ಅದ್ದೂರಿ ವಿವಾಹಕ್ಕೆ ಬೀಳಬೇಕಿದೆ ಬ್ರೇಕ್- ಜಿಟಿಡಿ 

The lavish wedding should be cut off- G.T.Devegwoda

24-01-2019

ರಾಜ್ಯದಲ್ಲಿ ಅದ್ದೂರಿ ವಿವಾಹಗಳ ಅಬ್ಬರ ಜಾಸ್ತಿಯಾಗುತ್ತಿರುವ ಬೆನ್ನಲ್ಲೇ, ಇವುಗಳ ವಿರುದ್ಧ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌq ಧ್ವನಿ ಎತ್ತಿದ್ದಾರೆ. ಈ ರೀತಿಯ ಅದ್ದೂರಿ ವಿವಾಹವನ್ನು ತಡೆಯದಿದ್ದರೆ ಶ್ರೀಮಂತರನ್ನು ನೋಡಿ ರೈತರು ಮತ್ತಿತರರು ಇರುವ ಭೂಮಿ ಮಾರಿಕೊಂಡೋ,ಸಾಲ-ಪಾಲ ಮಾಡಿಕೊಂಡೋ ಬೀದಿ ಪಾಲಾಗಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇವತ್ತು ಶ್ರೀಮಂತರು ಮಾಡುವ ಅದ್ಧೂರಿ ವಿವಾಹಗಳನ್ನು ನೋಡಿ ಅದೇ ಸಾಮಾಜಿಕ ಪ್ರತಿಷ್ಟೆ ಎಂದುಕೊಂಡು ರೈತರನೇಕರು ತಮ್ಮ ಬಳಿ ಇರುವ ಭೂಮಿಯನ್ನು ಮಾರಿಕೊಂಡು ಅದ್ಧೂರಿ ವಿವಾಹಗಳ ಮೊರೆ ಹೋಗುತ್ತಿದ್ದಾರೆ.ಇತರರೂ ಇದೇ ರೀತಿ ಇರುವ ಆಸ್ತಿ ಮಾರಿಕೊಂಡು,ಸಾಲ,ಸೋಲ ಮಾಡಿಕೊಂಡು ಬೀದಿ ಪಾಲಾಗುತ್ತಿದ್ದಾರೆ ಎಂದರು. ಹೀಗಾಗಿ ಅದ್ಧೂರಿ ವಿವಾಹಗಳಿಗೆ ಕಡಿವಾಣ ಹಾಕುವ ಅಗತ್ಯವಿದೆ.ಆದರೆ ಆ ಸಂಬಂಧ ತೀರ್ಮಾನ ಕೈಗೊಳ್ಳಬೇಕು ಎಂದರೆ ಸರ್ಕಾರದಲ್ಲಿರುವವರೂ ನೈತಿಕವಾಗಿ ಬಲಿಷ್ಟರಾಗಿರಬೇಕಾಗುತ್ತದೆ.ಅವರು ತಮ್ಮ ಮನೆಗಳಲ್ಲಿ ಸರಳ ವಿವಾಹ ನಡೆಸಿ ಮಾದರಿಯಾಗಿದ್ದರೆ ಸರಿ,ಇಲ್ಲದಿದ್ದರೆ ಅವರಿಂದ ಇದಕ್ಕೆ ಕಡಿವಾಣ ಹಾಕಲು ಸಾಧ್ಯವಿಲ್ಲ ಎಂದೂ ಅವರು ಹೇಳಿದ್ದಾರೆ.

ಇಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರ ಜತೆ ಮಾತನಾಡಿದ ಅವರು,ಅದ್ಧೂರಿ ವಿವಾಹಗಳ ಆಚರಣೆ ಸಮಾಜಕ್ಕೆ ಪಿಡುಗಿದ್ದಂತೆ.ದುಡ್ಡಿದ್ದವರನ್ನು ನೋಡಿ 
ಆಮಿಷಕ್ಕೊಳಗಾಗುವ ಬಡ,ಮಧ್ಯಮ ವರ್ಗದವರೂ ಅದನ್ನು ಅನುಸರಿಸಲು ಹೋಗುವ ಪ್ರವೃತ್ತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ನಾನು ಹುಣಸೂರಿನ ಶಾಸಕನಾಗಿದ್ದಾಗ ನೂರಾ ಅರವತ್ಮೂರು ಜೋಡಿಗಳ ಸಾಮೂಹಿಕ ವಿವಾಹ ಕಾರ್ಯ ನಡೆಸಿದೆ.ಒಂದು ಸಲ ಸಾಮೂಹಿಕ ವಿವಾಹ ಕಾರ್ಯಾಚರಣೆಗೆ ವಧು-ವರರು ಸಿಗುತ್ತಿಲ್ಲ ಎಂಬ ಕಾರಣಕ್ಕಾಗಿ ಐದು ಜೋಡಿಗಳನ್ನು ಹುಡುಕಿ ನೋಂದಣಿ ಮಾಡಿಸಿದವರಿಗೆ ಉಚಿತವಾಗಿ ಒಂದು ಹಸು ನೀಡುವ ಕೆಲಸ ಮಾಡಿದೆ.

ಅಷ್ಟೇ ಅಲ್ಲ,ನನ್ನ ಮಗ ಹಾಗೂ ಮಗಳನ್ನು ಕುಟುಂಬದವರ ವಿರೋಧದ ನಡುವೆಯೂ ತಿರುಪತಿಗೆ ಕರೆದುಕೊಂಡು ಹೋಗಿ ಕೆಲವೇ ಜನರ ಸಮ್ಮುಖದಲ್ಲಿ ಸರಳವಾಗಿ ವಿವಾಹ ಮಾಡಿಸಿದೆ ಎಂದು ಅವರು ಪುನರುಚ್ಚರಿಸಿದರು.ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಅದ್ಧೂರಿ ವಿವಾಹಗಳನ್ನು ಮಾಡುವುದರಿಂದ ಒಬ್ಬರು ಮತ್ತೊಬ್ಬರಿಗೆ ಪ್ರೇರೇಪಣೆ ನೀಡಿದಂತಾಗುತ್ತದೆ.ಆ ಮೂಲಕ ಸಮಾಜಕ್ಕೆ ಹೊರೆಯಾದಂತಾಗುತ್ತದೆ ಎಂದು ಹೇಳಿದರು. 


ಸಂಬಂಧಿತ ಟ್ಯಾಗ್ಗಳು

# Lavish wedding #Cutoff #Should be # G.T.Devegwoda


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ