ಶಬರಿಮಲೈ ದರ್ಶನ ಪಡೆದ ಕನಕದುರ್ಗಾಗೆ ಗಂಡನ ಮನೆಗೇ ನೋ ಎಂಟ್ರಿ 

No  Entry to the husband

23-01-2019

ಸುಪ್ರೀಂಕೋರ್ಟ್ ಅನುಮತಿಯ ಅಸ್ತ್ರ ಹಿಡಿದು 800 ವರ್ಷಗಳ ಸಂಪ್ರದಾಯ ಮುರಿದು ಶೃದ್ಧಾಕೇಂದ್ರವಾದ ಶಬರಿಮಲೈ ಪ್ರವೇಶಿಸುವ ಮೂಲಕ ಕೋಲಾಹಲವನ್ನೆ ಸೃಷ್ಟಿ ಮಾಡಿದ್ದ ಇಬ್ಬರು ಮಹಿಳೆಯರಲ್ಲಿ ಒಬ್ಬಳಾದ ಕನಕದುರ್ಗಾಳನ್ನು ಗಂಡನ ಮನೆಯವರು ಹೊರದಬ್ಬಿದ್ದು, ಇದೀಗ ಆಶ್ರಯವಿಲ್ಲದೇ ಕಂಗಾಲಾಗಿ ಕೇರಳ ಸರ್ಕಾರದ ಆಶ್ರಯ ಪಡೆದುಕೊಂಡಿದ್ದಾರೆ. 
ಶಬರಿಮಲೈಗೆ ಋತುಮತಿಯಾಗುವ ಹೆಣ್ಣುಮಕ್ಕಳಿಗೆ ಪ್ರವೇಶವಿಲ್ಲ ಎಂಬ ಅಂಶವನ್ನು ಪ್ರಶ್ನಿಸಿ ಕೆಲ ಮಹಿಳೆಯರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಪೀಠ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸಿ ಆದೇಶ ಹೊರಡಿಸಿತ್ತು. ಬಳಿಕ ಕೇರಳದ ಪುಣ್ಯಕ್ಷೇತ್ರ ಶಬರಿಮಲೈಯಲ್ಲಿ ತೀರ್ಪು ವಿರೋಧಿಸಿ ಪ್ರತಿಭಟನೆಗಳು ನಡೆದಿದ್ದವು. ಆದರೂ ಕೂಡ ಜನರ ಹಾಗೂ ದೇವಾಲಯದ ಆಡಳಿತ ಮಂಡಳಿಯ ಕಣ್ಣುತಪ್ಪಿಸಿ, ಬಿಂದು ಹಾಗೂ ಕನಕದುರ್ಗಾ ಎಂಬ ಇಬ್ಬರು ಮಹಿಳೆಯರು ಯಾವುದೇ ವ್ರತಧಾರಿಗಳಾಗಿರದೇ ಕೇವಲ ಕಪ್ಪುಬಟ್ಟೆ ಧರಿಸಿ ದೇವಾಲಯದೊಳಕ್ಕೆ ಪ್ರವೇಶಿಸಿದ್ದರು. ಬಳಿಕ ಕೇರಳ ಉದ್ವಿಘ್ನವಾಗಿದ್ದು ಹಲವಾರು ಜನರು ಪ್ರಾಣ ಕಳೆದುಕೊಂಡಿದ್ದರು. 

ಈ ಘಟನೆಯ ಬಳಿಕ ಒಂದಷ್ಟು ಕಾಲ ಪೊಲೀಸ್ ಭದ್ರತೆಯಲ್ಲಿ ಅಜ್ಞಾತರಾಗಿದ್ದ ಬಿಂದು ಹಾಗೂ ಕನಕದುರ್ಗಾ ವಿರುದ್ಧ ತೀವ್ರ ಆಕ್ರೋಶವೂ ವ್ಯಕ್ತವಾಗಿತ್ತು. ಕೆಲ ದಿನಗಳ ಹಿಂದೆಯಷ್ಟೆ ಪತಿಯ ನಿವಾಸಕ್ಕೆ ತೆರಳಿದ್ದ ಕನಕದುರ್ಗಾ ಮೇಲೆ ಆಕೆಯ ಅತ್ತೆ ಹಲ್ಲೆ ನಡೆಸಿ ಹೊರಹಾಕಿದ್ದರು. ಬಳಿಕ ಕನಕದುರ್ಗಾರನ್ನು ಪೊಲೀಸರೇ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು. 

ಆದರೆ ಇದೀಗ ಆಸ್ಪತ್ರೆವಾಸ ಮುಗಿಸಿ ಮನೆಗೆ ಬಂದ ಕನಕದುರ್ಗಾಳನ್ನು ಪತಿ ಹಾಗೂ ಆತನ ಅಣ್ಣಂದಿರು ತಿರಸ್ಕರಿಸಿದ್ದು, ಮನೆಯಿಂದ ಹೊರಹಾಕಿದ್ದಾರೆ ಎನ್ನಲಾಗಿದೆ. ಇನ್ನು ಆಕೆಯ ಸಹೋದರ ಹಾಗೂ ಹೆತ್ತವರು ಕೂಡ ಕನಕದುರ್ಗಾಗಳನ್ನು ತವರಿಗೆ ಸೇರಿಸಿಕೊಳ್ಳಲು ನಿರಾಕರಿಸಿದ್ದಾರೆ. 
ತಮ್ಮನ್ನು ಗಂಡ ಹೊರಹಾಕಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಕನಕದುರ್ಗಾ, ಪತಿ ಹಾಗೂ ಆತನ ಕುಟುಂಬಸ್ಥರ ವಿರುದ್ಧ ಜಿಲ್ಲಾ ಹಿಂಸಾಚಾರ ರಕ್ಷಣಾ ಅಧಿಕಾರಿಗೆ  ದೂರು ನೀಡಿದ್ದು, ದೂರು ನ್ಯಾಯಾಲಯಕ್ಕೆ ವರ್ಗಾವಣೆಯಾಗಿದೆ. ಇನ್ನು ಕನಕದುರ್ಗಾರನ್ನು ಮನೆಗೆ ಸೇರಿಸದ ಅಕೆಯ ಪತಿ ಮಕ್ಕಳು ಹಾಗೂ ತಾಯಿಯೊಂದಿಗೆ ಮನೆ ತೊರೆದಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ. 

ಒಟ್ಟಿನಲ್ಲಿ ಬಹುಸಂಖ್ಯಾತರ ಭಾವನೆಗಳಿಗೆ ಧಕ್ಕೆ ತಂದು ದೇವಾಲಯ ಪ್ರವೇಶಿಸಿ ಸಾಹಸ ಮೆರೆದಿದ್ದ ಕನಕದುರ್ಗಾ ಸ್ವತಃ ತಮ್ಮ ಕುಟುಂಬದ ಬೆಂಬಲವನ್ನೆ  ಪಡೆಯುವಲ್ಲಿ ವಿಫಲರಾಗಿದ್ದು, ಸರ್ಕಾರಿ ಆಶ್ರಯದಲ್ಲಿ ಬದುಕುವಂತಾಗಿರೋದು ಮಾತ್ರ ದುರಂತವೇ ಸರಿ. 


ಸಂಬಂಧಿತ ಟ್ಯಾಗ್ಗಳು

#Kanakadurga #Husband Home #No entry #Kerala


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ