ಟಿವಿ ಜ್ಯೋತಿಷ್ಯಿಗಳಿಗೆ ಕಡಿವಾಣ ಎಂದು?

Who is Going to Control TV  Astrologers

29-01-2019

ಅದೊಂದು ನಂದನವನದಂತಿದ್ದ ಮನೆ. ದುಡಿಯುವ ಗಂಡ, ಇಬ್ಬರು ಮುದ್ದಾದ ಮಕ್ಕಳು, ಆರೋಗ್ಯವಂತ ಪತ್ನಿ. ಎಲ್ಲವೂ ಸರಿಯಾಗಿದ್ದ ಈ ಮನೆ ಇದೀಗ ಅಕ್ಷರಷಃ ನಕರವಾಗಿಬಿಟ್ಟಿದೆ. ಮನೆಯೊಡತಿ ಅದ್ಯಾವುದೋ ಟಿವಿ ಕಾರ್ಯಕ್ರಮದಲ್ಲಿ ಹೇಳಿದ ಜ್ಯೋತಿಷ್ಯಕ್ಕೆ ಹೆದರಿ ಇಬ್ಬರು ಮಕ್ಕಳಿಗೆ ನಿದ್ರೆಮಾತ್ರೆ ಉಣಿಸಿ ತಾನು ಕೂಡ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಪತ್ನಿ ಮಕ್ಕಳನ್ನು ಕಳೆದುಕೊಂಡ ಪತಿ ರೋಧನೆ ಮುಗಿಲುಮುಟ್ಟಿದೆ. ಇಷ್ಟಕ್ಕೂ ಇಂತಹದೊಂದು ಘಟನೆಗೆ ಕಾರಣವಾಗಿದ್ದು, ಟಿವಿಯಲ್ಲಿ ಕೂತು ಮನಬಂದಂತೆ ಅರಚುವ ಜ್ಯೋತಿಷ್ಯಿಗಳು. 

ಹೌದು ಚಿಕ್ಕಬಳ್ಳಾಪುರದ ವಿಶ್ವೇಶ್ವರಯ್ಯ ಬಡಾವಣೆ ನಿವಾಸಿ ಅಶ್ವತ್ಥನಾರಾಯಣ ಎಂಬ ಶಿಕ್ಷಕರ ಪತ್ನಿ ಉಷಾ ಆತ್ಮಹತ್ಯೆಗೆ ಶರಣಾದ ದುರ್ದೈವಿ. ತನ್ನ ಮಕ್ಕಳಾದ 9 ವರ್ಷದ ಶಮಂತ್ ಎರಡೂವರೆ ವರ್ಷದ ಶಾನ್ವಿತ್ ಗೆ ನಿದ್ದೆ ಮಾತ್ರೆ ನೀಡಿದ ಉಷಾ ತಾವು ಕೂಡ ಆತ್ಮಗತ್ಯೆಗೆ ಶರಣಾಗಿದ್ದಾರೆ. ಉಷಾ ಟಿವಿಯಲ್ಲಿ ಜ್ಯೋತಿಷ್ಯವನ್ನು ನೋಡುತ್ತಿದ್ದರಲ್ಲದೇ ಅದನ್ನು ಅಪಾರವಾಗಿ ನಂಬುತ್ತಿದ್ದರಂತೆ. ಕೆಲ ತಿಂಗಳ ಹಿಂದೆ ಟಿವಿ ಜ್ಯೋತಿಷ್ಯಿಯೊಬ್ಬರಿಗೆ ಉಷಾ ಅವರು ಮಗಳ ಬಗ್ಗೆ ಪ್ರಶ್ನೆ ಕೇಳಿದ್ದು, ಅವರು ಮಗಳ ವಿಚಾರಕ್ಕೆ ಮುಂದಿನ ದಿನಗಳಲ್ಲಿ ಯಾತನೆ ಅನುಭವಿಸಬೇಕಾಗುತ್ತದೆ ಎಂದಿದ್ದರು. ಇದನ್ನೆ ಮನಸ್ಸಿಗೆ  ಹಚ್ಚಿಕೊಂಡು ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.

ಜ್ಯೋತಿಷ್ಯಿಗಳ ಕಟುವಾದ ಮಾತುಗಳೇ ಉಷಾ ಅವರ ಆತ್ಮಹತ್ಯೆಗೆ ಪ್ರಮುಖ ಕಾರಣ ಎನ್ನಲಾಗುತ್ತಿದ್ದು, ಉಷಾ ಸಂಬಂಧಿಕರು ಜ್ಯೋತಿಷ್ಯಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತೀಚಿಗೆ ಸುದ್ದಿವಾಹಿನಿಗಳು ಹಾಗೂ ಮನೋರಂಜನಾ ವಾಹಿನಿಗಳು ಎಗ್ಗಿಲ್ಲದೇ ಜ್ಯೋತಿಷ್ಯಿಗಳ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತಿದ್ದು, ಇದರಿಂದ ಜನರೂ ಹೆಚ್ಚೆಚ್ಚು ಪ್ರಭಾವಕ್ಕೆ ಒಳಗಾಗುತ್ತಿದ್ದಾರೆ. 

ಜ್ಯೋತಿಷ್ಯಿಗಳು ಮನುಷ್ಯನ ಭವಿಷ್ಯ, ಬರಬಹುದಾದ ಕಷ್ಟಗಳ ಬಗ್ಗೆ ಎಚ್ಚರಿಕೆ ನೀಡಿ ಪರಿಹಾರವನ್ನು ಸೂಚಿಸಬೇಕೆ ವಿನಃ ಮನುಷ್ಯನನ್ನು ಆತಂಕಕ್ಕೆ ತಳ್ಳಿ ಆತ ಬದುಕನ್ನೆ ಕೊನೆಗಾಣಿಸಿಕೊಳ್ಳುವಂತೆ ಮಾಡಬಾರದು. ಆದರೆ ಈ ಅರೆಪಾಂಡಿತ್ಯದ ಜ್ಯೋತಿಷ್ಯಿಗಳು ಮನುಷ್ಯರ ಮನಸ್ಸಿನಲ್ಲಿ ಭಯ ಬಿತ್ತಿ ಜ್ಯೋತಿಷ್ಯವನ್ನು ವ್ಯಾಪಾರದಂತೆ ಹಣ ಮಾಡುವ ದಂಧೆಯಾಗಿ ಬಳಸಿಕೊಳ್ಳುತ್ತಿದ್ದಾರೆ.

ಇದರಿಂದ ಜನಸಾಮಾನ್ಯರು, ಹೆಣ್ಣುಮಕ್ಕಳು ಆತಂಕಕ್ಕೆ ಒಳಗಾಗಿ ಜ್ಯೋತಿಷ್ಯಿಗಳು ಹೇಳಿದ್ದನ್ನೆ ನಂಬಿ ನೀರಿನಂತೆ ಹಣ ಖರ್ಚು ಮಾಡುತ್ತಿದ್ದಾರೆ. ಇನ್ನು ಕೆಲವರು ಹಣ ವ್ಯಯಿಸಲಾಗದೇ ಆತ್ಮಹತ್ಯೆಯಂತಹ ನಿರ್ಧಾರಕ್ಕೆ  ಬರುತ್ತಿದ್ದಾರೆ. ಇನ್ನಾದರೂ ಸಂಬಂಧಿಸಿದ ಇಲಾಖೆಗಳು ಜ್ಯೋತಿಷ್ಯಿಗಳು ಜನಸಾಮಾನ್ಯರ ರಕ್ತ ಹೀರುವುದಕ್ಕೆ ಬ್ರೇಕ್ ಹಾಕಬೇಕೆಂಬ ಒತ್ತಡ ವ್ಯಕ್ತವಾಗುತ್ತಿದೆ. 
 


ಸಂಬಂಧಿತ ಟ್ಯಾಗ್ಗಳು

#Astrology #Suscide #Tv #Control


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ