ಇನ್ಮುಂದೆ ಕ್ಯಾಬ್‍ಗಳಲ್ಲಿ ನೋ ಚೈಲ್ಡ್ ಲಾಕ್

 No child lock on  cabs

04-02-2019

ಇನ್ನು ಮುಂದೆ ರಾಜ್ಯದ ಯಾವುದೇ ಮೋಟಾರ್ ಕ್ಯಾಬ್‍ಗಳಲ್ಲಿ ಚೈಲ್ಡ್ ಲಾಕ್ ಅಳವಡಿಸುವಂತಿಲ್ಲ.ಮಕ್ಕಳ ಸುರಕ್ಷತೆಯ ಹೆಸರಿನಲ್ಲಿ ಅಳವಡಿಕೆಯಾಗುವ ಚೈಲ್ಡ್ ಲಾಕ್‍ಗಳು ಮಹಿಳೆಯರ ಸುರಕ್ಷತೆಗೆ ಧಕ್ಕೆ ತರುತ್ತಿವೆ ಎಂಬ ದೂರಿನ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದ ಮೇರೆಗೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.

ಹೈಕೋರ್ಟ್ ಆದೇಶದಂತೆ ಈ ಸುತ್ತೋಲೆ ಹೊರಡಿಸಿರುವ  ಸಾರಿಗೆ ಇಲಾಖೆ, ಕರ್ನಾಟಕ ಮೋಟಾರ್ ವಾಹನ ಕಾಯ್ದೆ 1989ರ ಸೆಕ್ಷನ್ 2ರ ಉಪ ಸೆಕ್ಷನ್ 25ರ ಅನುಸಾರ, ರಾಜ್ಯದ ಎಲ್ಲ ಕ್ಯಾಬ್‍ಗಳಲ್ಲಿನ ಚೈಲ್ಡ್ ಲಾಕ್ ನಿಷ್ಕ್ರಿಯಗೊಳಿಸಬೇಕು. ಹಾಗೂ, ಮುಂದಿನ ದಿನಗಳಲ್ಲಿ ಯಾವುದೇ ಕ್ಯಾಬ್‍ಗಳಿಗೆ ಚೈಲ್ಡ್ ಲಾಕ್ ಅಳವಡಿಕೆಗೆ ಅವಕಾಶ ಕಲ್ಪಿಸಬಾರದು ಎಂದು ಸ್ಪಷ್ಟಪಡಿಸಿದೆ.

2018ರ ನವೆಂಬರ್ 9ರಂದು ಸರ್ಕಾರ ಮೋಟಾರ್ ವಾಹನ ಕಾಯ್ದೆ ಸಂಬಂಧ ಅಧಿಸೂಚನೆ ಹೊರಡಿಸಿ ಸಾರ್ವಜನಿಕರಿಗೆ ಆಕ್ಷೇಪಣೆಗಳು ಹಾಗೂ ಸಲಹೆಗಳನ್ನು ಸಲ್ಲಿಸಲು 30 ದಿನಗಳ ಅವಕಾಶ ಕಲ್ಪಿಸಿತ್ತಾದರೂ, ಯಾವುದೇ ಆಕ್ಷೇಪಣೆ, ಸಲಹೆಗಳು ಸಲ್ಲಿಕೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ತಿದ್ದಪಡಿ ಕಾಯ್ದೆಯನ್ನು ಜಾರಿಗೊಳಿಸಿದೆ.
ಚೈಲ್ಡ್ ಲಾಕ್‍ಗಳಿರುವ ಕ್ಯಾಬ್‍ಗಳಲ್ಲಿ ಪಯಣಿಸುವ ಮಹಿಳಾ ಪ್ರಯಾಣಿಕರ ಮೇಲೆ ಚಾಲಕರು ದೌರ್ಜನ್ಯ ಎಸಗುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಕಾರುಗಳಲ್ಲಿ ಮಕ್ಕಳು ಪ್ರಯಾಣಿಸುವಾಗ ಹಠಾತ್ ಬಾಗಿಲು ತೆರೆದುಕೊಂಡು ಮಕ್ಕಳು ಹೊರಬೀಳುವ ಸಾಧ್ಯತೆಗಳನ್ನು ತಡೆಯಲು ಸಾಮಾನ್ಯವಾಗಿ ಕಾರಿನ ಹಿಂದಿನ ಬಾಗಿಲುಗಳಲ್ಲಿ ಚೈಲ್ಡ್ ಲಾಕ್ ಅಳವಡಿಸಲಾಗುತ್ತದೆ. ಅದನ್ನು ದುರುಪಯೋಗ ಪಡಿಸಿಕೊಳ್ಳುವ ಚಾಲಕರು, ಮಹಿಳಾ ಪ್ರಯಾಣಿಕರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ಆದ್ದರಿಂದ ಚೈಲ್ಡ್ ಲಾಕ್ ನಿಷ್ಕ್ರಿಯಗೊಳಿಸುವಂತೆ ಆದೇಶ ಕೋರಿ ಬೆಂಗಳೂರು ಪ್ರಸೂತಿ ಮತ್ತು ಸ್ತ್ರೀರೋಗ ಸೊಸೈಟಿ (ಬಿಎಸ್‍ಒಜಿ) ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.

ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ರಾಜ್ಯ ಸರ್ಕಾರ,  ಕ್ಯಾಬ್‍ಗಳಲ್ಲಿರುವ ಚೈಲ್ಡ್ ಸೇಫ್ಟಿ ಲಾಕ್ ವ್ಯವಸ್ಥೆ ನಿಷ್ಕ್ರಿಯಗೊಳಿಸುವ ನಿಟ್ಟಿನಲ್ಲಿ `ಕರ್ನಾಟಕ ಆನ್ ಡಿಮ್ಯಾಂಡ್ ಟ್ರಾನ್ಸ್‍ಪೆÇರ್ಟೇಷನ್ ಟೆಕ್ನಾಲಜಿ ಅಗ್ರಿಗೇಟರ್ ರೂಲ್ಸ್ -2016ಕ್ಕೆ ತಿದ್ದುಪಡಿ ತರಲಾಗಿದೆ. ಕರಡು ತಿದ್ದುಪಡಿಯನ್ನು ಅನುಮೋದನೆಗಾಗಿ ಕಾನೂನು ಇಲಾಖೆಗೆ ಕಳುಹಿಸಿಕೊಡಲಾಗಿದೆ. ಇಲ್ಲಿಯವರೆಗೆ ರಾಜ್ಯದಲ್ಲಿ 2.50 ಲಕ್ಷ ಕ್ಯಾಬ್ ಗಳು ಚೈಲ್ಡ್ ಲಾಕ್ ನಿಷ್ಕ್ರಿಯಗೊಳಿಸಿವೆ. ಇನ್ನುಳಿದ 42 ಸಾವಿರ ಕ್ಯಾಬ್ ಗಳಲ್ಲಿ ಚೈಲ್ಡ್ ಲಾಕ್ ನಿಷ್ಕ್ರಿಯಗೊಳಿಸುವಂತೆ ಆದೇಶ ಹೊರಡಿಸಲಾಗಿದೆ ಎಂದು ಮಾಹಿತಿ ನೀಡಿತ್ತು. ಇದೀಗ ಕಾನೂನು ಇಲಾಖೆ ಈ ತಿದ್ದುಪಡಿಗಳಿಗೆ ಅನುಮೋದನೆ ನೀಡಿದೆ.


ಸಂಬಂಧಿತ ಟ್ಯಾಗ್ಗಳು

#Karnataka #No Child Lock #High Court #Cab


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ