ಮದ್ಯ ಕುಡಿಸಲು ಸರ್ಕಾರದಿಂದಲೇ ಧಮ್ಕಿ

 Force from the government to drink alcohol

25-01-2019

ರಾಜ್ಯ ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಈಗ ಇದರ ಜೊತೆ ಇನ್ನೊಂದು ಆತಂಕಕಾರಿ ಸಂಗತಿ ಹೊರಬಿದ್ದಿದೆ. ಒಂದೆಡೆ ಮದ್ಯಮಾರಾಟ ನಿಷೇಧ ಮಾಡಿ ಅಂತ ಮಠಾಧೀಶರು, ಹೆಣ್ಣುಮಕ್ಕಳು ಬೀದಿಗಿಳಿದು ಹೋರಾಟ ಮಾಡ್ತಿದ್ದರೇ, ಇತ್ತ ರಾಜ್ಯ ಸರ್ಕಾರ ಮಾತ್ರ ಜನರಿಗೆ ಇನ್ನಷ್ಟು ಹೆಚ್ಚು ಕುಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡ್ತಿದೆ. ಹೌದು ಕರ್ನಾಟಕ ಪಾನೀಯ ನಿಗಮ ಹಾರ್ಡ್ ಡ್ರಿಂಕ್ಸ್‍ಗಳ ಮಾರಾಟ ಹೆಚ್ಚಿಸುವಂತೆ ಅಂಗಡಿಕಾರರ ಮೇಲೆ ಒತ್ತಡ ತರುತ್ತಿರುವ ಆತಂಕಕಾರಿ ಸಂಗತಿ ಬಯಲಾಗಿದೆ. 

ರಾಜ್ಯದಲ್ಲಿನ ಮದ್ಯ ಮಾರಾಟಗಾರರಿಗೆ ಹಂಚಿಕೆ ಮಾಡಲು ಕರ್ನಾಟಕ ಪಾನೀಯ ನಿಗಮ ಕಾರ್ಯನಿರ್ವಹಿಸುತ್ತಿದೆ. ಈ ನಿಗಮವೂ ಇದೀಗ ತನ್ನ ಆದಾಯ ಹೆಚ್ಚಿಸಿಕೊಳ್ಳುವ ಮೂಲಕ ರಾಜ್ಯದ ಬೊಕ್ಕಸ ತುಂಬಿಸುವ ದೃಷ್ಟಿಯಿಂದ ಹಾರ್ಡ್ ಲಿಕ್ಕರ ಬ್ರ್ಯಾಂಡ್‍ಗಳಾದ ರಮ್, ವಿಸ್ಕಿ,ಬ್ರ್ಯಾಂಡಿ ಮುಂತಾದವುಗಳ ಮಾರಾಟ ಹೆಚ್ಚಿಸುವಂತೆ ರಾಜ್ಯದ ಮದ್ಯದ ಅಂಗಡಿಗಳಿಗೆ ಹಾಗೂ ಬಾರ್,ಪಬ್,ರೆಸ್ಟೊರೆಂಟ್‍ಗಳಿಗೆ ಒತ್ತಡ ಹಾಕಲಾರಂಭಿಸಿದೆ.  

ಮದ್ಯಸೇವಿಸುವವರು ಹೆಚ್ಚಾಗಿ ಬಿಯರ್ ಮೊರೆ ಹೋಗುತ್ತಾರೆ. ಉಳಿದ ಮದ್ಯಗಳಿಗೆ ಹೋಲಿಸಿದರೆ ಬಿಯರ್ ಆರೋಗ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಹಾನಿ ಉಂಟು ಮಾಡುವುದಿಲ್ಲ. ಆದರೆ ಉಳಿದ ಹಾರ್ಡ್ ಡ್ರಿಂಕ್ಸ್‍ಗಳು ಆರೋಗ್ಯದ ಮೇಲೆ ಬೇಗ ದುಷ್ಪರಿಣಾಮ ಬೀರುತ್ತದೆ. ಆದರೆ ಸರ್ಕಾರದ ಲಾಭದ ದೃಷ್ಟಿಯಿಂದ ನೋಡಿದಾಗ ಬಿಯರ್ ಮೇಲೆ ಸರ್ಕಾರಕ್ಕೆ ಹೆಚ್ಚಿನ ಆದಾಯ ದೊರೆಯುವುದಿಲ್ಲ. ರಮ್,ವಿಸ್ಕಿ,ಬ್ರ್ಯಾಂಡಿಯಂತಹ ಮದ್ಯಗಳು ಹೆಚ್ಚಿನ  ಟ್ಯಾಕ್ಸ್ ಸಂಗ್ರಹಕ್ಕೆ ಕಾರಣವಾಗುತ್ತದೆ. ಹೀಗಾಗಿ ತನ್ನ ಲಾಭದ ದೃಷ್ಟಿಯಿಂದ ಯೋಚಿಸುತ್ತಿರುವ ಪಾನೀಯ ನಿಗಮ ಈ ಡ್ರಿಂಕ್ಸ್‍ಗಳನ್ನೆ ಖರೀದಿಸುವಂತೆ ಅಂಗಡಿಗಳ ಮೇಲೆ ಒತ್ತಡ ಹೇರುತ್ತಿರುವ ಮಾಹಿತಿ ಸೂಪರ್ ಸುದ್ದಿಗೆ ಲಭ್ಯವಾಗಿದೆ. 

ಒಂದು ಕೇಸ್ ಹಾರ್ಡ್ ಲಿಕ್ಕರ್ ತಗೊಂಡ್ರೆ ಮಾತ್ರ ಎರಡು ಕೇಸ್ ಬಿಯರ್ ಕೊಡೋದಾಗಿ ನಿಯಮ ರೂಪಿಸಿದೆ. ಇದರಿಂದ ಬಾರ್,ರೆಸ್ಟೋರೆಂಟ್ ಹಾಗೂ ಪಬ್‍ಗಳ ಮಾಲೀಕರು ಅನಿವಾರ್ಯವಾಗಿ ಈ ಡ್ರಿಂಕ್ಸ್‍ಗಳನ್ನು ಖರೀದಿಸಿ ಗ್ರಾಹಕರಿಗೆ ಒತ್ತಾಯವಾಗಿ ಕುಡಿಸುವ ಸ್ಥಿತಿ ಎದುರಾಗುತ್ತಿದೆ. ಇನ್ನು ಹಾರ್ಡ್ ಲಿಕ್ಕರ್ ಖರೀದಿಸದ ಅಂಗಡಿಗಳಿಗೆ ಎಕ್ಸೈಜ್ ಇನ್ಸಪೆಕ್ಟರ್‍ಗಳು ಹೋಗಿ ಧಮ್ಕಿ ಹಾಕಿ ಖರೀದಿಸುವಂತೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಒಂದೊಮ್ಮೆ ನಿಮಗೆ ಹಾರ್ಡ್ ಡ್ರಿಂಕ್ಸ್ ಬೇಡ ಹೆಚ್ಚಿಗೆ ಬಿಯರ್ ಬೇಕು ಎಂದಾದರೇ, ಅದಕ್ಕೂ ಈ ಇನ್ಸಪೆಕ್ಟರ್‍ಗಳಿಗೆ ಲಂಚ ಕೊಟ್ಟು ಖರೀದಿಸಬೇಕಾದ ಸ್ಥಿತಿ ಇದೆಯಂತೆ.

 ಇದರಿಂದ ಮದ್ಯಮಾರಾಟ ಮಾಡುವ ಬಾರ್, ಪಬ್,ರೆಸ್ಟೋರೆಂಟ್‍ಗಳು ಕಂಗಾಲಾಗಿ ಹೋಗಿದ್ದು, ಗ್ರಾಹಕರ ಬೇಡಿಕೆಯ ಮದ್ಯ ಪೊರೈಸಬೇಕಾ? ಅಥವಾ ಸರ್ಕಾರಕ್ಕೆ ಅನುಕೂಲ ಮಾಡಿಕೊಡಲು ಹೋಗಿ ನಾವು ನಮ್ಮ ವ್ಯಾಪಾರ ಹಾಳು ಮಾಡಿಕೊಳ್ಳಬೇಕಾ ಅರ್ಥವಾಗ್ತಿಲ್ಲ ಅಂತ ನೊಂದುಕೊಳ್ತಿದ್ದಾರೆ. ಇನ್ನು ಕೆಲವರಂತೂ ಬಿಯರ್ ಕುಡಿಯೋರಿಗೆ ದಯವಿಟ್ಟು ಹಾರ್ಡ್ ಡ್ರಿಂಕ್ಸ್‍ಗಳಾದ ವಿಸ್ಕಿ,ರಮ್,ಬ್ರ್ಯಾಂಡಿ ಕುಡಿರಿ ಅಂತ ರಿಕ್ವೆಸ್ಟ್ ಮಾಡುವಂತ ಸ್ಥಿತಿ ನಿರ್ಮಾಣವಾಗಿದೆಯಂತೆ. 

ಒಟ್ಟಿನಲ್ಲಿ ಒಂದೆಡೆ ರಾಜ್ಯದಲ್ಲಿ ಮದ್ಯ ನಿಷೇಧ ಮಾಡಿ ಅಂತ ಹೆಣ್ಣುಮಕ್ಕಳು ಪ್ರತಿನಿತ್ಯ ಬೀದಿಗಿಳಿದು ಹೋರಾಟ ಮಾಡ್ತಿದ್ದರೇ, ರಾಜ್ಯ ಸರ್ಕಾರ ಮದ್ಯ ನಿಷೇಧ ಮಾಡೋದು ಹಾಗಿರಲಿ, ತನ್ನ ಆದಾಯ ಹೆಚ್ಚಿಸಿಕೊಳ್ಳೋಕೆ ಜನರನ್ನು ಇನ್ನಷ್ಟು ಅಪಾಯದತ್ತ ತಳ್ಳುವಂತೆ ಪ್ರಯತ್ನ ಮಾಡ್ತಿದ್ದು, ಸರ್ಕಾರಿ ಅಧಿಕಾರಿಗಳೇ ಹೆಚ್ಚೆಚ್ಚು ಕುಡಿರಿ ಅಂತ ಪ್ರೋತ್ಸಾಹ ನೀಡ್ತಿರೋದು ಮಾತ್ರ ದುರಂತವೇ ಸರಿ. 


ಸಂಬಂಧಿತ ಟ್ಯಾಗ್ಗಳು

#Drink More #Force #Hard Drinks #Karnataka


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ