ಹಳೆ ಮೈಸೂರಿನಲ್ಲೇ ಮೈತ್ರಿಗೆ ವಿರೋಧ- ಕಂಗೆಟ್ಟ ಕಾಂಗ್ರೆಸ್

 Opposition to Maitri  in Old Mysore

01-02-2019

ಒಂದೆಡೆ 2019 ರ ಲೋಕಸಭೆ ಚುನಾವಣೆಯನ್ನು ದೋಸ್ತಿಯೊಂದಿಗೆ ಎದುರಿಸಲು ಕಾಂಗ್ರೆಸ್-ಜೆಡಿಎಸ್ ನಾಯಕರು ಸಜ್ಜಾಗುತ್ತಿದ್ದರೇ, ಕಾರ್ಯಕರ್ತರು ಮಾತ್ರ ಈ ಮೈತ್ರಿಗೆ ವಿರೋಧ ವ್ಯಕ್ತಪಡಿಸಿ ಕೆಲ ಕಾಂಗ್ರೆಸ್ ಪ್ರಾಬಲ್ಯದ ಕ್ಷೇತ್ರಗಳನ್ನು ಪಕ್ಷವೇ ಉಳಿಸಿಕೊಳ್ಳಬೇಕೆಂಬ ಹಟಕ್ಕೆ ಬಿದ್ದಿದ್ದಾರೆ. ಫೆಬ್ರವರಿ ಮೊದಲ ವಾರದಲ್ಲಿ ಕ್ಷೇತ್ರ ಹಂಚಿಕೆಯ ಕನಸಿನಲ್ಲಿರುವ ಕೈ-ತೆನೆ ಹಿರಿತಲೆಗಳಿಗೆ ಇದು ತಲೆನೋವಾಗಿ ಪರಿಣಮಿಸುವ ಎಲ್ಲ ಸಾಧ್ಯತೆ ಇದೆ. ಪ್ರಮುಖವಾಗಿ ಸಿದ್ಧರಾಮಯ್ಯನವರ ತವರು ಮೈಸೂರಿನಲ್ಲಿ ಕ್ಷೇತ್ರ ಬಿಟ್ಟು ಕೊಡುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಮಂಡ್ಯ ಹಾಗೂ ಹಾಸನವನ್ನು ಉಳಿಸಿಕೊಳ್ಳೋದಿಕ್ಕೊ ಒತ್ತಾಯ ವ್ಯಕ್ತವಾಗಿದೆ. 


ಇತ್ತೀಚಿಗೆ ನಡೆದ ಮಂಡ್ಯ,ಹಾಸನ,ಮೈಸೂರು-ಕೊಡಗು,ಚಾಮರಾಜನಗರ,ತುಮಕೂರು,ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್ ಮುಖಂಡರ ಸಭೆ ನಡೆದಿದ್ದು, ಈ ಸಭೆಯಲ್ಲಿ  ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್,ಸಿದ್ಧರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಹಾಜರಾಗಿದ್ದರು. ಈ ವೇಳೆ ಕಾರ್ಯಕರ್ತರು ಮೈಸೂರಿನಲ್ಲಿ ಜೆಡಿಎಸ್‍ಗೆ ಸೀಟು ಬಿಟ್ಟುಕೊಡುವುದಕ್ಕೆ ತೀವ್ರವಾಗಿ ವಿರೋಧಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ ಹಾಸನ ಹಾಗೂ ಮಂಡ್ಯದಲ್ಲೂ ಜೆಡಿಎಸ್‍ಗೆ ಅವಕಾಶ ಕಲ್ಪಿಸಿದರೇ ಕಾಂಗ್ರೆಸ್ ಪ್ರಾಬಲ್ಯವೇ ತಪ್ಪಿಹೋಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ. 

ಮಂಡ್ಯದಿಂದ ಸುಮಲತಾ ಸ್ವತಂತ್ರವಾಗಿ ಸ್ಪರ್ಧಿಸುತ್ತಾರೆ ಎಂಬ ವಿಚಾರವನ್ನು ನಾಯಕರ ಗಮನಕ್ಕೆ ತಂದ ಕಾಂಗ್ರೆಸ್ ಕಾರ್ಯಕರ್ತರು ಅವರಿಗೆ ಕಾಂಗ್ರೆಸ್‍ನಿಂದಲೇ ಎಂಪಿ ಸೀಟು ನೀಡುವಂತೆಯೂ ಒತ್ತಾಯಿಸಿದ್ದಾರೆ. ಪ್ರಮುಖವಾಗಿ ಸಚಿವ ಎ.ಮಂಜು, ಮಾಜಿ ಸಚಿವ ಬಿ.ಶಿವರಾಂ,ಚೆಲುವರಾಯಸ್ವಾಮಿ ಸೇರಿದಂತೆ ಹಲವು ನಾಯಕರು ಮೈತ್ರಿ ಹಾಗೂ ಸೀಟು ಬಿಟ್ಟುಕೊಡುವುದಕ್ಕೆ ವಿರೋಧಿಸಿದ್ದಾರೆ. 

ಆದರೆ ಸಿದ್ಧರಾಮಯ್ಯನವರು ಕಾರ್ಯಕರ್ತರನ್ನು ಸ್ಥಳೀಯ ಮುಖಂಡರನ್ನು ಸಮಾಧಾನಿಸಿದ್ದು, ರಾಹುಲ್ ಗಾಂಧಿಯವರ ಸ್ಪಷ್ಟ ಸೂಚನೆ ಇರೋದರಿಂದ ಕೆಲವು ಕ್ಷೇತ್ರಗಳಲ್ಲಿ ಮೈತ್ರಿ ಅನಿವಾರ್ಯ ಎಂಬ ಸಂಗತಿಯನ್ನು ಮನದಟ್ಟು ಮಾಡಿಸುವ ಪ್ರಯತ್ನ ಮಾಡಿಸಿದ್ದಾರೆ ಎನ್ನಲಾಗಿದೆ. ಆದರೂ ಜೆಡಿಎಸ್ -ಕಾಂಗ್ರೆಸ್ ಮೈತ್ರಿ ಮತ್ತು ಸೀಟು ಹಂಚಿಕೆ ಹಳೆಮೈಸೂರು ಭಾಗದಲ್ಲಿ ಕಾಂಗ್ರೆಸ್‍ಗೆ ತಲೆನೋವಾಗಿ ಪರಿಣಮಿಸಿದ್ದು, ಇತ್ತ ಪಕ್ಷ ಅತ್ತ ಮೈತ್ರಿ ಎಂಬ ಸಂಕಷ್ಟಕ್ಕೆ ಕಾಂಗ್ರೆಸ್ ನಾಯಕರು ಸಿಲುಕಿದ್ದಾರೆ. ಅದರಲ್ಲೂ ಹಳೆ ಮೈಸೂರು ಭಾಗದಲ್ಲಿ ಸೀಟು ಹಂಚಿಕೆಗೆ ವಿರೋದ ವ್ಯಕ್ತವಾದಲ್ಲಿ, ಇದರ ಹಿಂದೆ ಸಿದ್ಧರಾಮಯ್ಯನವರೇ ಇದ್ದಾರೆ ಎಂಬ ಆರೋಪವೂ ಸೃಷ್ಟಿಯಾಗೋದರಿಂದ ಖುದ್ದು ಸಿದ್ಧರಾಮಯ್ಯನವರು ಕೂಡ ಕಂಗಾಲಾಗಿರೋದು ಸುಳ್ಳಲ್ಲ. ಒಟ್ಟಿನಲ್ಲಿ ಕಾಂಗ್ರೆಸ್‍ಗೆ ಮೈತ್ರಿ ನುಂಗಲಾರದ ತುತ್ತಾಗಿದೆ. 
 


ಸಂಬಂಧಿತ ಟ್ಯಾಗ್ಗಳು

#Maitri # Opposition #Old Mysore #Congress


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ