ಸಮ್ಮಿಶ್ರ ಸರ್ಕಾರದ ನೆತ್ತಿ ಮೇಲೆ ಅವಿಶ್ವಾಸದ ತೂಗುಗತ್ತಿ

 Fear of unbelief to the government

23-01-2019

ರಾಜ್ಯದ ಸಮ್ಮಿಶ್ರ ಸರ್ಕಾರವನ್ನು ಅತಂತ್ರಗೊಳಿಸಲು ತೆರೆಮರೆಯಲ್ಲಿ ಕಸರತ್ತು ನಡೆಸಿರುವ ಬಿಜೆಪಿ ತನ್ನ ಪ್ರಯತ್ನಗಳನ್ನು ಮುಂದುವರೆಸಿದ್ದು, ಈಗಾಗಲೇ ಕಾಂಗ್ರೆಸ್‌ನಿಂದ ದೂರ ಉಳಿದಿರುವ 4 ಮಂದಿ ಅತೃಪ್ತ ಶಾಸಕರ ಜತೆ ಈ 7-8 ಮಂದಿ ಶಾಸಕರನ್ನು ಸೆಳೆದು ಮುಂದಿನ ವಿಧಾನಮಂಡಲದ ಅಧಿವೇಶನದೊಳಗೆ ಸರ್ಕಾರಕ್ಕೆ ಸಂಕಷ್ಟದ ಪರಿಸ್ಥಿತಿ ತಂದೊಡ್ಡುವ ರಾಜಕೀಯ ತಂತ್ರವನ್ನು ರೂಪಿಸಿದೆ.
ದೋಸ್ತಿ ಸರ್ಕಾರದಲ್ಲಿ ನಾಲ್ವರು ಅತೃಪ್ತ ಶಾಸಕರು ಕಾಂಗ್ರೆಸ್‌ನಿಂದ ದೂರ ಉಳಿದಿರುವುದರಿಂದ ದೋಸ್ತಿ ಸರ್ಕಾರಕ್ಕೆ ಈಗ 114 ಶಾಸಕರ ಬೆಂಬಂಲ ಮಾತ್ರ ಇದೆ. ಹೀಗಾಗಿ, ಸರ್ಕಾರ ತಂತಿಯ ಮೇಲೆ ನಿಂತಂತಿದೆ. ಸರ್ಕಾರದ ಸಭದ್ರತೆಯ ಬಗ್ಗೆಯೂ ಅನಿಶ್ಚತತೆಗಳು ಮುಂದುವರೆದಿದೆ.
ಸರ್ಕಾರವನ್ನು ಅಸ್ಥಿರಗೊಳಿಸಲು ಅಲ್ಪಮತಕ್ಕೆ ಸರ್ಕಾರವನ್ನು ಕುಸಿಯುವಂತೆ ಮಾಡಲು ಕಾಂಗ್ರೆಸ್‌ನ ಸುಮಾರು 14-15 ಅತೃಪ್ತ ಶಾಸಕರನ್ನು ಸೆಳೆದು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿಸುವ ತಂತ್ರ ರೂಪಿಸಿದ್ದ ಬಿಜೆಪಿ, ಅದು ಅಷ್ಟೇನೂ ಫಲಕಾರಿಯಾಗದ ಹಿನ್ನೆಲೆಯಲ್ಲಿ 7-8 ಅತೃಪ್ತ ಶಾಸಕರು ಮತ್ತು ಪಕ್ಷೇತರ ಬೆಂಬಲದಿಂದ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿಧಾನಸಭಾ ಅಧಿವೇಶನ ಸಂದರ್ಭದಲ್ಲಿ ಅವಿಶ್ವಾಸ ನಿರ್ಣಯವನ್ನು ಮಂಡಿಸುವ ಸಿದ್ಧತೆ ನಡೆಸಿದೆ ಎಂದು ಹೇಳಲಾಗುತ್ತಿದೆ. ಬಿಜೆಪಿಯ ಈ ತಂತ್ರಗಾರಿಕೆಯಿಂದ ಸಮ್ಮಿಶ್ರ ಸರ್ಕಾರದ ನೆತ್ತಿ ಮೇಲೆ ಅವಿಶ್ವಾಸದ ತೂಗುಗತ್ತಿ ನೇತಾಡುತ್ತಿದೆ. ಇದರಿಂದ ಸಮ್ಮಿಶ್ರ ಸರ್ಕಾರ ಪಾರಾಗುತ್ತದೆಯೇ? ಎಂಬುದು ಕುತೂಹಲ ಮೂಡಿಸಿದೆ.
ವಿಧಾನಸಭೆಯಲ್ಲಿ ಬಿಜೆಪಿ 104 ಶಾಸಕರನ್ನು ಹೊಂದಿದ್ದು, ಇಬ್ಬರು ಪಕ್ಷೇತರರೂ ಸೇರಿದಂತೆ ಬಿಜೆಪಿಯ ಬಲ 106, ದೋಸ್ತಿ ಪಕ್ಷಗಳು 118 ಶಾಸಕರ ಬಲ ಹೊಂದಿದ್ದು, ಇದರಲ್ಲಿ 4 ಜನ ಅತೃಪ್ತ ಶಾಸಕರು ಕಾಂಗ್ರೆಸ್‌ನಿಂದ ದೂರ ಉಳಿದಿರುವುದರಿಂದ ದೋಸ್ತಿ ಸರ್ಕಾರದ ಸದ್ಯದ ಬಲ 114 ಆಗಿದೆ. ಹಾಗಾಗಿ, ಬಿಜೆಪಿ 7-8 ಅತೃಪ್ತ ಶಾಸಕರನ್ನು ಸೆಳೆದರೆ ಬಹುಮತ ಪಡೆಯಬಹುದಾಗಿದೆ. ಅದಕ್ಕಾಗಿಯೇ ಅವಿಶ್ವಾಸದ ಸಂದರ್ಭದಲ್ಲಿ ಅಡ್ಡ ಮತದಾನ ಮಾಡಿಸಿ ಬಹುಮತ ಗಳಿಸುವ ಲೆಕ್ಕಾಚಾರದಲ್ಲಿ ಬಿಜೆಪಿ ಇದೆ.
ಸಂಕ್ರಾಂತಿ ನಂತರ ರಾಜ್ಯರಾಜಕೀಯದಲ್ಲಿ ಕೆಲ ಕ್ಷಿಪ್ರ ಬೆಳವಣಿಗೆಗಳಾಗಿ ಕಾಂಗ್ರೆಸ್‌ನ ಸುಮಾರು 10-12 ಅತೃಪ್ತ ಶಾಸಕರು ಬಿಜೆಪಿ ಸಂಪರ್ಕಕ್ಕೆ ಸಿಲುಕಿ ಮುಂಬೈನಲ್ಲಿ ವಾಸ್ತವ್ಯ ಹೂಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಸಂಬಂಧ ಚರ್ಚೆಗಳಾಗಿದ್ದವು. ಇಷ್ಟೆಲ್ಲ ಬೆಳವಣಿಗೆಗಳಾದ ನಂತರ ಎಚ್ಚೆತ್ತ ಕಾಂಗ್ರೆಸ್ ನಾಯಕರು, ಶಾಸಕಾಂಗ ಪಕ್ಷ ಸಭೆ ಕರೆದು ಮುಂಬೈನಲ್ಲಿದ್ದ ಅತೃಪ್ತ ಶಾಸಕರ ಪೈಕಿ ನಾಲ್ವರನ್ನೊರತುಪಡಿಸಿ ಉಳಿದೆಲ್ಲರೂ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ನಂತರ ಕಾಂಗ್ರೆಸ್‌ನ ಎಲ್ಲ ಶಾಸಕರನ್ನು ಈಗಲ್ ಟನ್ ರೆಸಾರ್ಟ್‌‌ಗೆ ಕರೆದೊಯ್ದು ಆಪರೇಷನ್ ಕಮಲಕ್ಕೆ ಒಳಗಾಗದಂತೆ ಶಾಸಕರಿಗೆ ಪಕ್ಷದ ಹಿರಿಯ ನಾಯಕರುಗಳು ಪಾಠ ಮಾಡಿದ್ದರು. ಅಷ್ಟರಲ್ಲಿ ಶಾಸಕ ಗಣೇಶ್ ಆನಂದ್ ಸಿಂಗ್ ಮೇಲೆ ಔತಣಕೂಟದಲ್ಲಿ ಹಲ್ಲೆ ನಡೆಸಿದ್ದ ಪ್ರಕರಣದಿಂದ ಕಾಂಗ್ರೆಸ್ ನಾಯಕರು ಮುಜುಗರಕ್ಕೊಳಗಾಗಿ ರೆಸಾರ್ಟ್ ಯಾತ್ರೆಗೆ ತೆರೆ ಎಳೆದಿದ್ದರು. ಈ ಸಂದರ್ಭದಲ್ಲೆ ನಡೆದಾಡುವ ದೈವ ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿಗಳು ಶಿವೈಕ್ಯರಾದ ನಂತರ ರಾಜ್ಯ ರಾಜಕೀಯ ಬೆಳವಣಿಗೆಗಳು ತಣ್ಣಗಾಗಿದ್ದವು.
ಮುಖ್ಯಮಂತ್ರಿ ಸೇರಿದಂತೆ ಎಲ್ಲ ಪಕ್ಷಗಳ ನಾಯಕರುಗಳು ಸ್ವಾಮೀಜಿಗಳ ಅಂತಿಮ ನಮನ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದರು. ಈಗ ಮತ್ತೆ ನಾಯಕರುಗಳು ರಾಜಕೀಯದ ದಾಳಗಳನ್ನು ಉರುಳಿಸುವ ಕಡೆಗೆ ಗಮನ ಹರಿಸಿದ್ದಾರೆ.
ಶತಾಯ-ಗತಾಯ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿ ಅಧಿಕಾರ ಹಿಡಿಯುವ ಕನಸು ಕಾಣುತ್ತಿರುವ ಬಿಜೆಪಿ ನಾಯಕರು, ಈಗ ಮತ್ತೆ ಕಾಂಗ್ರೆಸ್ ಅತೃಪ್ತ ಶಾಸಕರನ್ನು ಸಂಪರ್ಕಿಸುವ ಕೆಲಸವನ್ನು ಇಂದಿನಿಂದ ಆರಂಭಿಸಿದ್ದಾರೆ. ಕಾಂಗ್ರೆಸ್‌ನ ಶಾಸಕಾಂಗ ಪಕ್ಷದ ಸಭೆಗೆ ಗೈರುಹಾಜರಾಗದೆ ಪಕ್ಷದ ಶೋಕಾಸ್ ನೋಟೀಸ್ ಪಡೆದಿರುವ ಶಾಸಕರುಗಳಾದ ರಮೇಶ್ ಜಾರಕಿಹೊಳಿ, ಡಾ. ಉಮೇಶ್ ಜಾದವ್, ನಾಗೇಂದ್ರ ಮತ್ತು ಮಹೇಶ್ ಕಮತಹಳ್ಳಿ ಮುಂಬೈನ ಹೋಟೆಲ್‌ನಲ್ಲೇ ವಾಸ್ತವ್ಯ ಮುಂದುವರೆಸಿದ್ದಾರೆ. ಅಲ್ಲಿಂದಲೇ ಅತೃಪ್ತ ಶಾಸಕರನ್ನು ಸಂಪರ್ಕಿಸುವ ಪ್ರಯತ್ನಗಳು ನಡೆದಿವೆ.
ವಿಧಾನಮಂಡಲದ ಅಧಿವೇಶನ ಇನ್ನು 8-10 ದಿನಗಳಲ್ಲಿ ನಡೆಯಲಿದ್ದು, ಆ ಸಂದರ್ಭದಲ್ಲಿ ಸಮ್ಮಿಶ್ರ ಸರ್ಕಾರದ ವಿರುದ್ಧ ಅವಿಶ್ವಾಸ ಮಂಡಿಸಿ ಅತೃಪ್ತ ಶಾಸಕರಿಂದ ಅಡ್ಡ ಮತದಾನ ಮಾಡಿಸುವ ಯೋಚನೆ ಬಿಜೆಪಿ ನಾಯಕರದ್ದಾಗಿದೆ.
ಅಡ್ಡಮತದಾನಕ್ಕೆ ಅತೃಪ್ತ ಶಾಸಕರನ್ನು ಓಲೈಸುವ ಕೆಲಸ ನಡೆದಿದೆ.
ಅವಿಶ್ವಾಸ ನಿರ್ಣಯದ ಸಂದರ್ಭದಲ್ಲಿ ಕಾಂಗ್ರೆಸ್‌ನ 7-8 ಅತೃಪ್ತ ಶಾಸಕರು ಅವಿಶ್ವಾಸ ನಿರ್ಣಯದ ಸಂದರ್ಭದಲ್ಲಿ ಅಡ್ಡ ಮತದಾನ ಮಾಡಿದರೆ ಶಾಸಕ ಸ್ಥಾನದಿಂದ ಅನರ್ಹಗೊಳ್ಳುವ ಸಾಧ್ಯತೆಗಳಿದ್ದು, ಇದಕ್ಕೂ ಮಾರ್ಗ ಹುಡುಕಿರುವ ಬಿಜೆಪಿ ನಾಯಕರು ಒಂದು ವೇಳೆ ಶಾಸಕರು ಅನರ್ಹಗೊಂಡರೆ ಅವರ ಕುಟುಂಬದವರಿಗೆ ಚುನಾವಣಾ ಟಿಕೆಟ್ ನೀಡಿ ಗೆಲ್ಲಿಸಿಕೊಳ್ಳುವ ಭರವಸೆಗಳನ್ನು ಅತೃಪ್ತ ಶಾಸಕರಿಗೆ ನೀಡುತ್ತಿದ್ದಾರೆ. ಇದಕ್ಕೆ ಎಷ್ಟು ಶಾಸಕರು ಒಪ್ಪುತ್ತಾರೆ ಎಂಬುದರ ಮೇಲೆ ಸರ್ಕಾರದ ಭವಿಷ್ಯ ನಿಂತಿದೆ


ಸಂಬಂಧಿತ ಟ್ಯಾಗ್ಗಳು

#Government #Plan #Bjp #Karnataka


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ