ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯ 71 ಪೊಲೀಸರು ಎತ್ತಂಗಡಿ 

71 Police Transfer of Kumaraswamy Layout Police Station

02-02-2019

ಪೊಲೀಸ್ ಇಲಾಖೆಯಲ್ಲಿ ಒಬ್ಬಿಬ್ಬರ ವರ್ಗಾವಣೆ ಸಾಮಾನ್ಯವಾದ ಸಂಗತಿ. ಆದರೇ ಕರ್ನಾಟಕದ ಪೊಲೀಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯ ಒಟ್ಟು 71 ಸಿಬ್ಬಂದಿಯನ್ನೂ ಎತ್ತಂಗಡಿ ಮಾಡಿ ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಠಾಣೆಯಲ್ಲಿನ ಗುಂಪುಗಾರಿಕೆ  ಹಾಗೂ ಒಳಜಗಳವನ್ನು ಹೋಗಲಾಡಿಸಿ ಜನಸ್ನೇಹಿ ಪೊಲೀಸ್ ಠಾಣೆಯಾಗಿ ರೂಪಿಸುವ ನಿಟ್ಟಿನಲ್ಲಿ ಈ ಕ್ರಮಕೈಗೊಳ್ಳಲಾಗಿದೆ ಎನ್ನಲಾಗಿದ್ದು, ರಾಜ್ಯದಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ.


ಜನವರಿ 20 ರಂದು ಅಪ್ರಾಪ್ತ ಯುವತಿಯೊರ್ವಳ ಮದುವೆ ಗಲಾಟೆಯೊಂದರ ಸಂಬಂಧ ಅಪ್ರಾಪ್ತ ಬಾಲಕಿ ಹಾಗೂ ಆಕೆಯ ಪೋಷಕರನ್ನು ಕುಮಾರಸ್ವಾಮಿ ಪೊಲೀಸ್ ಠಾಣೆಗೆ ಕರೆತರಲಾಗಿತ್ತು. ಈ ವೇಳೆ ಆ ಬಾಲಕಿ ತಾಯಿಯ ಹಾರಾಟ ತಡೆಯಲಾರದ ಠಾಣೆಯ ರೈಟರ್ ರೇಣುಕಯ್ಯ ಆಕೆಯನ್ನು ಥಳಿಸಿ ಕತ್ತು ಹಿಡಿದು ಹೊರಕ್ಕೆ ದಬ್ಬಿದ್ದರು. ಈ ಎಲ್ಲ ದೃಶ್ಯಾವಳಿಯನ್ನು ಠಾಣೆಯ ಇನ್ನೊಬ್ಬ ಸಿಬ್ಬಂದಿ ಮೊಬೈಲ್‍ನಲ್ಲಿ ಚಿತ್ರೀಕರಿಸಿ ಮಾಧ್ಯಮಗಳಿಗೆ ರಿಲೀಸ್ ಮಾಡಿದ್ದರು. ಈ ಪೊಲೀಸ್ ದೌರ್ಜನ್ಯ ರಾಜ್ಯಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ತಕ್ಷಣ ತಪ್ಪಿತಸ್ಥರ ವಿರುದ್ಧ  ಕ್ರಮಕೈಗೊಂಡಿದ್ದ ಡಿಸಿಪಿ ಅಣ್ಣಾಮಲೈ, ರೇಣುಕಯ್ಯ ಸೇರಿದಂತೆ ಹಲವು ಸಿಬ್ಬಂದಿಯನ್ನು ಅಮಾನತ್ತು ಮಾಡಿದ್ದರು. 


ಈ ಘಟನೆಯ ಬಳಿಕ ಠಾಣೆಯಲ್ಲಿರುವ ಗುಂಪುಗಾರಿಕೆ, ಭ್ರಷ್ಟಾಚಾರ ಸೇರಿದಂತೆ ಹಲವು ಸಂಗತಿ ಬೆಳಕಿಗೆ ಬಂದಿತ್ತು. ಮಹಿಳೆ ಮೇಲೆ ದೌರ್ಜನ್ಯ ನಡೆದ ವೇಳೆ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಇನ್ಸಪೆಕ್ಟರ್ ಯಾರೂ ಇರಲಿಲ್ಲ. ಠಾಣೆಯಲ್ಲಿ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕ ಎಂಬ ಗುಂಪುಗಾರಿಕೆ ಇದ್ದು, ರಜೆ ,ಕೆಲಸ ,ಗಸ್ತು ಸೇರಿದಂತೆ ಎಲ್ಲ ವಿಚಾರದಲ್ಲೂ ಗುಂಪುಗಾರಿಕೆ, ಒಳಜಗಳ,ಕಿತ್ತಾಟ ನಡೆಯುತ್ತಲೇ ಇತ್ತು ಎನ್ನಲಾಗಿದೆ. ಹೀಗಾಗಿ ಪೊಲೀಸ್ ಠಾಣೆಗೆ ಸಮಗ್ರವಾಗಿ ಬದಲಾವಣೆ ತರುವ ನಿಟ್ಟಿನಲ್ಲಿ ಇದೀಗ ನಿನ್ನೆ ಕರ್ತವ್ಯಕ್ಕೆ ಹಾಜರಾದ ನೂತನ ಇನ್ಸಪೆಕ್ಟರ್ ಹಜರೇಶ್ ಎ.ಕಿಲ್ಲೆದಾರ್ ಹಾಗೂ ಮೂವರು ಸಬ್ ಇನ್ಸಪೆಕ್ಟರ್ ಬಿಟ್ಟು ಎಎಸ್‍ಎ, ಹೆಡ್ ಕಾನ್ಸಸ್ಟೇಬಲ್, ಪಿಸಿ ಸೇರಿ ಒಟ್ಟು 71 ಸಿಬ್ಬಂದಿಯನ್ನು ಬೇರೆ-ಬೇರೆ ಠಾಣೆಗಳಿಗೆ ವರ್ಗಾಯಿಸಲಾಗಿದೆ. 

2018 ರಲ್ಲಿಯೂ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯ ಆಂತರಿಕ ಜಗಳ ಬೀದಿಗೆ ಬಿದ್ದಿತ್ತು. ಎಸ್‍ಐ ಒಬ್ಬರನ್ನು ಸಂಕಷ್ಟಕ್ಕಿಡು ಮಾಡುವ ಉದ್ದೇಶದಿಂದ ಅವರ ರೈಫಲ್‍ನ್ನು ಕದ್ದು ಮುಚ್ಚಿಡಲಾಗಿತ್ತು. ಈ ಎಲ್ಲ ಮಾಹಿತಿಗಳನ್ನು ಪಡೆದ ಡಿಸಿಪಿ ಅಣ್ಣಾಮಲೈ, ಕಮೀಷನರ ಸಲಹೆ ಹಾಗೂ ಮಾರ್ಗದರ್ಶನದಡಿ ಪೊಲೀಸ್ ಠಾಣೆಯ ಎಲ್ಲ ಸಿಬ್ಬಂದಿಗಳನ್ನು ಎತ್ತಂಗಡಿ ಮಾಡಿ ಹೊಸ ವಾತಾವರಣ ನಿರ್ಮಿಸುವ ಪ್ರಯತ್ನ ಮಾಡಿದ್ದಾರೆ. 


ಸಂಬಂಧಿತ ಟ್ಯಾಗ್ಗಳು

#Kumarswamy Layout # Dcp #71 Police Transfer #Bangalore


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ