ಸುಮಲತಾ ಅಂಬರೀಶ್ ಗೆಲ್ಲಿಸೋದು ನನ್ನ ಜವಾಬ್ದಾರಿ ಅಂದಿದ್ಯಾರು ಗೊತ್ತಾ?

 It Is My Responsibility To Win Sumalatha Ambarish

04-02-2019

ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಚರ್ಚೆಯಷ್ಟೇ ಮಹತ್ವ ಪಡೆದುಕೊಂಡಿರುವ ಇನ್ನೊಂದು ವಿಚಾರ  ದಿವಂಗತ ನಟ ಅಂಬರೀಶ್ ಪತ್ನಿ ಸುಮಲತಾ ಅಂಬರೀಶ್ ಅವರ ರಾಜಕೀಯ ಪ್ರವೇಶ ವಿಚಾರ. ಹೌದು ಸುಮಲತಾ ಅಂಬರೀಶ್ ರಾಜಕೀಯ ಪ್ರವೇಶ ಮಾಡ್ತಾರಾ? ಯಾವ ಕ್ಷೇತ್ರದಿಂದ ಕಣಕ್ಕಿಳಿತಾರೆ? ಯಾವ ಪಕ್ಷದಿಂದ ಕಣಕ್ಕಿಳಿತಾರೆ? ಈ ಎಲ್ಲ ಪ್ರಶ್ನೆಗಳು ರಾಜ್ಯದಲ್ಲಿ ಕಳೆದ ಒಂದೆರಡು ವಾರದಿಂದ ತೀವ್ರ ಚರ್ಚೆಗೆ ಗ್ರಾಸವಾಗ್ತಿದೆ. ಫೆ 11 ರಂದು ಸುಮಲತಾ ಅಂಬರೀಶ್ ಈ ಬಗ್ಗೆ ನಿರ್ಧಾರ ಪ್ರಕಟಿಸಲಿದ್ದು, ಇದೀಗ ಒಂದೊಮ್ಮೆ ಸುಮಲತಾ ಚುನಾವಣೆಗೆ ನಿಂತರೇ ಚಾಲೆಂಜಿಂಗ್ ಸ್ಟಾರ್ ದರ್ಶನ ಅವರ ಪ್ರಚಾರದ ಹೊಣೆ ಹೊರಲಿದ್ದಾರೆ ಎನ್ನಲಾಗ್ತಿದೆ. 

ಹೌದು ಸುಮಲತಾ ಅಂಬರೀಶ್ ಅವರ ರಾಜಕೀಯ ನಡೆ ಈಗ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಕೆಲವರ ಪ್ರಕಾರ ಸುಮಲತಾ ಕಾಂಗ್ರೆಸ್‍ನಿಂದ ಕಣಕ್ಕಿಯಲಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಸಿಎಂ ಕುಮಾರಸ್ವಾಮಿಯವರ ಬೆಂಬಲವೂ ಇದೆಯಂತೆ. ಮಂಡ್ಯದಲ್ಲಿ ನಿಖಿಲ್ ಸ್ಪರ್ಧೆಯನ್ನು ರದ್ದುಗೊಳಿಸಿ ಕೈಗೆ ಆ ಸ್ಥಾನವನ್ನು ಬಿಟ್ಟುಕೊಡಲು ಕೂಡ ಜೆಡಿಎಸ್ ಚಿಂತನೆ ನಡೆಸಿದೆ ಎಂಬ ಮಾತು ಕೇಳಿಬಂದಿದೆ. 

ಆದರೆ ಮೂಲಗಳ ಪ್ರಕಾರ ಕಾಂಗ್ರೆಸ್ ಇನ್ನು ಟಿಕೇಟ್ ಕನ್ಪರ್ಮ್ ಮಾಡಿಲ್ಲ. ಹೀಗಾಗಿ ಸುಮಲತಾ ತಮ್ಮ ಪತಿಯ ಅಭಿಮಾನಿಗಳ ಸಹಾಯದೊಂದಿಗೆ ಸ್ವತಂತ್ರವಾಗಿ ಸ್ಪರ್ಧಿಸಲು ಚಿಂತನೆ ನಡೆಸಿದ್ದಾರಂತೆ. ಆದರೆ ಸುಮಲತಾ ಚುನಾವಣೆಗೆ ಹೇಗೆ ಸ್ಪರ್ಧಿಸಿದರೂ ಅವರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿಯನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ ಹೊತ್ತಿದ್ದಾರೆ ಎನ್ನಲಾಗಿದೆ. ಇತ್ತೀಚಿಗೆ ಮಾಜಿ ಸಿಎಂ ಸಿದ್ಧರಾಮಯ್ಯನವರನ್ನು ಭೇಟಿ ಮಾಡಿದ್ದ ದರ್ಶನ ಸಿದ್ಧರಾಮಯ್ಯನವರಿಗೆ ಈ ಬಗ್ಗೆ ಮನವಿ ಮಾಡಿಕೊಂಡಿದ್ದು, ಸುಮಲತಾ ಅಂಬರೀಶ್ ಅವರಿಗೆ ಟಿಕೇಟ್ ನೀಡಿ ಅವರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನನಗೆ ನೀಡಿ ಎಂದು ಭರವಸೆ ನೀಡಿದ್ದಾರಂತೆ. 

ಇನ್ನು ಬಿಜೆಪಿ ಕೂಡ ಸುಮಲತಾರನ್ನು ಸೆಳೆಯಲು ಪ್ರಯತ್ನ ಆರಂಭಿಸಿದ್ದಾರೆ ಎಂಬ ಮಾತು ಕೂಡ ಕೇಳಿಬಂದಿದೆ. ಅಂಬರೀಶ್ ಇದ್ದಾಗಲೂ ಅವರ ಮನೆಯ ಮಗನಂತಿದ್ದ ದರ್ಶನ್ ಈಗ ಅದೇ ಕರ್ತವ್ಯನಿರ್ವಹಣೆಗೆ ನಿಂತಿದ್ದು  ಯಾವ ಪಕ್ಷದಿಂದ ನಿಂತರೂ, ಸ್ವತಂತ್ರವಾಗಿ ಸ್ಪರ್ಧಿಸಿದರೂ ಗೆಲ್ಲಿಸಿಕೊಳ್ಳುವ ಹೊಣೆ ನನ್ನದು ಎಂದಿದ್ದಾರಂತೆ. ಸಂಪೂರ್ಣ ಪ್ರಚಾರ ಹಾಗೂ ಸಭೆಗಳ ನೇತೃತ್ವ ಹೊತ್ತು ಸುಮಲತಾರನ್ನು ಗೆಲ್ಲಿಸಲು ದಚ್ಚು ಕಣಕ್ಕಿಳಿಯಲಿದ್ದಾರಂತೆ. ಒಟ್ಟಿನಲ್ಲಿ ಮಂಡ್ಯ ರಾಜಕೀಯ ಹಾಗೂ ಸುಮಲತಾ ಚುನಾವಣಾ ಸ್ಪರ್ಧೆ  ಪ್ರತಿನಿತ್ಯವೂ ಹೊಸ ಹೊಸ ತಿರುವು ಪಡೆದುಕೊಳ್ತಿರೋದಂತು ನಿಜ. 


ಸಂಬಂಧಿತ ಟ್ಯಾಗ್ಗಳು

#Sumalatha Ambrish #Election #Darshan #Campaign


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ