆಯಿಂದ ತಮ್ಮ ಗೌರವ ಕಳೆದುಕೊಳ್ಳುತ್ತಾರೆಯೇ ಹೊರತು ಅವರಿಗೆ ಬೇರಾವುದೇ ಪ್ರಯೋಜನ ಆಗುವುದಿಲ್ಲ ಎಂದು ಟೀಕಿಸಿದರು.

ಅಧಿಕಾರಕ್ಕಾಗಿ ಬಿಜೆಪಿಯವರು ಎಂಥ ನೀಚ ಕೆಲಸಕ್ಕೂ ಸಿದ್ಧ ಎಂಬುದು ಅವರ ವರ್ತನೆಯಿಂದ ದೃಢಪಡುತ್ತಿದೆ. ಕಾಂಗ್ರೆಸ್ ಎಲ್ಲ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಸೂಕ್ತ ಸಂದರ್ಭದಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಹೇಳಿದರು.

ಕಾಂಗ್ರೆಸ್ ಸರಕಾರವು ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮ ಜಾರಿಗೆ ತರಲು ಲಿಂಗೈಕ್ಯ ಸಿದ್ಧಗಂಗಾ ಶ್ರೀ ಡಾ. ಶಿವಕುಮಾರ ಸ್ವಾಮೀಜಿಗಳೇ ಪ್ರೇರಣೆ ಎಂದು ಜಲ ಸಂಪನ್ಮೂಲ, ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಹಿಂದೆ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಸಾಹೇಬರು ಹಾಗೂ ನಾನು ಸಿದ್ಧಗಂಗಾ ಮಠಕ್ಕೆ ಹೋಗಿದ್ದೆವು. ಆಗ ಶ್ರೀಗಳು ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಬಗ್ಗೆ ವಿವರಿಸಿದರು. ಅವರು ನೀಡಿದ ವಿವರ ಸರಕಾರ ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿಗೆ ತರಲು ಸ್ಪೂರ್ತಿಯಾಯಿತು. ಇವತ್ತೇನಾದರೂ ಬಿಸಿಯೂಟ ಯೋಜನೆ ಯಶಸ್ವಿಯಾಗಿದ್ದರೆ ಅದಕ್ಕೆ ಕಾರಣ ಸಿದ್ಧಗಂಗಾ ಶ್ರೀಗಳು ಎಂದು ವಿಧಾನಸಭೆಯಲ್ಲಿ ಲಿಂಗೈಕ್ಯ ಶ್ರೀಗಳ ಸಂತಾಪ ಸೂಚನೆ ನಿರ್ಣಯದ ಮೇಲೆ ಮಾತನಾಡುತ್ತಾ ಬುಧವಾರ ಕೊಂಡಾಡಿದರು.

 

111 ವರ್ಷಗಳ ಜೀವಿತಾವಧಿಯಲ್ಲಿ ಶ್ರೀಗಳು ಸಮಾಜಕ್ಕೆ ನೀಡಿದ ಕೊಡುಗೆ, ಮಾಡಿದ ಸಾಧನೆ ಅಪಾರ. ಯಾವುದೇ ಜಾತಿಬೇಧವಿಲ್ಲದೇ ಸರ್ವಧರ್ಮದ ಮಕ್ಕಳಿಗೆ ಅನ್ನ, ಆಶ್ರಯ, ಅಕ್ಷರ ನೀಡಿದ ತ್ರಿವಿಧ ದಾಸೋಹಿಗಳು. ಇವತ್ತು ಪ್ರಪಂಚದ ಮೂಲೆಮೂಲೆಯಲ್ಲೂ ಅವರ ತ್ರಿವಿಧ ದಾಸೋಹಗ ಫಲಾನುಭವಿಗಳು ಇದ್ದಾರೆ. ಭಕ್ತರು ಇದ್ದಾರೆ. ಅನುಯಾಯಿಗಳು ಇದ್ದಾರೆ ಎಂದು ಅವರು ಹೇಳಿದರು.

ಶ್ರೀಗಳು ಈ ಸಮಾಜಕ್ಕೆ ನೀಡಿರುವ ಕೊಡುಗೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅವರ ನೆನಪು ಚಿರಸ್ಥಾಯಿ. ಆದರೂ ಅವರ ಹೆಸರಿನಲ್ಲಿ ನಾವು ಯೋಜನೆಗಳನ್ನು ಕೈಗೊಳ್ಳಬೇಕಿದೆ. ಅದು ನಮ್ಮ ಜವಾಬ್ದಾರಿಯೂ ಹೌದು, ಕರ್ತವ್ಯವೂ ಹೌದು ಎಂದು ಸಚಿವ ಶಿವಕುಮಾರ್ ತಿಳಿಸಿದರು.


ಸಂಬಂಧಿತ ಟ್ಯಾಗ್ಗಳು

#Karnataka #Govrnment #Bjp #D.K.Shivkumar


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ