ರಾಜ್ಯಪಾಲರ ಭಾಷಣದಲ್ಲಿ ಏನಿತ್ತು ಗೊತ್ತಾ?

What do you know in the governor

06-02-2019

ರಾಜ್ಯದ 3.28 ಲಕ್ಷ ರೈತರ ಬೆಳೆ ಸಾಲ ಮನ್ನಾ ಮಾಡಲು 1611 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ರಾಜ್ಯಪಾಲ ವಜುಬಾಯಿ ವಾಲಾ ಅವರು ಹೇಳಿದರು.

ಜಂಟಿ ಅಧಿವೇಶನವನ್ನುದ್ದೇಶಿಸಿ ಇಂದು ಮಾಡಿದ ಭಾಷಣದಲ್ಲಿ ಸಹಕಾರ ಮತ್ತು ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿರುವ ಅರ್ಹ ಕೃಷಿಕರ ಬೆಳೆಸಾಲ ಮನ್ನಾ ಮಾಡಲು ಅಗತ್ಯ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು.

ಉದ್ಯೋಗಖಾತ್ರಿ ಯೋಜನೆಯಡಿ 18.6 ಲಕ್ಷ ಕುಟುಂ

ಬಗಳಿಗೆ ಉದ್ಯೋಗ ಒದಗಿಸಲಾಗಿದೆ ಎಂದು ಹೇಳಿದರು. ಮುಂಗಾರು ಹಂಗಾಮಿನಲ್ಲಿ ಮೂರು ತಾಲೂಕುಗಳು, ಹಿಂಗಾರು ಹಂಗಾಮಿನಲ್ಲಿ 56 ತಾಲೂಕುಗಳು ಸೇರಿದಂತೆ 156 ತಾಲೂಕುಗಳು ಬರಪೀಡಿತವೆಂದು ಘೋಷಿಸಲಾಗಿದ್ದು, ಈ ತಾಲೂಕುಗಳಲ್ಲಿ ಬರ ನಿರ್ವಹಣೆ ಕಾಮಗಾರಿಗಳನ್ನು ನನ್ನ ಸರ್ಕಾರ ಸಮರ್ಥವಾಗಿ ನಿರ್ವಹಣೆ ಮಾಡುತ್ತಿದೆ ಎಂದು ಹೇಳಿದರು.

18.6 ಲಕ್ಷ ಕುಟುಂಬಗಳಿಗೆ ನರೇಗಾ ಯೋಜನೆಯಡಿ ಉದ್ಯೋಗ ಒದಗಿಸಲಾಗಿದೆ. ಇಸ್ರೇಲ್ ಮಾದರಿ ಕೃಷಿಯನ್ನು ಜಾರಿಗೊಳಿಸಲು ವಿಶೇಷ ಅಭಿಯಾನ ಮಾಡಲಾಗುತ್ತಿದೆ ಎಂದು ರಾಜ್ಯಪಾಲರು ತಿಳಿಸಿದರು. ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ 3085 ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

ರೇಷ್ಮೆಗೆ ರಕ್ಷಣಾತ್ಮಕ ದರ ನೀಡಿ ಪ್ರೋತ್ಸಾಹಿಸಲಾಗಿದೆ. ಮತ್ಸ್ಯ ಜೋಪಾನ ಯೋಜನೆಗೆ 10 ಶೀಥಲೀಕರಣ ಘಟಕಗಳನ್ನು ಪ್ರಾರಂಭಿಸಲಾಗಿದೆ. ತೋಟಗಾರಿಕೆ ಬೆಳೆಗಳ ಪಾಲಿ ಹೌಸ್‍ಗಳಿಗೆ 60 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ. ಹಸಿರೀಕರಣ ಮಾಡುವ ಉದ್ದೇಶದಿಂದ 652 ಲಕ್ಷ ಸಸಿಗಳನ್ನು ನೆಟ್ಟು ಪೋಷಿಸುವ ಗುರಿ ಹೊಂದಲಾಗಿದೆ ಎಂದು ಅವರು ಹೇಳಿದರು. ಕೃಷಿ ಮಾರುಕಟ್ಟೆಗಳಲ್ಲಿ ವಿಕಿರಣ ಘಟಕಗಳಂತಹ ಸೌಲಭ್ಯಗಳನ್ನು ಒದಗಿಸಲು ಯೋಜಿಸಲಾಗಿದೆ ಎಂದು ತಿಳಿಸಿದರು.

 ಖಾಲಿ ಹುದ್ದೆಗಳ ಭರ್ತಿ :
- ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ 666 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದ್ದು, ಇಲಾಖೆಗೆ 3085 ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿಯ ಹೆಚ್ಚುವರಿ ಉದ್ಯೋಗಗಳನ್ನು ಮಂಜೂರು ಮಾಡಲಾಗಿದೆ ಎಂದು ಎಂದು ರಾಜ್ಯಪಾಲ ವಜುಭಾಯಿ ವಾಲಾ ಹೇಳಿದರು.

ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿರುವ ಅವರು, ರಾಜ್ಯದಲ್ಲಿ ಹಸಿರು ವಲಯವನ್ನು ಹೆಚ್ಚಿಸಲು ಹಸಿರು ಕರ್ನಾಟಕ ಆಂದೋಲನವನ್ನು ಪ್ರಾರಂಭಿಸಲಾಗಿದೆ.

ಸಸಿಗಳನ್ನು ನೆಡುವ ಮೂಲಕ ಜನರ ಪಾಲ್ಗೊಳ್ಳುವಿಕೆಗೆ ಉತ್ತೇಜನ ನೀಡಲಾಗುತ್ತಿದೆ. 2019ರ ಮಳೆಗಾಲದ ಅವಧಿಯಲ್ಲಿ 652 ಲಕ್ಷ ಸಸಿಗಳನ್ನು ನೆಡುವ ಗುರಿ ಇದ್ದು, ಇದಕ್ಕಾಗಿ ಪೂರ್ವ ಸಿದ್ಧತಾ ಚಟುವಟಿಕೆಗಳು ನಡೆಯುತ್ತಿವೆ.

ನದಿಗಳ ನೀರಿನ ಒಳ ಹರಿವನ್ನು ಹೆಚ್ಚಿಸಲು ಕರ್ನಾಟಕ ನದಿ ಸಂರಕ್ಷಣಾ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ.  ಅರಣ್ಯ ಭದ್ರತೆ ಮತ್ತು ಸಂರಕ್ಷಣೆಯನ್ನು ಬಲಪಡಿಸುವ ದೃಷ್ಟಿಯಿಂದ ಹೊಸ ನೇಮಕಾತಿಯನ್ನು ಹಂತ ಹಂತವಾಗಿ ಕೈಗೊಳ್ಳಲಾಗುತ್ತಿದ್ದು, ಹೆಚ್ಚುವರಿ ಹುದ್ದೆಗಳನ್ನು ಮಂಜೂರು ಮಾಡಲಾಗಿದೆ ಎಂದರು.

 ಇಸ್ರೇಲ್ ಕೃಷಿ ಪದ್ಧತಿ
- ರಾಜ್ಯದ ಪದೇ ಪದೇ ಪುನರಾವರ್ತನೆಯಾಗುತ್ತಿರುವ ಬರ ಪರಿಸ್ಥಿತಿಯನ್ನು ಹತ್ತಿಕ್ಕಲು ಸೂಕ್ಷ್ಮ ನೀರಾವರಿ, ಶೂನ್ಯ ಬಂಡವಾಳ ಮತ್ತು ಇಸ್ರೇಲ್ ಕೃಷಿ ಪದ್ಧತಿಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ರಾಜ್ಯಪಾಲ ವಜುಭಾಯಿ ವಾಲಾ ಹೇಳಿದರು.

ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿರುವ ಅವರು, 2018ರ ಮುಂಗಾರು ಅವಧಿಯಲ್ಲಿ 100 ತಾಲ್ಲೂಕು, 2018ರ ಹಿಂಗಾರು ಅವಧಿಯಲ್ಲಿ 156 ತಾಲ್ಲೂಕುಗಳು ಬರ ಪೀಡಿತವಾಗಿರುವುದು ಕಳವಳಕಾರಿ.

ಈ ತಾಲ್ಲೂಕುಗಳಲ್ಲಿ ಕುಡಿಯುವ ನೀರಿನ ಪೂರೈಕೆ, ಮೇವು ಲಭ್ಯತೆ, ಉದ್ಯೋಗಗಳ ಸೃಷ್ಟಿಗೆ ಸರ್ಕಾರ ಕ್ರಮ ಕೈಗೊಂಡಿದೆ. ಯಾವುದೇ ವಿಪತ್ತನ್ನು ಎದುರಿಸಲು ಜಿಲ್ಲೆಗಳಿಗೆ ಈಗಾಗಲೇ ಸಾಕಷ್ಟು ಹಣ ಬಿಡುಗಡೆ ಮಾಡಲಾಗಿದೆ.

ಹಸಿರು ಮೇವು ಬೆಳೆಸಲು ರೈತರಿಗೆ 8.11 ಲಕ್ಷ ಮೇವು ಮಿನಿ ಕಿಟ್‍ಗಳನ್ನು ಉಚಿತವಾಗಿ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಇದರಿಂದ 30 ಲಕ್ಷ ಟನ್ ಹಸಿರು ಮೇವು ಉತ್ಪಾದನೆಯಾಗುವ ನಿರೀಕ್ಷೆ ಇದೆ.

ಉದ್ಯೋಗ ಸೃಷ್ಟಿಗಾಗಿ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರೆ ಯೋಜನೆಯನ್ನು ಬಳಸಿಕೊಳ್ಳಲಾಗುತ್ತಿದ್ದು, 2019ರ ಜನವರಿ 31ರವರೆಗೆ 18.56 ಲಕ್ಷ ಕುಟುಂಬಗಳಿಗೆ ಉದ್ಯೋಗ ಕಲ್ಪಿಸಲಾಗಿದ್ದು, 812 ಮಾನವ ದಿನಗಳ ಉದ್ಯೋಗ ಸೃಷ್ಟಿಯಾಗಿದೆ.

ಬರ ಪೀಡಿತ ತಾಲ್ಲೂಕುಗಳಲ್ಲಿ ಪ್ರತಿಯೊಬ್ಬ ಉದ್ಯೋಗ ಕಾರ್ಡ್‍ದಾರನಿಗೂ 150 ದಿನಗಳ ಕೆಲಸ ನೀಡಲಾಗುತ್ತಿದೆ. ಬರ ನಿರ್ವಹಣೆಗೆ ದೀರ್ಘಕಾಲಿನ ಕ್ರಮಗಳಿಗೆ ಆದ್ಯತೆ ನೀಡಲಾಗುತ್ತಿದ್ದು, ಸೂಕ್ಷ್ಮ ನೀರಾವರಿ, ಮಳೆನೀರು ಕೊಯ್ಲಿಗೆ ಉತ್ತೇಜನ ನೀಡಲಾಗುತ್ತಿದೆ.  ಶೂನ್ಯಬಂಡವಾಳ ನೈಸರ್ಗಿಕ ಕೃಷಿ, ಇಸ್ರೇಲ್ ಮಾದರಿ ಕೃಷಿ ಪದ್ಧತಿಗಳನ್ನು ಜಾರಿಗೆ ತರಲು ವಿಶೇಷ ಅಭಿಯಾನ ನಿರ್ದೇಶನಾಲಯಗಳನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.

# ಆಂಗ್ಲಮಾಧ್ಯಮ ಶಾಲೆ 
ತೀವ್ರ ವಿವಾದದ ನಡುವೆಯೂ ರಾಜ್ಯ ಸರ್ಕಾರ ಆಂಗ್ಲ ಮಾಧ್ಯಮ ಶಾಲೆಗಳ ಆರಂಭಕ್ಕೆ ಬದ್ಧವಾಗಿರುವುದಾಗಿ ಘೋಷಿಸಿದೆ.
ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿ ರಾಜ್ಯಪಾಲ ವಜುಭಾಯಿ ವಾಲಾ ಅವರು, ಸಮ್ಮಿಶ್ರ ಸರ್ಕಾರದ ಬದ್ಧತೆಯನ್ನು ಸ್ಪಷ್ಟಪಡಿಸಿದರು.

ವಿದ್ಯಾರ್ಥಿಗಳು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ಅನುಕೂಲವಾಗುವಂತೆ ಸಜ್ಜುಗೊಳಿಸಬೇಕಿದೆ. ಬಡ ವಿದ್ಯಾರ್ಥಿಗಳು ಇಂಗ್ಲಿಷ್ ಜ್ಞಾನದ ಕೊರತೆಯಿಂದ ಹಿಂದುಳಿಯಬಾರದು ಎಂಬ ಕಾರಣಕ್ಕಾಗಿ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸಲಾಗುತ್ತಿದೆ. ಅಂದ ಮಾತ್ರಕ್ಕೆ ಕನ್ನಡಕ್ಕೆ ಪ್ರಾಮುಖ್ಯತೆ ನೀಡುವುದರಲ್ಲಿ ರಾಜೀಯಾಗುವುದಿಲ್ಲ. ಸರ್ಕಾರಿ ಶಾಲೆಗಳ ಮೂಲಸೌಕರ್ಯಗಳಿಗೆ 450 ಕೋಟಿ ಅನುದಾನ ನೀಡಲಾಗಿದೆ.

ಹೆಣ್ಣು ಮಕ್ಕಳ ಶಿಕ್ಷಣ ಪೊ್ರೀತ್ಸಾಹಿಸಲು 3 ಲಕ್ಷ ವಿದ್ಯಾರ್ಥಿನಿಯರಿಗೆ 95 ಕೋಟಿ ಖರ್ಚು ಮಾಡಲಾಗಿದೆ. ಸರ್ಕಾರಿ ಪ್ರಥಮ ದರ್ಜೆ ಹಾಗೂ ಇಂಜಿನಿಯರ್ ಕಾಲೇಜುಗಳ ಮೂಲ ಸೌಕರ್ಯಕ್ಕೆ 750 ಕೋಟಿ ಬಿಡುಗಡೆ ಮಾಡಲಾಗಿದೆ. ಅರಿವು ಯೋಜನೆಯಡಿ ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮವು 28,731 ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್ ವ್ಯಾಸಂಗಕ್ಕಾಗಿ 70 ಕೋಟಿ ಸಾಲ ಮಂಜೂರು ಮಾಡಲಾಗಿದೆ. ವಿವಿಧ ವಿದ್ಯಾರ್ಥಿ ವೇತನ ಯೋಜನೆಯಡಿ 14.55 ಲಕ್ಷ ವಿದ್ಯಾರ್ಥಿಗಳಿಗೆ 290 ಕೋಟಿ ರೂ.ಗಳನ್ನು ನೀಡಲಾಗಿದೆ ಎಂದು ತಿಳಿಸಿದರು.

ಜಲಧಾರೆ ಯೋಜನೆ :

ರಾಜ್ಯದ 1.80 ಕೋಟಿ ಜನಸಂಖ್ಯೆಗೆ ಪ್ರತಿ ನಿತ್ಯ 85 ಲೀಟರ್ ಕುಡಿಯುವ ನೀರು ಪೂರೈಸಲು 53ಸಾವಿರ ಕೋಟಿ ರೂ. ವೆಚ್ಚದ ಜಲಧಾರೆ ಯೋಜನೆಯನ್ನು ಕೈಗೆತ್ತಿಕೊಳ್ಳುತ್ತಿರುವುದಾಗಿ ರಾಜ್ಯಪಾಲ ವಜುಭಾಯಿ ವಾಲಾ ತಿಳಿಸಿದ್ದಾರೆ.

ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿರುವ ಅವರು, ರಾಜ್ಯದ ಎಲ್ಲಾ ಗ್ರಾಮಗಳಿಗೆ ಭೂಮಿ ಮೇಲ್ಮೈನಿಂದ ನೀರು ಪೂರೈಸಲು ಜಲಧಾರೆ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, ಇದರ ವಿಸ್ತೃತ ಯೋಜನಾವರದಿ ತಯಾರಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ 16ಸಾವಿರ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ ಎಂದರು.

ಗ್ರಾಮೀಣಾಭಾಗದಲ್ಲಿ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಗಾಗಿ ರಾಜ್ಯ ನಿರ್ಮಲೀಕರಣ ನೀತಿಯನ್ನು ಶೀಘ್ರದಲ್ಲೇ ಅನುಷ್ಠಾನಕ್ಕೂ ತರುತ್ತಿರುವುದಾಗಿ ತಿಳಿಸಿದ್ದಾರೆ. ಕೇಂದ್ರ ಸರ್ಕಾರ ಅಕ್ಟೋಬರ್ 2ರ ಗುರಿಯಾಗಿಟ್ಟುಕೊಂಡು ನೈರ್ಮಲೀಕರಣ ಯೋಜನೆ ಜಾರಿಗೊಳಿಸುತ್ತಿದೆ. ಅದಕ್ಕೂ ಮೊದಲೇ ರಾಜ್ಯ ಸರ್ಕಾರ 2018ರ ನವೆಂಬರ್ 19ರಂದು ವಿಶ್ವ ಶೌಚಾಲಯ ದಿನದಂದು ಗ್ರಾಮೀಣ ಪ್ರದೇಶವನ್ನು ಬಯಲು ಬಹಿರ್ದೆಶೆ ಮುಕ್ತ ಎಂದು ಘೋಷಿಸಿದೆ.

ಸಮಾಜ ಕಲ್ಯಾಣ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಇಲಾಖೆಗಳಿಂದ 1135 ವಸತಿ ಶಾಲೆಗಳು, 4817 ವಸತಿ ನಿಲಯಗಳನ್ನು ನಡೆಸಲಾಗುತ್ತಿದ್ದು, 6 ಲಕ್ಷ ಮಕ್ಕಳಿಗೆ ಇಲ್ಲಿ ಉತ್ತಮ ಶಿಕ್ಷಣ ದೊರೆಯುತ್ತಿದೆ. ಈ ವರ್ಷ 4ಸಾವಿರ ಕೋಟಿ ವೆಚ್ಚದಲ್ಲಿ 152 ವಸತಿ ಶಾಲೆಗಳು, 427 ವಸತಿ ನಿಲಯಗಳ ನಿರ್ಮಾಣ ಕೈಗೆತ್ತಿಕೊಳ್ಳಲಾಗಿದೆ.

ಸಮಾಜ ಕಲ್ಯಾಣ ಇಲಾಖೆಯಿಂದ ಸಮೃದ್ಧಿ, ಉನ್ನತಿ, ಐರಾವತ ಯೋಜನೆಗಳನ್ನು ಆರಂಭಿಸಲಾಗಿದೆ. ಈ ಕಾರ್ಯಕ್ರಮಗಳಡಿ 15,650 ಫಲಾನುಭವಿಗಳು 650 ಕೋಟಿಗಳಷ್ಟು ನೆರವು ಪಡೆದಿದ್ದಾರೆ. ಎಸ್ಸಿ-ಎಸ್ಟಿ ಸಮುದಾಯಗಳ ಅಭಿವೃದ್ಧಿಗೆ ವಿವಿಧ ಇಲಾಖೆಗಳಿಗೆ 29,208 ಕೋಟಿ ಅನುದಾನ ಹಂಚಿಕೆ ಮಾಡಲಾಗಿದೆ.

ಬೀದಿ ಬದಿ ವ್ಯಾಪಾರಿಗಳಿಗಾಗಿ ಬಡವರ ಬಂಧು ಯೋಜನೆ ಅನುಷ್ಠಾನಗೊಳಿಸಲಾಗಿದೆ. ಹಾಲು ಉತ್ಪಾದಕರ ಖಾತೆಗಳಿಗೆ ಪೊ್ರೀತ್ಸಾಹ ಧನ ನೇರವಾಗಿ ವಿತರಿಸಲು ಕ್ಷೀರ ಸಿರಿಯಂತಹ ಯೋಜನೆಗಳನ್ನು ಆರಂಭಿಸಲಾಗಿದೆ. ಹೈದರಾಬಾದ್ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಸಾವಿರ ಕೋಟಿ, ವಿಶೇಷ ಅಭಿವೃದ್ಧಿ ಯೋಜನೆಗಳಿಗೆ 3007 ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂದು ಹೇಳಿದರು.

# ಮೇಕೆದಾಟು ವಿಸ್ತೃತ ಯೋಜನೆ

ಮೇಕೆದಾಟು ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ಕೇಂದ್ರ ಜಲಾಯೋಗ ಒಪ್ಪಿಗೆ ನೀಡಿದೆ ಎಂದು ತಿಳಿಸಿರುವ ರಾಜ್ಯಪಾಲ ವಜುಭಾಯಿ ವಾಲಾ ಅವರು, ಭದ್ರಾಮೇಲ್ದಂಡೆ ಹಾಗೂ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಗಳ ಪ್ರಗತಿಯನ್ನು ತ್ವರಿತಗೊಳಿಸಿರುವುದಾಗಿ ಹೇಳಿದ್ದಾರೆ.

ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿರುವ ಅವರು, ಕೃಷ್ಣಾ ಮೇಲ್ದಂಡೆ ಯೋಜನೆಯ ನಾರಾಯಣಪುರ ಎಡದಂಡೆ ಕಾಲುವೆಯ ಮೇಲುಸ್ತುವಾರಿಗಾಗಿ 1050 ಕೋಟಿ ಮೊತ್ತದ ಯೋಜನೆಗೆ ಟೆಂಡರ್ ಕರೆಯಲಾಗಿದೆ ಎಂದು ನೀರಾವರಿಗೆ ಸಂಬಂಧಪಟ್ಟಂತೆ ವಿವರಣೆ ನೀಡಿದ್ದಾರೆ.
ಕಂದಾಯ ಇಲಾಖೆಯಲ್ಲಿ ಪೋಡಿಮುಕ್ತ ಅಭಿಯಾನ ಆರಂಭಿಸಲಾಗಿದ್ದು, ಈವರೆಗೂ 11,577 ಗ್ರಾಮಗಳ ಸರ್ವೆ ಕಾರ್ಯ ಪೂರ್ಣಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಭೂ ಪರಿವರ್ತನೆಗಾಗಿ ನಿಯಮಗಳನ್ನು ಸಡಿಲಗೊಳಿಸಲಾಗಿದೆ. ಪ್ರಮಾಣ ಪತ್ರ ಮತ್ತು ದಾಖಲಾತಿಗಳನ್ನು ಸಂರಕ್ಷಿಸಿಡಲು ನಾಗರಿಕರಿಗೆ ಡಿಜಿಟಲ್ ಲಾಕರ್ ಸೌಲಭ್ಯ ಒದಗಿಸಲಾಗಿದೆ ಎಂದರು. ಆರೋಗ್ಯ ಕರ್ನಾಟಕ ಯೋಜನೆಯಡಿ 2019 ಜನವರಿ ಅಂತ್ಯಕ್ಕೆ ರಾಜ್ಯದ 1.22 ಲಕ್ಷ ಜನರು ಚಿಕಿತ್ಸೆ ಪಡೆದಿದ್ದಾರೆ. ಆರೋಗ್ಯ ಕರ್ನಾಟಕ ಯೋಜನೆ ಮತ್ತು ಆಯುಷ್ಮಾನ್ ಭಾರತ್ ಎಂಬ ಕೋಬ್ರ್ಯಾಂಡ್ ಹೆಸರಿನ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದ್ದು, ಬಿಪಿಎಲ್ ಕುಟುಂಬಗಳಿಗೆ ಉಚಿತವಾಗಿ, ಎಪಿಎಲ್ ಕುಟುಂಬಕ್ಕೆ ಶೇ.30ರಷ್ಟು ವೆಚ್ಚ ಭರಿಸುವ ಈ ಯೋಜನೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ಮುಂದಿನ ಏಳು ವರ್ಷಗಳ ಅವಧಿಯಲ್ಲಿ ಗ್ರಾಮೀಣ ಭಾಗದಲ್ಲಿ ಉತ್ತಮ ಆರೋಗ್ಯ ಸೇವೆ ಒದಗಿಸಲು ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಕೊಪ್ಪಳ, ಗದಗ, ಚಾಮರಾಜನಗರ ಹಾಗೂ ಹಾಸನದಲ್ಲಿ 450 ಹಾಸಿಗೆಗಳ ಹೊಸ ಆಸ್ಪತ್ರೆಗಳ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಹುಬ್ಬಳ್ಳಿಯ ಕಿಮ್ಸ್, ವಿಜಯನಗರ ವಿಮ್ಸ್, ಬಳ್ಳಾರಿಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಮೈಸೂರು ಮತ್ತು ಕಲಬುರ್ಗಿ ಟ್ರೌಮಾಸೆಂಟರ್ ನಿರ್ಮಾಣ ಕಾರ್ಯ ಮುಕ್ತಾಯ ಹಂತದಲ್ಲಿದೆ ಎಂದರು.

 ನಿರ್ಭಯ ಕೇಂದ್ರ ಸ್ಥಾಪನೆ : 

ಮಹಿಳೆಯರು ಮತ್ತು ಬಾಲಕಿಯರ ಸುರಕ್ಷತೆಗೆ ಮಹತ್ವ ನೀಡಿರುವ ಸರ್ಕಾರ ಎಲ್ಲ ಪೊಲೀಸ್ ಆಯುಕ್ತರ ಕಚೇರಿಗಳಲ್ಲಿ ನಿರ್ಭಯ ಕೇಂದ್ರಗಳನ್ನು ಸ್ಥಾಪಿಸುತ್ತಿದೆ ಎಂದು ರಾಜ್ಯಪಾಲ ವಿ.ಆರ್.ವಾಲಾ ತಿಳಿಸಿದ್ದಾರೆ. ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಅವರು, ಮಹಿಳೆ ಮತ್ತು ಮಕ್ಕಳ ವಿರುದ್ಧದ ದೌರ್ಜನ್ಯ ಕುರಿತಂತೆ ದಾಖಲಾದ ಪ್ರಕರಣಗಳ ವಿಚಾರಣೆ ನಡೆಸಲು ಎಲ್ಲ ಜಿಲ್ಲೆಗಳಲ್ಲಿ ಒಂದು ಹೆಚ್ಚುವರಿ ಸೆಷನ್ ನ್ಯಾಯಾಲಯ ಮತ್ತು ಬೆಂಗಳೂರಿನಲ್ಲಿ ಒಂದು ಹೆಚ್ಚುವರಿ ಸಿವಿಲ್ ನ್ಯಾಯಾಲಯ ಸ್ಥಾಪಿಸಿದೆ.

ವಿಶೇಷ ನ್ಯಾಯಾಲಯಗಳಲ್ಲಿ ಹಿಂಸೆಗೊಳಗಾದ ಮಹಿಳೆಯರ ಕರೆಗೆ 24 ಗಂಟೆಗಳ ಕಾಲ ಸ್ಪಂದಿಸುವ ಉದ್ದೇಶದಿಂದ ನನ್ನ ಸರ್ಕಾರ ಮಹಿಳಾ ಸಹಾಯವಾಣಿ-181ಅನ್ನು ಜಾರಿಗೊಳಿಸಿದೆ ಎಂದು ರಾಜ್ಯಪಾಲರು ಹೇಳಿದ್ದಾರೆ.  ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಹಾಗೂ ಎಲ್ಲ ಬಗೆಯ ತುರ್ತು ಮತ್ತು ಅಪಾಯದ ಕರೆಗಳಿಗೆ ಏಕೀಕೃತ ತುರ್ತು ಪ್ರತಿಸ್ಪಂದನಾ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದರು.

ಸಂಚಾರಿ ನಿಯಮಗಳ ಕಟ್ಟುನಿಟ್ಟಿನ ಜಾರಿಗೆ ಸ್ವಯಂ ಚಲನ್ ಸೃಜನ ವ್ಯವಸ್ಥೆ, ಡಿಜಿಟಲ್ ಕ್ಷೇತ್ರ ಸಂಚಾರಿ ಉಲ್ಲಂಘನಾ ವರದಿಗಳ ಟ್ಯಾಬ್‍ಗಳನ್ನು ಸರ್ಕಾರ ಪರಿಚಯಿಸುತ್ತಿದೆ. ಹೆಚ್ಚುತ್ತಿರುವ ಸೈಬರ್ ಅಪರಾಧಗಳನ್ನು ತಡೆಗಟ್ಟಲು ಪೊಲೀಸರಿಗೆ ಅತ್ಯಾಧುನಿಕ ತಂತ್ರಜ್ಞಾನ ಮತ್ತು ವ್ಯವಸ್ಥೆಗಳನ್ನು ಒದಗಿಸುವ ಉದ್ದೇಶದಿಂದ ಜಿಲ್ಲಾ ಮತ್ತು ಪೊಲೀಸ್ ಆಯುಕ್ತರ ಕಚೇರಿಗಳಲ್ಲಿ ಸೈಬರ್ ವಿಧಿ-ವಿಜ್ಞಾನ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ ಎಂದು ರಾಜ್ಯಪಾಲರು ವಿವರಣೆ ನೀಡಿದ್ದಾರೆ.

ಆನ್‍ಲೈನ್ ನಕ್ಷೆ ಮಂಜೂರಾತಿ 
- ಆನ್‍ಲೈನ್ ಸ್ವಯಂಚಾಲಿತ ಕಟ್ಟಡ ನಕ್ಷೆ ಅನುಮೋದನಾ ವ್ಯವಸ್ಥೆಯನ್ನು ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳಿಗೆ ವಿಸ್ತರಿಸಲು ಸರ್ಕಾರ ತೀರ್ಮಾನಿಸಿದೆ.  26 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆನ್‍ಲೈನ್ ಸ್ವಯಂಚಾಲಿತ ಕಟ್ಟಡ ನಕ್ಷೆ ಅನುಮೋದನಾ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಈ ಯೋಜನೆಯನ್ನು ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಿಗೆ ವಿಸ್ತರಿಸಲಾಗುವುದು ಎಂಬ ಅಂಶವನ್ನು ರಾಜ್ಯಪಾಲರು ತಮ್ಮ ಜಂಟಿ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ.

ಹುಬ್ಬಳ್ಳಿ-ಧಾರವಾಡ, ಮಂಗಳುರು, ದಾವಣಗೆರೆ, ಬೆಳಗಾವಿ ಹಾಗೂ ತುಮಕೂರು ನಗರಗಳಲ್ಲಿನ ನಗರ ಸ್ಥಳೀಯ ಸಂಸ್ಥೆಗಳ ಎಲ್ಲ ಆನ್‍ಲೈನ್ ಸೇವೆಗಳನ್ನು ಏಕೀಕೃತಗೊಳಿಸಲು ಕಮ್ಯಾಂಡ್ ಮತ್ತು ಕಂಟ್ರೋಲ್ ಕೇಂದ್ರಗಳ ಸ್ಥಾಪನೆ ಕುರಿತ ಕಾರ್ಯವನ್ನು ಈಗಾಗಲೇ ಆರಂಭಿಸಲಾಗಿದೆ.

ರಸ್ತೆ ಅಭಿವೃದ್ಧಿಗೆ 10 ಸಾವಿರ ಕೋಟಿ 
- ರಾಜ್ಯ ಹೆದ್ದಾರಿ ಹಾಗೂ ಪ್ರಧಾನ ಜಿಲ್ಲಾ ರಸ್ತೆಗಳ 7800 ಕಿಲೋ ಮೀಟರ್ ಉದ್ದದ ರಸ್ತೆಗಳ ಅಭಿವೃದ್ಧಿಗೆ 10 ಸಾವಿರ ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಹಂತ-4ಅನ್ನು ಜಾರಿಗೊಳಿಸಲು ವಿಸ್ತೃತ ಯೋಜನೆ ತಯಾರಿಸಲಾಗಿದೆ.  ಗ್ರಾಮೀಣ ಮೂಲ ಸೌಕರ್ಯಾಭಿವೃದ್ಧಿ ನಿಧಿ-24 ಯೋಜನೆಯಡಿ 206 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ 178 ರಸ್ತೆ, 35 ಸೇತುವೆ ನಿರ್ಮಾಣ ಯೋಜನೆಗಳಿಗೆ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.

2019ನೆ ಸಾಲಿನಲ್ಲಿ ಕಲಬುರಗಿ ಮತ್ತು ಬೀದರ್ ವಿಮಾನ ನಿಲ್ದಾಣಗಳು ಕಾರ್ಯಾಚರಣೆ ಆರಂಭಿಸಿವೆ. ಕಲಬುರಗಿಯಲ್ಲಿ ಪ್ರಾಯೋಗಿಕ ವಿಮಾನ ಹಾರಾಟ ಆರಂಭವಾಗಿದೆ. 2816ಕಿಮೀ ಪ್ರಧಾನ ಜಿಲ್ಲಾ ರಸ್ತೆಗಳ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ ಎಂಬ ಅಂಶವನ್ನು ರಾಜ್ಯಪಾಲರು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ.

ವಿದ್ಯುತ್ ಸಂಪರ್ಕ ಕ್ರಾಂತಿ : - ರಾಜ್ಯದಲ್ಲಿರುವ ಎಲ್ಲ ಕುಟುಂಬಗಳಿಗೆ ವಿದ್ಯುತ್‍ಚ್ಛಕ್ತಿ ಸಂಪರ್ಕ ಕಲ್ಪಿಸುವ ಗುರಿಯನ್ನು ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರ ಸಾಧಿಸಿದೆ ಎಂದು ವಿ.ಆರ್.ವಾಲಾ ಹೇಳಿದ್ದಾರೆ. ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಅವರು, ವಿದ್ಯುತ್ ಉತ್ಪಾದನೆ ಹೆಚ್ಚಿಸುವ ಉದ್ದೇಶದಿಂದ ನವೀಕರಿಸಬಹುದಾದ ಮತ್ತು ಬಂಧಕ ವಿದ್ಯುತ್ ಉತ್ಪಾದನಾ ಮೂಲಗಳಿಂದ 465 ಮೆಗಾವ್ಯಾಟ್ ಸಾಮಥ್ರ್ಯದ ವಿದ್ಯುತ್‍ಚ್ಛಕ್ತಿ ಸೇರ್ಪಡೆಯಾಗಿದೆ.

ವಿದ್ಯುತ್ ಪ್ರಸರಣ ಕಾರ್ಯಚಾಲವನ್ನು ಸದೃಢಗೊಳಿಸಲು 15 ಹೊಸ ಉಪಕೇಂದ್ರಗಳು, 215 ಸಕ್ರ್ಯೂಟ್ ಕಿಲೋ ಮೀಟರ್‍ಗಳ ವಿದ್ಯುತ್ ಪ್ರಸರಣ ಮಾರ್ಗವನ್ನು ಕಾರ್ಯಜಾಲಕ್ಕೆ ಸೇರಿಸಲಾಗಿದೆ.  ವಿದ್ಯುತ್ ಕಾರ್ಯಜಾಲವನ್ನು ಸದೃಢಗೊಳಿಸುವ ಉದ್ದೇಶದಿಂದ 55,422 ವಿದ್ಯುತ್ ವಿತರಣ ಪರಿವರ್ತಕಗಳನ್ನು ಅಳವಡಿಸಲಾಗಿದೆ ಎಂಬ ಅಂಶವನ್ನು ರಾಜ್ಯಪಾಲರು ತಮ್ಮ ಭಾಷಣದಲ್ಲಿ ಬಹಿರಂಗಗೊಳಿಸಿದ್ದಾರೆ.

# ನಿರುದ್ಯೋಗ ನಿವಾರಣ

 ಕೈಗಾರಿಕಾ ಅಭಿವೃದ್ಧಿಗೆ ಉತ್ತೇಜನ ನೀಡಿ 3.49 ಲಕ್ಷ ಕೋಟಿ ರೂ.ಗಳ ಬಂಡವಾಳ ಹೂಡಿಕೆ ಮಾಡುವ ಮೂಲಕ 10.28 ಲಕ್ಷ ಜನರಿಗೆ ಉದ್ಯೋಗಾವಕಾಶ ಕಲ್ಪಿಸುವ 1958 ಯೋಜನೆಗಳಿಗೆ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಮುನ್ನುಡಿ ಬರೆದಿದೆ ಎಂದು ರಾಜ್ಯಪಾಲರು ವಿವರಿಸಿದ್ದಾರೆ.

ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಅವರು, ಒಂಬತ್ತು ಜಿಲ್ಲೆಗಳಲ್ಲಿ ಕೈಗಾರಿಕಾ ಕ್ಲಸ್ಟರ್‍ಗಳನ್ನು ಅಭಿವೃದ್ಧಿಪಡಿಸುವುದಕ್ಕಾಗಿ ಕಾಂಪಿಟ್ ವಿತ್ ಚೈನಾ ಎಂಬ ಯೋಜನೆ ಅನುಷ್ಠಾನಗೊಳಿಸುತ್ತಿದ್ದು, ಪ್ರತಿಯೊಂದು ಕ್ಲಸ್ಟರ್ ತನ್ನ ನಿರ್ದಿಷ್ಟ ಸಾಮಥ್ರ್ಯದ ಮೇಲೆ ಕೇಂದ್ರೀಕೃತವಾಗಿರಲಿದೆ ಎಂದು ಹೇಳಿದ್ದಾರೆ.
ಯುವಜನತೆ ಉದ್ಯೋಗಾವಕಾಶ ಪಡೆಯಲು ಶಕ್ತರಾಗುವಂತೆ ಅತ್ಯಾಧುನಿಕ ತಂತ್ರಜ್ಞಾನಗಳ ವಿಷಯದಲ್ಲಿ ತರಬೇತಿ ನೀಡುವ ಗುರಿಯನ್ನು ಸರ್ಕಾರ ಹೊಂದಿದೆ.

2018-19ರಲ್ಲಿ ವೃತ್ತಿ ತರಬೇತಿ ಸಂಸ್ಥೆಗಳ ಮೂಲಕ 2.50 ಲಕ್ಷ ಜನರಿಗೆ ತರಬೇತಿ ನೀಡುವ ಮಹತ್ವಾಕಾಂಕ್ಷೆ ಯೋಜನೆ ಅನುಷ್ಠಾನದಲ್ಲಿದೆ ಎಂದು ವಾಲಾ ತಿಳಿಸಿದರು.  ಐಟಿ-ಬಿಟಿಯಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕದಲ್ಲಿ 2025ರ ವೇಳೆಗೆ 20ಸಾವಿರ ನವೋದ್ಯಮಗಳು ಆರಂಭಗೊಳ್ಳುವ ವಿಶ್ವಾಸವನ್ನು ರಾಜ್ಯಪಾಲರು ವ್ಯಕ್ತಪಡಿಸಿದ್ದಾರೆ. ನವೋದ್ಯಮಗಳನ್ನು ಪೊ್ರೀತ್ಸಾಹಿಸುವ ಸಲುವಾಗಿ 58ತಂತ್ರಜ್ಞಾನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

# ವಿಮಾನ ನಿಲ್ದಾಣಕ್ಕೆ ಮೆಟ್ರೋ 
 ನಾಗವಾರ ಮೆಟ್ರೋ ರೈಲು ನಿಲ್ದಾಣದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮೆಟ್ರೋ ಹಂತ-2ಬಿ ಯೋಜನೆಯನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳಲು ಸರ್ಕಾರ ತೀರ್ಮಾನಿಸಿದೆ ಎಂದು ರಾಜ್ಯಪಾಲ ವಜುಬಾಯಿ ವಾಲಾ ತಿಳಿಸಿದರು. ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಅವರು, ರಾಜಧಾನಿ ಬೆಂಗಳೂರಿನಲ್ಲಿ ಸುಸ್ಥಿರ ಸಾರಿಗೆ ವ್ಯವಸ್ಥೆಗೆ ಸರ್ಕಾರ ಸಂಕಲ್ಪ ಮಾಡಿದೆ ಎಂದು ಅವರು ಹೇಳಿದರು.

ನಗರದಲ್ಲಿ ಸುಸ್ಥಿರ ಸಾರಿಗೆ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ರೈಲ್ವೆ ಮಂತ್ರಾಲಯದೊಂದಿಗೆ ಉಪನಗರ ರೈಲು ಸಂಪರ್ಕ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಸ್ಪೆಷಲ್ ಪರ್ಪಸ್ ವೆಹಿಕಲ್ ಸ್ಥಾಪಿಸಲು ಸರ್ಕಾರ ಉದ್ದೇಶಿಸಲಾಗಿದೆ. ಅದೇ ರೀತಿ ನಗರದ ಕೇಂದ್ರ ಭಾಗದಲ್ಲಿ ಚತುರ ಸಂಚಾರಿ ನಿರ್ವಹಣಾ ವ್ಯವಸ್ಥೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಹೇಳಿದರು.

ರಾಜ್ಯ ರಸ್ತೆ ಸಾರಿಗೆ ನಿಗಮಗಳು, ಜನರು ಮತ್ತು ಸ್ಥಳಗಳ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಪ್ರಯಾಣಿಕರ ಅನುಕೂಲಕ್ಕಾಗಿ ಹೊಸ ಬಸ್‍ಗಳನ್ನು ಸೇರ್ಪಡೆಗೊಳಿಸುವುದರ ಜತೆಗೆ ಡಿಪೋಗಳು ಮತ್ತು ಟರ್ಮಿನಲ್‍ಗಳನ್ನು ನಿರ್ಮಾಣ ಮಾಡಲಾಗುತ್ತಿದೆ.  ಪ್ರಯಾಣಿಕರ ಮಾಹಿತಿ ವ್ಯವಸ್ಥೆ ಸೇರಿದಂತೆ ಚತುರ ಸಾರಿಗೆ ವ್ಯವಸ್ಥೆ ಮತ್ತು ನಗದು ರಹಿತ ವ್ಯವಹಾರಕ್ಕಾಗಿ ಪಾಯಿಂಟ್ ಆಫ್ ಸೇಲ್‍ಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳಿಗೆ ಸೇರಿದ 3.98 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಬಸ್‍ಪಾಸ್ ಹಾಗೂ 15.53 ಲಕ್ಷ ವಿದ್ಯಾರ್ಥಿಗಳಿಗೆ ರಿಯಾಯಿತಿ ಪಾಸ್ ವಿತರಿಸಲಾಗಿದೆ ಎಂದು ರಾಜ್ಯಪಾಲರು ವಿವರ ನೀಡಿದರು.


ಸಂಬಂಧಿತ ಟ್ಯಾಗ್ಗಳು

#Session #Speech #Governer #Karnataka


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ