ದೀದಿ ವರ್ಸಸ್ ಮೋದಿ, ಚೆಂಡು ಸುಪ್ರೀಂ ಅಂಗಳದಲ್ಲಿ !

 Didi Versus Modi, the ball in the Supreme Court!

04-02-2019

ಕೇಂದ್ರ ಸರ್ಕಾರ, ಸಿಬಿಐ ಹಾಗೂ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡುವಿನ ಕಿತ್ತಾಟ ರವಿವಾರ ರಾತ್ರಿ ವೇಳೆಗೆ ತೀವ್ರ ಸ್ವರೂಪ ಪಡೆದುಕೊಂಡಿದ್ದು,  ದೇಶವೇ  ಕಂಡರಿಯದ ಹೈಡ್ರಾಮಾಗಳಿಗೆ ಸಾಕ್ಷಿಯಾಯಿತು. ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೆತ್ತಿಕೊಂಡು ವಿಚಾರಣೆಗೆ ಆಗಮಿಸಿದ  ಸಿಬಿಐ ಅಧಿಕಾರಿಗಳನ್ನೆ ಕೋಲ್ಕತ್ತಾ ಪೊಲೀಸರು ಬಂಧಿಸಿದ್ದು, ಇದನ್ನು ಕಾನೂನು ಹಾಗೂ ದೀದಿ ನಡುವಿನ ಸಂಘರ್ಷ ಎಂದೇ ಬಣ್ಣಿಸಲಾಗುತ್ತಿದೆ. ಅಲ್ಲದೆ ರಾಜಕೀಯವಾಗಿ ಇದು ದೀದಿ ಮತ್ತು ಮೋದಿ ನಡುವಿನ ಯುದ್ಧ ಎಂದೂ ವಿಶ್ಲೇಷಿಸಲಾಗುತ್ತಿದೆ. 

ಚಿಟ್ ಫಂಡ್ ಹಗರಣದಲ್ಲಿ ಹೆಸರು ಕೇಳಿ ಬಂದ ಹಿನ್ನೆಲೆಯಲ್ಲಿ ಕೋಲ್ಕತ್ತಾದ ನಗರ ಪೊಲೀಸ್ ಆಯುಕ್ತ ರಾಜೀವ್ ಕುಮಾರ್‍ಗೆ ಸಿಬಿಐ ಸಮನ್ಸ್ ನೀಡಿತ್ತು. ಆದರೆ ಅವರು ವಿಚಾರಣೆಗೆ ಹಾಜರಾಗದ ಕಾರಣ  ಸಿಬಿಐ ಅಧಿಕಾರಿಗಳು ಅವರನ್ನು ಬಂಧಿಸಲು ರವಿವಾರ 40 ಸಿಬಿಐ ಅಧಿಕಾರಿಗಳ ತಂಡ ಆಗಮಿಸಿತ್ತು. ಈ ವೇಳೆ ಸ್ಥಳೀಯ ಪೊಲೀಸರು ದೀದಿ ಆದೇಶದ ಮೇರೆಗೆ ಸಿಬಿಐ ಅಧಿಕಾರಿಗಳನ್ನೇ ವಶಕ್ಕೆ ಪಡೆದಿದ್ದು, ಅವರ ಕಚೇರಿಗೆ ಮುತ್ತಿಗೆ ಹಾಕಿದ್ದರು. ಬಳಿಕ ಕೇಂದ್ರಿಯ ಪಡೆಗಳು ಸ್ಥಳಕ್ಕೆ ತೆರಳಿ, ಮುತ್ತಿಗೆ ತೆರವುಗೊಳಿಸಿದ್ದವು. 

ಇದೇ ವೇಳೆಗೆ ಪಶ್ಚಿಮಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಆಯುಕ್ತ ರಾಜೀವ್ ಕುಮಾರ್ ನಿವಾಸಕ್ಕೆ ಧಾವಿಸಿ ಬಂದಿದ್ದು, ಅಲ್ಲಿಯೇ ಪ್ರತಿಭಟನೆ ಆರಂಭಿಸಿದರು. ಅಲ್ಲದೆ ರಾಜ್ಯದಾದ್ಯಂತ ಟಿಎಂಸಿ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಆರಂಭಿಸಿದರು. ಇನ್ನು ಪ್ರತಿಭಟನೆ ವೇಳೆ ಮಾತನಾಡಿದ, ಸಿಎಂ ಮಮತಾ ಬ್ಯಾನರ್ಜಿ,  ಸಿಬಿಐ ಅಧಿಕಾರಿಗಳ ಬಳಿ  ಸರ್ಚ್ ವಾರೆಂಟ್ ಇರಲಿಲ್ಲ.  ಕೇಂದ್ರ ಮಾಧ್ಯಮ, ಪೊಲೀಸ್ ಹಾಗೂ ರಾಜ್ಯದ ಮೇಲೆ ನಿಯಂತ್ರಣ ಹೇರಲು ಸಿಬಿಐ ಕಳಿಸಿದೆ.  ನಮ್ಮನ್ನು ದಮನಗೊಳಿಸುವ ಪ್ರಯತ್ನ ನಡೆದಿದೆ. ನಾವಿದಕ್ಕೆ ಹೆದರೋದಿಲ್ಲ. ರಾಷ್ಟ್ರಪತಿ ಆಡಳಿತ ಹೇರಿದರೂ ಬಗ್ಗೋದಿಲ್ಲ ಎಂದರು. 

ಇನ್ನು ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ತನಿಖೆಗೆ ಆಗಮಿಸಿದ  ಸಿಬಿಐ ಅಧಿಕಾರಿಗಳಿಗೆ ಮಮತಾ ಬ್ಯಾನರ್ಜಿ ಅಡ್ಡಿಗೊಳಿಸುವ ಮೂಲಕ ಸುಪ್ರೀಂ ಕೋರ್ಟ್ ಆದೇಶವನ್ನು ಧಿಕ್ಕರಿಸಿದ್ದಾರೆ. ಇದನ್ನು ಪ್ರಶ್ನಿಸಿ ಸಿಬಿಐ ಅಧಿಕಾರಿಗಳು ಸುಪ್ರೀಂಕೋರ್ಟ್ ಮೊರೆ ಹೋಗಿದ್ದು, 2 ಪ್ರತ್ಯೇಕ ಅರ್ಜಿ ಸಲ್ಲಿಸಿ, ತುರ್ತು ವಿಚಾರಣೆ ನಡೆಸುವಂತೆ ಮನವಿ ಮಾಡಿದ್ದಾರೆ. ಆದರೆ ಸುಪ್ರೀಂ ಕೋರ್ಟ್ ಪ್ರಕರಣದ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ. 

ಇನ್ನೊಂದೆಡೆ ಚಿಟ್ ಫಂಡ್ ಅವ್ಯೆವಹಾರ ತನಿಖೆಗೆ ದೀದಿ ಅಡ್ಡಿ ಉಂಟು ಮಾಡಿರೋದು ವಿವಾದಕ್ಕೆ ಕಾರಣವಾಗಿದ್ದು, ಚಿಟ್ ಫಂಡ್ ದಾಖಲೆಗಳ ನಾಶಕ್ಕೆ ದೀದಿ ಯತ್ನಿಸುತ್ತಿದ್ದಾರೆ ಎಂದು ಸಿಬಿಐ ಶಂಕಿಸಿದೆ. ಪಶ್ಚಿಮಬಂಗಾಳದಲ್ಲಿ ಸಕ್ರಿಯವಾಗಿದ್ದ ಶಾರದಾ ಚಿಟ್ ಫಂಡ್, ಅತಿ ಹೆಚ್ಚು ಬಡ್ಡಿ ನೀಡುವ ಆಮಿಷವೊಡ್ಡಿ ಜನರಿಂದ ಹಣ ಸಂಗ್ರಹಿಸಿತ್ತು. 2013 ರಲ್ಲಿ ಪ್ರಕರಣ ಬೆಳಕಿಗೆ ಬಂದಾಗ ಈ ಚಿಟ್ ಫಂಡ್ 17 ಲಕ್ಷ ಠೇವಣಿದಾರರಿಂದ, ಅಂದಾಜು 300 ಶತಕೋಟಿ ಹಣ ಸಂಗ್ರಹಿಸಿತ್ತು. ಬಳಿಕ ಸರ್ಕಾರ ಹಣ ಮರುಪಾವತಿಗೆ ನಿಧಿ ಸ್ಥಾಪಿಸಿತ್ತು. ತನಿಖೆ ಸೂಕ್ತವಾಗಿ ನಡೆಯದ ಕಾರಣ 2014 ರಲ್ಲಿ ಈ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು. 

ಇನ್ನು ಈ ಪ್ರಕರಣದಲ್ಲಿ ರಾಜೀವಕುಮಾರ್ ಶಾರದಾ ಚಿಟ್ ಫಂಡ್ ಹಗರಣದ ತನಿಖೆ ರಚಿಸಲಾಗಿರುವ ವಿಶೇಷ ತನಿಖಾ ಸಮಿತಿಯ ಮುಖ್ಯಸ್ಥರಾಗಿ ಕೆಲಸ ಮಾಡಿದ್ದು, ಆದರೆ ಇವರು ಆರೋಪಿಗಳು ಹಾಗೂ ಟಿಎಂಸಿ ಜೊತೆ ನಂಟು ಹೊಂದಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಸಿಬಿಐ ವಿಚಾರಣೆಗೆ ಸತತ ಗೈರಾಗಿದ್ದ ರಾಜೀವ್ ಕುಮಾರ್, ಹಲವರ ಬಂಧನದ ಬಳಿಕ ತಲೆಮರೆಸಿಕೊಂಡಿದ್ದರು. ಚುನಾವಣಾ ಆಯೋಗ ಕರೆದ ಸಭೆಗೂ ಹಾಜರಾಗದೆ ಎಸ್ಕೇಫ್ ಆಗಿದ್ದರು. ಇವರನ್ನು ಮಮತಾ ಬ್ಯಾನರ್ಜಿ ರಕ್ಷಿಸುತ್ತಿದ್ದಾರೆ ಎಂಬ ಆರೋಪ ಈಗ ಕೇಳಿಬಂದಿದೆ. 


ಸಂಬಂಧಿತ ಟ್ಯಾಗ್ಗಳು

#Modi V Didi #CbI #Mamtha Banerjee #Sharada Chit Fund


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ