ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ದೇಶದ ಬಡತನ ಅಂತ್ಯ - ದಿನೇಶ್ ಗುಂಡೂರಾವ್

 If Congress comes to power, the end of poverty in the country - Dinesh Gundurao

29-01-2019

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ದೇಶದಲ್ಲಿನ ಬಡತನ, ನಿರುದ್ಯೋಗದಂತಹ ಸಮಸ್ಯೆಗಳಿಗೆ ಇತ್ರಿಶ್ರೀ ಹಾಡಲು ಸಾಧ್ಯ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಯುಪಿಎ ಅವಧಿಯಲ್ಲಿನ ಯೋಜನೆಗಳ ಬಗ್ಗೆ ಮೆಲುಕು ಹಾಕಿದ ಗುಂಡೂರಾವ್ ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದರು. 

 ಸುದ್ದಿಗೋಷ್ಠಿ ವೇಳೆ ಮಾಜಿ ಕೇಂದ್ರ ಸಚಿವ ಜಾರ್ಜ್ ಫರ್ನಾಂಡೀಸ್ ನಿಧನಕ್ಕೆ ಶೋಕ ವ್ಯಕ್ತಪಡಿಸಿದರು.  ಅವರು ನಮ್ಮ ರಾಜ್ಯದ ಸುಪುತ್ರರು.  ಕಾರ್ಮಿಕ ಹಾಗೂ ಸಮಾಜವಾದಿ ಹೋರಾಟಗಾರರಾಗಿ, ರಾಜಕಾರಣಿಯಾಗಿ ಪ್ರಾಮಾಣಿಕ ವ್ಯಕ್ತಿಯಾಗಿದ್ದರು. ದೇಶದ ರಾಜಕೀಯದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು ಎಂದರು.
ಯುಪಿಎ ಸರ್ಕಾರ ಬಡತನದಿಂದಾಗಿ ಆರ್ಥಿಕ ಸಂಕಷ್ಟದಲ್ಲಿದ್ದವರಿಗೆ ಸಹಕಾರ ನೀಡುವ ಕೆಲಸವನ್ನು ಮಾಡಿತ್ತು.  ನರೇಗಾ ಯೋಜನೆ ಮೂಲಕ ಕೆಲಸ ಇಲ್ಲದವರಿಗೆ ಕೂಲಿ ನೀಡುವ ಯೋಜನೆ ಜಾರಿಗೆ ತರಲಾಗಿತ್ತು.  ಗ್ರಾಮೀಣ ಭಾಗದ ಜನರ ವೇತನ ಹೆಚ್ಚಳಕ್ಕೆ ಕಾರಣವಾದ ಈ ಯೋಜನೆಗೆ ಅಂತಾರಾಷ್ಟ್ರೀಯ ಮಟ್ಟದ ಮನ್ನಣೆ ದೊರೆಯಿತು ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.
ಯುಪಿಎ ಅವಧಿಯಲ್ಲಿ 2004 ರಿಂದ 2012 ರವರೆಗೆ ಸುಮಾರು 14 ಕೋಟಿ ಜನ ಬಡತನ ರೇಖೆಯಿಂದ ಹೊರ ಬರುವಂತಾಯಿತು. ಆಹಾರ ಭದ್ರತೆ ಕಾಯ್ದೆ ಜಾರಿಯಿಂದ ಅಪೌಷ್ಟಿಕತೆ ಕಡಿಮೆಯಾಯಿತು. ಮಕ್ಕಳು ಮಹಿಳೆಯರ ಆರೋಗ್ಯ ಸ್ಥಿತಿಯಲ್ಲಿ ಬದಲಾವಣೆಯಾಯಿತು. ಮೋದಿ ಸರ್ಕಾರದಲ್ಲಿ ಗ್ಲೋಬಲ್ ಹಂಗರ್ ಇಂಡೆಕ್ಸ್ ನಲ್ಲಿ ಭಾರತ 61 ನೇ ಸ್ಥಾನದಿಂದ 103 ನೇ ಸ್ಥಾನಕ್ಕೆ ಹೋಗಿದೆ. ಬಾಂಗ್ಲಾ, ಶ್ರೀಲಂಕಾ, ನೇಪಾಳ ನಮಗಿಂತ ಮುಂದೆ ಇದ್ದಾರೆ.ನರೇಗಾ, ಆಹಾರ ಭದ್ರತೆಗೆ ಆದ್ಯತೆ ನೀಡದಿರುವುದು,  ಭೂ ಸ್ವಾಧೀನ ಕಾಯ್ದೆ ಬದಲಾವಣೆ ಮಾಡಿರುವುದು ಕಂಡು ಬಂದಿದೆ.  ಸೂಟು ಬೂಟಿನ ಸರ್ಕಾರ ಕೊನೆಯ ಹಂತದಲ್ಲಿ ಜನರನ್ನು ಖುಷಿ ಪಡಿಸುವ ಪ್ರಯತ್ನ ಮಾಡುತ್ತಿದೆ.  ಉಜ್ವಲ ಹಾಗೂ ಆಧಾರ್ ಯುಪಿಎ ಯೋಜನೆಯ ಮುಂದುವರಿದ ಭಾಗವಷ್ಟೆ ಎಂದು ಹೇಳಿದರು.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೂತನ `ಕನಿಷ್ಠ ವೇತನ ಯೋಜನೆ' ಜಾರಿಗೆ ತರುವ ಭರವಸೆ ನೀಡಿದ್ದಾರೆ.  ಇದು ಕ್ರಾಂತಿಕಾರಿ ಕಾರ್ಯಕ್ರಮವಾಗಿದ್ದು, ಸ್ವಾಗತಾರ್ಹ.  ಇದರ ಬಗ್ಗೆ ಜನರಿಗೆ ಸಾಕಷ್ಟು ಸಂದೇಹಗಳಿದ್ದರೂ  ಸರ್ಕಾರಕ್ಕೆ ಇಚ್ಛಾಶಕ್ತಿಯಿದ್ದರೆ ಎಲ್ಲವೂ ಸಾಧ್ಯವಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಯಾರೂ ಬಡತನದಿಂದ ಬಳಲುವುದಿಲ್ಲ.   ಆದರೆ ಈ ರೀತಿಯ ಯೋಜನೆಯನ್ನು ನರೇಂದ್ರ ಮೋದಿ ಜಾರಿಗೆ ತರಲು ಸಾಧ್ಯವಿಲ್ಲ.   ಮೋದಿ ಅವಧಿಯಲ್ಲಿ ಬಡತನ,  ನಿರುದ್ಯೋಗ ಹೆಚ್ಚಾಗಿದೆ ಎಂದು ಟೀಕಿಸಿದರು.


ಸಂಬಂಧಿತ ಟ್ಯಾಗ್ಗಳು

# Dinesh Gundurao #End of poverty #Congress # Comes to power


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ