ಅಧಿವೇಶನದಲ್ಲಿ ಜಟಾಪಟಿ- ರಾಜ್ಯಪಾಲರ ಭಾಷಣ ಮೊಟಕು 

 Disruption of Governor

06-02-2019

ರಾಜ್ಯ ವಿಧಾನಮಂಡಲ ಅಧಿವೇಶನದ ಆರಂಭದಲ್ಲೇ ಆಡಳಿತ ಹಾಗೂ ಪ್ರತಿಪಕ್ಷದ ನಡುವೆ ಭಾರೀ ಸಂಘರ್ಷ ಆರಂಭವಾಗಿದ್ದು ಸರ್ಕಾರಕ್ಕೆ ಬಹುಮತವಿಲ್ಲವಾದ್ದರಿಂದ ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡಬೇಡಿ ಎಂದು ಬಿಜೆಪಿ ಧರಣಿ ನಡೆಸಿ ಕೋಲಾಹಲ ನಡೆಸಿದ ಪರಿಣಾಮವಾಗಿ ರಾಜ್ಯಪಾಲರು ಭಾಷಣ ಮೊಟಕುಗೊಳಿಸಿ ಹೊರನಡೆದ ಬೆಳವಣಿಗೆ ಇಂದು ನಡೆದಿದೆ.

ಹೀಗೆ ವಿಧಾನಮಂಡಲದ ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡುವಾಗ ಈ ಹಿಂದೆಯೂ ರಾಜ್ಯಪಾಲರಾದವರು ವಿರೋಧಗಳನ್ನು ಎದುರಿಸಿದ್ದರಾದರೂ ಈ ಬಾರಿ ಕರ್ನಾಟಕದ ಇತಿಹಾಸ ಕಂಡ ಅತ್ಯಂತ ದೊಡ್ಡ ವಿರೋಧ ಪಕ್ಷದ ಭಾರೀ ವಾಗ್ಧಾಳಿ ಹಾಗೂ ಘೋಷಣೆಗಳನ್ನು ಕಂಡು ರಾಜ್ಯಪಾಲ ವಾಜೂಭಾಯಿ ವಾಲಾ ಅಸಹಾಯಕರಾದರು.

ಸದನ ಆರಂಭವಾಗುತ್ತಿದ್ದಂತೆಯೇ ರಾಜ್ಯಪಾಲರು ಭಾಷಣ ಮಾಡಲು ಮುಂದಾದರೂ ಪ್ರತಿಪಕ್ಷದ ನಾಯಕ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಿಜೆಪಿ ಸದಸ್ಯರು ಸಭಾಧ್ಯಕ್ಚರ ಎದುರಿನ ಬಾವಿಗೆ ಇಳಿದು ಧರಣಿ ಆರಂಭಿಸಿದರು.ಈ ಸರ್ಕಾರಕ್ಕೆ ಬಹುಮತವೇ ಇಲ್ಲ.ಹೀಗಾಗಿ ಈ ಸರ್ಕಾರಕ್ಕೆ ಮುಂದುವರಿಯುವ ನೈತಿಕ ಹಕ್ಕಿಲ್ಲ ಎಂದು ಆರೋಪಿಸಿದ ಬಿಜೆಪಿ,ಇಂತಹ ಸರ್ಕಾರದ ಪರವಾದ ಭಾಷಣವನ್ನು ರಾಜ್ಯಪಾಲರು ಓದುವ ಅಗತ್ಯವಿಲ್ಲ ಎಂದು ಆಕ್ಷೇಪಿಸಿತು.

ಈ ಹಂತದಲ್ಲಿ ಬಿಜೆಪಿಯ ವಿರೋಧ ಒಂದೇ ಸಮನೆ ಮುಂದುವರಿಯುತ್ತಾ ಹೋದಾಗ ಸಮ್ಮಿಶ್ರ ಸರ್ಕಾರದ ಅಂಗಪಕ್ಷಗಳಿಂದ ವಿರೋಧ ವ್ಯಕ್ತವಾದರೂ ಅಂತಿಮವಾಗಿ ಪರಸ್ಪರರ ವಾಗ್ವಾದದ ನಡುವೆ ಯಾರ ಮಾತು ಯಾರಿಗೂ ಕೇಳದ ಪರಿಸ್ಥಿತಿ ನಿರ್ಮಾಣವಾಯಿತು.ಬಾವಿಯಲ್ಲಿದ್ದ ಬಿಜೆಪಿ ಸದಸ್ಯರು ರಾಜ್ಯಪಾಲರ ಭಾಷಣಕ್ಕೆ ಅಡ್ಡಿ ಪಡಿಸುತ್ತಲೇ ಮತ್ತೊಂದು ಕಡೆ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಲೇ ಹೋದ ಪರಿಣಾಮವಾಗಿ ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡಲಾಗದೆ ರಾಜ್ಯಪಾಲ ವಾಜೂಭಾಯಿ ವಾಲಾ ಅಸಹಾಯಕರಾದರು.

ಹೀಗಾಗಿ,ನೀವು ಈ ರೀತಿ ಅಡ್ಡಿಪಡಿಸಿದರೆ ನಾನು ಭಾಷಣ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರಾದರೂ ಬಿಜೆಪಿ ಸದಸ್ಯರು ಅದನ್ನು ಲೆಕ್ಕಿಸಲಿಲ್ಲ.ಹೀಗಾಗಿ ಬೇರೆ ದಾರಿ ಕಾಣದ ರಾಜ್ಯಪಾಲರು ಸ್ಪೀಕರ್ ರಮೇಶ್ ಕುಮಾರ್ ಅವರ ಕಡೆ ನೋಡಿದಾಗ ಏನು ಮಾಡಬೇಕು?ಎಂದು ಸನ್ನೆ ಮಾಡಿದರು.ಈ ಸಂದರ್ಭದಲ್ಲಿ ಇಪ್ಪತ್ತೆರಡು ಪುಟಗಳ ಭಾಷಣದ ಪೈಕಿ ಮೊದಲ ಹಾಗೂ ಕೊನೆಯ ಪುಟಗಳನ್ನು ಓದಿ ಭಾಷಣದ ಪ್ರತಿಯನ್ನು ಮಂಡಿಸುವಂತೆ ರಮೇಶ್ ಕುಮಾರ್ ಅವರು ಸಲಹೆ ರವಾನಿಸಿದರು.

ಈ ಹಂತದಲ್ಲೂ ಬಿಜೆಪಿ ಸದಸ್ಯರು ನಿರಂತರವಾಗಿ ಘೋಷಣೆಗಳನ್ನು ಮೊಳಗಿಸುತ್ತಾ,ಸರ್ಕಾರಕ್ಕೆ ಬಹುಮತವೇ ಇಲ್ಲ.ಅದು ಅಧಿಕಾರದಲ್ಲಿರುವುದೇ ಅಸಂವಿಧಾನಿಕ.ಹೀಗಾಗಿ ಅದಕ್ಕೆ ಮುಂದುವರಿಯುವ ಹಕ್ಕಿಲ್ಲ ಎಂದು ಪ್ರತಿಪಾದಿಸತೊಡಗಿದರು. ಇದರ ವಿರುದ್ಧ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರೂ ವ್ಯಾಪಕ ಆಕ್ರೋಶ ವ್ಯಕ್ತಪಡಿಸತೊಡಗಿದಾಗ ರಾಜ್ಯಪಾಲ ವಾಜೂಭಾಯಿ ವಾಲಾ ತಮ್ಮ ಭಾಷಣದ ಪ್ರತಿಯಲ್ಲಿನ ಮೊದಲ ಹಾಗೂ ಕೊನೆಯ ಪುಟಗಳನ್ನು ಓದಿದರು.

ತದ ನಂತರ ರಾಷ್ಟ್ರಗೀತೆ ಮೊಳಗಿತು.ಇದಾದ ನಂತರ ರಾಜ್ಯಪಾಲರು ವಿಧಾನಸಭೆಯಿಂದ ನಿರ್ಗಮಿಸಿದರು.ಆ ಮೂಲಕ ಈ ಬಾರಿಯ ವಿಧಾನಮಂಡಲ ಅಧಿವೇಶನ ಆರಂಭವಾಗುತ್ತಿದ್ದಂತೆಯೇ ಕುರುಕ್ಷೇತ್ರದ ರೂಪ ತಳೆದಿದ್ದು ಬಜೆಟ್ ಅಧಿವೇಶನ ನಿರಾತಂಕವಾಗಿ ನಡೆಯುವ ಕುರುಹುಗಳೇ ಇಲ್ಲದಂತಾಗಿದೆ.ಉನ್ನತ ಮೂಲಗಳ ಪ್ರಕಾರ,ನೆನ್ನೆ ಸಂಜೆ ನಡೆದ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಈ ಬಾರಿಯ ವಿಧಾನಮಂಡಲ ಅಧಿವೇಶನದಲ್ಲಿ ಪಕ್ಷ ನಡೆಸಬೇಕಾದ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚಿಸಲಾಗಿತ್ತು.

ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ಬಹುಮತವಿಲ್ಲ.ಆದರೂ ಸನ್ನಿವೇಶಕ್ಕೆ ತಕ್ಕಂತೆ ಉಳಿದುಕೊಳ್ಳುವ ಆಟವಾಡುತ್ತಿದೆ.ಅತ್ಯಂತ ದೊಡ್ಡ ಪಕ್ಷವಾಗಿ ನಾವು ಸುಮ್ಮನೆ ಕೂರುವುದು ಸರಿಯಲ್ಲ ಎಂದು ಶಾಸಕಾಂಗ ಸಭೆಯಲ್ಲಿ ತೀರ್ಮಾನಿಸಲಾಗಿತ್ತು.ಈ ನಿರ್ಧಾರದ ಅನುಸಾರ ಇಂದು ವಿಧಾನಮಂಡಲದ ಜಂಟಿ ಅಧಿವೇಶನಕ್ಕೆ ಆಗಮಿಸಿದ ಬಿಜೆಪಿ ಸದಸ್ಯರು ಆರಂಭದಲ್ಲೇ ವಿಘ್ನವುಂಟು ಮಾಡಿದರಲ್ಲದೆ ಮುಂದಿನ ವಾರದವರೆಗೆ ನಡೆಯಲಿರುವ ಅಧಿವೇಶನ ಸಂಘರ್ಷದಲ್ಲೇ ಮುಕ್ತಾಯವಾಗುವುದು ಅನಿವಾರ್ಯ ಎಂಬ ಸಂದೇಶವನ್ನು ರವಾನಿಸಿದರು.

ಇದುವರೆಗೂ ರಾಜ್ಯಪಾಲರು ಕನ್ನಡದಲ್ಲಿ ಭಾಷಣ ಮಾಡುತ್ತಿಲ್ಲವೆಂದೋ?ಅಥವಾ ಬೇರೆ ಯಾವುದಾದರೂ ಕಾರಣಗಳಿಗೋ ರಾಜ್ಯಪಾಲರ ಭಾಷಣದ ಸಂದರ್ಭದಲ್ಲಿ ಕಪ್ಪುಬಾವುಟ ಪ್ರದರ್ಶಿಸುವಂತಹ ಘಟನೆಗಳು ನಡೆಯುತ್ತಿದ್ದವು.ಕೆಲ ಬಾರಿ ರಾಜ್ಯಪಾಲರೂ ತಮ್ಮ ಭಾಷಣವನ್ನು ಮೊಟಕುಗೊಳಿಸಿ ಹೋಗುತ್ತಿದ್ದರು.ಆದರೆ ಈ ಬಾರಿ ಕಂಡಂತಹ ವಿರೋಧ ಹಿಂದೆಂದೂ ಕಂಡಿರಲಿಲ್ಲ ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡರೆ ಸಮ್ಮಿಶ್ರ ಸರ್ಕಾರದ ಅಂಗಪಕ್ಷಗಳಾದ ಕಾಂಗ್ರೆಸ್-ಜೆಡಿಎಸ್ ಹಾಗೂ ಪ್ರತಿಪಕ್ಷ ಬಿಜೆಪಿ ದೊಡ್ಡ ಮಟ್ಟದ ಸಂಘರ್ಷಕ್ಕೆ ಸಜ್ಜಾಗಿ ನಿಂತಿರುವುದು ಸ್ಪಷ್ಟವಾಗಿದೆ.


ಸಂಬಂಧಿತ ಟ್ಯಾಗ್ಗಳು

#Governor #Karnataka #Speech #Bjp


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ