ಮಹಿಳಾ ಪೊಲೀಸ್ ಅಧಿಕಾರಿ ಮೇಲೆ ಸಚಿವರ ದರ್ಪ

23-01-2019
ಲಿಂಗೈಕ್ಯರಾದ ಸಿದ್ಧಗಂಗಾಶ್ರೀ ಕ್ರಿಯಾ ಸಮಾಧಿ ವೇಳೆ ಕರ್ತವ್ಯದಲ್ಲಿದ್ದ ಹಿರಿಯ ಪೊಲೀಸ್ ಮಹಿಳಾ ಅಧಿಕಾರಿ ದಿವ್ಯಾ ಗೋಪಿನಾಥ್ ಅವರ ವಿರುದ್ಧ ಪ್ರವಾಸೋದ್ಯಮ ಸಚಿವ ಸಾ ರಾ ಮಹೇಶ್ ಗರಂ ಆಗಿದ್ದು, ಶ್ರೀಗಳ ಗದ್ದುಗೆ ಬಳಿಗೆ ತೆರಳಲು ಅವಕಾಶ ನೀಡಿಲ್ಲ ಎಂದು ಆವಾಜ್ ಹಾಕಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ.
ಇದೀಗ ವಿಡಿಯೋ ವೈರಲ್ ಆಗಿದ್ದು ಶ್ರೀಗಳ ಕ್ರಿಯಾ ಸಮಾಧಿ ನಡೆಯುವ ವೇಳೆ ಭದ್ರತಾ ದೃಷ್ಟಿಯಿಂದ ನಿಯೋಜಿತರಾಗಿದ್ದ ದಿವ್ಯಾ ಗೋಪಿನಾಥ್ ವಿರುದ್ಧ ಸಚಿವರು ಗರಂ ಆಗಿದ್ದಾರೆ.
ಸಿದ್ದಗಂಗಾ ಶ್ರೀಗಳ ಕ್ರಿಯಾವಿಧಿ ವೇಳೆ ಗದ್ದುಗೆಗೆ ಕೇವಲ 30 ಪ್ರಮುಖರನ್ನು ಮಾತ್ರ ಬಿಡಲು ಐಜಿ ದಯಾನಂದ್ ಆದೇಶಿಸಿದ್ದರು. ಆ ಪಟ್ಟಿಯಲ್ಲಿ ಸಚಿವ ಸಾ.ರಾ. ಮಹೇಶ್ ಹೆಸರಿಲ್ಲದ ಕಾರಣ ಒಳಬಿಡಲು ನಿರಾಕರಿಸಿದ್ದ ದಿವ್ಯಾ ಅವರನ್ನು ತಡೆದಿದ್ದರು. ಮಾಜಿ ಪ್ರಧಾನಿ ಹೋಗುವವರೆಗೂ ಕಾಯಿರಿ ಎಂದು ಹೇಳಿದ್ದಾರೆ. ಇದರಿಂದಾಗಿ ಕೋಪಗೊಂಡ ಸಚಿವರು ಕೂಗಾಡಿದ್ದಾರೆ. ಹಿರಿಯ ಅಧಿಕಾರಿಗಳ ಆದೇಶ ಪಾಲಿಸುತ್ತಿದ್ದೇನೆ ಎಂದರೂ ಕೂಡ ಸುಮ್ಮನಾಗದ ಸಚಿವರು ಮಹಿಳಾ ಅಧಿಕಾರಿ ಮೇಲೆ ದರ್ಪ ತೋರಿಸಿದ್ದಾರೆ.
ಯಾರ ಹತ್ತಿರ ಮಾತನಾಡುತ್ತಿದ್ದೀಯಾ? ನಾನು ಮಿನಿಸ್ಟರ್, ನನ್ನನ್ನೇ ಬಿಡುವುದಿಲ್ವಾ? ಬ್ಲಡಿ ಈಡಿಯೆಟ್ ಎಂದು ಅವಾಜ್ ಹಾಕಿದ್ದಾರೆ. ಸಚಿವರ ಆಕ್ರೋಶಕ್ಕೆ ತುತ್ತಾಗಿ ದಿವ್ಯಾ ಗೋಪಿನಾಥನ್ ಕಣ್ಣೀರಿಟ್ಟಿದ್ದಾರೆ.
ಇನ್ನು ಸಚಿವರ ಕ್ರಮವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಮರ್ಥಿಸಿಕೊಂಡಿದ್ದು, ಕ್ರಿಯಾಸಮಾಧಿ ಬಳಿ ಕೆಲಸಕ್ಕೆ ಬಾರದವರಿಗೆ ಪ್ರವೇಶ ನೀಡಿ, ಕ್ಯಾಬಿನೆಟ್ ದರ್ಜೆಯ ಸಚಿವರಿಗೆ ಪ್ರವೇಶ ನೀಡದಿದ್ದರೆ ಹೇಗೆ? ‘ಸಾ.ರಾ.ಮಹೇಶ್ ಅಧಿಕಾರಿ ವಿರುದ್ಧ ಹರಿಹಾಯ್ದಿದ್ದು ಸರಿಯಾಗಿದೆ’. ನಾನು ಅಲ್ಲೇ ಅಧಿಕಾರಿಯನ್ನು ಕರೆದು ಅದನ್ನು ಸರಿಮಾಡಿದ್ದೇನೆ ಎಂದು ತಿಳಿಸಿದ್ದಾರೆ.
ಈ ಹಿಂದೆ ತುಮಕೂರು ಎಸ್ಪಿ ಆಗಿದ್ದ ದಿವ್ಯ ಗೋಪಿನಾಥ್ ಅವರು 15 ದಿನಗಳ ಹಿಂದಷ್ಟೇ ರಜೆ ಮೇಲೆ ತೆರಳಿದ್ದರು. ಕಣ್ಣೀರಿಟ್ಟು ತಮ್ಮ ನೋವನ್ನು ತೋಡಿಕೊಂಡಿದ್ದು, ಐಪಿಎಸ್ ಅಧಿಕಾರಿಯನ್ನು ಬಿಜೆಪಿ ಶಾಸಕ ರೇಣುಕಾಚಾರ್ಯ ಸಮಾಧಾನಪಡಿಸಿದ್ದಾರೆ. ನಿಷ್ಠಾವಂತ ಪೊಲೀಸ್ ಅಧಿಕಾರಿ ವಿರುದ್ಧ ಕೂಗಾಡಿದ ಸಚಿವರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ
ಒಂದು ಕಮೆಂಟನ್ನು ಹಾಕಿ