ಪುಸ್ತಕದ ಜೊತೆ ಸೆಲ್ಫಿ ಫ್ರೀ

 Selfie Free with the book

05-02-2019

ಪ್ರತಿ ಪುಸ್ತಕದ ಮೇಲೆ ಶೇ.10ರ ರಿಯಾಯಿತಿ ಸಾಹಿತಿಗಳ ಜೊತೆ ಸೆಲ್ಫಿ ತೆಗೆಸಿಕೊಳ್ಳುವ ಅವಕಾಶವಿರುವ ಕನ್ನಡ ಪುಸ್ತಕ ರಿಯಾಯಿತಿ ಮಾರಾಟ ಮೇಳವು ನಗರದಲ್ಲಿ ಬರುವ ಶುಕ್ರವಾರ(ಫೆ.8)ರಿಂದ ಐದು ದಿನಗಳವರೆಗೆ ನಡೆಯಲಿದೆ. ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಮೂರು ವರ್ಷಗಳ ಬಳಿಕ ಮತ್ತೆ ಕನ್ನಡ ಪುಸ್ತಕ ಪ್ರಾಧಿಕಾರ ಎರಡನೇ ಬಾರಿಗೆ ನಗರದಲ್ಲಿ ಪುಸ್ತಕ ಮೇಳ ಆಯೋಜಿಸಿದ್ದು ರಾಜ್ಯದ ಎಲ್ಲ ಪುಸ್ತಕ ಪ್ರಕಾಶನಗಳ ಪುಸ್ತಕಗಳ ಪ್ರದರ್ಶನ, ಮಾರಾಟಕ್ಕೆ ಅವಕಾಶ ನೀಡಲಾಗಿದೆ ಎಂದು ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಫೆ.8ರಂದು ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ.ಚಂದ್ರಶೇಖರ ಕಂಬಾರ ಮೇಳಕ್ಕೆ ಚಾಲನೆ ನೀಡಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ.ಜಾನಕಿ ಸೇರಿದಂತೆ ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಮೇಳದ ಐದು ದಿನಗಳ ವಿಶೇಷ ಕಾರ್ಯಕ್ರಮ ಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಕನ್ನಡ ಪುಸ್ತಕ ರಿಯಾಯಿತಿ ಮಾರಾಟ ಮೇಳದಲ್ಲಿ ಮಳಿಗೆಗಳು ಉಚಿತವಾಗಿದ್ದು, ಪ್ರಕಾಶನದ ಸಿಬ್ಬಂದಿಗೆ ಊಟ, ವಸತಿ ಸೌಕರ್ಯವನ್ನು ಪ್ರಾಧಿಕಾರವೇ ಕಲ್ಪಿಸಿದೆ. ಹೀಗಾಗಿ ಸುಮಾರು 30ಕ್ಕೂ ಹೆಚ್ಚು ಪ್ರಕಾಶಕರು ತಮ್ಮ ಸಾವಿರಾರು ಶೀರ್ಷಿಕೆಯ ಪುಸ್ತಕಗಳನ್ನು ಪ್ರದರ್ಶನ ಮಾರಾಟಕ್ಕಿವೆ ಎಂದು ವಿವರಿಸಿದರು.

ಹೆಸರಾಂತ ಪ್ರಕಾಶನಗಳಾದ ನವ ಕರ್ನಾಟಕ, ನವಭಾರತ, ಪುಸ್ತಕ ಪ್ರಕಾಶನ, ಸೇರಿದಂತೆ ಸಪ್ನ ಬುಕ್ ಹೌಸ್ ಮಳಿಗೆಗಳಲ್ಲದೇ ಮೈಸೂರು ವಿವಿ, ಕನ್ನಡ ಹಂಪಿ ವಿವಿ ಪ್ರಸಾರಾಂಗ,ನಾನಾ ಅಕಾಡೆಮಿಗಳ ಪುಸ್ತಕ ಮಳಿಗೆಗಳು ಇರಲಿವೆ ಎಂದರು.ಎಸ್.ವಿ.ಪರಮೇಶ್ವರ ಭಟ್ಟ ಸಮಗ್ರ ಸಂಪುಟ ಲೋಕಾರ್ಪಣೆ ಕಾರ್ಯಕ್ರಮ ಫೆ.10 ರಂದು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ ಎಂದ ಅವರು, ಮಕ್ಕಳ ಪುಸ್ತಕ ಮಕ್ಕಳಿಂದ ಒಂದು ಕಮ್ಮಟ ಏರ್ಪಡಿಸಲಾಗಿದೆ. ಇದರಲ್ಲಿ ಸಾಹಿತಿ ನಾಗೇಶ್ ಹೆಗಡೆ ಅವರು ಮಕ್ಕಳಿಗೆ ಕತೆ ಬರೆಯುವ ಕುರಿತು ಹೇಳಲಿದ್ದಾರೆ ಎಂದರು.
ಈ ಬಾರಿ ಪ್ರತಿ ಮಳಿಗೆಗಳಲ್ಲೂ ಹಾಗೂ ಪ್ರತಿಯೊಂದು ಪುಸ್ತಕದ ಮೇಲೂ 10 ರಷ್ಟು ರಿಯಾಯಿತಿ ಕಡ್ಡಾಯ ನಿಗದಿ ಮಾಡಲಾಗಿದೆ. ಅಷ್ಟೇ ಅಲ್ಲದೆ, ಪ್ರಾಧಿಕಾರದ ವಿಡಿಯೋ ತುಣುಕು ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆ (ಶೇರ್) ಮಾಡಿದರೆ, ಇನ್ನೂ 5 ರಷ್ಟು ರಿಯಾಯಿತಿ ಪಡೆಯಬಹುದು.
ಮೇಳದಲ್ಲಿ ಸಾಹಿತಿಗಳ ಜೊತೆ, ಸೆಲ್ಫಿ ತೆಗೆದುಕೊಳ್ಳುವುದು. ಜತೆಗೆ, ಅವರ ಅಭಿಯಾನದ ಸಹಿಯೂ ಪಡೆಯಬಹುದಾಗಿದೆ. ನಾಡೋಜ ಡಾ.ಎಸ್.ನಿಸಾರ್ ಅಹ್ಮದ ಸೇರಿದಂತೆ ಹತ್ತಾರು ಹಿರಿಯ ಕವಿ, ಸಾಹಿತಿಗಳನ್ನು ನಿಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿಟ್ಟುಕೊಳ್ಳಬಹುದು.


ಸಂಬಂಧಿತ ಟ್ಯಾಗ್ಗಳು

#Book Sale #Feb-8 #Bangalore #Selfi


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ